Karnataka
oi-Shankrappa Parangi
ಬೆಂಗಳೂರು, ಜೂನ್ 21: ರಾಜ್ಯ ಸರ್ಕಾರ ಅಕ್ಕಿ ಗ್ಯಾರಂಟಿ ಬಗ್ಗೆ ದಿನಕ್ಕೊಂದು ನೆಪ ಹೇಳುತ್ತಿದೆ. ತಾನು ಎಸಗಿದ ಸ್ವಯಂಕೃತ ತಪ್ಪಿಗೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾ ಜನರನ್ನು ಯಾಮಾರಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಯಾರೋ ಚುನಾವಣಾ ತಂತ್ರಗಾರರ ಮಾತು ಕೇಳಿಕೊಂಡು ಗ್ಯಾರಂಟಿ ಘೋಷಣೆ ಮಾಡಿದ್ದರು. ಯೋಜನೆ ಜಾರಿಗೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಅಕ್ಕಿ ಗ್ಯಾರಂಟಿ ಬಗ್ಗೆ ಇವರೇನು ಕೇಂದ್ರ ಸರ್ಕಾರಕ್ಕೆ ಅರ್ಜಿ ಹಾಕಿದ್ದರಾ?. ಪೊಳ್ಳು ಭರವಸೆ ಕೊಟ್ಟು ಗ್ಯಾರಂಟಿ ಎಂದು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ. ಸರಿ ತಪ್ಪು ಎನ್ನುವುದನ್ನು ನಾವು ಮಾಡಬೇಕಲ್ಲವೇ ಎಂದು ಅವರು ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರ ನಿಮಗೆ ಯಾಕೆ ಅಕ್ಕಿ ಕೊಡಬೇಕು?. ಕೇಂದ್ರ ಸರ್ಕಾರಕ್ಕೆ ಅರ್ಜಿ ಹಾಕಿದ್ದರಾ ನೀವು? ಯಾವನೋ ಬಂದು ಎಲೆಕ್ಷನ್ ಸ್ಟ್ರಾಟೆಜಿಸ್ಟ್ ಐಡಿಯಾ ಕೊಟ್ಟ ಎಂದು ನೀವು ಫ್ರೀ ಫ್ರೀ ಎಂದು ಹೇಳಿದಿರಿ. ಸಚಿವರ ಹೆಂಡತಿಗೂ ಫ್ರೀ, ನನ್ನ ಹೆಂಡತಿಗೂ ಫ್ರೀ ಎಂದು ಹೇಳಿ ಎಲ್ಲರೂ ಅರ್ಜಿ ಹಾಕಿಕೊಳ್ಳಬಹುದು ಅಂದಿರಿ. ಈಗ ನೋಡಿದರೆ ಬೇರೆ ವರಸೆ ಶುರು ಮಾಡಿಕೊಂಡಿದ್ದೀರಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಅಧಿಕ ವಿದ್ಯುತ್ ಬಿಲ್‌ನಿಂದ ಕತ್ತಲು
ನಿಮ್ಮ ಗೃಹಜ್ಯೋತಿ ಕತ್ತಲಾಗಿ ಪರಿಣಮಿಸಿದೆ. ವಿದ್ಯುತ್ ಉಚಿತ ಕೊಡುತ್ತೇವೆ ಎಂದು ಹೇಳಿದವರು ಈಗಿನ ಪರಿಸ್ಥಿತಿಯನ್ನು ಅವಲೋಕನ ಮಾಡಬೇಕು. ವಿಟಿಯು ಉಪ ಕುಲಪತಿ ಬಾಯಿ ಬಡೆದುಕೊಳ್ಳುತ್ತಿದ್ದಾರೆ, ವಿದ್ಯುತ್ ಬಿಲ್ ನೋಡಿ ಅವರಿಗೆ ಶಾಕ್ ಆಗಿದೆ. ಬಾಕಿ ಮೊತ್ತ ಕಂಡು ಬೇಸ್ತು ಬಿದ್ದಿದ್ದಾರೆ. ಇನ್ನೆಷ್ಟು ಶಾಕ್ ಕೊಡುತ್ತೀರಿ ಎಂದು ಕುಮಾರಸ್ವಾಮಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಎರಡು ರಾಷ್ಟ್ರೀಯ ಪಕ್ಷಗಳ ಇಂದಿನ ನಡವಳಿಕೆ ನೋಡಿದಾಗ ತೀವ್ರ ಬೇಸರವಾಗುತ್ತಿದೆ. ರಾಜ್ಯದ ಜನತೆ ಅವರನ್ನು ನಂಬಿ ಮತ ಕೊಟ್ಟಿದ್ದಾರೆ. ಜನತೆ ಎರಡು ಪಕ್ಷಗಳ ನಾಟಕ ನೋಡಬೇಕಾಗಿದೆ. ಇವರು ಯಾವ ರೀತಿ ಟೋಪಿ ಹಾಕುತ್ತಾರೆ ಎಂದು ನೋಡುವ ಅನಿವಾರ್ಯತೆ ಜನರೇ ಸೃಷ್ಟಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಸರ್ಕಾರದ ಸಚಿವವರು, ಕೇಂದ್ರ ಸರ್ಕಾರವನ್ನು ದೂಷಣೆ ಮಾಡುತ್ತಿದ್ದಾರೆ. ಗ್ಯಾರಂಟಿಗಳನ್ನು ರೂಪಿಸುವಾಗ ಇದೆಲ್ಲಾ ಗೊತ್ತಿರಲಿಲ್ಲವೇ? ಎಂದು ಅವರು ಪ್ರಶ್ನಿಸಿದರು.
ಅಕ್ಕಿ ವಿಚಾರದಲ್ಲಿ ಉಡಾಫೆ ಹೇಳಿಕೆ: ಎಚ್‌ಡಿಕೆ
ಮುಖ್ಯಮಂತ್ರಿಗಳು ನೋಡಿದರೆ ಭಾರತದ ಆಹಾರ ನಿಗಮಕ್ಕೆ ಪತ್ರ ಬರೆದಿದ್ದೆ ಎಂದು ಹೇಳುತ್ತಿದ್ದಾರೆ. ಅವರು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಇಂಥ ಉಡಾಫೆ ಉತ್ತರ ಕೊಟ್ಟರೆ ಹೇಗೆ?. ಕೇಂದ್ರದಿಂದ ಅಕ್ಕಿ ಬೇಕು ಅಂದರೆ ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವರ ಜತೆ ಮಾತನಾಡಬೇಕಿತ್ತು. ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರೇ ಹೋಗಿ ಚರ್ಚೆ ನಡೆಸಬೇಕಿತ್ತು. ಅದನ್ನು ಬಿಟ್ಟು ಉಡಾಫೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಕೇಂದ್ರ ಸರ್ಕಾರಕ್ಕೆ ಅವರದೇ ಆದ ಕಮಿಟ್‌ಮೆಂಟ್ ಇರುತ್ತದೆ. ನಮಗೆ ಅಕ್ಕಿ ಬೇಕು ಅಂದರೆ ಅವರು ಹೇಗೆ ಕೊಡುತ್ತಾರೆ?. ನಾನು ಸಾಲಾಮನ್ನಾ ಮಾಡಿದಾಗ ರಾಷ್ಟ್ರಿಕೃತ ಬ್ಯಾಂಕ್ ಗಳಲ್ಲಿದ್ದ ಸಾಲಮನ್ನಾ ಮಾಡಿದಾಗ ಪ್ರಧಾನಿಗಳ ಹತ್ತಿರ ಹೋಗಿ ಕೇಳಿದಿಲ್ಲ. ಅಂತಹ ದರ್ದು ಇರೋದು ಕಾಂಗ್ರೆಸ್ ಪಕ್ಷಕ್ಕೆ, ಅವರಿಗೇನಿದೆ ದರ್ದು? ನಿಮಗೆ ಬೇಕಾದ ವ್ಯವಸ್ಥೆ ನೀವೇ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ನಾನು ಪಂಚರತ್ನ ಯೋಜನೆಗಳನ್ನು ಘೋಷಣೆ ಮಾಡಿದ್ದೆ. ಅವುಗಳನ್ನು ಹೇಗೆ ಜಾರಿ ಮಾಡಬೇಕು? ಹೇಗೆ ಹಣ ಹೊಂದಿಸಬೇಕು ಎಂಬುದಕ್ಕೆ ರೂಪುರೇಷೆ ಸಿದ್ದಮಾಡಿದ್ದೆ. ಆದರೆ ಜನ ನನ್ನನ್ನು ನಂಬಲಿಲ್ಲ. ಪಾಪ ಇವರ 5 ಗ್ಯಾರಂಟಿಗಳನ್ನು ನಂಬಿದರು. ಇನ್ನು ಯಜಮಾನಿಯರಿಗೆ 2 ಸಾವಿರ ಹೇಗೆ ಕೊಡುತ್ತಾರಾ? ನೋಡೊಣ ಎಂದು ವ್ಯಂಗ್ಯವಾಡಿದರು.
ಜಾರಕಿಹೊಳಿ ಬಾಯಿ ಚಪಲಕ್ಕೆ ಮಾತನಾಡುತ್ತಾರೆ
ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದ್ದ ಪರಿಣಾಮ ಗೃಹಲಕ್ಷ್ಮಿ ಗ್ಯಾರಂಟಿ ಜಾರಿ ಮಾಡಲಾಗುತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ಅವರು ಬಾಯಿ ಚಪಲಕ್ಕೆ ಮಾತನಾಡ್ತಿದ್ದಾರೆ. ಯಾಕೆ ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡುತ್ತಾರೆ. ನಿಮ್ಮ ಸರ್ವರ್ ಬಲಪಡಿಸಿಕೊಳ್ಳೋದು ನಿಮ್ಮ ಜವಾಬ್ದಾರಿ ಎಂದರು.
ಕಾಂಗ್ರೆಸ್ ಸರ್ಕಾರಕ್ಕೆ ಸಮಯ ಕೊಡುತ್ತೇನೆ. ಬಜೆಟ್ ಅಧಿವೇಶನದಲ್ಲಿ ಏನೇನು ಘೋಷಣೆ ಮಾಡುತ್ತಾರೆ ಎಂದು ಕಾದು ನೋಡೋಣಾ. ಪ್ರಣಾಳಿಕೆಯಲ್ಲಿ ಕೂಡ ಅದೆಷ್ಟೋ ಭರವಸೆಗಳನ್ನು ನೀಡಿದ್ದಾರೆ. ಎಲ್ಲವೂ ಎಲ್ಲಿಗೆ ಬಂದು ನಿಲ್ಲುತ್ತದೆಯೋ ಎಂದು ಗೊತ್ತಾಗುತ್ತದೆ ಎಂದು ಕಾಲೆಳೆದರು.
ಅವೈಜ್ಞಾನಿಕ ಬೆಂಗಳೂರು- ಮೈಸೂರು ಹೆದ್ದಾರಿ: ಕಳವಳ
ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ನಿರಂತರ ಅಪಘಾತಗಳು ನನ್ನಲ್ಲಿ ಆಘಾತ ತಂದಿದೆ. ಇದು ಎಕ್ಸ್‌ಪ್ರೆಸ್ ಹೆದ್ದಾರಿಯೋ ಅಥವಾ ಸಾವಿನ ರಹದಾರಿಯೋ ಎಂದು ಪ್ರಶ್ನಿಸಿದರು.
ಈ ಹೆದ್ದಾರಿಯನ್ನು ಅತ್ಯಂತ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಅದನ್ನು ಸರಿಪಡಿಸುವ ಬಗ್ಗೆ ಕೇಂದ್ರ ಸರ್ಕಾರವಾಗಲಿ, ಹೆದ್ದಾರಿ ಪ್ರಾಧಿಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಗಮನ ಕೊಡುತ್ತಿಲ್ಲ. ಯಾರೋ ಬಂದರು, ದುಡ್ಡು ಮಾಡಿಕೊಂಡು ಹೋದರು. ಜನ ಮಾತ್ರ ದಿನನಿತ್ಯವೂ ಸಾಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಶಾಲೆಗಳಲ್ಲಿ ಮೊಟ್ಟೆ, ಬಾಳೆಹಣ್ಣು ಕಡಿತ ಮಾಡಿರುವುದಕ್ಕೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರ ಹಂಚಿಕೆ ಅವರಿಗೆ ಸೇರಿದ ವಿಚಾರ. 5 ವರ್ಷ ಅವರೇ ಇರುತ್ತಾರೋ, ಇನ್ನಾರದರೂ ಬರುತ್ತಾರೋ ನನಗೆ ಗೊತ್ತಿಲ್ಲ. ವೀರಪ್ಪ ಮೊಯ್ಲಿ ಅವರ ಕಾಲದಲ್ಲಿ ವಿಧಾನಸೌಧದಲ್ಲಿ ಚೇರ್, ಮೇಜು ಹಿಡಿದುಕೊಂಡು ಕುಸ್ತಿ ಮಾಡಿದ್ದರು. ಈಗಲೂ ಆ ರೀತಿ ಆಗುತ್ತದೆಯೋ ಏನೋ ನನಗೆ ಗೊತ್ತಿದೆ ಎಂದು ಭವಿಷ್ಯ ನುಡಿದರು.
English summary
Congress is looking for an excuse every day on the issue of rice guarantee, HD Kumaraswamy slams on State govt,
Story first published: Wednesday, June 21, 2023, 18:24 [IST]