Karnataka
oi-Mallika P
ಬೆಂಗಳೂರು, ಜುಲೈ 27- ಗಣಿ ಗುತ್ತಿಗೆ ಸಮಸ್ಯೆಗಳನ್ನು ಬಗೆಹರಿಸಲು ಏಕಗವಾಕ್ಷಿ ಮಾದರಿ ವ್ಯವಸ್ಥೆ ರೂಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ರಾಜ್ಯದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವ್ಯಾಪ್ತಿಯ ಸಂಸ್ಥೆಗಳಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉನ್ನತ ಮಟ್ಟದ ಸಭೆ ನಡೆಸಿದರು.
ರಾಜ್ಯದಲ್ಲಿ ಗಣಿ ಗುತ್ತಿಗೆ ಪಡೆದಿರುವ ಸಂಸ್ಥೆಗಳಿಗೆ ಅರಣ್ಯ ಇಲಾಖೆ ತೀರುವಳಿ ಮತ್ತಿತರ ಅನುಮತಿ ಪತ್ರಗಳನ್ನು ನೀಡಲು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಗಣಿ ಮತ್ತು ಭೂವಿಜ್ಞಾನ, ಕಂದಾಯ ಹಾಗೂ ಅರಣ್ಯ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ಪ್ರತಿ ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಏಕಗವಾಕ್ಷಿ ವ್ಯವಸ್ಥೆಯ ಮಾದರಿಯಲ್ಲಿ ಇತ್ಯರ್ಥಪಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ತೀರುವಳಿ ಪಡೆಯಲು ಬಹಳಷ್ಟು ಪ್ರಕರಣಗಳು ಬಾಕಿ ಇರುವ ಕುರಿತು ಚರ್ಚಿಸಲಾಯಿತು. ಇದಕ್ಕೆ ಗಣಿ ಗುತ್ತಿಗೆ ಪಡೆದ ಸಂಸ್ಥೆಗಳು ಅರಣ್ಯೀಕರಣಕ್ಕೆ ಪರ್ಯಾಯ ಭೂಮಿ ನೀಡದೆ ಇರುವುದು ಕಾರಣವೆಂದು ಗುರುತಿಸಲಾಯಿತು. ಇದಕ್ಕಾಗಿ ಆನೆಗಳು ಮತ್ತಿತರ ವನ್ಯಜೀವಿಗಳ ಉಪಟಳದಿಂದಾಗಿ ಕೃಷಿ ಭೂಮಿ ಮಾರಲು ಸಿದ್ಧರಿರುವ ರೈತರು ಅರಸೀಕರೆ ಮತ್ತು ರಾಜ್ಯದ ಇತರ ಕೆಲವು ಭಾಗಗಳಲ್ಲಿದ್ದಾರೆ. ಇಂತಹ ರೈತರಿಗೆ ಈ ಸಂಸ್ಥೆಗಳು ಜಮೀನು ಖರೀದಿಸಿ ಅರಣ್ಯೀಕರಣಕ್ಕೆ ಒದಗಿಸಲು ಅನುವು ಮಾಡಿಕೊಡುವಂತೆ ಸೂಚಿಸಿದರು.
ರಾಜ್ಯದಲ್ಲಿ ಖನಿಜಾನ್ವೇಷಣೆಯನ್ನು ಭಾರತ ಸರ್ಕಾರಿ ಸ್ವಾಮ್ಯದ ಕೆಐಓಸಿಎಲ್ ಮತ್ತು ಎಂಇಸಿಎಲ್ ಮೂಲಕ ಕೈಗೊಳ್ಳಲು ಅನುಮತಿಗಾಗಿ ಭಾರತ ಸರ್ಕಾರಕ್ಕೆ ಪ್ರವೇಶ್ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಗಳಿಗೆ ಇರುವ ಆಕ್ಷೇಪಣೆಗಳನ್ನು ಸರಿಪಡಿಸಿ ತ್ವರಿತವಾಗಿ ತೀರುವಳಿ ಪಡೆಯುವಂತೆ ಈ ಸಂಸ್ಥೆಗಳೊಂದಿಗೆ ಚರ್ಚಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮಳೆ ಹಾನಿ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ವಿಡಿಯೋ ಕಾನ್ಫರೆನ್ಸ್: ಸಿದ್ಧರಾಮಯ್ಯ ಕೊಟ್ಟ ಸೂಚನೆಗಳೇನು?
ಹಿಂದೆ ಅಕ್ರಮ ಗಣಿಗಾರಿಕೆಯಿಂದ ಜಪ್ತಿ ಮಾಡಿರುವ 2.7 ದಶಲಕ್ಷ ಮೆಟ್ರಿಕ್ ಟನ್ ಅದಿರು ಅರಣ್ಯ ಪ್ರದೇಶದಲ್ಲಿದ್ದು, ಇವುಗಳ ವಿಲೇವಾರಿಗೆ ಕಾನೂನು ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳಲು ಸೂಚಿಸಿದರು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಅಡಿ ಬರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದರು. ಕಲ್ಲುಗಣಿ ಗುತ್ತಿಗೆದಾರರು ನಿಯಮಗಳ ಉಲ್ಲಂಘನೆ ಮಾಡಿರುವುದಕ್ಕೆ ವಿಧಿಸಿರುವ ದಂಡ ಸಂಗ್ರಹಿಸಲು OTS (One Time Settlement) ಯೋಜನೆ ಜಾರಿಗೆ ತರುವ ಕುರಿತ ಪ್ರಸ್ತಾವನೆಯನ್ನು ಸಚಿವ ಸಂಪುಟದ ಸಭೆಯಲ್ಲಿ ಮಂಡಿಸಲು ಸೂಚಿಸಿದರು.
ಸಭೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ತೋಟಗಾರಿಕೆ ಮತ್ತು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ , ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಕೆ. ಗೋವಿಂದರಾಜು, ನಸೀರ್ ಅಹ್ಮದ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕಟಾರಿಯಾ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
English summary
Chief Minister Siddaramaiah held a high-level meeting to settle the pending cases related to the Forest Department in the institutions under the Mines and Geology Department.
Story first published: Thursday, July 27, 2023, 18:13 [IST]