India
oi-Shankrappa Parangi
ನವದೆಹಲಿ, ಜುಲೈ 27: ಭಾರತೀಯ ರೈಲ್ವೆ ವ್ಯಾಪ್ತಿಯಲ್ಲಿ ಏನೇ ತುರ್ತು ಪರಿಸ್ಥಿತಿಗಳು ಎದುರಾದರೂ ಸಹ ನಿರ್ವಹಣೆ ಮಾಡುವಂತಹ ‘ಭಾರತೀಯ ರೈಲ್ವೆ ಕೇಂದ್ರ ನಿಯಂತ್ರಣ ಮತ್ತು ಕಮಾಂಡ್ ಸೆಂಟರ್’ ಸ್ಥಾಪನೆಗೆ ಶಿಲಾನ್ಯಾಸವು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬುಧವಾರ ನಡೆಯಿತು.
ಈ ಕುರಿತು ಕೇಂದ್ರ ರೈಲ್ವೆ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಕಮಾಂಡ್ ಸೆಂಟರ್ ಸ್ಥಾಪನೆಯಾದ ಬಳಿಕ ಅದು ತುರ್ತು ಸಂದರ್ಭಗಳಲ್ಲಿ ಇದು ಇಡೀ ಭಾರತೀಯ ರೈಲ್ವೆಯ ಕೇಂದ್ರವಾಗಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದೆ.
ಈ ಸೆಂಟ್ರಲ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಕಟ್ಟಡವು ಭಾರತೀಯ ರೈಲ್ವೆಯ ಎಲ್ಲಾ ವಲಯಗಳಿಗೆ ಸಂಬಂಧಿಸಿದಂತೆ ಡೇಟಾ ಮಾನಿಟರಿಂಗ್, ಸಿಸಿಟಿವಿ ವಿಶ್ಲೇಷಣೆ, ಮಾಹಿತಿ ವಿಶ್ಲೇಷಣೆ ಹಾಗೂ ಸೈಬರ್ ಕಾರ್ಯಾಚರಣೆಗಳಿಗೆ ತ್ವರಿತವಾಗಿ ಸ್ಪಂದಿಸುವ ಹಾಗೂ ಇನ್ನಿತರ ಕೆಲಸಗಳಿಗೆ ಪ್ರಧಾನ ಕಛೇರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದಕ್ಕೆಂದು ವಿಶೇಷವಾಗಿ ಒತ್ತು ನೀಡಿ ನಿರ್ಮಾಣ ಮಾಡಲಾಗುತ್ತದೆ.
50 ಕ್ಕೂ ಹೆಚ್ಚು ಸಿಬ್ಬಂದಿ ನಿರ್ವಹಣೆ
ಮಾನಿಟರಿಂಗ್ ಮತ್ತು ವಿಶ್ಲೇಷಣಾತ್ಮಕ ಕೋಶದಲ್ಲಿ 50 ಕ್ಕೂ ಹೆಚ್ಚು ಸಿಬ್ಬಂದಿ ನೇಮಕಗೊಳ್ಳಲಿದ್ದಾರೆ. ಅವರೆಲ್ಲ ಪ್ರತಿ ದಿನ ವಿವಿಧ ಪಾಳಿಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಭಾರತೀ ರೈಲ್ವೆ ಮಾಹಿತಿ ನೀಡಿದೆ ಎಂದು ಎಎನ್‌ಐ ವರದಿ ಮಾಡಿದೆ.
ಇನ್ನೂ ಕಮಾಂಡ್ ಸೆಂಟರ್ ಕಟ್ಟಡವು 60 ಜನರ ಸಾಮರ್ಥ್ಯವನ್ನು ಹೊಂದಿರುವಷ್ಟು ವಿಶಾಲವಾಗಿದೆ. ಇದರೊಳಗೆ ಕಾನ್ಫರೆನ್ಸ್ ಹಾಲ್, ಜಿಮ್ನಾಷಿಯಂ ಸೌಲಭ್ಯ, ಕೆಫೆಟೇರಿಯಾ ಹಾಗೂ ಇನ್ನಿತರ ಅತೀ ಮುಖ್ಯ ಸೌಲಭ್ಯಗಳನ್ನು ಹೊಂದಿರಲಿದೆ. ಇದರ ನಿರ್ಮಾಣದ ಯೋಜನೆಯು ಎರಡು ಹಂತಗಳಲ್ಲಿ ನಡೆಸಲಾಗುವುದು. ಎರಡೂ ಹಂತಗಳಿಗೆ 13.5 ಕೋಟಿ ರೂಪಾಯಿ ತಗುಲಲಿದೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ ಸದ್ಯಕ್ಕೆ 4.5 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಮಾಹಿತಿ ದೊರೆತಿದೆ.
ಬುಧವಾರ ನಡೆದ ಕಮಾಂಡ್ ಸೆಂಟರ್ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ಮಹಾನಿರ್ದೇಶಕ ಸಂಜಯ್ ಚಂದರ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು, ರೈಲ್ವೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
English summary
Will establishment of Control & Command Center for handling possible emergency situation in entire Indian Railways.
Story first published: Thursday, July 27, 2023, 6:46 [IST]