Karnataka
oi-Naveen Kumar N

ತಡವಾಗಿ ಮುಂಗಾರು ಚುರುಕುಗೊಂಡು ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತದೆ ಎಂದು ನಿರೀಕ್ಷೆ ಮಾಡುವಾಗಲೇ ಮುಂಗಾರು ಮತ್ತೆ ದುರ್ಬಲಗೊಂಡಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಉಳಿದ ಜಿಲ್ಲೆಗಳಲ್ಲಿ ಮುಂಗಾರು ದುರ್ಬಲಗೊಂಡಿರುವ ಕಾರಣ ಮುಂದಿನ 4-5 ದಿನಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ಹೇಳಿದೆ.

ಈಗಾಗಲೇ ರಾಜ್ಯದಲ್ಲಿ ಮುಂಗಾರು ಕೊರತೆಯಾಗಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದವರಿಗೆ ಕಹಿ ಸುದ್ದಿ ಸಿಕ್ಕಿದೆ. ಆದರೆ, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಕಡಿಮೆಯಾದ ಮಳೆ
ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಹಲವು ದಿನಗಳ ಕಾಲ ಉತ್ತಮ ಮಳೆಯಾದ ಬಳಿಕ ಮತ್ತೆ ಮಳೆ ಕಡಿಮೆಯಾಗಿದೆ. ಕೋಲಾರ, ಬೆಂಗಳೂರು, ಮೈಸೂರು, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳ ಹಲವು ಕಡೆಗಳಲ್ಲಿ ಕಳೆದ ವಾರ ಉತ್ತಮ ಮಳೆಯಾಗಿತ್ತು. ಆದರೆ, ಅದು ಕೇವಲ ಒಂದೆರಡು ದಿನಕ್ಕೆ ಮಾತ್ರ ಸೀಮಿತವಾಗಿದ್ದು, ಮತ್ತೆ ರೈತ ಆಕಾಶವನ್ನು ನೋಡುವಂತಾಗಿದೆ.
ಜೂನ್‌ನಲ್ಲಿ ವಾಡಿಕೆಗಿಂತ 61 ಪ್ರತಿಶತ ಮಳೆ ಕೊರತೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜುಲೈ ತಿಂಗಳಿನಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಉತ್ತರ ಭಾರತದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರೆ, ರಾಜ್ಯದಲ್ಲಿ ಮಾತ್ರ ಕುಡಿಯುವ ನೀರಿಗೂ ಸಮಸ್ಯೆಯಾಗುವಂತ ಸ್ಥಿತಿ ಇದೆ.
ಉತ್ತರ ಒಳನಾಡಿನಲ್ಲಿ ಬರದ ಛಾಯೆ!
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬರದ ಭಯ ಆವರಿಸಿದೆ. ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದೆ. ರಾಜ್ಯದ ಬಹುತೇಕ ಜಲಾಶಯಗಳು ಖಾಲಿಯಾಗಿದ್ದು, ಕೃಷಿಗೆ ಇರಲಿ ಕುಡಿಯುವ ನೀರಿಗೂ ಮುಂದೇನು ಎನ್ನುವ ಪ್ರಶ್ನೆ ಕಾಡುತ್ತಿದೆ.
ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಳ್ಳುವ ಸೂಚನೆ ನೀಡಿತ್ತಾದರೂ, ಮಳೆ ಕೈಕೊಟ್ಟಿದೆ.
ಜೂನ್ 26ರಿಂದ ಜೂನ್ 27ರವರೆಗೆ 24 ಗಂಟೆಗಳ ಅವಧಿಯಲ್ಲಿ ಉಡುಪಿಯ ಕಡೆಕಾರು ಪ್ರದೇಶದಲ್ಲಿ 45.5 ಮಿಮೀ ಮಳೆಯಾಗಿರುವುದು ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬಿದ್ದ ಅಧಿಕ ಮಳ ಎನಿಸಿಕೊಂಡಿದೆ.
ಬೆಂಗಳೂರಿನಲ್ಲೂ ಮಳೆ ಪ್ರಮಾಣ ಕಡಿಮೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಮಳೆಯ ಪ್ರಮಾಣ ಕಡಿಮೆಯಾಗಿದೆ. ಭಾನುವಾರ ರಾತ್ರಿ ನಗರದ ಹಲವು ಪ್ರದೇಶಗಳಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸಾಧಾರಣ ಮಳೆಯಾಗಿತ್ತು. ಸೋಮವಾರ ನಗರದಲ್ಲಿ ಕೆಲವು ಕಡೆ ಮಾತ್ರ ಸಾಧಾರಣ ಮಳೆಯಾಗಿದೆ. ಇನ್ನು ಬುಧವಾರ ಒಣಹವೆ ಇದ್ದು ಸಂಜೆ ವೇಳೆಗೆ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
English summary
Coastal Karnataka to experience widespread rain, heavy rainfall expected in some areas. Malnad districts to have scattered to widespread light to moderate rain, with isolated heavy rainfall.
Story first published: Tuesday, June 27, 2023, 12:41 [IST]