Karnataka
oi-Ravindra Gangal
ಬೆಂಗಳೂರು, ಜೂನ್ 22: ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು ಉಚಿತ ಪ್ರಯಾಣಕ್ಕಾಗಿ ಇನ್ನು ಮುಂದೆ ಪಾಸ್ ಖರೀದಿಸುವ ಅಗತ್ಯವಿಲ್ಲ ಎಂದು ಕರ್ನಾಟಕ ಸಾರಿಗೆ ಸಂಸ್ಥೆ ಹೇಳಿದೆ. ಶಕ್ತಿ ಯೋಜನೆಯಡಿ ಅವರು ಉಚಿತವಾಗಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಬಹುದು ಎಂದು ಘೋಷಿಸಿದೆ.
ಮೂಲಗಳ ಪ್ರಕಾರ, ಈ ಬಗ್ಗೆ ಅಧಿಕೃತ ಆದೇಶವನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ. ಇತರೆ ಮಹಿಳಾ ಪ್ರಯಾಣಿಕರಂತೆ ವಿದ್ಯಾರ್ಥಿನಿಯರು ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಬೇಕು. ಅಂತಹ ಕಾರ್ಡ್‌ಗಳಿಗಾಗಿ ಅರ್ಜಿಗಳನ್ನು ಶೀಘ್ರದಲ್ಲೇ ಸ್ವೀಕರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ವಿದ್ಯಾರ್ಥಿನಿಯರಿಗೆ ‘ಶೂನ್ಯ’ ದರದಲ್ಲಿ ಟಿಕೆಟ್‌ಗಳನ್ನು ನೀಡುವಂತೆ ಸರ್ಕಾರಿ ಬಸ್‌ಗಳ ಕಂಡಕ್ಟರ್‌ಗಳಿಗೆ ನಿರ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿನಿಯರು 2023-24 ರ ಪಾಸ್‌ಗಳನ್ನು ಖರೀದಿಸಿದ್ದರೆ, ಅವರಿಗೆ ಆ ಮಾರ್ಗಗಳಲ್ಲಿ ಪ್ರಯಾಣಿಸಲು ಅನುಮತಿಸಲಾಗುವುದು. ಅಂಥವರಿಗೆ ‘ಶೂನ್ಯ’ ಟಿಕೆಟ್‌ಗಳನ್ನು ನೀಡದಂತೆ ಕಂಡಕ್ಟರ್‌ಗಳಿಗೆ ನಿರ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿನಿಯರು ಪಾವತಿಸಿದ ಬಸ್ ಪಾಸ್ ಶುಲ್ಕವನ್ನು ಮರುಪಾವತಿಸುವುದಿಲ್ಲ. ಅಂತಹುದಕ್ಕೆ ಯಾವುದೇ ಅವಕಾಶವಿಲ್ಲ ಎಂದು ಮೂಲಗಳು ತಿಳಿಸಿವೆ.
ಶಾಲಾ ಮತ್ತು ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು ಕಳೆದ ಶೈಕ್ಷಣಿಕ ವರ್ಷಕ್ಕೆ (2022-23) ಜೂನ್ 30 ರವರೆಗೆ ನೀಡಲಾದ ಪಾಸ್‌ಗಳನ್ನು ಬಳಸಬಹುದು. ಅಂತವರಿಗೆ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಲು ಅನುಮತಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿನಿಯರು ಜುಲೈ 1 ರಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಹೊಸ ಪಾಸ್‌ಗಳನ್ನು ಪಡೆಯಬೇಕು. ಜೂನ್ 20 ರಂದು 17.89 ಲಕ್ಷ ಮಹಿಳೆಯರು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಶಕ್ತಿ ಯೋಜನೆಯಡಿ ವಿನಾಯಿತಿ ಪಡೆದ ಒಟ್ಟು ಟಿಕೆಟ್ ಮೊತ್ತ 2.27 ಕೋಟಿ ರೂ ಆಗಿದೆ.
ಕೆಎಸ್‌ಆರ್‌ಟಿಸಿ 17.46 ಲಕ್ಷ ಪ್ರಯಾಣಿಕರನ್ನು ದಾಖಲಿಸಿದ್ದು, ವಿನಾಯಿತಿ ಮೊತ್ತ 5.21 ಕೋಟಿ ರೂ ಆಗಿದೆ. ವಾಯುವ್ಯ ಸಾರಿಗೆ 14.47 ಲಕ್ಷ ಪ್ರಯಾಣಿಕರನ್ನು ದಾಖಲಿಸಿದೆ. ಅದರ ವಿನಾಯಿತಿ ಮೊತ್ತ 3.59 ಕೋಟಿ ರೂ. ಆಗಿದೆ. ಕಲ್ಯಾಣ ಕರ್ನಾಟಕದ ಸಾರಿಗೆ 8.05 ಲಕ್ಷ ಪ್ರಯಾಣಿಕರನ್ನು ನೋಂದಾಯಿಸಿದೆ ಮತ್ತು ಒಟ್ಟು ವಿನಾಯಿತಿ ಮೊತ್ತ 2.57 ಕೋಟಿ ರೂ. ಆಗಿದೆ.
English summary
Girl Student Can Also Use Shakti Smart Card and there is no need to be in long que for applying for Student bus pass | Know more at Oneindia Kannada