International
oi-Malathesha M
ಎಲ್ಲಿ ನೋಡಿದರೂ ಹೆಣಗಳ ರಾಶಿ, ಯಾವ ಮನೆಯಲ್ಲಿ ಯಾರ ಹೆಣ ಬಿತ್ತೋ ಗೊತ್ತಿಲ್ಲ. ದಿಢೀರ್ ಬಂದು ಬೀಳುತ್ತಿರುವ ಕ್ಷಿಪಣಿಗಳು ಅಮಾಯಕರ ಜೀವ ತೆಗೆಯುತ್ತಿವೆ. ಈ ರೀತಿಯ ಭೀಕರ ದೃಶ್ಯಗಳು ಕಂಡು ಬರುವುದು ಯುದ್ಧಪೀಡಿತ ಉಕ್ರೇನ್‌ನಲ್ಲಿ. ಹೀಗೆ ರಾತ್ರೋರಾತ್ರಿ ರಷ್ಯಾ ಸೇನೆ ಹಾರಿಸಿರುವ ಮಿಸೈಲ್ ದಾಳಿಗೆ ಬರೋಬ್ಬರಿ ಐವರು ಬಲಿಯಾಗಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ. ಉಕ್ರೇನ್‌ನ ಎಲ್ವಿವ್ ನಗರದಲ್ಲಿ ಈ ಘಟನೆ ನಡೆದಿದೆ.
ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ರಷ್ಯಾ ಕ್ಷಿಪಣಿ ದಾಳಿ ಮಾಡಿದ್ದು, ದಿಢೀರ್ ದಾಳಿಯ ಪರಿಣಾಮ ಒಂದು ಅಪಾರ್ಟ್‌ಮೆಂಟ್ ಛಿದ್ರವಾಗಿದೆ. ಹೀಗಾಗಿ ತಮ್ಮ ತಮ್ಮ ಮನೆಗಳಲ್ಲಿ ಮಲಗಿದ್ದವರು ಜೀವ ಬಿಟ್ಟಿದ್ದಾರೆ. ಈ ಕುರಿತು ಖುದ್ದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ‘ರಷ್ಯಾ ಭಯೋತ್ಪಾದಕರ ರಾತ್ರಿ ದಾಳಿಯ ಪರಿಣಾಮ ಇದು. ದುರ್ಘಟನೆಯಲ್ಲಿ ಗಾಯಗೊಂಡವರು ಇದ್ದಾರೆ, ಮೃತಪಟ್ಟವರು ಕೂಡ ಇದ್ದಾರೆ. ಅವರ ಸಂಬಂಧಿಕರಿಗೆ ನಾನು ಸಾಂತ್ವನ ಹೇಳುತ್ತೇನೆ. ಖಂಡಿತವಾಗಿ ಶತ್ರುಗಳಿಗೆ ಈ ದಾಳಿ ಕುರಿತು ತಕ್ಕ ಪ್ರತಿಕ್ರಿಯೆ ನೀಡುತ್ತೇವೆ, ಅದು ತುಂಬಾ ಗಟ್ಟಿಯಾಗಿ.’ ಎಂದು ಉಕ್ರೇನ್‌ನ ಅಧ್ಯಕ್ಷ ಟ್ವೀಟ್ ಮಾಡಿದ್ದು ಪರಿಸ್ಥಿತಿಯನ್ನ ಮತ್ತಷ್ಟು ಸೂಕ್ಷ್ಮವಾಗಿಸಿದೆ.
45 ಯುದ್ಧ ಕೈದಿಗಳ ಬಿಡುಗಡೆ
ಒಂದು ಕಡೆ ರಷ್ಯಾ ಮತ್ತು ಉಕ್ರೇನ್ ಎರಡು ದೇಶಗಳು ಭೀಕರವಾಗಿ ಬಡಿದಾಡುತ್ತಿದ್ದರೂ, ಇನ್ನೊಂದ್ಕಡೆ ಯುದ್ಧ ಕೈದಿಗಳನ್ನ ಬಿಡುಗಡೆ ಮಾಡುವ ಪ್ರಕ್ರಿಯೆ ಮುಂದುವರಿದಿದೆ. ಈಗ ಸುಮಾರು 45 ಯುದ್ಧ ಕೈದಿಗಳನ್ನ ಪರಸ್ಪರ ರಷ್ಯಾ ಮತ್ತು ಉಕ್ರೇನ್ ಬಿಡುಗಡೆ ಮಾಡಿವೆ ಎನ್ನಲಾಗಿದೆ. ಈ ಹಿಂದೆ ಕೂಡ ಸಾವಿರಾರು ಯುದ್ಧ ಕೈದಿಗಳನ್ನು ರಷ್ಯಾ ಸೇನೆ ಹಾಗೂ ಉಕ್ರೇನ್ ಪಡೆಗಳು ಬಿಡುಗಡೆ ಮಾಡಿದ್ದವು. ಇದೀಗ ಎರಡೂ ದೇಶಗಳ ಸೇನಾ ಮುಖ್ಯಸ್ಥರ ಮಾತುಕತೆ ನಂತರ ಸುಮಾರು 45 ಯುದ್ಧ ಕೈದಿಗಳನ್ನ ಪರಸ್ಪರ ವಿನಿಮ ಮಾಡಿಕೊಂಡ ಮಾಹಿತಿ ಹೊರಬಿದ್ದಿದೆ.
ಅಣುಸ್ಥಾವರದ ಬಗ್ಗೆ ಜಗತ್ತಿಗೆ ಚಿಂತೆ!
ರಷ್ಯಾ & ಉಕ್ರೇನ್ ಯುದ್ಧ ಶುರುವಾದ ಮರುದಿನದಿಂದಲೇ ಜಗತ್ತಿಗೆ ಒಂದಲ್ಲ ಒಂದು ಕಂಟಕ ಎದುರಾಗುತ್ತಿದೆ. ಅದ್ರಲ್ಲೂ ಪರಮಾಣು ಯುದ್ಧದ ಕಾರ್ಮೋಡ ಆವರಿಸಿರುವಾಗಲೇ ಉಕ್ರೇನ್ ಮತ್ತೆ ಮತ್ತೆ ಎಡವಟ್ಟು ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಉಕ್ರೇನ್‌ನ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರ ಮೇಲೆ ಮತ್ತೆ ಉಕ್ರೇನ್ ದಾಳಿ ನಡೆಸಿದೆ ಎಂದು ರಷ್ಯಾ ನಿನ್ನೆ ಗಂಭೀರ ಆರೋಪ ಮಾಡಿತ್ತು. ಏಪ್ರಿಲ್ ಆರಂಭದಲ್ಲಿ ಕೂಡ ಜಪೋರಿಝಿಯಾ ಪರಮಾಣು ಸ್ಥಾವರದ ಮೇಲೆ ಉಕ್ರೇನ್ ಸೇನೆ ಸೂಸೈಡ್ ಡ್ರೋನ್ ಮೂಲಕ ದಾಳಿಗೆ ಯತ್ನಿಸಿದ್ದ ಆರೋಪ ಕೇಳಿಬಂದಿತ್ತು. ಈ ಘಟನೆ ಬಳಿಕ ವಿಪರೀತ ಚರ್ಚೆ ನಡೆದಿದ್ದು ಜಗತ್ತು ಆತಂಕ ಹೊರಹಾಕುತ್ತಿದೆ.
SCO Summit India: ಪ್ರಧಾನಿ ಮೋದಿ ಎದುರಲ್ಲೇ ಅಮೆರಿಕ ವಿರುದ್ಧ ಗುಡುಗಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್!
ಚೆರ್ನೊಬಿಲ್ ದುರಂತ ರಿಟರ್ನ್?
ಯೂರೋಪಿನ ಅತಿ ದೊಡ್ಡ ಅಣುಸ್ಥಾವರ ಜಪೋರಿಝಿಯಾ ನ್ಯೂಕ್ಲಿಯರ್ ಪ್ಲಾಂಟ್. 2022ರ ಮಾರ್ಚ್ ತಿಂಗಳಲ್ಲಿ ಇದೇ ಉಕ್ರೇನ್ ತನ್ನ ಅಣುಸ್ಥಾವರದ ಮೇಲೆ ರಷ್ಯಾ ಸೇನೆಯಿಂದ ದಾಳಿ ನಡೆದಿದೆ ಎಂದು ಗಂಭೀರ ಆರೋಪ ಮಾಡಿತ್ತು. ಬೇರೆಯವರ ವಿರುದ್ಧ ಬೆರಳು ತೋರಿಸುತ್ತಾ ಆರೋಪ ಹೊರಿಸಿದ್ದ ದೇಶವೇ ಈಗ ತನ್ನದೇ ಅಣುಸ್ಥಾವರದ ಮೇಲೆ ಅಟ್ಯಾಕ್ ಮಾಡಿದೆ ಎಂಬ ಆರೋಪ ಹೊತ್ತಿದೆ. ವಿಶ್ವಸಂಸ್ಥೆ ಕೂಡ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವ ಸಾಧ್ಯತೆ ಇದೆ. ಅಕಸ್ಮಾತ್ ಸ್ಥಾವರದ ಮೇಲೆ ದಾಳಿಯಲ್ಲಿ ಜಪೋರಿಝಿಯಾ ಸ್ಥಾವರ ಸ್ಫೋಟವಾಗಿದ್ರೆ ಈ ಘಟನೆ ಚೆರ್ನೊಬಿಲ್ ದುರಂತಕ್ಕಿಂತ 10 ಪಟ್ಟು ಹೆಚ್ಚು ಸಂಕಷ್ಟ ನೀಡುತ್ತಿತ್ತು.
ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಸ್ಥಿತಿ ನೋಡುತ್ತಿದ್ದರೆ ಸೇಡಿಗೆ ಸೇಡು ತೀರಿಕೊಳ್ಳುತ್ತಾ ಎರಡೂ ಬಣಗಳು ಮತ್ತಷ್ಟು ದಿನ ಕಚ್ಚಾಡುವುದು ಪಕ್ಕಾ. ಹೀಗಾಗಿ ಯುದ್ಧ ನಿಲ್ಲಿಸೋಕೆ ಜಗತ್ತು ಒಂದಾಗಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಆದ್ರೆ ಅದು ನಡೆಯುತ್ತಿಲ್ಲ, ಅತ್ತ ಉಕ್ರೇನ್ ಕೂಡ ಮಾತುಕತೆಗೆ ಸಿದ್ಧವಿಲ್ಲ. ಇತ್ತ ರಷ್ಯಾ ಕೂಡ ಹಠ ಬಿಡುತ್ತಿಲ್ಲ. ಹೀಗಾಗಿ ಎರಡೂ ದೇಶಗಳ ಅಮಾಯಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈವರೆಗೂ ಸೈನಿಕರು ಸೇರಿ ಲಕ್ಷಾಂತರ ಜನ ಪ್ರಾಣ ಬಿಟ್ಟಿರುವ ಆರೋಪ ಕೇಳಿಬರುತ್ತಿದೆ.
English summary
Ukraine loses 5 lives in deadly missile attack.
Story first published: Thursday, July 6, 2023, 20:49 [IST]