India
oi-Ravindra Gangal

ಪಟ್ನಾ, ಜೂನ್ 23: ನಾವು ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದರು. ಈ ವರ್ಷದ ಕೊನೆಯಲ್ಲಿ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ.
ಬಿಹಾರ ರಾಜಧಾನಿ ಪಟ್ನಾದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ಗೆಲ್ಲುತ್ತೇವೆ. ಆ ನಂತರ ಬಿಜೆಪಿ ಎಲ್ಲಿಯೂ ಕಾಣಿಸುವುದಿಲ್ಲ’ ಎಂದು ತಿಳಿಸಿದರು.

‘ಬಡವರ ಜೊತೆ ನಿಲ್ಲುವುದರಿಂದ, ನಾವು ಗೆಲ್ಲುತ್ತೇವೆ. ಬಿಜೆಪಿಯಿಂದ ಎರಡರಿಂದ ಮೂರು ಜನರಿಗೆ ಮಾತ್ರ ಲಾಭವಿದೆ’ ಎಂದು ಹರಿಹಾಯ್ದರು.
‘ದ್ವೇಷ, ಹಿಂಸಾಚಾರವನ್ನು ಹರಡಿ ದೇಶ ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನಾವು ಪ್ರೀತಿಯನ್ನು ಹರಡಲು ಮತ್ತು ಒಗ್ಗೂಡಿಸಲು ಕೆಲಸ ಮಾಡುತ್ತಿದ್ದೇವೆ. ವಿರೋಧ ಪಕ್ಷಗಳು ಇಂದು ಇಲ್ಲಿಗೆ ಬಂದಿವೆ. ಒಟ್ಟಾಗಿ ನಾವು ಬಿಜೆಪಿಯನ್ನು ಸೋಲಿಸುತ್ತೇವೆ’ ಎಂದು ಹೇಳಿದರು.
ಭಾರತದಲ್ಲಿ ಸೈದ್ದಾಂತಿಕ ಯುದ್ಧ ನಡೆಯುತ್ತಿದೆ. ಒಂದು ಕಡೆ ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ’ ಸಿದ್ಧಾಂತ ಮತ್ತು ಇನ್ನೊಂದು ಆರೆಸ್ಸೆಸ್ ಮತ್ತು ಬಿಜೆಪಿಯ ‘ಭಾರತ್ ತೋಡೋ’ ಸಿದ್ಧಾಂತವಿದೆ’ ಎಂದು ಹರಿಹಾಯ್ದರು.

ಪಟ್ನಾದಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆ
2024ರ ಲೋಕಸಭೆ ಚುನಾವಣೆಗೆ ರಣತಂತ್ರ ರೂಪಿಸಲು ಪ್ರತಿಪಕ್ಷಗಳ ನಾಯಕರು ಪಾಟ್ನಾದಲ್ಲಿ ಸಭೆ ಸೇರಿದ್ದಾರೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಎದುರಿಸಲು ಈ ಸಭೆಯನ್ನು ಆಯೋಜಿಸಿದ್ದಾರೆ.
ಇದರಲ್ಲಿ ಬಿಜೆಪಿಯೇತರ ಪಕ್ಷಗಳು, ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳು ಭಾಗವಹಿಸಿವೆ. ಬಿಹಾರದ ರಾಜಧಾನಿಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಬೆಳಗ್ಗೆ 11.30ಕ್ಕೆ ಸಭೆ ಆರಂಭವಾಗಲಿದೆ.
ಬಿಜೆಪಿ ವಿರುದ್ಧ ವಿಪಕ್ಷಗಳ ರಣಕಹಳೆ: ಬಿಹಾರ ರಾಜಧಾನಿ ತಲುಪಿದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ!
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಮತ್ತು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಸೇರಿದ್ದಾರೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಬಿಎಸ್ಪಿ ವರಿಷ್ಠೆ ಮಾಯಾವತಿ ಅವರು ಸಭೆಯಲ್ಲಿ ಗೈರುಹಾಜರಾಗಿರುವುದು ಎದ್ದುಕಾಣುತ್ತಿದೆ. ಪಟ್ನಾಯಕ್ ಮತ್ತು ಕೆಸಿಆರ್ ಅವರು ಸಭೆಗೆ ಹಾಜರಾಗದಿರಲು ನಿರ್ಧರಿಸಿದರು. ಮಾಯಾವತಿ ಅವರನ್ನು ಸಭೆಗೆ ಆಹ್ವಾನಿಸಿಲ್ಲ. 2024ರಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಇಚ್ಛಿಸುವ ಪಕ್ಷಗಳಿಗೆ ನಾವು ಆಹ್ವಾನ ನೀಡಿದ್ದೇವೆ ಎಂದು ಜೆಡಿಯು ಮುಖ್ಯ ವಕ್ತಾರ ಕೆ ಸಿ ತ್ಯಾಗಿ ಹೇಳಿದ್ದಾರೆ.
English summary
Opposition Patna meet LIVE Updates: Congress leader Rahul Gandhi said that we will win in Telangana, Madhya Pradesh, Chhattisgarh and Rajasthan