ಕೈಕೊಟ್ಟ ಮುಂಗಾರು: ಕುಡಿಯುವ ನೀರಿನ ಕೊರತೆ ನೀಗಿಸಲು ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಮುನ್ನೆಚ್ಚರಿಕಾ ಕ್ರಮಗಳಿವು | What is Precautionary measures taken by Mysuru deputy commissioner to tackle water crisis?

Mysuru

oi-Madhusudhan KR

By ಮೈಸೂರು ಪ್ರತಿನಿಧಿ

|

Google Oneindia Kannada News

ಮೈಸೂರು, ಜೂನ್‌, 30: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದೆ. ಅದೇ ರೀತಿ ಕೆಆರ್‌ಎಸ್‌ ಜಲಾಶಯ ಬರಿದಾಗುತ್ತಿರುವ ಹಿನ್ನೆಲೆ ಮೈಸೂರು ಜಿಲ್ಲೆಯಲ್ಲಿ ನೀರಿನ ಕೊರತೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗುತ್ತಿಲ್ಲ. ಜಲಾಶಯಗಳ ನೀರಿನ ಮಟ್ಟ ಕಡಿಮೆ ಆಗುತ್ತಿದೆ. ಆದ್ದರಿಂದ ಕುಡಿಯುವ ನೀರಿಗೆ ಯಾವುದೇ ಕೊರತೆ ಆಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ, ರಾಜೇಂದ್ರ ಅವರು ಸೂಚಿಸಿದರು.

to tackle water crisis

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಲಭ್ಯತೆ ಕುರಿತ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮಳೆ ಉತ್ತಮವಾಗಿ ಆಗುತ್ತಿಲ್ಲ. 256 ಗ್ರಾಮ ಪಂಚಾಯಿತಿ ಹಾಗೂ 13 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ನೀರು ಸರಬರಾಜು ಮಾಡಬೇಕು. ಪ್ರತಿದಿನ ನೀರಿನ ಲಭ್ಯತೆ ಬಗ್ಗೆ ಮಾಹಿತಿ ನೀಡಬೇಕು. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಆಗಬಹುದಾದ ಗ್ರಾಮಗಳ ಪಟ್ಟಿ ಮಾಡಿಕೊಳ್ಳಿ ಎಂದು ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೂ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಕಂಡುಬರಬಹುದಾದ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಿ. ನೀರಿನ ಸಮಸ್ಯೆ ಕಂಡುಬಂದರೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರಿನ ಪೂರೈಕೆ ಮಾಡಿ. ಖಾಸಗಿ ಕೊಳವೆ ಬಾವಿಗಳು ದೊರೆಯದೆ ಹೋದರೆ ಅಂತಿಮವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಸೂಚನೆ ನೀಡಿದರು.

ಕುಡಿಯುವ ನೀರಿನ ಗುಣಮಟ್ಟವನ್ನು ಪರಿಶೀಲಿಸಬೇಕು. ಕುಡಿಯುವ ನೀರಿನಲ್ಲಿ ಬ್ಯಾಕ್ಟೀರಿಯಲ್ ಮತ್ತು ಕೆಮಿಕಲ್ ಇಲ್ಲದಂತೆ ನೋಡಿಕೊಳ್ಳಬೇಕು. ಓವರ್ ಹೆಡ್ ಟ್ಯಾಂಕ್ ಹಾಗೂ ಸಂಪ್‌ಗಳನ್ನು ನಿಯಮಿತವಾಗಿ ಸ್ವಚ್ಛತೆ ಮಾಡಿಸಬೇಕು. ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕೊಳಚೆ ನೀರು ಕುಡಿಯುವ ನೀರಿನಲ್ಲಿ ಸೇರದಂತೆ ನೋಡಿಕೊಳ್ಳಬೇಕು. ತಪ್ಪಿದರೆ ಸಂಭಂದಿಸಿದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದರು.

ಬರಿದಾಗುತ್ತಿದೆ KRS ಜಲಾಶಯ: 20 ದಿನದಲ್ಲಿ ಮಳೆ ಬಾರದಿದ್ದರೆ ಮೈಸೂರು ಜಿಲ್ಲೆಯಲ್ಲಿ ಜಲಕ್ಷಾಮಬರಿದಾಗುತ್ತಿದೆ KRS ಜಲಾಶಯ: 20 ದಿನದಲ್ಲಿ ಮಳೆ ಬಾರದಿದ್ದರೆ ಮೈಸೂರು ಜಿಲ್ಲೆಯಲ್ಲಿ ಜಲಕ್ಷಾಮ

ಮಹಾನಗರ ಪಾಲಿಕೆ ಆಯುಕ್ತರಾದ ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ, ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಬಿನಿ ಹಾಗೂ ಕೆಆರ್‌ಎಸ್ ವ್ಯಾಪ್ತಿಯಲ್ಲಿ ವ್ಯವಸಾಯಕ್ಕೆ ನೀರನ್ನು ಬಳಸುತ್ತಿಲ್ಲ. ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಲಾಗುತ್ತದೆ. ಕಬಿನಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಳಕೆಗೆ ಕೊರತೆ ಇಲ್ಲ. ಕಬಿನಿಯಿಂದ 19 ವಾರ್ಡ್‌ಗಳಿಗೆ ನೀರು ಸರಬರಾಜು ಆಗುತ್ತಿದೆ.

ಉಳಿದ ವಾರ್ಡ್‌ಗಳಿಗೆ ಕೆ.ಆರ್.ಎಸ್ ಜಲಾಶಯದಿಂದ ನೀರು ಒದಗಿಸಲಾಗುತ್ತಿದೆ. ಮೈಲಾಪುರದಿಂದ 100 ಎಂಎಲ್‌ಡಿ, ಬೆಳಗೊಳದಿಂದ 60 ಎಂಎಲ್‌ಡಿ, ಕಬಿನಿಯಿಂದದ 80 ಎಂಎಲ್‌ಡಿ ನೀರನ್ನು ಪಡೆಯಲಾಗುತ್ತಿದೆ. ಇನ್ನು ಆರ್‌ಬಿಎಲ್‌ ಕೆನಾಲ್‌ನಿಂದ 50 ಎಂಎಲ್‌ಡಿ ನೀರನ್ನು ಪಡೆಯಲಾಗುತ್ತಿದೆ. ಮಳೆ ಇಲ್ಲದೆ ಇದ್ದರೂ ಆಗಸ್ಟ್ 15ರವರೆಗೆ ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುವುದಿಲ್ಲ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ ಅವರು ಮಾತನಾಡಿ ಕುಡಿಯುವ ನೀರಿನ ಮಾದರಿಗಳನ್ನು ಪಡೆದು ಪರೀಕ್ಷಿಸಬೇಕು.ನಾವು ಕುಡಿಯುವ ನೀರು ಶುದ್ಧವಾಗಿದೆ ಮತ್ತು ಯಾವುದೇ ಬ್ಯಾಕ್ಟೀರಿಯಾ ಮತ್ತು ಹಾನಿಕಾರಕ ಲೋಹಗಳನ್ನು ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪ್ರಯೋಗಾಲಯದಲ್ಲಿ ಕುಡಿಯುವ ನೀರಿನ ವಿಶ್ಲೇಷಣೆ ಅಗತ್ಯ. ಇದನ್ನು ಅಧಿಕಾರಿಗಳು ಮೊದಲ ಆದ್ಯತೆಯಲ್ಲಿ ಕ್ರಮವಹಿಸಬೇಕು ಎಂದು ತಿಳಿಸಿದರು.

ಕುಡಿಯುವ ನೀರಿನ ವಿಶ್ಲೇಷಣೆಯಲ್ಲಿ ಕುಡಿಯುವ ನೀರಿನ ಮಾದರಿಯು ಪ್ರಮುಖ ಪ್ರಕ್ರಿಯೆ ಆಗಿದೆ. ಅದನ್ನು ಪರೀಕ್ಷಿಸಲು ನೀರಿನ ಮೂಲವನ್ನು ಪ್ರತಿನಿಧಿಸುವ ಸ್ಥಳದಿಂದ ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಇನ್ನು ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಬಾಬು ಅವರು ಈಗಾಗಲೇ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆಯಲು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜಾರಾಮ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

English summary

Monsoon rain: Precautionary measures taken by Mysuru deputy commissioner dr.kv Rajendra for prevent shortage of drinking water

Story first published: Friday, June 30, 2023, 16:49 [IST]

Source link