ಕಾವೇರಿ ಬಳಿಕ ವೃಷಭಾವತಿ ವಿಚಾರದಲ್ಲೂ ತಮಿಳುನಾಡು ಕಿರಿಕ್: ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು? | DCM DK Shivakumar suggestion to Tamil Nadu government in Vrushabhavathi dispute

International

oi-Malathesha M

|

Google Oneindia Kannada News

ನವದೆಹಲಿ: ಇಷ್ಟುದಿನ ಕಾವೇರಿ ವಿಚಾರಕ್ಕೆ ನಡೆಯುತ್ತಿದ್ದ ರಾಜಕೀಯ ಈಗ ಬೆಂಗಳೂರಿನ ವೃಷಭಾವತಿ ವಿಷಯಕ್ಕೂ ವಕ್ಕರಿಸಿದೆ. ಈ ವಿಚಾರವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸ್ಪಷ್ಟನೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಮಿಳುನಾಡು ಸರ್ಕಾರಕ್ಕೆ ಹೇಳಿದ್ದು ಏನು ಗೊತ್ತಾ? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ನಾನು ಸಚಿವನಾದ ಬಳಿಕ ದೆಹಲಿಗೆ ಅಧಿಕೃತ ಭೇಟಿ ನೀಡಿದ್ದು, ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಇದೇ ವೇಳೆ, ಬೆಂಗಳೂರಲ್ಲಿ ನೀರು ಶುದ್ಧೀಕರಿಸಿ ಕೋಲಾರ ಭಾಗಕ್ಕೆ ನೀಡುತ್ತಿರುವುದನ್ನು ಪ್ರಶ್ನಿಸಿ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ. ಟ್ರಿಬ್ಯೂನಲ್ ರಚನೆಗೆ ಆಗ್ರಹಿಸಿ ನ್ಯಾಯಾಲಯ ಮೊರೆ ಹೋಗಿದ್ದು, ಜುಲೈ 5ರ ಒಳಗಾಗಿ ಸ್ಥಾಪಿಸಬೇಕು ಎಂದು ನ್ಯಾಯಾಲಯ ಆದೇಶವನ್ನು ನೀಡಿದೆ. ಆದರೆ ಹಿಂದೆ ನಮ್ಮ ಕಾರ್ಯವನ್ನು ಖುದ್ದು ಕೇಂದ್ರ ಸರ್ಕಾರ ಶ್ಲಾಘಿಸಿತ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

DCM DK Shivakumar suggestion to Tamil Nadu government in Vrushabhavathi dispute

ತಮಿಳುನಾಡು ಸರ್ಕಾರದ ಕಿರಿಕ್ ಯಾಕೆ?

ನಾನು ಹಿಂದೆ ನೀರಾವರಿ ಸಚಿವನಾಗಿದ್ದಾಗ ಕೊಳಚೆ ನೀರು ಶುದ್ಧೀಕರಣ ಮಾಡಿ ಅದನ್ನು ಬೇರೆ ಪ್ರದೇಶಕ್ಕೆ ನೀಡಲಾಗಿತ್ತು. ವೃಷಭಾವತಿ ನೀರು ಪರಿಷ್ಕರಿಸಿ ಅದನ್ನು ಕೆರೆಗೆ ತುಂಬಿಸಲಾಗಿತ್ತು. ನಮ್ಮ ಕೆಲಸವನ್ನು ಕೇಂದ್ರ ಸರ್ಕಾರ ಕೂಡ ಮೆಚ್ಚಿಕೊಂಡಿತ್ತು. ಆದರೆ ದಿಢೀರ್ ತಮಿಳುನಾಡು ತಕರಾರು ಎತ್ತಿದ್ದು ಜುಲೈ 5ರ ಒಳಗೆ ನ್ಯಾಯಾಧಿಕರಣ ರಚನೆಗೆ ಆದೇಶವನ್ನ ನೀಡಿದೆ. ನಾವು ಈಗಾಗಲೇ 500mcft ಶೇಖರಣೆಯ ಮಾರ್ಕಂಡೇಯ ಯೋಜನೆ ಹಾಗೂ ವರ್ತೂರು ಟ್ಯಾಂಕ್, ನರಸಾಪುರ ಯೋಜನೆ ಕೈಗೆತ್ತಿಕೊಂಡಿದ್ದೇವೆ. ನ್ಯಾಯಾಧಿಕರಣ ರಚನೆ ಬೇಡ. ಕೂತು ಸಮಸ್ಯೆ ಬಗೆಹರಿಸಿಕೊಳ್ಳೋಣ. ಇದೇ ವಿಚಾರಕ್ಕೆ ನಿತ್ಯ 2 ರಾಜ್ಯಗಳು ಸಂಘರ್ಷ ಮಾಡಿಕೊಳ್ಳುವುದು ಬೇಡವೆಂದು ಕೇಂದ್ರ ಜಲಶಕ್ತಿ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ ಅಂತಾ ಡಿಸಿಎಂ ಮಾಹಿತಿ ನೀಡಿದರು.

ಕಳಸಾ ಬಂಡೂರಿ ಯೋಜನೆ ಯಾವಾಗ?

ಅಲ್ಲದೆ ಕೃಷ್ಣಾ ಮೇಲ್ದಂಡೆ ಯೋಜನೆಯ ಗೆಜೆಟ್ ಅಧಿಸೂಚನೆ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆದಿದ್ದೇನೆ. ಮಹದಾಯಿ ವಿಚಾರವಾಗಿ ಪರಿಸರ ಇಲಾಖೆ ಅನುಮತಿ ಸಿಕ್ಕಿಲ್ಲ. ಎಲ್ಲೆಲ್ಲಿ ನದಿ ಹರಿಯುತ್ತದೆಯೋ ಅಲ್ಲಿ ಕಾಡು ಇದ್ದೇ ಇರುತ್ತದೆ. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಮಧ್ಯಸ್ಥಿಕೆ ವಹಿಸಬೇಕು ಎಂದು ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡುತ್ತೇನೆ. ಜಲಶಕ್ತಿ ಸಚಿವಾಲಯದಿಂದ ಅನುಮತಿ ಸಿಕ್ಕಿದ್ದು, ಅರಣ್ಯ ಇಲಾಖೆಯಲ್ಲಿ ನಿಂತಿದೆ. ಇಲ್ಲಿ ಅನುಮತಿ ಸಿಕ್ಕರೆ ಕಳಸಾ ಬಂಡೂರಿ ಯೋಜನೆ ಜಾರಿ ಆಗಲಿದೆ ಎಂದು ಮಾಹಿತಿ ನೀಡಿದರು.

ಮೇಕೆದಾಟು ವಿಚಾರಕ್ಕೆ ಕಿರಿಕ್ ಬೇಡ!

ಇದೇ ವೇಳೆ ಮೇಕೆದಾಟು ವಿಚಾರವಾಗಿ ಮಾತನಾಡಿದ ಡಿಸಿಎಂ, ಕಾನೂನು ತಜ್ಞರ ಜೊತೆ ಚರ್ಚೆ ಮಾಡಬೇಕಿದೆ. ಯೋಜನೆ ತಡವಾದಷ್ಟು ರಾಜ್ಯಕ್ಕೆ ನಷ್ಟ ಹೆಚ್ಚು. ಈ ಮಧ್ಯೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿದೆ, ಕಾವೇರಿ ನೀರನ್ನು ಹೆಚ್ಚಾಗಿ ಬಳಸಲು ಸಾಧ್ಯವಿಲ್ಲ. ಕಾರಣ ಇದರ ಬೀಗ ಕೇಂದ್ರದ ಬಳಿ ಇದೆ. ಅದು ಅವರಿಗೂ ಗೊತ್ತಿದೆ, ನಮಗೆ ಯಾವುದೇ ರಾಜ್ಯದ ಜೊತೆ ಜಗಳ ಮಾಡಲು ಇಷ್ಟವಿಲ್ಲ. ಹೀಗಾಗಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ಇದಕ್ಕೆ ಮೊದಲು ಕಾನೂನು ತಂಡದ ಜೊತೆ ಮಾತನಾಡಬೇಕು ಎಂದರು.

DCM DK Shivakumar suggestion to Tamil Nadu government in Vrushabhavathi dispute

ಡಬಲ್ ಇಂಜಿನ್ ಸರ್ಕಾರಕ್ಕೆ ತಿರುಗೇಟು

ಅಲ್ಲದೆ ನ್ಯಾಯಾಧಿಕರಣ ರಚನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಡಿಸಿಎಂ, ಹೀಗೆ ಹಠ ಹಿಡಿದರೆ ಸಮಸ್ಯೆ ಖಂಡಿತ ಎಂದರು. ವಾಸ್ತವಾಂಶ ಅರ್ಥ ಮಾಡಿಕೊಂಡರೆ ಎಲ್ಲವೂ ಸಾಧ್ಯ. ನದಿ ನೀರು ವಿಚಾರವಾಗಿ ದೊಡ್ಡ ವಿವಾದಕ್ಕೂ ಇದಕ್ಕೂ ವ್ಯತ್ಯಾಸವಿದೆ. ಈ ನೀರಿನ ಪ್ರಮಾಣ 1 ಟಿಎಂಸಿ ಕೂಡ ಇಲ್ಲ. ಪ್ರಾಧಿಕಾರ ರಚನೆ ಮಾಡಿದರೆ ಯೋಜನೆಗಳಿಗೂ ಸಮಸ್ಯೆ ಆಗುವ ಸಾಧ್ಯತೆ ಇದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಈ ವೇಳೆ ಸ್ಪಷ್ಟನೆ ನೀಡಿದ್ದಾರೆ. ನಾವು ಕೇಂದ್ರ ಸಚಿವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಸಿಎಂ ಕೂಡ ಪ್ರಧಾನಮಂತ್ರಿಗೆ ಪತ್ರ ಬರೆಯಲಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಹಿತ ಕಾಪಾಡಬೇಕಾಗಿದ್ದು, ಅವರು ಮಾಡಲಿಲ್ಲ ಎಂದು ನಾವು ನಮ್ಮ ಕರ್ತವ್ಯ ಮಾಡದೇ ಇರೋದಕ್ಕೆ ಸಾಧ್ಯವೇ? ಎಂದು ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಇದೇ ವೇಳೆ ಡಿಸಿಎಂ ವಾಗ್ದಾಳಿ ನಡೆಸಿದರು.

ವರ್ಗಾವಣೆ ಬಗ್ಗೆ ಎಚ್‌ಡಿಕೆಗೆ ತಿರುಗೇಟು!

ಇನ್ನು ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ನೀರು ಸಮುದ್ರದ ಪಾಲಾಗುತ್ತಿರುವ ಬಗ್ಗೆ ಕೇಳಿದಾಗ, ‘ಕಳೆದ ವರ್ಷ 700 ಟಿಎಂಸಿ ನೀರು ಸಮುದ್ರದ ಪಾಲಾಗಿದೆ. ಈ ವರ್ಷ ಕುಡಿಯಲು ನೀರಿಲ್ಲ. ಆಣೆಕಟ್ಟು ಭದ್ರತೆ ವಿಚಾರವಾಗಿ ಮುಂದಿನ ತಿಂಗಳು ಒಂದು ಸಭೆ ಇದೆ. ಆ ಸಭೆ KRSನಲ್ಲಿಯೇ ಆಯೋಜಿಸುತ್ತಿದ್ದು ಸಭೆಗೆ ಬಂದು ಪರಿಸ್ಥಿತಿ ಕಣ್ಣಾರೆ ನೋಡಲಿ. ನಮ್ಮಲ್ಲಿ ಮಳೆ ಬರುವುದೇ 100 ದಿನ. ಒಂದು ದಿನ ಮಳೆ ಬಂದರೆ ವಿದ್ಯುತ್ ಬಳಕೆಯಲ್ಲಿ ಎಷ್ಟು ಉಳಿತಾಯ ಇದೆ ಎಂದು ನನಗೆ ಅರಿವಿದೆ’ ಎಂದು ತಿಳಿಸಿದರು. ಸಿಎಂ ಕಚೇರಿಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿ ತಿರುಗೇಟು ನೀಡಿದ್ದಾರೆ.

ರೇಣುಕಾಚಾರ್ಯ ಕಾಂಗ್ರೆಸ್ ಸೇರುತ್ತಾರಾ?

ಹಾಗೇ ಈ ವೇಳೆ ರೇಣುಕಾಚಾರ್ಯ ಸುದ್ದಿಗೋಷ್ಠಿ ಬಗ್ಗೆಯೂ ಪ್ರಶ್ನೆ ಕೇಳಿಬಂತು. ಆಗ ಈ ಪ್ರಶ್ನೆಗೆ ಉತ್ತರ ನೀಡಿದ ಡಿಸಿಎಂ, ‘ನಿಮಗೆ ಸೂಕ್ತ ಮಾಹಿತಿ ಇಲ್ಲ ಅನಿಸ್ತಿದೆ. ಈ ವಿಚಾರಕ್ಕೆ ಸರ್ಕಾರದಿಂದ ಆದೇಶ ಹೊರಡಿಸಲಾಗಿತ್ತು. ಪ್ರಧಾನಿ ಸಭೆಗೆ ಕಾಲೇಜು ಮಕ್ಕಳನ್ನು ಕರೆ ತರಲು ಆದೇಶ ನೀಡಿದ್ದರು. ನಾವು ಅದನ್ನು ಪ್ರಶ್ನೆ ಮಾಡಿದ್ದೆವು. ಆ ಬಗ್ಗೆ ನೀವು ಪ್ರಶ್ನೆ ಮಾಡುತ್ತಿಲ್ಲ. ರೇಣುಕಾಚಾರ್ಯ ಅವರ ಹೇಳಿಕೆ ಬಗ್ಗೆ ಅಚ್ಚರಿ ಇಲ್ಲ’ ಎಂದರು. ಹಾಗೇ ರೇಣುಕಾಚಾರ್ಯ ಕಾಂಗ್ರೆಸ್ ಬರುತ್ತಾರಾ ಎಂದು ಕೇಳಿದಾಗ, ಪ್ರಧಾನಿ ಬಂದ್ರೆ ನಾವು ಭೇಟಿ ಮಾಡಬೇಕು. ಸಿಎಂ ಸಿದ್ದರಾಮಯ್ಯ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ಸೌಹಾರ್ದಯುತ ಭೇಟಿ ಸಹಜ. ಕೃಷ್ಣಾ ಅವರು ಸಿಎಂ ಆಗಿದ್ದಾಗ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು ಎಂದರು.

DCM DK Shivakumar suggestion to Tamil Nadu government in Vrushabhavathi dispute

ತೆಲಂಗಾಣದಲ್ಲಿ ಶರ್ಮಿಳಾ ಅವರ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಡಿ.ಕೆ.ಶಿವಕುಮಾರ್‌ರ ಪಾತ್ರ ದೊಡ್ಡದಿದೆ ಎಂಬ ಪ್ರಶ್ನೆ ಬಂದಾಗ, ನಾನು ಆ ವಿಚಾರವಾಗಿ ಮಾತನಾಡುವುದಿಲ್ಲ. ಅವರ ಕುಟುಂಬ ಬಹಳ ಗೌರವಯುತ ಕುಟುಂಬ. ಅವರ ತಂದೆ ಹಾಗೂ ನಾನು ಉತ್ತಮ ಸ್ನೇಹಿತರು. ಜತೆಯಲ್ಲೇ ರಾಜಕೀಯ ಮಾಡಿದ್ದೆವು. ರಾಜಶೇಖರ್ ರೆಡ್ಡಿ ಅವರಿಗೂ ನನ್ನ ಮೇಲೆ ಅಭಿಮಾನ ಇತ್ತು ಎಂದಿದ್ದಾರೆ. ಹಾಗೇ ರಾಷ್ಟ್ರ ರಾಜಕಾರಣ ಪ್ರವೇಶಿಸುತ್ತಿರಾ? ಎಂಬ ಪ್ರಶ್ನೆಗೆ ‘ನನಗೆ ಹಿಂದಿ ಬರಲ್ಲ. ಕೊಟ್ಟಿರುವ ಜವಾಬ್ದಾರಿ ನಿಭಾಯಿಸಿ ಜನರಿಗೆ ಕೊಟ್ಟ ಮಾತು ಉಳಿಸಿಕೊಂಡರೆ ಸಾಕು’ ಎಂದರು.

English summary

DCM DK Shivakumar suggestion to Tamil Nadu government in Vrushabhavathi dispute.

Story first published: Friday, June 30, 2023, 21:28 [IST]

Source link