ಮೂರು ವರ್ಷಗಳಲ್ಲಿ 13.13 ಲಕ್ಷ ಬಾಲಕಿಯರು, ಮಹಿಳೆಯರು ಕಾಣೆ: ಆಘಾತಕಾರಿ ಅಂಕಿ-ಅಂಶ ಬಹಿರಂಗ | Alarming NCRB Data Reveals 13.13 Lakh Girls and Women Reported Missing Between 2019 and 2021

India

oi-Naveen Kumar N

|

Google Oneindia Kannada News

2019 ಮತ್ತು 2021 ರ ನಡುವಿನ ಮೂರು ವರ್ಷಗಳಲ್ಲಿ ದೇಶದಲ್ಲಿ 13.13 ಲಕ್ಷಕ್ಕೂ ಹೆಚ್ಚು ಹುಡುಗಿಯರು ಮತ್ತು ಮಹಿಳೆಯರು ಕಾಣೆಯಾಗಿದ್ದಾರೆ ಎನ್ನುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಇದರಲ್ಲಿ ಮಧ್ಯಪ್ರದೇಶದಲ್ಲೇ ಎರಡು ಲಕ್ಷಕ್ಕಿಂತ ಅಧಿಕ ಮಹಿಳೆಯರು, ಬಾಲಕಿಯರು ಕಾಣೆಯಾಗಿದ್ದಾರೆ. ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಳ ಇದೆ.

ಕಳೆದ ವಾರ ಕೇಂದ್ರ ಗೃಹ ಸಚಿವಾಲಯ ಸಂಸತ್ತಿನಲ್ಲಿ ಈ ಅಂಕಿ ಅಂಶಗಳನ್ನು ಮಂಡಿಸಿದೆ. ದೇಶಾದ್ಯಂತ 2019 ಮತ್ತು 2021 ರ ನಡುವೆ 18 ವರ್ಷಕ್ಕಿಂತ ಮೇಲ್ಪಟ್ಟ 10,61,648 ಮಹಿಳೆಯರು ಮತ್ತು 18ಕ್ಕಿಂತ ಕಡಿಮೆ ವಯಸ್ಸಿನ 2,51,430 ಹುಡುಗಿಯರು ನಾಪತ್ತೆಯಾಗಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಈ ಡೇಟಾವನ್ನು ಸಂಗ್ರಹಿಸಿದೆ.

NCRB Data

ಮಧ್ಯಪ್ರದೇಶದಲ್ಲಿ 2019 ಮತ್ತು 2021 ರ ನಡುವೆ 1,60,180 ಮಹಿಳೆಯರು ಮತ್ತು 38,234 ಹುಡುಗಿಯರು ನಾಪತ್ತೆಯಾಗಿದ್ದಾರೆ ಎಂದು ಸಂಸತ್ತಿಗೆ ಒದಗಿಸಿದ ಅಂಕಿಅಂಶಗಳು ತಿಳಿಸಿವೆ. ಪಶ್ಚಿಮ ಬಂಗಾಳದಲ್ಲಿ ಈ ಅವಧಿಯಲ್ಲಿ 1,56,905 ಮಹಿಳೆಯರು ಮತ್ತು 36,606 ಹುಡುಗಿಯರು ನಾಪತ್ತೆಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಈ ಅವಧಿಯಲ್ಲಿ 1,78,400 ಮಹಿಳೆಯರು ಮತ್ತು 13,033 ಹುಡುಗಿಯರು ನಾಪತ್ತೆಯಾಗಿದ್ದಾರೆ.

ಒಡಿಶಾದಲ್ಲಿ ಮೂರು ವರ್ಷಗಳಲ್ಲಿ 70,222 ಮಹಿಳೆಯರು ಮತ್ತು 16,649 ಹುಡುಗಿಯರು ನಾಪತ್ತೆಯಾಗಿದ್ದಾರೆ ಮತ್ತು ಛತ್ತೀಸ್‌ಗಢದಲ್ಲಿ 49,116 ಮಹಿಳೆಯರು ಮತ್ತು 10,817 ಹುಡುಗಿಯರು ನಾಪತ್ತೆಯಾಗಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿಯಲ್ಲಿ ಮಹಿಳೆಯರು ಮತ್ತು ಬಾಲಕಿಯರು ಕಾಣೆಯಾದ ಬಗ್ಗೆ ಹೆಚ್ಚಿನ ಪ್ರಕರಣ ದಾಖಲಾಗಿವೆ ಎಂದು ಅಂಕಿ ಅಂಶಗಳು ತಿಳಿಸಿವೆ. ದೆಹಲಿಯಲ್ಲಿ, 2019 ಮತ್ತು 2021 ರ ನಡುವೆ 61,054 ಮಹಿಳೆಯರು ಮತ್ತು 22,919 ಹುಡುಗಿಯರು ನಾಪತ್ತೆಯಾಗಿದ್ದಾರೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ, ಈ ಅವಧಿಯಲ್ಲಿ 8,617 ಮಹಿಳೆಯರು ಮತ್ತು 1,148 ಹುಡುಗಿಯರು ನಾಪತ್ತೆಯಾಗಿದ್ದಾರೆ.

ಕಠಿಣ ಕಾನೂನು ಜಾರಿಗೆ ಕ್ರಮ

ಲೈಂಗಿಕ ಅಪರಾಧಗಳನ್ನು ತಡೆಗಟ್ಟಲು ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯಿದೆ, 2013 ರ ಜಾರಿಗೊಳಿಸುವಿಕೆಯನ್ನು ಒಳಗೊಂಡಂತೆ ದೇಶಾದ್ಯಂತ ಮಹಿಳೆಯರ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ ಎಂದು ಸಂಸತ್ತಿನಲ್ಲಿ ತಿಳಿಸಲಾಗಿದೆ.

ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯಿದೆ, 2018, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಅತ್ಯಾಚಾರಕ್ಕೆ ಮರಣದಂಡನೆ ಸೇರಿದಂತೆ ಇನ್ನಷ್ಟು ಕಠಿಣವಾದ ದಂಡದ ನಿಬಂಧನೆಗಳನ್ನು ಜಾರಿಗೊಳಿಸಲು ಸೂಚಿಸಲಾಗಿದೆ.

ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಬೇಕು ಮತ್ತು ಇನ್ನೆರಡು ತಿಂಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಬೇಕು ಎಂದು ಕಾಯ್ದೆಯು ಕಡ್ಡಾಯಪಡಿಸಿದೆ.

ಮಹಿಳೆಯರು ಮತ್ತು ಬಾಲಕಿಯರಿಗಾಗಿ ಸರ್ಕಾರ ತುರ್ತಾಗಿ ಸಹಾಯ ಒದಗಿಸಲು ವ್ಯವಸ್ಥೆ ಮಾಡಿದೆ. ಇಡೀ ದೇಶಾದ್ಯಂತ ಯಾವುದೇ ಸ್ಥಳದಲ್ಲಿಯಾದರೂ 112 ಸಂಖ್ಯೆಗೆ ಕರೆ ಮಾಡುವ ಮೂಲಕ ರಕ್ಷಣೆಗೆ ಮನವಿ ಮಾಡಬಹುದು. ಸ್ಥಳೀಯವಾಗಿ ಇದು ತುರ್ತಾಗಿ ಸ್ಪಂದಿಸುತ್ತದೆ.

ಸ್ಮಾರ್ಟ್ ಪೋಲೀಸಿಂಗ್ ಮತ್ತು ಸುರಕ್ಷತಾ ನಿರ್ವಹಣೆಗೆ ಸಹಾಯ ಮಾಡಲು ತಂತ್ರಜ್ಞಾನವನ್ನು ಬಳಸಿಕೊಂಡು, ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ ಮತ್ತು ಮುಂಬೈ ಎಂಬ ಎಂಟು ನಗರಗಳಲ್ಲಿ ಸೇಫ್ ಸಿಟಿ ಯೋಜನೆಗಳನ್ನು ಮೊದಲ ಹಂತದಲ್ಲಿ ಮಂಜೂರು ಮಾಡಲಾಗಿದೆ.

English summary

Between 2019 and 2021, over 13.13 lakh girls and women went missing in India, with Madhya Pradesh and West Bengal having the highest reported cases, according to NCRB data tabled in Parliament.

Story first published: Sunday, July 30, 2023, 19:22 [IST]

Source link