India
oi-Malathesha M
ಮುಂಬೈ: ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಹಾ ವಿಲೀನ ಪ್ರಕ್ರಿಯೆಗೆ ಈಗ ಅಂತಿಮ ಮುದ್ರೆ ಬಿದ್ದಿದೆ. ಈ ಮೂಲಕ ನಾಳೆಯಿಂದ ಹೊಸದೊಂದು ಅಧ್ಯಾಯ ಕೂಡ ಶುರುವಾಗಲಿದೆ. ಎಚ್‌ಡಿಎಫ್‌ಸಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಂಡಳಿ ಸಭೆಯಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಅಂತಿಮ ಸಹಿ ಬಿದ್ದಿದೆ. ಹೀಗಾಗಿ ನಾಳೆಯೇ ಅಂದರೆ ಜುಲೈ 1ನ್ನೇ ವಿಲೀನದ ದಿನವಾಗಿ ಮತ್ತು ಜುಲೈ 13ನ್ನು ದಾಖಲೆ ದಿನವಾಗಿ ಅನುಮೋದಿಸಲಾಗಿದೆ.
ಇನ್ನು ‘ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ’ಯ ಮುಂಬೈನ ಪೀಠ ಮಾರ್ಚ್ 17ರಂದು ಎಚ್‌ಡಿಎಫ್‌ಸಿ-ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನಕ್ಕೆ ಅನುಮತಿ ನೀಡಿತ್ತು. ಆ ಬಳಿಕ ದೇಶದ ಬ್ಯಾಂಕಿಂಗ್ ವಲಯದಲ್ಲಿ ಐತಿಹಾಸಿಕ ಬೆಳವಣಿಗೆಗೆ ದಿನಗಣನೆ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಕೋಟ್ಯಂತರ ಗ್ರಾಹಕರು ಕೂಡ ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನಕ್ಕೆ ಕಾಯುತ್ತಿದ್ದರು. ಇದೀಗ ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಂಡಳಿ ಬೋರ್ಡ್ ಮೀಟಿಂಗ್‌ನಲ್ಲಿ ಅನುಮೋದನೆ ನೀಡಿದ್ದು, ಇದೀಗ ಈ ಐತಿಹಾಸಿಕ ಬೆಳವಣಿಗೆಯನ್ನ ಜಾಗತಿಕ ಬ್ಯಾಂಕಿಂಗ್ ವಲಯ ಕೂಡ ಗಮನಿಸುತ್ತಿದೆ (HDFC Merger).
ಭಾರತದ ಬ್ಯಾಂಕ್‌ಗೆ ಜಾಗತಿಕ ಮನ್ನಣೆ!
ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲೇ ಭಾರತದ ಷೇರು ಮಾರುಕಟ್ಟೆ ಕೂಡ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಹಾಗೇ ಎಚ್‌ಡಿಎಫ್‌ಸಿ ವಿಲೀನ ಜು.1ರಿಂದ ಜಾರಿಗೆ ಬರುವುದು ಈಗ ಪಕ್ಕಾ ಆಗಿದೆ. ಹೀಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಘಟಕ 12 ಕೋಟಿ ಗ್ರಾಹಕರನ್ನು ಹೊಂದಿರಲಿದೆ. ಇದರಿಂದ ಬ್ಯಾಂಕ್‌ನ ಶಾಖೆಯ ನೆಟ್‌ವರ್ಕ್ 8,300ಕ್ಕೆ ಹೆಚ್ಚಲಿದ್ದು, 1,77,000ಕ್ಕಿಂತಲೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರಲಿದೆ. ಈ ಮೂಲಕ ಜಗತ್ತಿನ ಅತಿಮೌಲ್ಯಯುತ ಬ್ಯಾಂಕ್‌ಗಳ ಸಾಲಿಗೆ ಎಚ್‌ಡಿಎಫ್‌ಸಿ ಕೂಡ ಸೇರ್ಪಡೆ ಆಗಲಿದೆ. ಅದರ ಸಂಪೂರ್ಣ ಮಾಹಿತಿ ಮುಂದೆ ಇದೆ ಓದಿ.
ಎಚ್‌ಡಿಎಫ್‌ಸಿ ವಿಲೀನದ ಪ್ರಮುಖ ಬೆಳವಣಿಗೆಗಳು
1) ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನದ ಬಗ್ಗೆ 2022ರ ಏಪ್ರಿಲ್ 4ರಂದು ಘೋಷಣೆ.
2) ವಿಲೀನ ಪ್ರಕ್ರಿಯೆ ಮೂಲಕ ಶೇಕಡಾ 41ರಷ್ಟು ಪಾಲು ಪಡೆಯಲಿದೆ ಎಚ್‌ಡಿಎಫ್‌ಸಿ.
3) ವಿಲೀನದ ನಂತರ ಸಂಯೋಜಿತ ಕಂಪನಿ 1,77,000ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುತ್ತದೆ.
4) ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರ ಸಂಖ್ಯೆ ಇನ್ನುಮುಂದೆ ಬರೋಬ್ಬರಿ 12 ಕೋಟಿಗೆ ತಲುಪಲಿದೆ.
5) ಜುಲೈ 1ರಿಂದ ಎಚ್‌ಡಿಎಫ್‌ಸಿ ವಿಲೀನ ಜಾರಿಗೆ ಬರುವ ಬಗ್ಗೆ ಎರಡೂ ಸಂಸ್ಥೆಗಳ ಮಂಡಳಿಯಲ್ಲಿ ತೀರ್ಮಾನ.
ಷೇರು ಮಾರುಕಟ್ಟೆಗೂ ಭರ್ಜರಿ ಲಾಭ!
ಇನ್ನು ವಿಲೀನಕ್ಕೆ ಸಿದ್ಧವಾಗಿರುವ ಎಚ್‌ಡಿಎಫ್‌ಸಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಕಂಪನಿಗಳ ಷೇರುಗಳಿಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಈ ಪರಿಣಾಮ ಕೂಡ ಇಂದು ಷೇರುಪೇಟೆ ಮೇಲೆ ಆಗಿದ್ದು, ಭಾರತದ ಬಂಡವಾಳ ಮಾರುಕಟ್ಟೆ ಇಂದು ಹೊಸ ಇತಿಹಾಸವನ್ನೇ ಬರೆದಿದೆ. ಕಳೆದ ಜನವರಿ ಅಂತ್ಯದಲ್ಲಿ ಕೆಲವೊಂದು ಆಘಾತ ಎದುರಾಗಿ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿತ್ತು. ಆ ಘಟನೆಯ ಬಳಿಕ ನಿಧಾನವಾಗಿ ಸುಧಾರಿಸುತ್ತಾ ಬಂದಿದೆ ಷೇರು ಪೇಟೆಯ ಪರಿಸ್ಥಿತಿ. ಕಳೆದ 1 ವಾರದಲ್ಲಿ ಸ್ಥಿತಿಗತಿ ಸಂಪೂರ್ಣವಾಗಿ ಬದಲಾಗಿದ್ದು, ಭಾರಿ ಲಾಭ ಗಳಿಸುತ್ತಿದೆ ಭಾರತದ ಬಂಡವಾಳ ಮಾರುಕಟ್ಟೆ.
ಸಾರ್ವಕಾಲಿಕ ದಾಖಲೆ ಬರೆದ ಸೆನ್ಸೆಕ್ಸ್!
ಭಾರತದ ಬಂಡವಾಳ ಮಾರುಕಟ್ಟೆಯಲ್ಲಿ ಪ್ರಮುಖ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ (BSE Sensex) ಹಾಗೂ ಎನ್ಎಸ್ಇ ನಿಫ್ಟಿ (ನಿಫ್ಟಿ 50 ಎಂದು ಕೂಡ ಕರೆಯಲಾಗುತ್ತದೆ) ದಾಖಲೆ ಬರೆದಿವೆ. ಬಿಎಸ್ಇ ಸೆನ್ಸೆಕ್ಸ್ 803 ಅಂಕ ಏರಿಕೆ ಕಂಡು 64,718 ತಲುಪಿದರೆ, ಎನ್ಎಸ್ಇ ನಿಫ್ಟಿ ಅಥವಾ ನಿಫ್ಟಿ-50 216 ಅಂಕ ಗಳಿಸಿ 19,189 ಅಂಕದಲ್ಲಿ ವಹಿವಾಟು ಮುಗಿಸಿದೆ. ಅಲ್ಲದೆ ಬ್ಯಾಂಕ್ ನಿಫ್ಟಿ ಸುಮಾರು 419 ಅಂಕಗಳ ಏರಿಕೆಯೊಂದಿಗೆ 44,747ರ ಗಡಿಯನ್ನ ದಾಟಿದೆ. ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆ ಕೂಡ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
English summary
HDFC and HDFC Bank merging will effective from July 1
Story first published: Friday, June 30, 2023, 23:45 [IST]