Karnataka
oi-Shankrappa Parangi
ವಿಜಯಪುರ, ಜುಲೈ 27: ಮಹಾರಾಷ್ಟ್ರ ರಾಜ್ಯದಿಂದ ಮತ್ತು ನೆರೆಯ ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗುತ್ತಿರುವ ಕಾರಣ ಆಲಮಟ್ಟಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದೆ. ಈ ಜಲಾಶಯದಲ್ಲಿರುವ ನೀರನ್ನು ಕಾಲುವೆಗಳ ಮೂಲಕ ಕೆರೆಗೆ ನೀರು ತುಂಬಿಸುವ ಯೋಜನೆಯಡಿ ನೀರು ಹರಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ತಿಳಿಸಿದರು.
ಇಲ್ಲಿನ ಜಿಲ್ಲಾ ಪಂಚಾಯತಿಯಲ್ಲಿ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಆಲಮಟ್ಟಿ ಜಲಾಶಯದಲ್ಲಿ ಕೇವಲ 2 ಟಿಎಂಸಿಯಷ್ಟು ನೀರು ಇತ್ತು. ಇದು ಆತಂಕಕ್ಕೆ ಕಾರಣವಾಗಿತ್ತು. ಆದರೆ, ಈಗ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿರುವುದರಿಂದ ಪರಿಸ್ಥಿತಿ ಸುಧಾರಿಸಿದೆ.
ಸದ್ಯ ಆಲಮಟ್ಟಿ ಜಲಾಶಯದಲ್ಲಿ 64 ಟಿಎಂಸಿ ತಲುಪಿದೆ. ಹೀಗಾಗಿ ಜಲಾಶಯದಲ್ಲಿರುವ ನೀರನ್ನು ಕಾಲುವೆಗಳ ಮೂಲಕ ಕೆರೆಗಳಿಗೆ ಬಿಡಲಾಗುತ್ತಿದೆ. ಇದರಿಂದ ಅನೇಕ ಹಳ್ಳಿಯಗಳಿಗೆ ಕುಡಿಯುವ ನೀರಿನ ಯೋಜನೆಯಡಿ ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರು ಪೂರೈಕೆಗೆ ಅನುಕೂಲವಾಗಲಿದೆ. ಈ ಹಿಂದೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ಇದ್ದಾಗ 38 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕದ 3ನೇ ಬೃಹತ್ ಕೆರೆಯ ಸುತ್ತ ಮುತ್ತ ಬೆಳೆಯಲಿವೆ 2 ಲಕ್ಷ ಗಿಡಗಳು
110 ಕೆವಿ ಸ್ಟೇಷನ್ ಸ್ಥಾಪಿಸಲು ಕ್ರಮ
ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ನೀರು ಪೂರೈಕೆಯಾದರೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಶೇಕಡಾ 50 ರಷ್ಟು ಇಳಿಕೆಯಾಗಲಿದೆ. ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲು ಸೂಚನೆ ನೀಡಲಾಗಿದೆ. ಕಣಕಾಲ, ದಿಂಡವಾರ, ಕಾಖಂಡಕಿಯಲ್ಲಿ ವಿದ್ಯುತ್ ವಿತರಣೆ ಕೇಂದ್ರಗಳಿಗೆ ಟೆಂಡರ್ ಆಗಿದ್ದರೂ ಗುತ್ತಿಗೆದಾರರು ಕೆಲಸ ಆರಂಭಿಸಿಲ್ಲ.
ಹೀಗಾಗಿ ಕೂಡಲೇ ಈ ವಿದ್ಯುತ್ ವಿತರಣಾ ಕೇಂದ್ರಗಳ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಹೂವಿನ ಹಿಪ್ಪರಗಿಯಲ್ಲಿ ಭೂಮಿ ಲಭ್ಯವಿದೆ. 110 ಕೆವಿ ಸ್ಟೇಷನ್ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಕುಡಿಯುವ ನೀರು ಮೊದಲಾದ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ಆಯಾ ಭಾಗದ ಶಾಸಕರನ್ನು ಸಂಪರ್ಕಿಸಿ, ಅವರಿಂದ ಸಮಸ್ಯೆಗಳ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದರು.
ಬರದ ಛಾಯೆ ದೂರವಾಗುವ ವಿಶ್ವಾಸ
ಜಿಲ್ಲೆಯಲ್ಲಿ ಈಗ ಮಳೆಯಾಗುತ್ತಿರುವುದರಿಂದ ಬರದ ಛಾಯೆ ದೂರವಾಗುವವ ವಿಶ್ವಾಸವಿದೆ. ಈ ಛಾಯೆ ಸಂಪೂರ್ಣವಾಗಿ ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಸಚಿವ ಪಾಟೀಲ್ ಆಶಯ ವ್ಯಕ್ತಪಡಿಸಿದರು.
ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಲು ಕೇಂದ್ರ ಸರ್ಕಾರ ಅದರದೇ ಆದ ಮಾರ್ಗಸೂಚಿ ರೂಪಿಸಿದೆ. ಆ ಮಾರ್ಗಸೂಚಿ ಪ್ರಕಾರ ಮಾತ್ರ ಕ್ರಮ ಕೈಗೊಳ್ಳಬೇಕಿದೆ ಎಂದು ಇದೇ ವೇಳೆ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲೆಯಲ್ಲಿ 2.78 ಲಕ್ಷ ಹೆಕ್ಟೇರ್ ಬಿತ್ತನೆ
ಜಿಲ್ಲೆಯಲ್ಲಿ ಈಗಾಗಲೇ 2.78 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದ್ದು, ತೊಗರಿ ಜುಲೈ ಮಾಸಾಂತ್ಯದವರೆಗೂ ಅವಕಾಶವಿದೆ. ಇನ್ನೂ 1 ಲಕ್ಷ ಹೆಕ್ಟೇರ್ ತೊಗರಿ ಬಿತ್ತನೆಯಾಗುವ ನಿರೀಕ್ಷೆಯಿದೆ. ಉಳ್ಳಾಗಡ್ಡಿ ಬೆಳೆಗೆ ಸಂಬಂಧಿಸಿದಂತೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜವನ್ನು ದೊರಕಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು ಎಂದು ಎಂಬಿ ಪಾಟೀಲ್ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ವಿಠ್ಠಲ ಧೋಂಡಿಬಾ ಕಟಕದೊಂಡ, ರಾಜುಗೌಡ ಪಾಟೀಲ, ಜಿಲ್ಲಾಧಿಕಾರಿ ಟಿ.ಭೂಬಾಲನ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ, ಎಸ್‌ಪಿ ಎಚ್ ಡಿ ಆನಂದಕುಮಾರ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
English summary
Instruction to drain the overflowing Alamatti Reservoir water to the lakes of Vijayapur district, Say Minister MB Patil.
Story first published: Thursday, July 27, 2023, 12:59 [IST]