Mangaluru
lekhaka-Kishan Kumar
ಮಂಗಳೂರು, ಜೂನ್ 26: ಜನವರಿ ಮಕರ ಸಂಕ್ರಾಂತಿ ಬಳಿಕ ರಾಮ ಮಂದಿರ ಲೋಕಾರ್ಪಣೆಯಾಗಲಿದೆ. ಅಯೋಧ್ಯೆ ರಾಮ ಮಂದಿರದಲ್ಲಿ ಯಾವುದೇ ಸೇವೆಗಳಿಲ್ಲ. ರಾಮನ ಹೆಸರಲ್ಲಿ ಭಕ್ತರು ಮಾಡುವ ದಾನಗಳೇ ರಾಮನ ಸೇವೆ ಎಂದು ಮಂಗಳೂರಿನಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಂಗಳೂರಿನ ಹಿರಿಯ ವಿದ್ವಾಂಸ ಕಲ್ಕೂರ ಪ್ರದೀಪ್ ಭಟ್ ಅವರ ಮನೆಯಲ್ಲಿ ತುಲಾಭಾರ ಸೇವೆ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ರಾಮಮಂದಿರ ನಿರ್ಮಾಣ ಭರದಿಂದ ಸಾಗುತ್ತಿದೆ. ಪ್ರಥಮ ಹಂತದ ಕಾಮಗಾರಿ ಈಗಾಗಲೇ ಮುಕ್ತಾಯದ ಹಂತದಲ್ಲಿದೆ. ಮುಂದಿನ ಮಕರ ಸಂಕ್ರಾಂತಿ ಕಳೆದ ಬಳಿಕ ಮಂದಿರ ಲೋಕಾರ್ಪಣೆಯಾಗಲಿದೆ ಎಂದರು.
ರಾಮ ಪ್ರತಿಮೆ ನಿರ್ಮಾಣ ಕಾರ್ಯ ಕೂಡಾ ಭರದಿಂದ ಸಾಗುತ್ತಿದೆ. ನಮ್ಮ ಕನಸು ರಾಮಮಂದಿರ ಅಲ್ಲ, ರಾಮ ರಾಜ್ಯದ ಕನಸು. ಈ ಕನಸಿನ ಸಾಕಾರ ಮಾಡೋದು ರಾಮ ದೇವರಿಗೆ ಕೊಡುವ ಕಾಣಿಕೆ. ಬದುಕಿನಲ್ಲಿ ಒಂದು ಬಾರಿ ಅಶಕ್ತರಿಗೆ ದಾನ ಮಾಡೋಣ. ಅಯೋಧ್ಯೆಯಲ್ಲಿ ರಾಮನ ಮುಂದೆ ದಾನವನ್ನು ಅರ್ಪಿಸೋಣ ಎಂದು ಪೇಜಾವರ ಶ್ರೀ ಹೇಳಿದರು.
ಬಡವರಿಗೆ ಉಚಿತ ಚಿಕಿತ್ಸೆ, ಅರ್ಹ ವಿದ್ಯಾರ್ಥಿಗೆ ಚಿಕಿತ್ಸೆಯೋ ಅಥವಾ ದತ್ತು ಪಡೆಯುವ ಮೂಲಕ ರಾಮಸೇವೆ ಮಾಡೋಣ. ಈ ಮೂಲಕ ರಾಮ ರಾಜ್ಯದ ಕನಸನ್ನು ನನಸು ಮಾಡೋಣ. ಭಾರತದಂತಹ ನೆಲದಲ್ಲಿ ಗೋಹತ್ಯೆ ಆಗಬಾರದು. ಸರ್ಕಾರ ಗೋಹತ್ಯೆ ನಿಷೇಧವನ್ನು ಹಿಂಪಡೆಯುವ ದುಸ್ಸಾಹಸಕ್ಕೆ ಕೈ ಹಾಕಬಾರದು. ಹಿಂದೂ ಸಂಘಟನೆಗಳು ಗೋಹತ್ಯೆಯನ್ನು ತಡೆಯಬೇಕು. ಆದರೆ ಪೊಲೀಸರ ಮೂಲಕ ಈ ಹತ್ಯೆಯನ್ನು ತಡೆಯಬೇಕು ಎಂದು ಕರೆ ನೀಡಿದರು.
ಕದ್ರಿಯ ಮಂಜುಪ್ರಸಾದ ಇಂದು ವೃಕ್ಷ, ಬೀಜ, ಸಸಿಗಳಿಂದ ಮಾಡಿರುವ ವಿಶೇಷ ತುಲಾಭಾರಕ್ಕೆ ಸಾಕ್ಷಿಯಾಯಿತು. ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಅವರು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಗೆ ವೃಕ್ಷ, ಬೀಜ, ಸಸಿಗಳಿಂದ ತುಲಾಭಾರ ಮಾಡಿ ಈ ವಿನೂತನ ಪರಂಪರೆಗೆ ನಾಂದಿ ಹಾಡಿದರು. ಹಲಸು, ಮಾವು, ಹರಿವೆ, ಅಲಸಂಡೆ, ಹಾಗಲ, ತುಂಬೆ ಮುಂತಾದ ಸಸಿಗಳಿಂದ ತುಲಾಭಾರ ನೆರವೇರಿತು. ಪ್ರದೀಪ್ ಕುಮಾರ್ ಕಲ್ಕೂರ ಅವರಲ್ಲದೆ ಭಕ್ತರೂ ತುಲಾಭಾರಕ್ಕೆ ಸಸಿಗಳಿಂದ ತಂದಿದ್ದರು. ತುಲಾಭಾರದ ಬಳಿಕ ಈ ಗಿಡಗಳನ್ನು ಭಕ್ತರಿಗೆ ಹಂಚಲಾಯಿತು. ತುಲಾಭಾರ ಸೇವೆಯ ಬಳಿಕ ಭಕ್ತರಿಗೆ ಸ್ವಾಮೀಜಿ ಆಶೀರ್ವಚನ ನೀಡಿದ್ದಾರೆ.
ಜುಲೈ 2ರಿಂದ ಮೈಸೂರಿನ ಕುವೆಂಪು ನಗರದಲ್ಲಿ ಚಾತುರ್ಮಾಸ ಕೈಗೊಳ್ಳಲಿದ್ದೇನೆ. ಮೈಸೂರಿನಲ್ಲಿ ಮಳೆಗಾಲದ ನಾಲ್ಕು ತಿಂಗಳು ಚಾತುರ್ಮಾಸ ಕೈಗೊಳ್ಳಲಿದ್ದೇನೆ. ಪರಿಸರ ರಕ್ಷಣೆ ಮಾಡುವ ದೊಡ್ಡ ಹೊಣೆ ನಮಗಿದೆ. ಮರಗಳಿಂದ ಹಣ್ಣು-ನೆರಳು ಸಿಗುತ್ತದೆ. ಮುಖ್ಯವಾಗಿ ಪ್ರಾಣವಾಯು ಈ ಪರಿಸರದಿಂದ ಸಿಗುತ್ತದೆ. ಕೋವಿಡ್ ಸಂದರ್ಭದಲ್ಲಿ ಈ ಪ್ರಾಣ ವಾಯುವಿನ ಮಹತ್ವವನ್ನು ಅರಿತಿದ್ದೇವೆ ಆದರೆ ನಾವು ನಮ್ಮ ಕೈಯಾರೆ ಪ್ರಾಣವಾಯುವನ್ನು ಹಾಳು ಮಾಡುತ್ತಿದ್ದೇವೆ. ದ್ವಿ ಚಕ್ರವಾಹನ ಬಳಸುವವರು ಎರಡು ಗಿಡಗಳನ್ನು ನೆಡೆಬೇಕು.
ನಾಲ್ಕು ಚಕ್ರವಾಹನ ಬಳಸುವವರು ನಾಲ್ಕು ಗಿಡ ನೆಡಬೇಕು. ಎಸಿ ಬಳಸುವವರು ಮತ್ತಷ್ಟು ಗಿಡಗಳನ್ನು ನೆಡಬೇಕು. ಮರ ನೆಡದವರಿಗೆ ಬದುಕುವ ಹಕ್ಕಿಲ್ಲ, ಸಾಯುವ ಹಕ್ಕೂ ಇಲ್ಲ. ಕಲ್ಕೂರ ಪ್ರತಿಷ್ಠಾನ ಗಿಡಗಳಿಂದ ತುಲಾಭಾರ ನಡೆಸಿರೋದು ಸಂತೋಷದ ವಿಚಾರ. ನಾವು ಪರಿಸರದ ರಕ್ಷಣೆಯನ್ನು ಮಾಡೋಣ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
English summary
There is no special service in Ayodhya Ram Mandir says Pejavara Sri Vishwa prasanna swamiji.Know more,
Story first published: Monday, June 26, 2023, 20:20 [IST]