ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದು ನಿಜ: ಶಾಸಕ ಬಿಆರ್ ಪಾಟೀಲ್ | B.R. Patil Acknowledges Threatening to Resign in CLP Meeting

Kalaburagi

oi-Naveen Kumar N

|

Google Oneindia Kannada News

ಜುಲೈ 28ರಂದು ನಡೆದಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ರಾಜೀನಾಮೆ ಪ್ರಸ್ತಾಪ ಮಾಡಿದ್ದು ನಿಜ ಎಂದು ಕಾಂಗ್ರೆಸ್ ಹಿರಿಯ ನಾಯಕ, ಆಳಂದ ಶಾಸಕ ಬಿಆರ್ ಪಾಟೀಲ್ ಒಪ್ಪಿಕೊಂಡಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಈ ವಿಚಾರವನ್ನು ಒಪ್ಪಿಕೊಂಡರು.

ಬಿಆರ್ ಪಾಟೀಲ್ ರಾಜೀನಾಮೆ ಪ್ರಸ್ತಾಪ ಮಾಡಿದ್ದಾರೆ ಎನ್ನುವ ವರದಿಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು. ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಇದೆಲ್ಲಾ ನಿಜವಲ್ಲ ಎಂದು ಕಾಂಗ್ರೆಸ್ ನಾಯಕರು ತೇಪೆ ಹಚ್ಚಲು ಪ್ರಯತ್ನಿಸಿದ್ದರು ಆದರೆ, ಬಿಆರ್ ಪಾಟೀಲ್ ಈಗ ಸ್ವತಃ ನಿಜ ಒಪ್ಪಿಕೊಂಡಿದ್ದಾರೆ.

B.R. Patil

ಭಾನುವಾರ ಕಲಬುರಗಿ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಬಿಆರ್ ಪಾಟೀಲ್. ನನ್ನ ಆತ್ಮಗೌರವಕ್ಕೆ ಧಕ್ಕೆ ತರುವಂತೆ ನಡೆದುಕೊಂಡರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿರುವುದು ನಿಜ. ಆದರೆ ನಿಖರವಾಗಿ ಏನು ಕಾರಣ ಎನ್ನುವುದು ಸೇರಿ ಹಲವು ವಿಚಾರಗಳನ್ನು ಬಹಿರಂಗವಾಗಿ ಹೇಳಲು ಆಗಲ್ಲ ಎಂದರು.

ನಾನು ಕ್ಷಮೆ ಕೇಳಿಲ್ಲ

ಜುಲೈ 28ರಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಯಾರ ಬಳಿಯೂ ಕ್ಷಮೆ ಕೇಳಿಲ್ಲ, ಕ್ಷಮೆ ಕೇಳುವ ತಪ್ಪು ನಾನು ಮಾಡಿಲ್ಲ, ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಒತ್ತಾಯ ಮಾಡುವುದು ನಮ್ಮ ಹಕ್ಕು. ಸಭೆಯಲ್ಲಿ ಎಲ್ಲಾ ವಿಚಾರ, ಸಮಸ್ಯೆಗಳನ್ನು ವಿವರವಾಗಿ ಹೇಳಿದ್ದೇನೆ. ಅದಕ್ಕೆ ಪರಿಹಾರ ಕೂಡ ಸಿಕ್ಕಿದೆ ಎಂದರು.

ಕೆಲವರು ಸಚಿವರ ವರ್ತನೆ ಸರಿ ಇರಲಿಲ್ಲ, ಅದನ್ನು ಸರಿ ಮಾಡಿಕೊಳ್ಳಬೇಕು ಎನ್ನುವುದು ನಮ್ಮ ಒತ್ತಾಯವಾಗಿತ್ತು. ಸಚಿವರಿಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಎನ್ನುವುದು ಅವರಿಗೆ ಗೊತ್ತಿದೆ, ಸದ್ಯ ಯಾವುದೇ ಸಮಸ್ಯೆ ಇಲ್ಲ ಎಂದು ಬಿಆರ್ ಪಾಟೀಲ್ ಹೇಳಿದರು.

ಸಂಚಲನ ಸೃಷ್ಟಿಸಿದ್ದ ಪತ್ರ

ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಿಎಂ ಅವರಿಗೆ ಬಿಆರ್ ಪಾಟೀಲ್ ಬರೆದಿದ್ದಾರೆ ಎನ್ನುವ ಪತ್ರ ವೈರಲ್ ಆಗಿತ್ತು. ಬಿಜೆಪಿ ಈ ಪತ್ರವನ್ನು ಇಟ್ಟುಕೊಂಡು ಸರ್ಕಾರವನ್ನು ಟೀಕಿಸಿತ್ತು. ನಂತರ ಇದಕ್ಕೆ ಸ್ಪಷ್ಟನೆ ನೀಡಿದ್ದ ಬಿಆರ್ ಪಾಟೀಲ್ ಇದು ನಕಲಿ ಎಂದು ಹೇಳಿದ್ದರು.

ಆದರೂ, ಬಿಆರ್ ಪಾಟೀಲ್ ಸಚಿವರ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎನ್ನುವುದು ಮಾತ್ರ ಸ್ಪಷ್ಟವಾಗಿದೆ. ತಮ್ಮ ಕ್ಷೇತ್ರದಲ್ಲಿ ಕೆಲಸ ಆಗುತ್ತಿಲ್ಲ, ಈ ಬಗ್ಗೆ ಸಚಿವರು ಸ್ಪಂದಿಸುತ್ತಿಲ್ಲ ಎನ್ನುವುದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇನ್ನು ಕಿರಿಯ ಮಂತ್ರಿಯೊಬ್ಬರು ಬಿಆರ್ ಪಾಟೀಲ್ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದ್ದು, ಇದು ಪಾಟೀಲ್‌ ಅವರ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ನನ್ನ ಕ್ಷೇತ್ರದ ಕೆಲಸಗಳನ್ನು ಮಾಡಿಕೊಡಲು ಸಚಿವರು ಸ್ಪಂದಿಸದೇ ಇದ್ದರೆ ಹೇಗೆ? ಶಾಸಕಾಂಗ ಪಕ್ಷದ ಸಭೆಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲವಾದರೆ ಏನು ಮಾಡುವುದು? ಇದಕ್ಕಿಂತ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರುವುದು ವಾಸಿ ಎಂದು ಸಿಎಲ್‌ಪಿ ಸಭೆಯಲ್ಲಿ ಅಸಮಾಧಾನ ಹೊರ ಹಾಕಿ ಸಭೆಯಿಂದ ಹೊರ ಹೋಗಿದ್ದರು ಎನ್ನಲಾಗಿದೆ. ನಂತರ ಶಾಸಕರು ಪಾಟೀಲ್‌ರನ್ನು ಸಮಾಧಾನಪಡಿಸಿದ್ದಾರೆ ಎಂದು ಹೇಳಲಾಗಿದೆ.

English summary

During the media interaction in Kalaburagi, B.R. Patil acknowledged that he had threatened to resign in the CLP meeting, citing “self-respect” and referring to certain ministers as “arrogant.”

Story first published: Sunday, July 30, 2023, 20:23 [IST]

Source link