Bengaluru
oi-Shankrappa Parangi

ಬೆಂಗಳೂರು, ಜೂನ್ 20: ಸಿಲಿಕಾನ್ ಸಿಟಿ ಬೆಂಗಳೂರಿನ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಹತ್ತಿರವಿರುವ NGEF ಸೇರಿದ ವಿಶಾಲ ಜಾಗದಲ್ಲಿ 105 ಎಕರೆ ಜಾಗದಲ್ಲಿ, 30 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಆಕರ್ಷಕ ‘ವೃಕ್ಷೋದ್ಯಾನ’ (Tree Park) ಅಭಿವೃದ್ಧಿಪಡಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದ್ದಾರೆ.
ರಾಜಧಾನಿಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ, ಪ್ರಾಥಮಿಕ ಸುತ್ತಿನ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಈ ‘ಟ್ರೀ ಪಾರ್ಕ್’ ನಿರ್ಮಾಣ ಕುರಿತು ತಿಳಿಸಿದರು. ಆದಷ್ಟು ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ ಆದಷ್ಟು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಹತ್ತಿರವಿರುವ NGEF ಸೇರಿದ ವಿಶಾಲ ಜಾಗದಲ್ಲಿ ಈ ‘ವೃಕ್ಷೋದ್ಯಾನ’ ಅಭಿವೃದ್ಧಿ ಪಡಿಸುವ ಮೂಲಕ ನಗರದಲ್ಲಿ ಹಸಿರನ್ನು ಉಳಿಸಿಕೊಳ್ಳಲಾಗುವುದು.ಇದನ್ನು ಮನೋಹರವಾದ ಪ್ರವಾಸಿ ತಾಣವನ್ನಾಗಿ ಮಾಡುವ ಉದ್ದೇಶ ಸರ್ಕಾರ ಹೊಂದಿದೆ.
ಧಮ್ಮಿದ್ದರೆ ತಲಾ 15 ಕೆಜಿ ಅಕ್ಕಿ ಕೊಡಿ: ಬೊಮ್ಮಾಯಿ ಹೀಗೆ ಆಗ್ರಹಿಸಿದ್ದೇಕೆ?
ವೃಕ್ಷೋಧ್ಯಾನ: ಕಾಮಗಾರಿ, ವಿಶೇಷತೆ
ಎನ್‌ಜಿಇಎಫ್‌ಗೆ ಸೇರಿದ ಜಾಗದ ಪೈಕಿ 70 ಎಕರೆಯಲ್ಲಿ ದಟ್ಟ ಹಸಿರಿದ್ದು, ನಾನಾ ಪ್ರಭೇದಗಳ ಸಾವಿರಾರು ವೃಕ್ಷಗಳಿವೆ. ಜತೆಗೆ 5 ಕೈಗಾರಿಕಾ ಶೆಡ್‌ಗಳಿವೆ. ಇವುಗಳ ಪೈಕಿ ಒಂದು ಮಾತ್ರ ಶಿಥಿಲವಾಗಿದೆ. ಮಿಕ್ಕವನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು. ‘ಹಂತ-1ಎ’ಯಲ್ಲಿ 11 ಕೋಟಿ ರೂ ಮತ್ತು ‘ಹಂತ-1ಬಿ’ನಲ್ಲಿ 15 ಕೋಟಿ ರೂ. ವೆಚ್ಚ ಮಾಡಿ ವೃಕ್ಷೋದ್ಯಾನ ಅಭಿವೃದ್ಧಿ ಪಡಿಸಲಾಗುವುದು. ಇಲ್ಲಿ ವೈ-ಫೈ ಸೌಲಭ್ಯದೊಂದಿಗೆ ‘ರೆಡಿಮೇಡ್ ವರ್ಕ್‌ಸ್ಪೇಸ್’ ಕೂಡ ಇರಲಿದೆ. ಬಳಿಕ ಹಂತ-2ರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಹಂತ-1ಎ ಯಲ್ಲಿ ಸ್ಕಲ್ಪ್ಚರ್ ಕೋರ್ಟ್, 1.4 ಕಿ.ಮೀ ಉದ್ದದ ವಾಕ್‌ವೇ, ಫುಡ್‌ಕೋರ್ಟ್, ಎಲಿವೇಟೆಡ್ ವಾಕ್‌ವೇ ಮುಂತಾದ ಸೌಲಭ್ಯಗಳು ಬರಲಿವೆ. ಹಂತ-1ಬಿ ಯಲ್ಲಿ ಮಕ್ಕಳ ಆಟದ ತಾಣ, ಹೊರಾಂಗಣ ಜಿಮ್, ಸಾಕುಪ್ರಾಣಿಗಳ ಓಡಾಟಕ್ಕೆ ಅನುಕೂಲ, ಕಾರಂಜಿ, ವಾಚ್ ಟವರ್ ನಿರ್ಮಿಸಲಾಗುವುದು. ಹಂತ-2ರಲ್ಲಿ ಇನ್ನೋವೇಶನ್ ಹಬ್, ಕಲ್ಚರಲ್ ಹಬ್, ನರ್ಸರಿ, ಸ್ಪೋರ್ಟ್ಸ್ ಹಬ್, ಮಲ್ಟಿಪರ್ಪಸ್ ಥಿಯೇಟರ್ ಗಳು ಇರಲಿವೆ ಎಂದು ಸಚಿವರು ವಿವರಿಸಿದರು.

ಉದ್ದೇಶಿತ ವೃಕ್ಷೋದ್ಯಾನದಲ್ಲಿ ಕನ್ನಡ ನಾಡಿನ ಸಂಸ್ಕೃತಿಯ ಪ್ರತಿಬಿಂಬ ಇರುವಂತೆ ನೋಡಿಕೊಳ್ಳಲಾಗುವುದು. ಇದರ ಜತೆಗೆ ಎನ್‌ಜಿಇಎಫ್‌ನ ಬೆಳವಣಿಗೆ, ಅದರ ಯಶಸ್ಸು ಇತ್ಯಾದಿಗಳನ್ನು ಬಿಂಬಿಸಲಾಗುವುದು. ಒಟ್ಟಿನಲ್ಲಿ ಬೆಂಗಳೂರಿನ ಹಸಿರನ್ನು ಉಳಿಸಿಕೊಂಡು, ಅಭಿವೃದ್ಧಿಯನ್ನು ಸಾಧಿಸಬೇಕು ಎನ್ನುವುದು ನಮ್ಮ ಒತ್ತಾಸೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಪೂರ್ವ ಭಾಗ ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಆ ಭಾಗದ ನಿವಾಸಿಗಳಿಗೆ ಒಳ್ಳೆಯ ಪರಿಸರ ಇರುವಂತೆ ನೋಡಿಕೊಳ್ಳುವುದು ಕೂಡ ಈ ಆಶಯದ ಹಿಂದಿದೆ. ಇದರ ಜತೆಗೆ ಉದ್ದೇಶಿತ ಟ್ರೀಪಾರ್ಕ್ ವಿಶ್ವ ದರ್ಜೆಯ ತಾಣವಾಗಬೇಕು ಎನ್ನುವ ಕಳಕಳಿ ತಮ್ಮದಾಗಿದೆ ಎಂದು ಅವರು ನುಡಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಎನ್ಇಎಫ್ ಕಾರ್ಯನಿರ್ವಾಹಕ ನಿರ್ದೇಶಕಿ ಅರುಣಿ ಮತ್ತಿತರರು ಉಪಸ್ಥಿತರಿದ್ದರು.
English summary
Tree Park: Karnataka Government will build World Level Tree Park near Baiyappanahalli NGEF place in Bengaluru, Says MB Patil,
Story first published: Tuesday, June 20, 2023, 18:07 [IST]