India
oi-Mamatha M
ನವದೆಹಲಿ, ಜೂನ್ 21 : ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲು ಸಿದ್ದರಾಮಯ್ಯ ಸರ್ಕಾರಕ್ಕೆ ಅಕ್ಕಿಯ ಸಮಸ್ಯೆ ಎದುರಾಗಿದೆ. ಕೇಂದ್ರ ಸರ್ಕಾರ ಅಕ್ಕಿ ಪೂರೈಸಲು ನಿರಾಕರಿಸಿದ್ದು, ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಲು ಸರ್ಕಾರ ಮುಂದಾಗಿದೆ. ಇದರ ಬೆನ್ನಲ್ಲೆ ನವದೆಹಲಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ.
ಬುಧವಾರ ಸಂಜೆ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಲಿದ್ದು, ಪ್ರಾಸಂಗಿಕವಾಗಿ ಕೆಲವು ವಿಚಾರಗಳನ್ನು ಪ್ರಸ್ತಾಪ ಮಾಡುವ ಉದ್ದೇಶವಿದೆ. ಇದರ ಜೊತೆಯಲ್ಲಿಯೇ ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡುವ ಬಗ್ಗೆಯೂ ಪ್ರಸ್ತಾಪ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದ ನಂತರ ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ 10 ಕೆಜಿ ಅಕ್ಕಿಯನ್ನು ನೀಡಿರುವ ಭರವಸೆಯನ್ನು ಈಡೇರಿಸುವ ಹಿನ್ನಲೆಯಲ್ಲಿ ರಾಜ್ಯಕ್ಕೆ 2,28,000 ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಕೋರಿ ಎಫ್ ಸಿ ಐ ಗೆ ಜೂನ್ 9 ರಂದು ಪತ್ರ ಬರೆಯಲಾಗಿತ್ತು. ಎಫ್ ಸಿ ಐ ಅವರು ತಮ್ಮಲ್ಲಿ 7 ಲಕ್ಷ ಮೆಟ್ರಿ ಟನ್ ಅಕ್ಕಿ ದಾಸ್ತಾನು ಇದ್ದು, ರಾಜ್ಯ ಕೋರಿರುವ 2,28,000 ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಯಾವುದೇ ತೊಂದರೆಯಿಲ್ಲ ಎಂದು ಜೂನ್ 12 ರಂದು ಪತ್ರ ಮುಖೇನ ತಿಳಿಸಿದ್ದರು ಎಂದು ಮಾಹಿರತಿ ನೀಡಿದ್ದಾರೆ.
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ
“ಎಫ್‌ಸಿಐನ ಡೆಪ್ಯೂಟಿ ಮ್ಯಾನೇಜರ್ ಅವರನ್ನು ಭೇಟಿಯಾಗಿ ಈ ಬಗ್ಗೆ ಖಚಿತಪಡಿಸಿಕೊಳ್ಳಲಾಗಿತ್ತು. ಆದರೆ ಜೂನ್ 13 ರಂದು ಕೇಂದ್ರ ಆಹಾರ ಇಲಾಖೆಯವರು ಎಫ್‌ಸಿಐಗೆ ಪತ್ರ ಬರೆದು ರಾಜ್ಯಗಳಿಗೆ ಕೇಂದ್ರದಿಂದ ಅಕ್ಕಿ ಸರಬರಾಜನ್ನು ನಿಲ್ಲಿಸಿದ್ದಾರೆ. ನಂತರ ಜೂನ್ 14 ರಂದು ಎಫ್‌ಸಿಐ ಅಧ್ಯಕ್ಷರು ಪತ್ರ ಬರೆದು , ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಮೊದಲು ಅಕ್ಕಿ ನೀಡುವುದಾಗಿ ಒಪ್ಪಿಕೊಂಡು ನಂತರ ನಿರಾಕರಿಸಿದ್ದು , ಭಾರತ ಸರ್ಕಾರ ಕೀಳುಮಟ್ಟದ ರಾಜಕಾರಣವನ್ನು ಪ್ರದರ್ಶಿಸಿದೆ” ಎಂದು ಕಿಡಿಕಾರಿದ್ದಾರೆ.
ಅನ್ನ ಭಾಗ್ಯ ಯೋಜನೆಗೆ ಅಕ್ಕಿಯನ್ನು ಪಡೆಯಲು ಬಗ್ಗೆ ಅನೇಕ ರಾಜ್ಯಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಅವರು ಸಂಪೂರ್ಣ 2.28 ಲಕ್ಷ ಮೆ.ಟನ್ ನೀಡಲು ಸಾಧ್ಯವಿಲ್ಲ. ಆಂಧ್ರಪ್ರದೇಶದವರು 42 ರೂ.ಗಳಿಗೆ ಅಕ್ಕಿ ನೀಡುವುದಾಗಿ ತಿಳಿಸಿದ್ದು, ಸಾರಿಗೆ ವೆಚ್ಚ ಅಧಿಕವಾಗಲಿದೆ. ತೆಲಂಗಾಣದವರು ಭತ್ತ ಮಾತ್ರ ಲಭ್ಯವಿರುವುದಾಗಿ ತಿಳಿಸಿದ್ದಾರೆ. ಛತ್ತೀಸ್ಗಡದ ಮುಖ್ಯಮಂತ್ರಿಗಳು ಒಂದು ತಿಂಗಳಿಗೆ ಮಾತ್ರ 1 ಲಕ್ಷ ಮೆಟ್ರಿಕ್ ಟನ್ ನೀಡುವುದಾಗಿ ತಿಳಿಸಿದ್ದಾರೆ. ಪಂಜಾಬ್ ಮುಖ್ಯಮಂತ್ರಿಗಳು ಅಧಿಕಾರಿಗಳೊಂದಿಗೆ ಚರ್ಚಿಸಿ ತಿಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯಗಳಿಗೆ ಅಕ್ಕಿ ನೀಡುವುದನ್ನು ಸ್ಥಗಿತಗೊಳಿಸಿರುವ ಬಗ್ಗೆ ನೀತಿ ನಿರ್ಧಾರ ಕೈಗೊಂಡಿದ್ದು, ಈ ಬಗ್ಗೆ ಅಂತರ ಸಚಿವಾಲಯಗಳ ಸಭೆ ನಡೆದಿದೆ. ಮಾಹಿತಿಯ ಕೊರತೆಯಿಂದ ಪತ್ರ ಬರೆದಿದ್ದಾಗಿ ಕೇಂದ್ರ ಸರ್ಕಾರ ಹೇಳಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಎಫ್.ಸಿ.ಐ ಕೇಂದ್ರ ಸರ್ಕಾರದ ಸ್ವಾಮ್ಯ ಸಂಸ್ಥೆಯಾಗಿದ್ದು, ಅಕ್ಕಿ ನೀಡುವುದಾಗಿ ಒಪ್ಪಿ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ
ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಹಾಗೂ ನಗರ ಅಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಜೊತೆಯಲ್ಲಿದ್ದರು.
English summary
Anna bhagya scheme: Chief Minister Siddaramaiah to meet Home Minister Amit Shah in news delhi. They likely to discuss on Anna Bhagya rice supply. know more.
Story first published: Wednesday, June 21, 2023, 18:51 [IST]