International
oi-Malathesha M
ಕೈರೋ: ಪ್ರಧಾನಿ ಮೋದಿ ಅಮೆರಿಕ ಪ್ರವಾಸದ ನಂತರ ಮತ್ತೊಂದು ಮಹತ್ವದ ಪ್ರವಾಸ ಕೈಗೊಂಡಿದ್ದಾರೆ. ಜಾಗತಿಕವಾಗಿ ಭಾರತ ಬಲಗೊಳ್ಳುತ್ತಿರುವ ಸಂದರ್ಭದಲ್ಲೇ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಲು ಹಲವು ರಾಷ್ಟ್ರಗಳು ಮುಂದೆ ಬರುತ್ತಿವೆ. ಅದೇ ರೀತಿ ಈಜಿಪ್ಟ್ ಕೂಡ ಭಾರತದ ಜೊತೆ ಮತ್ತಷ್ಟು ಹತ್ತಿರವಾಗಲು ಯತ್ನಿಸುತ್ತಿದೆ. ಹೀಗಾಗಿ ಪಿಎಂ ಮೋದಿ ಅವರಿಗೆ ಈಜಿಪ್ಟ್ ಅಧ್ಯಕ್ಷರು ಆಹ್ವಾನ ನೀಡಿದ್ದರು.
ಅಂದಹಾಗೆ ಪ್ರಧಾನಿ ಮೋದಿ ಅವರ ಬಹುನಿರೀಕ್ಷಿತ ಅಮೆರಿಕ ಭೇಟಿ ಅತ್ಯಂತ ಯಶಸ್ವಿ ಆಗಿದೆ. ಅದ್ರಲ್ಲೂ ಜಾಗತಿಕ ಮಟ್ಟದಲ್ಲಿ ಭಾರತದ ಶಕ್ತಿ ಪ್ರದರ್ಶನಕ್ಕೆ ಇದು ವೇದಿಕೆಯನ್ನು ಒದಗಿಸಿತ್ತು. ಈ ಭೇಟಿ ಬಳಿಕ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್ ಆಹ್ವಾನದ ಹಿನ್ನೆಲೆಯಲ್ಲಿ ಪಿಎಂ ಮೋದಿ ಈಜಿಪ್ಟ್‌ಗೆ ತೆರಳಿದ್ದಾರೆ. ಹೀಗೆ ಈಜಿಪ್ಟ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಇಂದು ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು. ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ಕೂಡ ನಡೆಸಿದರು. ಹಾಗೇ ಇದರ ಜೊತೆಗೆ ಹಲವು ಒಪ್ಪಂದಗಳಿಗೆ ಅಂತಿಮ ರೂಪ ಸಿಕ್ಕಿದೆ.
ಮಹತ್ವದ ಒಪ್ಪಂದಗಳಿಗೆ ಪ್ರಧಾನಿ ಮೋದಿ ಸಹಿ
ಭಾರತ, ಈಜಿಪ್ಟ್ ಸಂಬಂಧ ಮೊದಲಿನಿಂದ ಉತ್ತಮವಾಗಿದೆ. ಅಲ್ಲದೆ ಎರಡೂ ದೇಶದ ಮಧ್ಯೆ ಸಾವಿರಾರು ವರ್ಷದಿಂದ ವ್ಯಾಪಾರ ಹಾಗೂ ವಹಿವಾಟು ನಡೆಯುತ್ತಿದೆ. ಅದರಲ್ಲೂ ಆಧುನಿಕ ಕಾಲಘಟ್ಟದಲ್ಲಿ ಎರಡೂ ದೇಶಗಳ ವ್ಯಾವಹಾರಿಕ ಸಂಬಂಧ ಉತ್ತಮವಾಗಿದೆ. ಇದೇ ಕಾರಣಕ್ಕೆ ಬಂಡವಾಳ ಹೂಡಿಕೆ, ನವೀಕರಿಸಬಹುದಾದ ಇಂಧನ ಮತ್ತು ಐಟಿ, ಡಿಜಿಟಲ್ ಪಾವತಿಯು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಎರಡೂ ದೇಶಗಳ ನಾಯಕರು ಸಹಿ ಹಾಕಿದರು. ಈ ಮೂಲಕ ಪ್ರಧಾನಿ ಮೋದಿ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ. ಅಮೆರಿಕದ ಬಳಿಕ ಮತ್ತೊಂದು ದೇಶದ ಜೊತೆಗೂ ಭಾರತದ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ.
The setting up of the India Unit in @CabinetEgy indicates the priority given to India-Egypt ties. Today in Cairo, I met this Unit. PM Mostafa Madbouly and other esteemed Ministers were present in the meeting. pic.twitter.com/5qAEHJydHg
— Narendra Modi (@narendramodi) June 24, 2023
26 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ!
ಅಂದಹಾಗೆ 1997ರ ನಂತರ ಭಾರತದ ಪ್ರಧಾನಿಯೊಬ್ಬರು ಈಜಿಪ್ಟ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದೆ. ಅತ್ತ ಅಮೆರಿಕ ಅಧ್ಯಕ್ಷ ಬೈಡನ್ ಮತ್ತು ಅಮೆರಿಕ ಪ್ರಥಮ ಮಹಿಳೆ ಜಿಲ್ ಬೈಡೆನ್ ಆಹ್ವಾನದ ಹಿನ್ನೆಲೆ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ಭೇಟಿ ಮುಗಿಸಿ ನೇರ ಈಜಿಪ್ಟ್‌ಗೆ ತೆರಳಿದ್ದಾರೆ ಪಿಎಂ ಮೋದಿ. ಈ ವೇಳೆ ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಹುತಾತ್ಮರಾದ 4,000 ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲು, ಕೈರೋದ ಎಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧ ಸ್ಮಾರಕಕ್ಕೆ ಕೂಡ ಪ್ರಧಾನಿ ಮೋದಿ ತೆರಳಲಿದ್ದಾರೆ.
ಒಟ್ನಲ್ಲಿ ಪ್ರಧಾನಿ ಮೋದಿ ಅವರ ಈಜಿಪ್ಟ್ ಭೇಟಿ ಸಾಕಷ್ಟು ಗಮನ ಸೆಳೆದಿದೆ. ಈಜಿಪ್ಟ್‌ಗೂ ಭಾರತದ ಸ್ನೇಹ ಬೇಕಿದ್ದು, ಭಾರತಕ್ಕೂ ಈಜಿಪ್ಟ್ ಸ್ನೇಹ ಹಲವು ಲಾಭ ತಂದುಕೊಡಲಿದೆ. ಹೀಗಾಗಿಯೇ ಎರಡೂ ರಾಷ್ಟ್ರಗಳ ಮಧ್ಯೆ ಸಾಕಷ್ಟು ಒಪ್ಪಂದಗಳಿಗೆ ಸಹಿ ಬಿದ್ದಿದೆ. ಜೊತೆಗೆ ಇನ್ನೂ ಹಲವು ಸಭೆಗಳನ್ನ ಪ್ರಧಾನಿ ಮೋದಿ ಇಂದು ನಡೆಸಲಿದ್ದಾರೆ. ಇನ್ನು ನಿನ್ನೆ ಪಿಎಂ ಮೋದಿ ಅವರು ಈಜಿಪ್ಟ್ ತಲುಪಿದ್ದರು. ಹೀಗೆ ಬರೋಬ್ಬರಿ 26 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಈಜಿಪ್ಟ್ ಪ್ರವಾಸ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಜಿಪ್ಟ್ ದೇಶದಲ್ಲಿ ವಾಸವಿರುವ ಭಾರತೀಯರು ಕೂಡ ಪ್ರಧಾನಿ ಮೋದಿ ಅವರಿಗೆ ಸ್ವಾಗತ ಕೋರಿದ್ದರು.
English summary
Prime Minister Modi signed to bilateral agreement with Egypt.
Story first published: Sunday, June 25, 2023, 15:58 [IST]