ಅಕ್ರಮ ಗಣಿಗಾರಿಕೆ ಪ್ರಕರಣ: ಶಾಸಕ ಸತೀಶ್ ಸೈಲ್‌ಗೆ ಸಂಕಷ್ಟ | Illegal Mining Case Trouble For Karwar Congress MLA Satish Sail

Karnataka

oi-Gururaj S

By ಎಸ್‌ಎಸ್‌ಎಸ್

|

Google Oneindia Kannada News

ಬೆಂಗಳೂರು, ಜೂನ್ 20: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ, ಕಾರವಾರದ ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್‌ಗೆ ಸಂಕಷ್ಟ ಎದುರಾಗಿದೆ. ಅದೂ ಸಹ ಅವರ ಕಂಪನಿಯ ಮಾಜಿ ಉದ್ಯೋಗಿಯೇ ಅವರ ವಿರುದ್ಧ ಸಾಕ್ಷ್ಯ ನುಡಿಯಲು ಮುಂದಾಗಿದ್ದು, ಇದು ಸೈಲ್‌ಗೆ ನುಂಗಲಾರದ ತುತ್ತಾಗಲಿದೆ. ಆತ ಸತ್ಯ ಹೊರಹಾಕಿದರೆ ಸೈಲ್‌ಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ.

ಶಾಸಕರು ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ವಿರುದ್ಧದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಾಕ್ಷಿಯಾಗಲು (ಅಪ್ರೂವರ್) ಕಂಪನಿಯ ಮಾಜಿ ಉದ್ಯೋಗಿಯೂ ಆದ ಪ್ರಕರಣದ ನಾಲ್ಕನೇ ಆರೋಪಿ ಸುಶೀಲ್ ಕುಮಾರ್ ವಲೇಚಾಗೆ ಅನುಮತಿ ನೀಡಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

Illegal Mining Case

ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ.ಲಿ ಮತ್ತು ಶಾಸಕ ಸತೀಶ್ ಸೈಲ್ ಸಲ್ಲಿಸಿದ್ದ ಕ್ರಿಮಿಲ್ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಆದೇಶಿಸಿದೆ. ಜತೆಗೆ, ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ಪೂರ್ಣಗೊಳಿಸಲು ಎಲ್ಲಾ ಪ್ರಯತ್ನ ನಡಸುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ಪ್ರಕರಣದ ಸತ್ಯಾಸತ್ಯತೆ ತಿಳಿಯುತ್ತದೆ ಎನ್ನುವ ಸಂದರ್ಭದಲ್ಲಿ ಆರೋಪಿಗೆ ಕ್ಷಮಾದಾನ ನೀಡಿ ಸಾಕ್ಷಿಯಾಗಲು ಅನುಮತಿ ನೀಡಲು ಸಂಬಂಧಪಟ್ಟ ನ್ಯಾಯಾಲಯಕ್ಕೆ ಅವಕಾಶವಿದೆ. ಅದರಂತೆ ನ್ಯಾಯಾಲಯವು ತನ್ನ ಅಧಿಕಾರ ಬಳಸಿ ಆರೋಪಿಯನ್ನು ಸಾಕ್ಷಿಯಾಗಲು ಅನುಮತಿ ನೀಡಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ?: ಅಕ್ರಮ ಗಣಿಗಾರಿಕೆ ಆರೋಪ ಸಂಬಂಧ ಸತೀಶ್ ಸೈಲ್ ಮತ್ತವರು ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ರೀ ಮಲ್ಲಿಕಾಜುರ್ನ ಶಿಪ್ಪಿಂಗ್ ಪ್ರೈ.ಲಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಪ್ರಕರಣ ಸಂಬಂಧ ಸತೀಶ್ ಸೈಲ್ ಬಂಧನಕ್ಕೆ ಒಳಗಾಗಿ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ.

ಸಿಬಿಐ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಹಲವು ಆರೋಪಿಗಳು ತಮ್ಮ ವಿರುದ್ಧದ ಆರೋಪ ಕೈ ಬಿಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅವುಗಳನ್ನು ಸಿಬಿಐ ಕೋರ್ಟ್ ತಿರಸ್ಕರಿಸಿತ್ತು. ಜತೆಗೆ, ಹಲವು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ನಿಗದಿಪಡಿಸಿದೆ.

ಈ ಹಂತದಲ್ಲಿ ಪ್ರಕರಣದ ನಾಲ್ಕನೇ ಆರೋಪಿಯಾಗಿದ್ದ ಶ್ರೀ ಮಲ್ಲಿಕಾಜುನ್ ಶಿಪ್ಪಿಂಗ್ ಕಂಪನಿಯ ಮಾಜಿ ಉದ್ಯೋಗಿಯೂ ಆದ ನವದೆಹಲಿ ಮೂಲದ ಶ್ರೀ ಲಾಲ್ ಮಹಲ್ ಲಿಮಿಟೆಡ್ ಕಂಪನಿ ನಿರ್ದೇಶಕ ಸುನೀಲ್ ಕುಮಾರ್ ವಲೇಚ (73) ತಪ್ಪೊಪ್ಪಿಕೊಂಡು ಸಾಕ್ಷಿಯಾಗಲು ಅನುಮತಿ ಕೋರಿದ್ದರು.

ತಾನು ಕೇವಲ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿಯ ಉದ್ಯೋಗಿಯಾಗಿದ್ದೆ. ಸದ್ಯ ಪ್ರಕರಣದಲ್ಲಿ ಸಾಕ್ಷಿಯಾಗಲು ಬಯಸಿದ್ದು, ಅದಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ಆ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಪುರಸ್ಕರಿಸಿ 2021ರ ಅ.27ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಶಾಸಕ ಸತೀಶ್ ಸೈಲ್ ಮತ್ತವರ ಕಂಪನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

English summary

Illegal mining; Trouble for Karwar Congress MLA Satish Sail who is also director for the Shree Mallikarjun Shipping Private Limited.

Story first published: Tuesday, June 20, 2023, 9:16 [IST]

Source link