International
oi-Malathesha M
ವಾಷಿಂಗ್ಟನ್: ಪ್ರಧಾನಿ ಮೋದಿ ಅವರ ಬಹುನಿರೀಕ್ಷಿತ ಅಮೆರಿಕ ಭೇಟಿ ಅತ್ಯಂತ ಯಶಸ್ವಿ ಆಗಿದೆ. ಅದ್ರಲ್ಲೂ ಜಾಗತಿಕ ಮಟ್ಟದಲ್ಲಿ ಭಾರತದ ಶಕ್ತಿ ಪ್ರದರ್ಶನಕ್ಕೆ ಇದು ವೇದಿಕೆಯನ್ನ ಒದಗಿಸಿತ್ತು. ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾರತದ ಪ್ರಧಾನಿಗೆ ನೀಡಿದ ಆಥಿತ್ಯಕ್ಕೆ ಈ ಜಗತ್ತು ನಿಬ್ಬೆರಗಾಗಿದೆ. ಇನ್ನು ಇದೇ ಹೊತ್ತಲ್ಲಿ ಮತ್ತೊಂದು ಇತಿಹಾಸ ನಿರ್ಮಿಸಲು ಪಿಎಂ ಮೋದಿ ಮುಂದಾಗಿದ್ದಾರೆ.
ಹೌದು, ತಮ್ಮ 3 ದಿನಗಳ ಮಹತ್ವದ ಅಮೆರಿಕ ಪ್ರವಾಸ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಈಜಿಪ್ಟ್‌ಗೆ ಭೇಟಿ ನೀಡಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಈಜಿಪ್ಟ್‌ಗೆ ಮೊದಲ ಬಾರಿ ಭೇಟಿ ನೀಡುತ್ತಿದ್ದಾರೆ. ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್ ಆಹ್ವಾನದ ಹಿನ್ನೆಲೆಯಲ್ಲಿ ಪಿಎಂ ಮೋದಿ ಈಜಿಪ್ಟ್‌ಗೆ ತೆರಳಿದ್ದಾರೆ. ಈಗ ಜಾಗತಿಕ ಮಟ್ಟದಲ್ಲಿ ಭಾರತದ ಸ್ನೇಹ ಎಲ್ಲರಿಗೂ ಬೇಕು. ಹೀಗಾಗಿ ಅಮೆರಿಕದಿಂದ ಹಿಡಿದು ಈಜಿಪ್ಟ್ ತನಕ ಪ್ರತಿಯೊಂದು ರಾಷ್ಟ್ರವು ಭಾರತದ ಸ್ನೇಹಕ್ಕೆ ಹಾತೊರೆಯುತ್ತಿವೆ. ಅದೇ ರೀತಿ ಈಜಿಪ್ಟ್ ಕೂಡ ಭಾರತದ ಪ್ರಧಾನಿಗೆ ಭೇಟಿ ನೀಡುವಂತೆ ಮನವಿ ಮಾಡಿತ್ತು. ಈ ಮೂಲಕ ಪ್ರಧಾನಿ ಮೋದಿ ಇದೀಗ ಮತ್ತೊಂದು ದಾಖಲೆ ಬರೆದಿದ್ದಾರೆ.
26 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ!
ಅಂದಹಾಗೆ 1997ರ ನಂತರ ಭಾರತದ ಪ್ರಧಾನಿಯೊಬ್ಬರು ಈಜಿಪ್ಟ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದೆ. ಅತ್ತ ಅಮೆರಿಕ ಅಧ್ಯಕ್ಷ ಬೈಡನ್ ಹಾಗೂ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡೆನ್ ಆಹ್ವಾನದ ಹಿನ್ನೆಲೆ ಪ್ರಧಾನಿ ಮೋದಿ ಅಮೆರಿಕ ಪ್ರವಾಸವನ್ನ ಕೈಗೊಂಡಿದ್ರು. ಈ ಭೇಟಿ ಮುಗಿಸಿಕೊಂಡು ನೇರವಾಗಿ ಈಜಿಪ್ಟ್‌ಗೆ ತೆರಳಿದ್ದಾರೆ ಪಿಎಂ ಮೋದಿ. ಇದೇ ವೇಳೆ ಮೊದಲನೇ ಮಹಾಯುದ್ಧದ ವೇಳೆ ಹುತಾತ್ಮರಾದ 4,000 ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲು, ಕೈರೋದ ಎಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧ ಸ್ಮಾರಕಕ್ಕೆ ಕೂಡ ಪ್ರಧಾನಿ ಮೋದಿ ಭೇಟಿ ನೀಡಿಲಿದ್ದಾರೆ. ಹಾಗೇ ಈಜಿಪ್ಟ್ ಅಧ್ಯಕ್ಷ ಮತ್ತು ಪ್ರಮುಖ ಸಚಿವರ ಜೊತೆಗೆ ಪ್ರಧಾನಿ ಮೋದಿ ಸಾಲು ಸಾಲು ಸಭೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆ, ಈಜಿಪ್ಟ್‌ನಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಈಜಿಪ್ಟ್ ಜೊತೆ ಮಹತ್ವದ ಒಪ್ಪಂದಗಳು
ಭಾರತ & ಈಜಿಪ್ಟ್ ಸಂಬಂಧ ಮೊದಲಿನಿಂದ ಉತ್ತಮವಾಗಿದೆ. ಅಲ್ಲದೆ ಎರಡೂ ದೇಶಗಳ ನಡುವೆ ಸಾವಿರಾರು ವರ್ಷದಿಂದ ವ್ಯಾಪಾರ ಮತ್ತು ವಹಿವಾಟು ನಡೆಯುತ್ತಿದೆ. ಅದ್ರಲ್ಲೂ ಆಧುನಿಕ ಕಾಲಘಟ್ಟದಲ್ಲಿ ಎರಡೂ ರಾಷ್ಟ್ರಗಳ ವ್ಯಾವಹಾರಿಕ ಸಂಬಂಧ ಉತ್ತಮವಾಗಿದೆ. ಈಗ ಪ್ರಧಾನಿ ಮೋದಿ ಅವರ ಭೇಟಿ ಸಂದರ್ಭದಲ್ಲಿ ಕೂಡ ಹಲವು ಮಹತ್ವದ ಒಪ್ಪಂದ ಹಾಗೂ ಒಡಂಬಡಿಕೆಗೆ ಸಹಿ ಬೀಳುವ ಸಾಧ್ಯತೆ ಇದೆ. ಹಾಗೇ ಭಾರತದ ಜೊತೆ ಸಂಬಂಧ ವೃದ್ಧಿಗೆ ಈಜಿಪ್ಟ್ ಕೂಡ ಹಾತೊರೆಯುತ್ತಿದೆ. ಆದರೆ ಈ ಎಲ್ಲಾ ಬೆಳವಣಿಗೆಗಳನ್ನ ಭಾರತದ ಶತ್ರು ರಾಷ್ಟ್ರಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಪ್ರಧಾನಿ ಮೋದಿ & ಬೈಡನ್ ಮಧ್ಯೆ ‘ಎಣ್ಣೆ’ ಮಾತು! ಇಬ್ಬರೂ ನಾಯಕರು ನಕ್ಕಿದ್ದು ಏಕೆ?
ಒಟ್ನಲ್ಲಿ ಪ್ರಧಾನಿ ಮೋದಿ 2ನೇ ಬಾರಿಗೆ ಅಮೆರಿಕನ್ ಕಾಂಗ್ರೆಸ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದರು. ಹಿಂದೆ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೂಡ ಪ್ರಧಾನಿ ಮೋದಿ ಅಮೆರಿಕಗೆ ಭೇಟಿ ನೀಡಿ, ಅಮೆರಿಕನ್ ಕಾಂಗ್ರೆಸ್ ಜಂಟಿ ಅಧಿವೇಶನವನ್ನ ಉದ್ದೇಶಿಸಿ ಮಾತನಾಡಿದ್ದರು. ಈ ಮೂಲಕ ಎರಡು ಬಾರಿ ಅಮೆರಿಕನ್ ಕಾಂಗ್ರೆಸ್ ಅಧಿವೇಶನ ಉದ್ದೇಶಿಸಿ ಮಾತನಾಡಿದ ಮೊದಲ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಯನ್ನ ಪಡೆದಿದ್ದಾರೆ ಮೋದಿ. ಈಗ ಈಜಿಪ್ಟ್ ದೇಶಕ್ಕೂ ಭೇಟಿ ನೀಡುತ್ತಿದ್ದು, 26 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಈಜಿಪ್ಟ್ ಭೇಟಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕುತೂಹಲ ಹೆಚ್ಚಾಗಿದೆ. ಹಾಗೇ ಯಾವೆಲ್ಲಾ ಮಹತ್ವದ ಒಪ್ಪಂದಕ್ಕೆ ಭಾರತ & ಈಜಿಪ್ಟ್ ಸಹಿ ಹಾಕಲಿವೆ ಅನ್ನೋದು ಒಂದೆರಡು ದಿನದಲ್ಲಿ ಗೊತ್ತಾಗಲಿದೆ.
English summary
Prime Minister Modi visits Egypt after the America.
Story first published: Saturday, June 24, 2023, 19:59 [IST]