India
oi-Shankrappa Parangi

ಬಾರಾಬಂಕಿ, ಜೂನ್ 23: ಉತ್ತರ ಪ್ರದೇಶ ರಾಜ್ಯದಲ್ಲಿ ಇತ್ತೀಚೆಗೆ ದಲಿತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವಾಗಿತ್ತು. ಈ ಸಂತ್ರಸ್ತೆಯು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡುವ ಮೊದಲೇ ತನ್ನ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ಸಂಬಂಧ ತನಿಖಾಧಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.
ಕಳೆದ ವಾರ ಬಾರಾಬಂಕಿ ಜಿಲ್ಲೆ ವ್ಯಾಪ್ತಿಯಲ್ಲಿ 16 ವರ್ಷದ ದಲಿತ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಜೂನ್ 17 ರಂದು ಹೈದರ್‌ಗಢ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಸಿಂಗ್ ಸೇರಿದಂತೆ ಪೊಲೀಸರ ತಂಡ ತನಿಖೆಗೆ ಇಳಿದಿತ್ತು.

ಈ ಮಧ್ಯೆ ಸಂತ್ರಸ್ತೆಯು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಬೇಕಿತ್ತು. ಅಷ್ಟರಲ್ಲಾಗಲೇ ದಲಿತ ಬಾಲಕಿ ಇಲ್ಲಿನ ಹೈದರ್‌ಗಢ ಪ್ರದೇಶದ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನೆನ್ನೆ ಗುರುವಾರ ಜೂನ್ 22 ರಂದು ಪತ್ತೆಯಾಗಿದ್ದಾಳೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತೆಯ ಸಾವಾಗುತ್ತಿದ್ದಂತೆ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಲಾಗಿದೆ ಎಂದು ತನಿಖಾಧಿಕಾರಿ ಯೋಗೇಂದ್ರ ಪ್ರತಾಪ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಲ್ಲ ಆಯಾಮಗಳಲ್ಲೂ ತನಿಖೆ
ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಸಿಂಗ್ ಅವರು, ಹೇಳುವಂತೆ ಜೂನ್ 17 ರಂದು ಹೈದರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಾಚಾರ ಪ್ರಕರಣವೊಂದನ್ನು ದಾಖಲಿಸಲಾಗಿತ್ತು. ಬಳಿಕ ಅತ್ಯಾಚಾರದ ಆರೋಪಿಯನ್ನು ಗುರುವಾರವಷ್ಟೇ ಬಂಧಿಸಲಾಗಿದೆ. ಇವತ್ತು ಬಾಲಕಿಯು ಘಟನೆ ಕುರಿತು ತನ್ನ ಹೇಳಿಕೆಯನ್ನು ದಾಖಲಿಸಲು ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕಿತ್ತು ಎಂದು ಅವರು ವಿವರಿಸಿದರು.

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಸಂತ್ರಸ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ಇದೆ. ಸದ್ಯ ನಾವು ಆಕೆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ ಮತ್ತು ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ಸಂತ್ರಸ್ತೆ ಕುಟುಂಬಸ್ಥರು ಆಕ್ರೋಶ
ದೂರು ದಾಖಲಾದ ಬಳಿಕ ಪ್ರಕರಣ ಹಿಂಪಡೆಯುವಂತೆ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದರಿಂದ ಸಂತ್ರಸ್ತೆ ಮನನೊಂದು ತನ್ನ ಜೀವನ ಅಂತ್ಯಗೊಳಿಸಿದ್ದಾಳೆ ಎಂದು ಬಾಲಕಿ ಕುಟುಂಬಸ್ಥರು ಪೊಲೀಸರ ವಿರುದ್ಧ ಆರೋಪ ಮಾಡಿದ್ದಾರೆ.
ಪ್ರಕರಣದಲ್ಲಿ ಪೊಲೀಸ್ ಕ್ರಮದ ಬಗ್ಗೆ ಕುಟುಂಬ ಸದಸ್ಯರು ಮಾಡಿರುವ ಆರೋಪಗಳ ಅಯಾಮದಲ್ಲೂ ಹಲವು ಅಂಶಗಳನ್ನು ಪರಿಶೀಲಿಸಿ, ತನಿಖೆ ನಡೆಸಲಾಗುತ್ತಿದೆ. ಕರ್ತವ್ಯ ಲೋಪದ ಕಾರಣಕ್ಕಾಗಿ ತನಿಖಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (SP) ಮಾಹಿತಿ ನೀಡಿದ್ದಾರೆ.
English summary
Sexual harassament victim 16 year old dalit girl found hanging in her house, before Say statement of case.