Karnataka
oi-Shankrappa Parangi

ಬೆಂಗಳೂರು, ಜೂನ್ 20: ಕರ್ನಾಟಕದಲ್ಲಿ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಕೆಲವೆಡೆ ಬಸ್‌ಗಳ ಕೊರತೆ ಬಗ್ಗೆ ಮಾತುಗಳು ಕೇಳಿ ಬಂದಿವೆ. ಕೆಲವೆಡೆ ಸಾರ್ವಜನಿಕರಿಗೆ ತೊಂದರೆ ಆಗಿದ್ದರ ಬಗ್ಗೆ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಇದರ ಬೆನ್ನಲ್ಲೆ ಮಹತ್ವ ಕೆಎಸ್ಆರ್‌ಟಿಸಿ ನಿಗಮದ ವ್ಯವಸ್ಥಾಪಕರಿಂದ ಮಹತ್ವ ಸಭೆ ನಡೆದಿದೆ.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಸೂಚನೆ ಮೇರೆಗೆ ಮಂಗಳವಾರ KSRTC ನಿಗಮದ ವ್ಯವಸ್ಥಾಪಕ ನಿರ್ದೇಶಕರವರಾದ ವಿ. ಅನ್ಬುಕುಮಾರ್ ಅವರು ನಿಗಮದ ಎಲ್ಲಾ 16 ವಿಭಾಗಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗೀಯ ಸಂಚಾರ ಅಧಿಕಾರಿಗಳು ಹಾಗೂ 83 ಘಟಕ ವ್ಯವಸ್ಥಾಪಕರುಗಳೊಂದಿಗೆ ‘ಶಕ್ತಿ ಯೋಜನೆ’ಗೆ ಸಂಬಂಧಪಟ್ಟಂತೆ ವಿಡಿಯೋ ಸಂವಾದ ನಡೆಸಿದರು.

ಕರ್ನಾಟಕ ಸರ್ಕಾರವು ಜಾರಿಗೊಳಿಸಿರುವ ಮಹತ್ವಾಕಾಂಕ್ಷಿಯ ‘ಶಕ್ತಿ’ ಯೋಜನೆಯನ್ನು ಇನ್ನಷ್ಟು ಸುಗಮವಾಗಿ ನಡೆಯುವಂತಾಗಬೇಕು ಎಂದರು. ಆ ಬಗ್ಗೆ ಈಗಾಗಲೇ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಅನ್ಬುಕುಮಾರ್ ಅವರು ಕೂಲಂಕುಷ ಚರ್ಚೆ ನಡೆಸಿ, ಅಗತ್ಯ ಸೂಚನೆ ನೀಡಿದರು.
ಜನದಟ್ಟಣೆ, ಹಬ್ಬದ ದಿನಗಳನ್ನು ಗುರುತಿಸಿ
ನಿಗಮದ ವಿಭಾಗಗಳ ವ್ಯಾಪ್ತಿಯಲ್ಲಿ ಜನಸಂದಣಿ ಹೆಚ್ಚಿರುವ 10 ಸ್ಥಳಗಳನ್ನು, ವಿಶೇಷ ದಿನಗಳಾದ ಜಾತ್ರೆ/ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ಮುಂಚಿತವಾಗೇ ಆ ದಿನಗಳನ್ನು ಗುರತಿಸಬೇಕು. ಪ್ರಯಾಣಿಕರ ಓಡಾಟ, ಆಯಾ ಪ್ರದೇಶಗಳಲ್ಲಿ ಜನಸಂದಣಿ ಅನುಗುಣವಾಗಿ ಘಟಕಗಳಿಂದ ಹೆಚ್ಚುವರಿ ಬಸ್‌ಗಳನ್ನು ತ್ವರಿತವಾಗಿ ನಿಯೋಜಿಸುವಂತೆ ತಿಳಿಸಿದ್ದಾರೆ. ಈ ಮೂಲಕ ವಿಶೇಷ ದಿನಗಳಲ್ಲಿ ವಿಶೇಷ ವ್ಯವಸ್ಥೆ ಮಾಡಿಕೊಳ್ಳಲು ಸಾರಿಗೆ ಇಲಾಖೆ ಸಜ್ಜಾಗಿದೆ.
ಅದಷ್ಟೇ ಅಲ್ಲದೇ ಟಿಕೆಟ್ ವಿತರಣೆ, ಜನದಟ್ಟಣೆ ಪ್ರದೇಶಗಳನ್ನು ಗುರುತಿಸಿರುವ ಸ್ಥಳಗಳಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಎಲ್ಲ ವಿಭಾಗ, ಘಟಕಗಳ ಮುಖ್ಯಸ್ಥರು ಕ್ರಮ ಕೈಗೊಳ್ಳಬೇಕು ಎಂದು ಅವರು ನಿರ್ದೇಶಿಸಿದರು.
ಮುಂದಿನ ದಿನಗಳಲ್ಲಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಬಗ್ಗೆ ಗೊಂದಲ, ಸಮಸ್ಯೆ ಕೇಳಿಬರದಂತೆ ನೋಡಿಕೊಳ್ಳಿ. ಯಾವುದೇ ಕಾರಣಕ್ಕೂ ಬಸ್ಸುಗಳ ನಿಯೋಜನೆ ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ವಿಳಂಬ, ಕೊರತೆಯಾಗದಂತೆ ವ್ಯವಸ್ಥೆ ಮಾಡಬೇಕು.
ಇನ್ನೂ ನಿಗಮದ ಚಾಲನಾ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿ, ಪ್ರೋತ್ಸಾಹಿಸಬೇಕು. ಕೇಂದ್ರ ಕಛೇರಿಯ ಹಿರಿಯ ಅಧಿಕಾರಿಗಳು/ ಉಸ್ತುವಾರಿ ಅಧಿಕಾರಿಗಳು ಪ್ರತಿ ವಾರ ತಪ್ಪದೇ ವಿಭಾಗಗಳಿಗೆ ಭೇಟಿ ನೀಡಿ ಪರಾಮರ್ಶೆ ನಡೆಸಲು ಸೂಚಿಸಿದರು. ಅದೇ ರೀತಿ ವಿದ್ಯಾರ್ಥಿಗಳಿಗೂ ತೊಂದರೆ ಆಗದಂತೆ ಬಸ್ಸುಗಳ ಹೆಚ್ಚುವರಿ ಟ್ರಿಪ್ ಗಳನ್ನು ಕಾರ್ಯಾಚರಣೆ ಮಾಡುವಂತೆ ಅವರು ಹೇಳಿದರು.
ಯೋಜನೆ ಜಾರಿಗೆ ಮಹಿಳೆಯರು ಸಹಕರಿಸಬೇಕು
ಸಾರ್ವಜನಿಕರು ಸಹ ನಿಗಮದೊಂದಿಗೆ ಕೈಜೋಡಿಸಿ ಶಕ್ತಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಹಕರಿಸಬೇಕು ಎಂದು ಅವರು ಇದೇ ವೇಳೆ ಮಹಿಳೆಯರಲ್ಲಿ ಮನವಿ ಮಾಡಿದರು.
ಜೂನ್ 11ರಂದು ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿಯ ಮಹಿಳೆಯರಿಗೆ ರಾಜ್ಯಾದ್ಯಂತೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡುವ ‘ಶಕ್ತಿ’ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಅಂದಿನಿಂದ ಈವರೆಗೆ ರಾಜ್ಯ ಸಾರಿಗೆ ನಿಗಮದ ನಾಲ್ಕು ಸಂಸ್ಥೆಗಳ ಬಸ್‌ಗಳಲ್ಲಿ ಕೋಟ್ಯಾಂತರ ಮಹಿಳೆಯರು ಸಂಚಾರ ಮಾಡಿದ್ದಾರೆ. ಈ ಯೋಜನೆಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿದೆ.
English summary
Shakti Scheme: Transport official should identify traffic place then provide extra bus and staff, KSRTC MD Anbukumar instructed.
Story first published: Tuesday, June 20, 2023, 19:08 [IST]