India
oi-Malathesha M
ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ವಿರುದ್ಧ ಡಿಎಂಕೆ ನಾಯಕರು ಗರಂ ಆಗಿದ್ದಾರೆ. ನಿನ್ನೆ ಸಚಿವ ಸೆಂಥಿಲ್ ಬಾಲಾಜಿ ವಜಾ ಆದೇಶ ಪ್ರಕಟಿಸಿದ್ದ ರಾಜ್ಯಪಾಲ ರವಿ ಅವರು, ವಿವಾದಕ್ಕೆ ನಾಂದಿ ಹಾಡಿದ್ದರು. ರಾಜಭವನದಿಂದ ಈ ಬಗ್ಗೆ ಪತ್ರ ಬರೆದಿದ್ದು ಸಿಎಂ ಸ್ಟಾಲಿನ್ ಸಮೇತ ತಮಿಳುನಾಡು ಸರ್ಕಾರವನ್ನ ರೊಚ್ಚಿಗೆಬ್ಬಿಸಿದೆ. ಈಗ ರಾಜ್ಯಪಾಲ ರವಿ ಅವರಿಗೆ ನೇರ ಉತ್ತರ ಕೊಟ್ಟಿರುವ ಸ್ಟಾಲಿನ್ ತೊಡೆತಟ್ಟಿದ್ದಾರೆ.
ಸಚಿವ ಸೆಂಥಿಲ್ ಬಾಲಾಜಿರನ್ನ ಸಂಪುಟದಿಂದ ವಜಾಗೊಳಿಸಿದ್ದ ಆದೇಶವನ್ನ ತಾತ್ಕಾಲಿಕವಾಗಿ ತಡೆಹಿಡಿಯಲು ರಾಜ್ಯಪಾಲ ಆರ್.ಎನ್.ರವಿ ನಿರ್ಧಾರ ಮಾಡಿದ್ದಾರೆ. ಆದರೂ ವಿವಾದದ ಕಿಚ್ಚು ಮಾತ್ರ ತಣ್ಣಗಾಗುತ್ತಿಲ್ಲ. ರಾಜ್ಯಪಾಲರು ತಮಿಳುನಾಡು ಸರ್ಕಾರದ ವಿಷಯಕ್ಕೆ ಕೈ ಹಾಕಿದ್ದು ಹಾವಿನ ಹೆಡೆ ತುಳಿದಂತಾಗಿದೆ. ಹೀಗಾಗಿಯೇ ಡಿಎಂಕೆ ಸರ್ಕಾರ ಈಗ ಕಾನೂನು ಹೋರಾಟಕ್ಕೆ ಸಿದ್ಧವಾಗಿದೆ. ಅಲ್ಲದೆ ನೇರವಾಗಿ ರಾಜ್ಯಪಾಲರಿಗೆ ಪತ್ರ ಬರೆದಿರುವ ಸ್ಟಾಲಿನ್ ‘ನಮ್ಮ ಸರ್ಕಾರದ ಸಚಿವರನ್ನು ವಜಾ ಮಾಡಲು ನಿಮಗೆ ಅಧಿಕಾರ ಇಲ್ಲ’ ಎಂದಿದ್ದಾರೆ. ಅಲ್ಲದೆ ಈ ಪತ್ರದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರ VS ರಾಜ್ಯಪಾಲ ಜೋರಾಯ್ತು ಜಟಾಪಟಿ!
ರವಿ ಅವರ ನಿರ್ಧಾರದ ಬಗ್ಗೆ ಸ್ವತಃ ಬಿಜೆಪಿ ನಾಯಕರ ಪೈಕಿ ಕೆಲವರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಈ ನಡುವೆ ರಾಜ್ಯಪಾಲರು ಇಂತಹ ಕ್ರಮ ಕೈಗೊಳ್ಳುತ್ತಿದ್ದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಅಮಿತ್ ಶಾ ಅವರ ಸಲಹೆ ಮೇರೆಗೆ ತಮಿಳುನಾಡು ರಾಜ್ಯಪಾಲ ರವಿ ನಿರ್ಧಾರ ಬದಲಾಯಿಸಿದ್ದು, ತಮ್ಮ ವಜಾ ಆದೇಶವನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದ್ದಾರಂತೆ. ಆದರೆ ಇದೀಗ ಡಿಎಂಕೆ ರೊಚ್ಚಿಗೆದ್ದಿದ್ದು, ಈ ವಿಚಾರವನ್ನೇ ಹಿಡಿದುಕೊಂಡು ಹೋರಾಟ ಸಂಘಟಿಸಲು ಸಿದ್ಧತೆ ನಡೆಸಿದಂತೆ ಕಾಣುತ್ತಿದೆ. ಹೀಗಾಗಿ ‘ಸಚಿವರ ನೇಮಕ ಹಾಗೂ ವಜಾಗೊಳಿಸುವುದು ಮುಖ್ಯಮಂತ್ರಿ ವಿವೇಚನಾಧಿಕಾರ’ ಎಂದಿದ್ದಾರೆ ಸ್ಟಾಲಿನ್.
ಅಕ್ಕಿ ಬದಲು ಹಣ ಕೊಡಲು ಸರ್ಕಾರ ನಿರ್ಧಾರ; 340 ರೂಪಾಯಿ ಕೊಡಿ,170 ರೂಪಾಯಿ ಅಲ್ಲ: ಎಸ್.ಮುನಿಸ್ವಾಮಿ
ಕಿಡಿ ಹೊತ್ತಿಸಿದ್ದ ರಾಜ್ಯಪಾಲರ ಆದೇಶ
ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ (RN Ravi) ನಿನ್ನೆ ಸಚಿವ ಬಾಲಾಜಿ ಅವರನ್ನ ಸಂಪುಟದಿಂದ ವಜಾ ಮಾಡಿದ್ದರು. ಜೊತೆಗೆ ರಾಜಭವನದಿಂದ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ ‘ಬಾಲಾಜಿ ಉದ್ಯೋಗಕ್ಕಾಗಿ ನಗದು ತೆಗೆದುಕೊಳ್ಳುವುದು ಮತ್ತು ಮನಿ ಲಾಂಡರಿಂಗ್ ಸೇರಿ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಗಂಭೀರ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದು. ಹೀಗಾಗಿ ರಾಜ್ಯಪಾಲರು ತಕ್ಷಣದಿಂದ ಜಾರಿಗೆ ಬರುವಂತೆ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಸಂಪುಟದಿಂದ ವಜಾ ಮಾಡಿದ್ದಾರೆ’ ಎಂದು ತಿಳಿಸಲಾಗಿತ್ತು. ತಮಿಳುನಾಡು ಸಿಎಂ ಸ್ಟಾಲಿನ್ ಕೂಡ ಈ ಬಗ್ಗೆ ಆಕ್ರೋಶ ಹೊರಹಾಕಿದ್ದರು. ಆದರೆ ಆದೇಶ ತಾತ್ಕಾಲಿಕವಾಗಿ ತಡೆಹಿಡಿದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಆದರೂ ಡಿಎಂಕೆ ನಾಯಕರು ಈ ವಿಚಾರವನ್ನ ಕೋರ್ಟ್ ತನಕ ತೆಗೆದುಕೊಂಡು ಹೋಗಲು ಸಿದ್ಧತೆ ನಡೆಸಿದ್ದಾರೆ.
ಅಧಿಕಾರಕ್ಕೆ ಬಂದಾಗಿನಿಂದಲೂ ಫೈಟಿಂಗ್!
ಡಿಎಂಕೆ ಸರ್ಕಾರ ತಮಿಳುನಾಡಲ್ಲಿ ಅಸ್ತಿತ್ವಕ್ಕೆ ಬಂದ ಕೆಲವು ತಿಂಗಳಲ್ಲಿ ತಿಕ್ಕಾಟ ಶುರುವಾಗಿತ್ತು. ತಮಿಳುನಾಡು ರಾಜ್ಯಪಾಲರು ಹಾಗೂ ತಮಿಳುನಾಡು ಸರ್ಕಾರದ ನಡುವೆ ದೊಡ್ಡ ಸಂಘರ್ಷ ನಡೆಯುತ್ತಿದೆ. ಈ ಮಧ್ಯೆ ಉದ್ಯೋಗಕ್ಕಾಗಿ ನಗದು ತೆಗೆದುಕೊಳ್ಳುವುದು & ಮನಿ ಲಾಂಡರಿಂಗ್ ಸೇರಿ ಹಲವು ಆರೋಪದ ಅಡಿಯಲ್ಲಿ ಸಚಿವ ಸೆಂಥಿಲ್ ಬಾಲಾಜಿ ಬಂಧನವಾಗಿತ್ತು. ಈ ಘಟನೆ ಬಳಿಕ ಸರ್ಕಾರ ಮತ್ತು ರಾಜ್ಯಪಾಲರ ಮಧ್ಯೆ ತಿಕ್ಕಾಟ ಬಲು ಜೋರಾಗಿ ನಡೆಯುತ್ತಿತ್ತು. ನಿನ್ನೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಚಿವ ಸೆಂಥಿಲ್ ಬಾಲಾಜಿರನ್ನ ವಜಾ ಮಾಡಿ ಆದೇಶ ಹೊರಡಿಸಿದ್ದರು ತಮಿಳುನಾಡು ರಾಜ್ಯಪಾಲರು. ರಾಜ್ಯಪಾಲರ ಕಚೇರಿಯಿಂದ ಅಧಿಕೃತ ಹೇಳಿಕೆ ಕೂಡ ನೀಡಲಾಗಿತ್ತು. ಈಗ ಅದೇ ನಿರ್ಧಾರ ಉಲ್ಟಾ ಆದಂತೆ ಕಾಣುತ್ತಿದೆ.
ಒಟ್ನಲ್ಲಿ ಡಿಎಂಕೆ ನಾಯಕರು ತಮಿಳುನಾಡು ರಾಜ್ಯಪಾಲರ ವಿರುದ್ಧ ಕೆಂಡವಾಗಿದ್ದು, ಈ ವಿಚಾರವನ್ನ ನ್ಯಾಯಾಲಯದ ತನಕ ಕೊಂಡೊಯ್ಯಲು ಸಿದ್ಧತೆ ನಡೆಸಿದ್ದಾರೆ. ರಾಜ್ಯಪಾಲ ರವಿ ಅವರು ತೆಗೆದುಕೊಂಡ ಏಕಪಕ್ಷೀಯವಾದ ನಿರ್ಧಾರ ಪ್ರಜಾಪ್ರಭುತ್ವಕ್ಕೆ ಮಾರಕ ಎಂಬ ಗಂಭೀರ ಆರೋಪ ಕೂಡ ಡಿಎಂಕೆ ನಾಯಕರದ್ದು. ಹೀಗಾಗಿ ಜಟಾಪಟಿ ಜೋರಾಗಿದ್ದು, ಗಲಾಟೆಗೆ ಮುಂದೆ ವಿಪರೀತವಾಗುವ ಮುನ್ಸೂಚನೆ ಸಿಗುತ್ತಿದೆ. ಮತ್ತೊಂದ್ಕಡೆ ಇಷ್ಟು ದಿನ ತಮಿಳುನಾಡು ರಾಜ್ಯಪಾಲರು & ಸರ್ಕಾರದ ನಡುವೆ ನಡೆಯುತ್ತಿದ್ದ ಕಿರಿಕ್ ಮತ್ತೊಂದು ಹಂತಕ್ಕೆ ಹೋದಂತೆ ಕಾಣುತ್ತಿದೆ.
English summary
Tamil Nadu CM MK Stalin wrote letter to Governor.
Story first published: Friday, June 30, 2023, 23:19 [IST]