Bengaluru
oi-Mallika P
ಬೆಂಗಳೂರು, ಜೂನ್ 24: ಅಕ್ರಮ ಕಬ್ಬಿಣದ ಅದಿರು ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ 16 ಕ್ರಿಮಿನಲ್ ಪ್ರಕರಣಗಳ ವಿಚಾರಣೆ ರದ್ದು ಕೋರಿ ಯುವಜನ ಸಬಲೀಕರಣ, ಕ್ರೀಡೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ನಾಗೇಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಹೈಕೋರ್ಟ್ ಈ ಪ್ರಕರಣಗಳಲ್ಲಿ ತಡೆ ನೀಡಲಿಲ್ಲವೆಂದರೆ ಸಚಿವರು ನಿಜಕ್ಕೂ ಸಂಕಷ್ಟಕ್ಕೆ ಸಿಲುಕುತ್ತಾರೆ ಅವರ ಸಚಿವ ಸ್ಥಾನಕ್ಕೂ ಕುತ್ತಾಗುತ್ತದೆ ಎನ್ನಲಾಗಿದೆ.
ಪ್ರಕರಣಗಳನ್ನು ವಜಾ ಮಾಡುವಂತೆ ಕೋರಿ ಪ್ರತ್ಯೇಕವಾಗಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಸಕದಸ್ಯ ಪೀಠವು ವಿಚಾರಣೆ ನಡೆಸಿತು. ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ಎಸ್‌ಐಟಿ ಪರ ವಕೀಲರ ಮನವಿ ಮೇರೆಗೆ ವಿಚಾರಣೆಯನ್ನು ಜುಲೈ 14ಕ್ಕೆ ಮುಂದೂಡಿದೆ.
“ಲೋಕಾಯುಕ್ತ ವಿಶೇಷ ತನಿಖಾ ದಳವನ್ನು (ಎಸ್ಐಟಿ) ಪ್ರತಿನಿಧಿಸಿರುವ ವಕೀಲರು ಈಗಷ್ಟೇ ಅರ್ಜಿಗಳನ್ನು ಪೂರೈಸಲಾಗಿದೆ. ಈ ಸಂಬಂಧ ಸೂಚನೆ ಪಡೆಯಲು ಸಮಯ ಕೋರಿದ್ದಾರೆ. ಸಂಬಂಧಿತ ಎಲ್ಲಾ ಪ್ರಕರಣಗಳನ್ನೂ ಜುಲೈ 14ಕ್ಕೆ ಪಟ್ಟಿ ಮಾಡಬೇಕು” ಎಂದು ಸೂಚಿಸಿತು. ಅಲ್ಲದೆ, ಈ ಹಿಂದೆ ಸಂಬಂಧಿತ ಪ್ರಕರಣಗಳಲ್ಲಿ ವಿಚಾರಣೆ ಮುಂದೂಡಿರುವಂತೆ ಈ ಪ್ರಕರಣಗಳ ವಿಚಾರಣೆಯನ್ನೂ ಮುಂದೂಡಲಾಗಿದೆ.
ಮುಂದಿನ ವಿಚಾರಣೆಯಲ್ಲಿ ಯಾವುದೇ ಕಾರಣಕ್ಕೂ ವಿಚಾರಣೆ ಮುಂದೂಡುವುದಿಲ್ಲ ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ ಮಾಡಿದೆ. ಸಚಿವ ನಾಗೇಂದ್ರ ಪರವಾಗಿ ವಾದಿಸಿದ ಹಿರಿಯ ವಕೀಲ ಮೂರ್ತಿ ಡಿ. ನಾಯಕ್ “(ವಿಶೇಷ) ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆ ನಡೆಸಬೇಕಾದ ಪ್ರಕರಣಗಳನ್ನು ಸತ್ರ ನ್ಯಾಯಾಲಯದ (ವಿಶೇಷ) ನ್ಯಾಯಾಧೀಶರು ತಮ್ಮಲ್ಲಿ ಉಳಿಸಿಕೊಂಡಿದ್ದಾರೆ.
ಇದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. 2009ರಲ್ಲಿ ನಡೆದಿದೆ ಎನ್ನಲಾದ ಅಪರಾಧಕ್ಕೆ, 2023ರಲ್ಲಿ ದೂರು ದಾಖಲಿಸಲಾಗಿದೆ. ಇದು ವ್ಯಾಪ್ತಿ ಮೀರಿದೆ. ಹೀಗಾಗಿ, ಸಂಜ್ಞೆ ಪರಿಗಣಿಸುವ ವ್ಯಾಪ್ತಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಇಲ್ಲ. ಈ ಹಿಂದೆ, ಇದೇ ಆರೋಪಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳ ವಿಚಾರಣೆಯನ್ನು ಮುಂದೂಡಲಾಗಿದೆ. ಪ್ರಕರಣಗಳಿಗೆ ತಡೆ ಕೋರುತ್ತಿಲ್ಲ” ಎಂದು ವಿವರಿಸಿದರು.
ಎಸ್ಐಟಿ ಪ್ರತಿನಿಧಿಸಿದ್ದ ವಕೀಲರು “ಈಗಷ್ಟೇ ಅರ್ಜಿಗಳ ಪ್ರತಿಯನ್ನು ನೀಡಲಾಗಿದೆ. ಅರ್ಜಿದಾರರು ವಿಚಾರಣೆಯಲ್ಲಿ ಭಾಗಿಯಾಗಲಿ” ಎಂದು ಪೀಠಕ್ಕೆ ಕೋರಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಅಂತಿಮವಾಗಿ ವಿಚಾರಣೆಯನ್ನು ಜುಲೈ 14ಕ್ಕೆ ನಿಗದಿಪಡಿಸಿದೆ.
ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಿರುವ ಮ್ಯಾಜಿಸ್ಟ್ರೇಟ್ ಮತ್ತು ಸತ್ರ ನ್ಯಾಯಾಲಯದಲ್ಲಿ ಅಕ್ರಮ ಅದಿರು ಟ್ರೇಡಿಂಗ್ ಮತ್ತು ಇತರೆ ಆರೋಪದ ಮೇಲೆ ಸಚಿವ ನಾಗೇಂದ್ರ ವಿರುದ್ಧ ದಾಖಲಾಗಿರುವ 16 ಪ್ರಕರಣಗಳು ಬಾಕಿ ಇವೆ.
ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣಗಳ (ಎಂಎಂಡಿಆರ್) ಕಾಯಿದೆ 1957ರ ಸೆಕ್ಷನ್ 21 ಮತ್ತು 23 ಜೊತೆಗೆ 4(1), 4(1ಎ) ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಸಚಿವ ನಾಗೇಂದ್ರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಈ ಸಂಬಂಧ ಆರೋಪ ಪಟ್ಟಿಯನ್ನೂ ವಿಚಾರಣಾಧೀನ ನ್ಯಾಯಾಲಯಗಳಿಗೆ ಲೋಕಾಯುಕ್ತ ಎಸ್ಐಟಿ ಸಲ್ಲಿಸಿದೆ. ಈ ಪ್ರಕರಣಗಳು ವಿವಿಧ ಹಂತದಲ್ಲಿ ವಿಚಾರಣೆಗೆ ಒಳಪಟ್ಟಿವೆ. ಇವುಗಳನ್ನು ವಜಾ ಮಾಡುವಂತೆ ಕೋರಿ ಸಚಿವ ನಾಗೇಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
English summary
Illegal Mining case: Minister Nagendra moved High Court for quashing all 16 cases, High Court adjourned to July 14. Know more.
Story first published: Saturday, June 24, 2023, 9:47 [IST]