Bengaluru
oi-Naveen Kumar N
ಬೆಂಗಳೂರು, ಜೂನ್ 19: ಅನ್ನ ಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ವಿತರಿಸಲು ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ಕೊಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದ ನಂತರ ರಾಜ್ಯ ಸರ್ಕಾರ ಬದಲೀ ಮಾರ್ಗಗಳ ಹುಡುಕಾಟ ನಡೆಸುತ್ತಿದೆ. ವಿವಿಧ ರಾಜ್ಯಗಳಿಂದ ಅಕ್ಕಿ ಖರೀದಿ ಬಗ್ಗೆ ಚರ್ಚೆ ಮಾಡುತ್ತಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸೋಮವಾರ ಉನ್ನತ ಮಟ್ಟದ ಸಭೆ ಕರೆಯಲಾಗಿದೆ.
ಈಗಾಗಲೇ ರಾಜ್ಯಕ್ಕೆ ಅಕ್ಕಿ ಪೂರೈಸುವಂತೆ ತೆಲಂಗಾಣ ರಾಜ್ಯಕ್ಕೆ ಕೇಳಲಾಗಿತ್ತು, ಆದರೆ ಅಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ದಾಸ್ತಾನು ಇಲ್ಲ ಎಂದು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಹೇಳಿದ್ದಾರೆ. ಇನ್ನು ಛತ್ತಿಸ್ಗಢದಲ್ಲಿ 1.5 ಲಕ್ಷ ಟನ್ ಅಕ್ಕಿ ದಾಸ್ತಾನು ಇದೆ, ಆದರೆ ಅಲ್ಲಿನ ಸರ್ಕಾರದಿಂದ ಇನ್ನು ಯಾವುದೇ ಪ್ರತಿಕ್ರಿಯೆ ಬಂದಿಲ್ಲದ ಕಾರಣ ಅಧಿಕಾರಿಗಳು ಕಾಯುತ್ತಿದ್ದಾರೆ.
“ಶನಿವಾರದಿಂದಲೇ ಛತ್ತಿಸ್ಗಢದಿಂದ ಅಕ್ಕಿ ಖರೀದಿ ಮಾಡುವ ಸಂಬಂಧ ಚರ್ಚೆ ನಡೆಯುತ್ತಿದೆ. ದಾಸ್ತಾನು ಇರುವ ಅಕ್ಕಿಯನ್ನು ಮಾರಾಟ ಮಾಡಲು ಅಲ್ಲಿನ ಸರ್ಕಾರ ಒಪ್ಪಿಗೆ ನೀಡಿದ ಬಳಿಕವಷ್ಟೆ ಮುಂದಿನ ನಿರ್ಧಾರ ಮಾಡಲು ಸಾಧ್ಯವಾಗುತ್ತದೆ. ಇನ್ನೂ ಅಕ್ಕಿಯ ದರ, ಸಾಗಾಣಿಕಾ ವೆಚ್ಚದ ಬಗ್ಗೆ ಕೂಡ ನಿರ್ಧಾರ ತೆಗೆದುಕೊಳ್ಳಬೇಕಿದೆ” ಎಂದು ಅಕ್ಕಿ ಖರೀದಿ ಪ್ರಕ್ರಿಯೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಛತ್ತಿಸ್ಗಢ ಅಕ್ಕಿ ಮಾರಾಟಕ್ಕೆ ಒಪ್ಪಿಗೆ ಕೊಟ್ಟರೆ ಅಲ್ಲಿಂದ ರಾಜ್ಯಕ್ಕೆ ಅದನ್ನು ಸಾಗಿಸಲು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ದೂರದ ರಾಜ್ಯದಿಂದ ಅಷ್ಟೊಂದು ಪ್ರಮಾಣದಲ್ಲಿ ಅಕ್ಕಿ ಸಾಗಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಒಂದು ವೇಳೆ ಅಕ್ಕಿ ಬರುವುದು ತಡವಾದರೆ ಅನ್ನ ಭಾಗ್ಯ ಯೋಜನೆ ಜಾರಿ ಕೂಡ ತಡವಾಗಲಿದೆ. 1.5 ಲಕ್ಷ ಟನ್ ಕೊಟ್ಟರೂ ರಾಜ್ಯದಲ್ಲಿ ಪೂರೈಕೆಗೆ ಸಾಕಾಗುವುದಿಲ್ಲ, ಉಳಿದ ಅಕ್ಕಿಯನ್ನು ಎಲ್ಲಿಂದ ಖರೀದಿ ಮಾಡಬೇಕು ಎಂದು ಸೋಮವಾರ ನಡೆಯುವ ಸಭೆಯಲ್ಲಿ ನಿರ್ಧಾರವಾಗಲಿದೆ.
ಅನ್ನ ಭಾಗ್ಯ ರಾಜಕೀಯ: ಬಿಜೆಪಿಯವರು ಯಡಬಿಡಂಗಿಗಳು ಅವರಿಗೆ ಇದು ಗೊತ್ತಾಗಲ್ಲ: ರಾಮಲಿಂಗರೆಡ್ಡಿ
ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಈಗಾಗಲೇ ಹಲವು ರಾಜ್ಯಗಳನ್ನು ಸಂಪರ್ಕಿಸಿದ್ದು, ಅಕ್ಕಿಯನ್ನು ಪೂರೈಸಲು ಮನವಿ ಮಾಡಿದ್ದಾರೆ. ರಾಜ್ಯದ ಮನವಿಯನ್ನು ಆಲಿಸಿರುವ ರಾಜ್ಯಗಳು, ಸೋಮವಾರ ತಮ್ಮ ನಿರ್ಧಾರವನ್ನು ತಿಳಿಸಲಿವೆ. ರಾಜ್ಯಗಳ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ಕ್ರಮಗಳ ಬಗ್ಗೆ ಅಧಿಕಾರಿಗಳು ನಿರ್ಧರಿಸಲಿದ್ದಾರೆ.
ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
ಇನ್ನು ರಾಜ್ಯ ಸರ್ಕಾರಕ್ಕೆ ಅಕ್ಕಿ ಪೂರೈಸಲು ನಿರಾಕರಿಸಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಬಡವರ ಯೋಜನೆಗೆ ಅಡ್ಡಗಾಲು ಹಾಕುತ್ತಿದೆ, ರಾಜ್ಯದ ಬಿಜೆಪಿ ನಾಯಕರಿಗೆ ನಿಜವಾದ ಜನಪರ ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ರಾಜ್ಯಕ್ಕೆ ಅಕ್ಕಿ ಪೂರೈಸುವಂತೆ ಮಾಡಲಿ ಎಂದು ಹೇಳಿದರು.
ಛತ್ತಿಸ್ಗಢದಿಂದ ಅಕ್ಕಿ ತರಲು ಸಾಗಾಣಿಕಾ ವೆಚ್ಚ ಅಧಿಕವಾಗುತ್ತದೆ. ರಾಯಚೂರು ಸೋನಾ ಮಸೂರಿ ಅಕ್ಕಿ ಕೂಡ ದುಬಾರಿ ಬೆಲೆ ಇರುವ ಕಾರಣ ಖರೀದಿ ಮಾಡಲು ಆಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
English summary
After the central government denied supplying rice for the Anna Bhagya Scheme, the Karnataka government is exploring alternative ways to purchase rice. A high-level meeting will be held in Bengaluru on Monday to finalize the rice purchase.