Karnataka
oi-Gururaj S

ಬೆಂಗಳೂರು, ಜುಲೈ 09; ಜಮ್ಮು ಮತ್ತು ಕಾಶ್ಮೀರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಕಾರಣ ಪವಿತ್ರ ಅಮರನಾಥ ಯಾತ್ರೆಗೆ ತೆರಳಿದ್ದ ಯಾತ್ರಿಕರು ಸಿಲುಕಿಕೊಂಡಿದ್ದಾರೆ. ಇವರಲ್ಲಿ 20ಕ್ಕೂ ಹೆಚ್ಚು ಕನ್ನಡಿಗರು ಸೇರಿದ್ದಾರೆ. ಇವರು ಮೂಲತಃ ಗದಗ ಜಿಲ್ಲೆಯವರು.
ಅಮರನಾಥ ಯಾತ್ರೆಗೆ ತೆರಳಿದ್ದ ಕನ್ನಡಿಗರು ಅಲ್ಲಿ ಸಿಲುಕಿಕೊಂಡಿರುವ ವಿಚಾರ ರಾಜ್ಯ ಸರ್ಕಾರದ ಗಮನಕ್ಕೂ ಸಹ ಬಂದಿದೆ. ಸರ್ಕಾರ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಐಎಎಸ್ ಅಧಿಕಾರಿಯೊಬ್ಬರನ್ನು ನೇಮಕ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಈ ಕುರಿತು ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿಗಳು ಟ್ವೀಟ್‌ನಲ್ಲಿ, “ಪವಿತ್ರ ಅಮರನಾಥ ಯಾತ್ರೆಗೆ ತೆರಳಿ ಹವಾಮಾನ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ಸರ್ಕಾರ ಬದ್ಧವಾಗಿದೆ” ಎಂದು ಹೇಳಿದ್ದಾರೆ.
“ಗದಗದಿಂದ ತೆರಳಿರುವ 23 ಮಂದಿ ಸೇರಿ ಒಟ್ಟು 80 ಮಂದಿ ಕನ್ನಡಿಗರು ಅಮರನಾಥ ಮಂದಿರದಿಂದ 6 ಕಿ. ಮೀ. ದೂರದಲ್ಲಿರುವ ಪಂಚತಾರ್ನಿ ಟೆಂಟ್‌ನಲ್ಲಿ ಸಿಲುಕಿದ್ದಾರೆ ಎನ್ನುವ ಮಾಹಿತಿ ಲಭ್ಯವಿದ್ದು, ಈ ಹಿನ್ನೆಲೆಯಲ್ಲಿ ಕೂಡಲೇ ರಕ್ಷಣಾ ಕಾರ್ಯ ಕೈಗೊಂಡು, ಎಲ್ಲರನ್ನೂ ಸುರಕ್ಷಿತವಾಗಿ ವಾಪಸು ಕರೆತರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಟ್ವೀಟ್ ಮಾಡಿ, “ಹವಾಮಾನ ವೈಪರೀತ್ಯದಿಂದ ಪವಿತ್ರ ಅಮರನಾಥ ಯಾತ್ರೆಗೆ ತೆರಳಿದ್ದ ಗದಗ ಜಿಲ್ಲೆಯ 23ಮಂದಿ ಸೇರಿದಂತೆ ಒಟ್ಟು 80 ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿರುವ ವಿಷಯವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಸಂಕಷ್ಟದಲ್ಲಿ ಸಿಲುಕಿರುವ ಎಲ್ಲರನ್ನೂ ಸುರಕ್ಷಿತವಾಗಿ ವಾಪಸ್ ಕರೆತರುವ ವ್ಯವಸ್ಥೆ ಮಾಡಲಾಗಿದ್ದು, ಈ ಸಂಬಂಧ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಗುಡ್ಡ ಕುಸಿತದಿಂದ ಸಮಸ್ಯೆ; ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಅಮರನಾಥ ಯಾತ್ರೆಗೆ ತೆರಳುವ ಮಾರ್ಗದಲ್ಲಿ ಗುಡ್ಡ ಕುಸಿತವಾಗಿದೆ. ಇದರಿಂದಾಗಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ನಾಲ್ಕು ದಿನಗಳಿಂದ ಕನ್ನಡಿಗರು ಅಲ್ಲಿ ಸಿಲುಕಿದ್ದಾರೆ.
ಗದಗ ಜಿಲ್ಲೆಯಿಂದ ಅಮರನಾಥ ಯಾತ್ರೆಗೆ ತೆರಳಿದ್ದವರು ಅಲ್ಲಿ ಸಿಲುಕಿರುವ ಬಗ್ಗೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಎಸ್. ನೇಮಗೌಡ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರು. ರಕ್ಷಣಾ ಕಾರ್ಯಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದ್ದರು. ಬಳಿಕ ಅವರು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದ್ದರು.
English summary
Karnataka chief minister Siddaramaiah tweeted that government appointed IAS officer to bring back stranded Amarnath pilgrims. More than 20 pilgrims from Gadag stranded.
Story first published: Sunday, July 9, 2023, 7:50 [IST]