Astrology
oi-Shivakumar Muradimath

ಜುಲೈ ಮಾಸದಲ್ಲಿ ಗ್ರಹಗಳ ಸ್ಥಾನ ಪಲ್ಲಟನೆಯಿಂದ ಯಾವ ರಾಶಿಗಳ ಮೇಲೆ ಉತ್ತಮ ಪರಿಣಾಮ ಬೀರಲಿದೆ ಮತ್ತು ಯಾವ ರಾಶಿಯ ಜನರು ಸಂಕಷ್ಟ ಎದುರಿಸಲಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ. ಜುಲೈ ಮಾಸಿಕ ಭವಿಷ್ಯದ ಅನ್ವಯ ನಿಮ್ಮ ರಾಶಿಯಲ್ಲಿ ವೃತ್ತಿ ಜೀವನ, ಕೌಟುಂಬಿಕ ಜೀವನ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಿಲಿದೆ ಎಂಬುದನ್ನು ತಿಳಿದುಕೊಳ್ಳಿರಿ.
ಶೋಭಾಕೃತ ನಾಮ ಸಂವತ್ಸರದ ಗ್ರೀಷ್ಮ ಋತು ಆಷಾಢಮಾಸದ ಶುದ್ಧತ್ರೋದಶಿಯಿಂದ ಅಧಿಕ ಶ್ರಾವಣ ಶುದ್ಧ ಚತುರ್ದಶಿಯ ವರೆಗೆ. ಜುಲೈ 2023 ರ ಮಾಸಭವಿಷ್ಯ. ದಿ. 17.07.23 ದಕ್ಷಿಣಾಯನ ಪ್ರಾರಂಭ. ಸೂರ್ಯನ ಕಟಕರಾಶಿ ಪ್ರವೇಶ ತಾ 07.07.23. ಸಿಂಹ ರಾಶಿಗೆ ಶುಕ್ರನ ಪ್ರವೇಶ. ಚಂದ್ರನು ಜುಲೈ ತಿಂಗಳ ಪೂರ್ತಿ ಅನೂರಾಧ ನಕ್ಷತ್ರದಿಂದ ಪೂರ್ವಾಷಾಢ ನಕ್ಷತ್ರದ ವರೆಗೆ ಸಂಚರಿಸುತ್ತಾನೆ.

ಮೇಷರಾಶಿ:
ಸೂರ್ಯ ಮೂರನೇ ಮನೆಯಲ್ಲಿ ಇರುವವರೆಗೂ ಧನ ಲಾಭವಾಗಲಿದೆ. ಸರ್ಕಾರದ ಕಂಟ್ರಾಕ್ಟ್ ಗಳು ಸಿಗುವುದು ಟೆಂಡರ್ ಪಾಸ್ ಆಗುವುದು ಮೊದಲಾದ ಕೆಲಸಗಳು ಸುಸೂತ್ರವಾಗಿ ನಡೆಯುತ್ತವೆ. ಮೂರನೇ ಮನೆಯಲ್ಲಿ ಬುಧ ಇರುವುದು ಕೊಂಚ ಮನೋ ಚಿಂತನೆಗೆ ಕಾರಣವಾಗುತ್ತದೆ. ಮನಸ್ಸು ವ್ಯಾಕುಲಗೊಳ್ಳುತ್ತದೆ. ಯಾರೊಂದಿಗೂ ಮನಸ್ಸು ಕೆಡಿಸಿಕೊಳ್ಳಬೇಡಿ. ಐದನೇ ಮನೆಗೆ ಬುಧ ಶುಕ್ರ ಬಂದಾಗ ನಿಮಗೆ ಕೊಂಚ ಸಮಾಧಾನ ನೀಡುತ್ತದೆ. ಹನ್ನೊಂದರ ಶನಿ ನಿಮಗೆ ಕಾರ್ಯ ಸಫಲತೆಯನ್ನು ಕೊಡುತ್ತಾನೆ. ಹಣದ ಹರಿವನ್ನು ಉತ್ತಮ ಪಡಿಸುತ್ತಾನೆ. ಯಾವುದೇ ವ್ಯಾಜ್ಯಗಳನ್ನು ನಿಮ್ಮ ಪರವಾಗಿ ಆಗುವಂತೆ ಮಾಡುತ್ತಾನೆ. 9 ರಂದು ಬುಧ ನಾಲ್ಕನೇ ಮನೆ ಅಂದರೆ ಕಟಕ ರಾಶಿಗೆ ಪ್ರವೇಶವಾದಾಗ ಮನಸ್ಸಿಗೆ ಹಿತ ಕೊಡುವ ಸಂಗತಿಗಳು ನಡೆಯುತ್ತದೆ. ಗುರುಗಳ ದರ್ಶನ ಭಾಗ್ಯವಿದೆ. ನಿಮ್ಮ ರಾಶಿಯಲ್ಲೇ ಗುರು-ರಾಹು ಇರುವುದು ಕೊಂಚ ಖರ್ಚುಗಳನ್ನು ಮಾಡಿಸುವುದರಿಂದ ಜಾಗ್ರತೆ ವಹಿಸುವುದು ಸೂಕ್ತ.

ವೃಷಭರಾಶಿ:
12ರ ಮನೆಯಲ್ಲಿರುವ ಗುರು ಖರ್ಚುಗಳನ್ನು ಹೆಚ್ಚಿಸುತ್ತಾನೆ. ಎರಡನೇ ಮನೆಯ ಸೂರ್ಯ ಹಾಗೂ ಬುಧ ಸಹ ಉಪಕಾರಿಯಾಗಿಲ್ಲ.ಆದರೆ 17ರ ನಂತರ ಸೂರ್ಯ ಮೂರನೇ ಮನೆ ಪ್ರವೇಶವಾದಾಗ ನಿಮಗೆ ಸೂರ್ಯನ ಬೆಂಬಲ ಸಿಗುತ್ತದೆ. ಧೈರ್ಯ ಮತ್ತು ಶೌರ್ಯದಿಂದ ಯಾವ ಕೆಲಸ ಮಾಡಿದರೂ ನಿಮಗೆ ಜಯ ಸಿಗುತ್ತದೆ. ಸೂರ್ಯ ನಿಮ್ಮ ಶಕ್ತಿಯನ್ನು ಆತ್ಮಬಲವನ್ನೂ ಹೆಚ್ಚಿಸುತ್ತಾನೆ. ಧನಲಾಭವನ್ನೂ ಕೊಡುತ್ತಾನೆ. 17ರ ನಂತರ ನೀವು ಯಾವುದಾದರೂ ನಿರ್ಧಾರ ತೆಗೆದುಕೊಂಡರೆ ನಿಮಗೆ ಯಶಸ್ಸು ಖಂಡಿತ. ನಾಲ್ಕನೇ ಮನೆಗೆ ಶುಕ್ರ ಬಂದಾಗ ಬಂಧುಗಳಿಂದ ಉಪಕಾರ ಬೆಂಬಲ ದೊರೆಯುತ್ತದೆ. ಬಂಧುಜನರೊಡನೆ ಸಂತೋಷದಿಂದ ಕಾಲಕಳೆಯುವ ಯೋಗ ಇದೆ. ವಾಹನದಿಂದ ಲಾಭವಿದ್ದು, ಹೊಸ ವಾಹನ ಖರೀದಿಸುವ ಯೋಗ ಇದೆ. ಆರನೇ ಮನೆಯಲ್ಲಿ ಕೇತು ಕೂಡ ನಿಮಗೆ ಸಹಾಯ ಬೆಂಬಲ ನೀಡುತ್ತಾನೆ. ಸೂರ್ಯ ಹಾಗೂ ಕೇತು ನಿಮಗೆ ಹಣದ ಹರಿವನ್ನು ಕೊಂಚಮಟ್ಟಿಗೆ ಉತ್ತಮ ಪಡಿಸುತ್ತಾರೆ. ಮಾನಸಿಕ ಚಿಂತೆ ಕಾಡುತ್ತದೆ. ಕಳೆದುಹೋದ ಯಾವುದೋ ನೆನಪುಗಳು ಮತ್ತೆ ಮೇಲಕ್ಕೆದ್ದು ನಿಮ್ಮ ಮನಸ್ಸನ್ನು ಚಂಚಲ ಗೊಳಿಸುತ್ತದೆ. ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಕಳೆದುಹೋದದ್ದರ ಬಗ್ಗೆ ಚಿಂತಿಸಬೇಡಿ. ಮುಂದೆ ನಿಮಗೆ ಒಳ್ಳೆಯ ದಿನಗಳು ಇದೆ.

ಮಿಥುನ ರಾಶಿ:
ಲಾಭ ಸ್ಥಾನದಲ್ಲಿ ಗುರು-ರಾಹು ಇರುವುದು ಬಹಳ ಅದೃಷ್ಟ ಕೊಡುತ್ತಿದೆ. ಕೆಲಸದಲ್ಲಿ ಧನಲಾಭ ಇದೆ. ಹಣದ ಹರಿವು ಉತ್ತಮವಾಗಿದೆ. ಕೆಲಸಗಳು ನಿಮ್ಮ ಊಹೆಗಿಂತ ವೇಗವಾಗಿ ನಡೆಯುತ್ತದೆ. ನಿಮ್ಮ ಮನಸ್ಸಿನಲ್ಲಿ ಕಾರ್ಯ ಸಫಲತೆಯ ತೃಪ್ತಿ ದೊರೆಯುತ್ತದೆ. ನಿಮ್ಮ ರಾಶಿಯಲ್ಲೇ ಇರುವ ಬುಧನಿಂದ ಪ್ರಯಾಣ ಯೋಗ ಇದೆ. ವಿದೇಶ ಪ್ರಯಾಣವೂ ಆಗಬಹುದು. ವಿಹಾರ ಹೋಗುವ ಯೋಗವೂ ಇದೆ. ಜು.17ರಂದು ಸೂರ್ಯನ ಎರಡನೇ ಮನೆ ಪ್ರವೇಶದಿಂದ ಕುಟುಂಬದಲ್ಲಿ ಕೊಂಚ ಏರುಪೇರು ಕಾಣಬಹುದು. ಸಂಗಾತಿಯೊಡನೆ ಕೊಂಚ ಘರ್ಷಣೆ ಆಗಬಹುದು. ಚಿಂತೆ ಪಡಬೇಕಿಲ್ಲ ಗುರುಬಲ ಇರುವುದರಿಂದ ಯಾವುದೇ ವಿಕೋಪಕ್ಕೆ ಹೋಗುವುದಿಲ್ಲ. ಪರಿಸ್ಥಿತಿ ಶಾಂತವಾಗುತ್ತದೆ. ಮೂರನೇ ಮನೆಗೆ ಕುಜನ ಪ್ರವೇಶವಾದಾಗ ನಿಮಗೆ ಭೂಮಿಯಿಂದ ಲಾಭ ಇದೆ. ಭೂಮಿ ಆಸ್ತಿ ಕೊಳ್ಳುವ ಯೋಗವೂ ಇದೆ. ಗುರುಬಲದ ಜೊತೆಗೆ ಕುಜನ ಬಲವೂ ಸೇರಿ ನಿಮಗೆ ಅಧಿಕಲಾಭ ಸಿಗುವಂತಾಗುತ್ತದೆ. ಶುಕ್ರನೂ ಮೂರನೇ ಮನೆಯಲ್ಲಿ ಇರುವುದರಿಂದ ಶುಭಫಲಗಳು ಖಂಡಿತಾ ಇದೆ. ನಿಮಗೆ ನಿಮ್ಮ ಸೌಖ್ಯಕ್ಕೆ ಬೇಕಾಗುವ ಪದಾರ್ಥಗಳನ್ನು ಕೊಳ್ಳುವ ಯೋಗ ಇದೆ.

ಕಟಕ ರಾಶಿ:
ನಿಮಗೆ ಈಗ ಅಷ್ಟಮ ಶನಿಯ ಕಾಲ. ಇದು ನಿಮಗೆ ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ಡಿರುತ್ತದೆ. ಈಗಾಗಲೇ ನಿಮಗೆ ಅನುಭವಕ್ಕೆ ಬಂದಿರಬಹುದು. ಬಂಧು ಜನರು ಕೇವಲವಾಗಿ ಮಾತನಾಡುವುದು, ಹಣಕಾಸಿನ ಒತ್ತಡ, ಮನೆಯಲ್ಲಿ ಬಿಗುವಿನ ವಾತಾವರಣ, ವಿದ್ಯಾರ್ಥಿಗಳಿಗೆ ಹಿನ್ನಡೆ, ವೃತ್ತಿಯಲ್ಲಿ ಒತ್ತಡ, ಮೇಲಾಧಿಕಾರಿಗಳ ಕೋಪ ಯಾವುದೇ ಕೆಲಸ ಕಾರ್ಯದಲ್ಲಿ ಹೇಳತೀರದ ವಿಳಂಬ ಇಂಥವೆಲ್ಲ ಅನುಭವಿಸುತ್ತಲೇ ಇದ್ದೀರಿ. ಈಗ ನೀವು ನಿಮ್ಮ ಕೆಲಸ ನಿಷ್ಠೆಯಿಂದ ಪ್ರಾಮಾಣಿಕತೆಯಿಂದ ಮಾಡಿ. ಫಲಾ ಫಲಗಳನ್ನು ದೇವರಿಗೆ ಬಿಡಿ. 12ನೇ ಮನೆಯಲ್ಲಿ ಸೂರ್ಯ-ಬುಧ ಕೂಡ ನಿಮಗೆ ಅನುಕೂಲಕರವಾಗಿಲ್ಲ. ಖರ್ಚುಗಳು, ಬ್ಯಾಂಕ್ ಸಾಲ ಮೊದಲಾದವು ಇದ್ದರೆ ತೀರಿಸಬೇಕೆಂಬ ಒತ್ತಡ ಇರುತ್ತದೆ. ಸಂಗಾತಿಯೊಡನೆ ಘರ್ಷಣೆ ಇರುತ್ತದೆ. ತಂದೆ ತಾಯಿಯರ ಆರೋಗ್ಯ ಕೈಕೊಡಬಹುದು. ಜಾಗ್ರತೆಯಿಂದ ಇರಿ. ಎರಡನೇ ಮನೆಗೆ ಶುಕ್ರ ಬಂದಾಗ ನಿಮಗೆ ಕೊಂಚ ಉಪಯೋಗ ಇದೆ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಹಾಕಬೇಕು. ಏಕಾಗ್ರತೆ ಸಾಧಿಸಬೇಕು. ಮನಸ್ಸು ಚಂಚಲವಾಗುತ್ತದೆ. ನೀವು ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಹನುಮಾನ್ ಚಾಲೀಸಾ ಹೇಳಿಕೊಳ್ಳಿ.

ಸಿಂಹ ರಾಶಿ:
ಈಗ ನಿಮಗೆ ಗುರುಬಲ ಇರುವುದರಿಂದ ಯಾವುದಕ್ಕೂ ಯೋಚನೆ ಮಾಡಬೇಕಿಲ್ಲ. ಆದರೆ ಒಂಬತ್ತನೇ ಮನೆಯಲ್ಲಿ ಗುರುವಿನ ಜೊತೆ ರಾಹು ಕೂಡ ಇರುವುದರಿಂದ ಗುರುವಿನ ಅನುಗ್ರಹ ಸಂಪೂರ್ಣವಾಗಿ ಇರುವುದಿಲ್ಲ. ರಾಹು ಮೀನ ರಾಶಿಗೆ ಪ್ರವೇಶಿಸಿದಾಗ ನಿಮಗೆ ಒಳ್ಳೆಯ ಫಲಗಳು ಗುರುವಿನಿಂದ ದೊರೆಯುತ್ತದೆ. ಈಗ ಗುರು ಕೊಂಚ ಬಲಹೀನ ಹಾಗಾಗಿ ನೀವು ಗುರುವಿನ ಅನುಗ್ರಹಕ್ಕಾಗಿ ಗೋಪೂಜೆ, ಸಾಧುಸಂತರ ದರ್ಶನ ಆಶಿರ್ವಾದ ಪಡೆಯುವುದು, ಗುರುಗಳಿಗೆ ಕಾಣಿಕೆ ತಲುಪಿಸುವುದು, ನಿಮ್ಮ ಗುರುಪೀಠಕ್ಕೆ ಹೋಗಿ ಬರುವುದು ಮಾಡಿದರೆ ಗುರುವಿನ ಅನುಗ್ರಹ ದೊರೆತು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಬಿಳಿ ಹಸುವಿಗೆ ಮೇವು , ನೆನಸಿದ ಕಡಲೆ, ಅಕ್ಕಿ,ಬೆಲ್ಲ ಹಸುವಿಗೆ ನೀಡಬೇಕು. ಶನಿ ಏಳನೇ ಮನೆಯಲ್ಲಿ ಇರುವುದು ಸಹ ನಿಮಗೆ ಅಷ್ಟು ಲಾಭದಾಯಕವಲ್ಲ. ಯಾವುದಾದರೂ ಹೂಡಿಕೆಯಲ್ಲಿ ಹಣ ತೊಡಗಿಸಬೇಕಾದರೆ ಜಾಗ್ರತೆ ವಹಿಸಿ. ದೊಡ್ಡ ಮೊತ್ತದ ಹಣ ಹೂಡಿಕೆ ಮಾಡುವುದರಿಂದ ನಷ್ಟವಾಗಲಿದೆ. ಸ್ವಲ್ಪ ಮೊತ್ತದ ಹಣ ಹೂಡಿಕೆ ಮಾಡಿ ಪರೀಕ್ಷಿಸಿ ನಂತರ ತೀರ್ಮಾನಿಸಿ. ಈಗ 17ನೇ ತಾರೀಖಿನ ವರೆಗೂ ಸೂರ್ಯ 11ನೇ ಮನೆಯಲ್ಲಿ ಇರುತ್ತಾನೆ. ಅಲ್ಲಿಯವರೆಗೂ ನಿಮಗೆ ವೃತ್ತಿಯಲ್ಲಿ ವ್ಯಾಪಾರದಲ್ಲಿ ಯಶಸ್ಸು ಇದೆ. 17ರ ನಂತರ ಕೊಂಚ ತೊಂದರೆ ಉಂಟಾಗಬಹುದು.

ಕನ್ಯಾರಾಶಿ:
ಗುರು ಮತ್ತು ರಾಹು ಅಷ್ಠಮದಲ್ಲಿ ಇರುವುದು ಅಷ್ಟು ಶುಭವಲ್ಲ ಆದರೆ ಶನಿ ಆರನೇ ಮನೆಯಲ್ಲಿ ಇರುವುದು ನಿಮಗೆ ಲಾಭವನ್ನು ಕೊಡುತ್ತದೆ. ಶನಿ ಆರನೇ ಮನೆಯಲ್ಲಿ ಕಾರ್ಯ ಸಫಲತೆ ಹಾಗೂ ಧನ ಲಾಭವನ್ನು ಕೊಡುತ್ತಾನೆ. 17ರ ನಂತರ ಸೂರ್ಯ ಹನ್ನೊಂದನೇ ಮನೆಗೆ ಪ್ರವೇಶಿಸಿದಾಗ ನಿಮಗೆ ಇನ್ನೂ ಹೆಚ್ಚಿನ ಲಾಭವಾಗಲಿದೆ. ಸರ್ಕಾರದಿಂದ ಲಾಭ ಇದೆ. ಸರ್ಕಾರದ ಕೆಲಸಗಳು ಸಲೀಸಾಗಿ ಆಗುತ್ತವೆ. ಬ್ಯಾಂಕ್ ಲೋನ್ ಬೇಕಾಗಿದ್ದರೆ ಈಗ ಪ್ರಯತ್ನ ಮಾಡಬಹುದು. ನಿಮ್ಮ ರಾಶಿಯ ಅಧಿಪತಿ ಬುಧ 9ನೇ ತಾರೀಖು ಹನ್ನೊಂದನೇ ಮನೆಗೆ ಅಂದರೆ ಕಟಕ ರಾಶಿಗೆ ಪ್ರವೇಶಿಸಿದಾಗ ನಿಮಗೆ ಸರ್ವವಿಧದಲ್ಲಿ ಒಳ್ಳೆಯದಾಗುತ್ತದೆ. ಸಜ್ಜನರ ವಿದ್ವಾಂಸರ ಸಂಗ ದೊರೆಯುತ್ತದೆ. ಗುರುಗಳ ಮತ್ತು ಮನೆ ದೇವರ ಆಶಿರ್ವಾದ ದೊರೆಯುತ್ತದೆ. ಮನೆ ದೇವರ ದರ್ಶನ ಭಾಗ್ಯ ಲಭಿಸಬಹುದು. ಯಾವುದೋ ಒಂದು ಬಹಳ ದಿನಗಳಿಂದ ಪ್ರಯತ್ನ ಮಾಡುತ್ತಿರುವ ಕೆಲಸ ಈಗ ಕೈಗೂಡುತ್ತದೆ. ಶೇರುಗಳಲ್ಲಿ ಹಣ ಹೂಡಿರುವವರಿಗೆ ಒಳ್ಳೆಯ ಲಾಭ ಇದೆ. ನಿಮಗೆ ನಿಮ್ಮ ಗುರಿ ನಿಚ್ಚಳವಾಗಿ ಕಾಣುತ್ತದೆ. ನೀವು ಬಹಳ ಮಾತಾಡುವ ಪ್ರಕೃತಿಯವರು. ಮಾತು ನಿಮಗೆ ಲಾಭವನ್ನೂ ತಂದುಕೊಡುತ್ತದೆ. ಹಾಗೆಯೇ ಕೆಡುಕನ್ನೂ ಉಂಟುಮಾಡುತ್ತದೆ. ಹಾಗಾಗಿ ಮಾತನಾಡುವಾಗ ಯೋಚಿಸಿ ಮಾತನಾಡಿ.

ತುಲಾ ರಾಶಿ:
ನಿಮಗೆ ಪಂಚಮ ಶನಿಯ ಪ್ರಭಾವ ನಡೆಯುತ್ತಿದ್ದರೂ ಈಗ ಗುರುಬಲ ಇದೆ. ಗುರು ನೇರವಾಗಿ ನಿಮ್ಮ ರಾಶಿಯನ್ನು ನೋಡುತ್ತಾನೆ. ಇದು ನಿಮಗೆ ಸಾಕಷ್ಟು ಅನುಕೂಲ ಕೊಡುತ್ತದೆ. ರಾಹು ಕೂಡ ನಿಮ್ಮ ರಾಶಿಯನ್ನು ನೋಡುತ್ತಾನೆ. ರಾಹು ನೋಡುವುದರಿಂದ ತೊಂದರೆ ಇಲ್ಲ. ಏಕೆಂದರೆ ರಾಹು ತುಲಾರಾಶಿಗೆ ಮಿತ್ರ. ಪಂಚಮ ಶನಿ ನಿಮಗೆ ಕೊಂಚ ಒತ್ತಡಗಳನ್ನು ಕೊಡುತ್ತದೆ. ಹಣಕಾಸಿಗೆ ತೊಂದರೆ ಉಂಟಾಗುತ್ತದೆ. ಆದರೆ ಗುರುವಿನ ಅನುಗ್ರಹದಿಂದ ಸಮಸ್ಯೆಗಳು ಹಗುರವಾಗಿ ನಿಮಗೆ ನೆಮ್ಮದಿ ತಂದುಕೊಡುತ್ತದೆ. ರಾಹು ಮೀನರಾಶಿಗೆ ಪ್ರವೇಶಿಸಿದಾಗ ನಿಮಗೆ ಇನ್ನೂ ಹೆಚ್ಚಿನ ಅನುಕೂಲಗಳು ಉಂಟಾಗುತ್ತದೆ. ಈಗ ಒಂಬತ್ತರಲ್ಲಿ ಸೂರ್ಯ ಹನ್ನೊಂದರಲ್ಲಿ ಕುಜ-ಶುಕ್ರ ಇದ್ದಾರೆ. ಹನ್ನೊಂದ ಶುಕ್ರ ನಿಮಗೆ ವರ್ಚಸ್ಸನ್ನು ತಂದುಕೊಡುತ್ತಾನೆ. 9ರ ನಂತರ ಬುಧ ಹತ್ತನೇ ಮನೆಗೆ ಪ್ರವೇಶವಾಗುವುದರಿಂದ ಕೊಂಚ ಧನಲಾಭ ಇದೆ. ಆಸ್ತಿ ಕೊಳ್ಳುವುದಿದ್ದರೆ ಈಗ ಒಳ್ಳೆಯ ಸಮಯ. ಭೂಮಿ ವ್ಯವಹಾರದಲ್ಲೂ ಲಾಭ ಇದೆ. ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಈಗ ಒಳ್ಳೆಯ ವ್ಯಾಪಾರ ವ್ಯವಹಾರ ನಡೆಯುವ ಸಮಯ. ದುರ್ಗಾ ಅಷ್ಟೋತ್ತರ ಜಪಿಸಿ.

ವೃಶ್ಚಿಕ ರಾಶಿ:
ಈಗ ನಿಮಗೆ ಗುರುಬಲ ಹಾಗೂ ಶನಿಬಲ ಇಲ್ಲ. ರಾಹುಬಲ ಮಾತ್ರವೇ ಇದೆ. ಹೀಗಾಗಿ ಯಾವುದೇ ಕೆಲಸಗಳನ್ನು ಯೋಚಿಸಿ ಮಾಡಿಬೇಕು. ಹತ್ತನೇ ಮನೆಯಲ್ಲಿ ಕುಜ-ಶುಕ್ರ ಇರುವುದು ನಿಮ್ಮ ವೃತ್ತಿಗೆ ಯಶಸ್ಸು ತಂದುಕೊಡುತ್ತದೆ. ಯಾವುದರಲ್ಲೂ ಹಣ ಹೂಡಿಕೆ ಮಾಡಬೇಡಿ. ಸಾಲ ಕೊಡಬೇಡಿ. ಸಾಲ ಇದ್ದರೆ ಅದನ್ನು ಮರುಪಾವತಿ ಮಾಡಲು ಈಗ ಕಷ್ಟವಾಗುತ್ತದೆ. ಲಾಭದ ದಿನಗಳಿಗೆ ನೀವು ಕಾಯಬೇಕು. ದೈನಂದಿನ ಜೀವನದ ಭಯವಿಲ್ಲ. ವಿಶೇಷ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತದೆ. ಶನಿ ನಾಲ್ಕನೇ ಮನೆಯಲ್ಲಿ ಇರುವುದರಿಂದ ವಾಹನದಿಂದ ನಷ್ಟವಾಗುವ ಸಾಧ್ಯತೆಯಿದೆ. ವಾಹನ ಉದ್ದಿಮೆದಾರರಿಗೂ ಈಗ ನಷ್ಟದ ಭಯ ಇದೆ. ವ್ಯಾಪಾರ ವ್ಯವಹಾರ ಮಂದಗತಿಯಲ್ಲಿ ನಡೆಯುತ್ತದೆ. ನರಸಿಂಹ ಅಷ್ಟೋತ್ತರ ಪಠಿಸಿ. ಈ ರಾಶಿಯ ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ನಿರೀಕ್ಷೆ ಮಾಡಿದಷ್ಟು ಲಾಭ ದೊರೆಯುವುದಿಲ್ಲ. ರಾಜಕಾರಣಿಗಳಿಗೂ ಈಗ ಒತ್ತಡದ ಸಮಯ. ಅಧಿಕಾರ ಬರುವುದೋ ಬಾರದೋ ಬಂದ ಅಧಿಕಾರ ಉಳಿಯುವುದೋ ಇಲ್ಲವೋ ಎಂಬ ಸಂಕಷ್ಟದಲ್ಲಿರುತ್ತಿರಿ. ದುರ್ಗಾ ಪರಮೇಶ್ವರಿಯನ್ನು ಆರಾಧಿಸಿ. ಅನುಕೂಲವಿದ್ದರೆ ದುರ್ಗಾ ಹೋಮ ಮಾಡಿಸಿ. ತಿಂಗಳ ಮೊದಲು ಸೂರ್ಯ ಎಂಟನೇ ಮನೆಯಲ್ಲಿ ಇರುತ್ತಾನೆ. ಆಗ ನಿಮಗೆ ಒತ್ತಡ ಹೆಚ್ಚಳವಾಗಲಿದೆ. ಎಲ್ಲ ಕೆಲಸಗಳನ್ನು ಶಾಂತ ರೀತಿಯಿಂದ ನಿಭಾಯಿಸಿ. ವೃತ್ತಿಯಲ್ಲಿ ಅಭಿವೃದ್ಧಿ ಇದೆ.

ಧನಸ್ಸು ರಾಶಿ:
ಬೇರೆ ಎಲ್ಲಾ ರಾಶಿಯವರಿಗಿಂತ ಅತ್ಯುತ್ತಮ ಫಲಗಳು ನಿಮಗೆ ಸಿಗುತ್ತವೆ. ಗುರುಬಲ ಮತ್ತು ಶನಿಬಲ ಎರಡೂ ಇರುವುದು ಬಹಳ ಲಾಭದಾಯಕವಾಗಿದೆ. ನೀವು ಅಂದುಕೊಂಡ ಕೆಲಸಗಳು ಶೀಘ್ರವಾಗಿ ನೆರವೇರುತ್ತದೆ. ಪ್ರತಿ ಹಂತದಲ್ಲೂ ಈಗ ನಿಮಗೆ ನಿಮ್ಮ ಮನಸ್ಸಿಗೆ ಸಂತೋಷ ನೀಡುವ ಘಟನೆಗಳು ಸಂಭವಿಸುತ್ತವೆ. ಆಸ್ತಿ ಕೊಳ್ಳುವ ಯೋಗ ಇದೆ. ಮನೆಕಟ್ಟುವ ಯೋಗ ಇದೆ. ಮನೆಗಾಗಿ ಬ್ಯಾಂಕ್ ಸಾಲಕ್ಕೆ ಪ್ರಯತ್ನಿಸಿದಲ್ಲಿ ಈಗ ಬಹು ಸುಲಭವಾಗಿ ದೊರೆಯುತ್ತದೆ. ಉನ್ನತ ಅಧಿಕಾರ ವರ್ಗದವರಿಗೆ ಗೌರವ ಪ್ರಶಸ್ತಿ ಪ್ರಾಪ್ತಿ ಇದೆ. ಈ ರಾಶಿಯ ರಾಜಕಾರಣಿಗಳಿಗೆ ಉನ್ನತ ಸ್ಥಾನಮಾನ ದೊರೆಯುತ್ತದೆ. ನಿಮಗೆ ಬೇಕಾಗುವಂಥ ಸ್ಥಾನಗಳು ದೊರೆಯುತ್ತದೆ. ನಿಮ್ಮನ್ನು ರಕ್ಷಿಸುವ ಗುರು ಹಿತೈಷಿಗಳು ಇರುತ್ತಾರೆ. ನಿಮ್ಮ ಪರ ಮಾತನಾಡುವವರು ಇರುತ್ತಾರೆ. ಹಣದ ಹರಿವು ಉತ್ತಮವಾಗಿದೆ. ವಿದ್ಯಾರ್ಥಿಗಳಿಗೆ ಈಗ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ಹೋಗುವ ಅವಕಾಶ ಒದಗಿ ಬರಲಿದೆ. ವ್ಯಾಪಾರ ವ್ಯವಹಾರಗಳಿಗಾಗಿ ವಿದೇಶಯಾತ್ರೆ ಮಾಡುವವರು ಈಗ ಧಾರಾಳವಾಗಿ ಮಾಡಬಹುದು. ಶೇರ್ ಮಾರುಕಟ್ಟೆಯಲ್ಲಿ ಒಳ್ಳೆಯ ಲಾಭ ಕಾಣುವಿರಿ. ರಾಹು ಐದನೇ ಮನೆಯಲ್ಲಿ ಇರುವುದು ಕೊಂಚ ದೋಷಕರ ಹಾಗಾಗಿ ಸುಬ್ರಹ್ಮಣ್ಯನನ್ನು ಆರಾಧಿಸಿ.

ಮಕರ ರಾಶಿ:
ನಿಮಗೆ ಗುರುಬಲ ಇಲ್ಲ. ಸಾಡೆಸಾತಿ ಶನಿಯ ಪ್ರಭಾವದಿಂದ ಕೊಂಚ ವಿಶ್ರಾಂತಿ ದೊರಕಿದಂತಿದೆ. ಈಗಾಗಲೇ ಹಲವಾರು ಏಳುಬೀಳುಗಳನ್ನು ಕಂಡಿದ್ದೀರಿ. ಜೀವನ ನಿಮಗೆ ಈ ಸಮಯದಲ್ಲಿ ಸಾಕಷ್ಟು ಕಲಿಸಿಕೊಟ್ಟಿದೆ. ಈಗ ನಾಲ್ಕನೇ ಮನೆಯಲ್ಲಿ ಗುರು-ರಾಹು ಇದ್ದಾರೆ. ರಾಹು ಮೂರನೇ ಮನೆಗೆ ಪ್ರವೇಶವಾದಾಗ ಅಂದರೆ ಮೀನರಾಶಿಗೆ ರಾಹು ಪ್ರವೇಶವಾದಾಗ ನಿಮಗೆ ಹೆಚ್ಚಿನ ಶುಭ ಫಲಗಳು ದೊರೆಯುತ್ತದೆ. ಈಗ ಉಳಿದ ಗ್ರಹಗಳ ಚಲನೆಯಿಂದ ಅಲ್ಪ ಪ್ರಮಾಣದ ಲಾಭವನ್ನಷ್ಟೇ ನೋಡಬಹುದು. ಆರನೇ ಮನೆಯಲ್ಲಿ ಸೂರ್ಯ 17ರ ವರೆಗೆ ಇರುವುದರಿಂದ ಧೈರ್ಯ ಪರಾಕ್ರಮ ಕೊಟ್ಟು ಮುನ್ನುಗ್ಗಿ ಕೆಲಸ ಸಾಧಿಸುವ ಛಲ ಕೊಡುತ್ತದೆ. ಯಾವುದೇ ಕೆಲಸಗಳ ಅಡ್ಡಿ ಆತಂಕಗಳನ್ನು ನಿವಾರಣೆ ಮಾಡುತ್ತಾನೆ. ಹೊಸ ಅವಕಾಶಗಳನ್ನು ಲಾಭಕರವಾಗುವಂತೆ ಪರಿವರ್ತಿಸಿಕೊಳ್ಳಬೇಕು. ನೀವು ಪ್ರತಿದಿನ ವಿಷ್ಣು ಸಹಸ್ರನಾಮ ಪಾರಾಯಣ ಮಾಡಬೇಕು. ದುರ್ಗಾ ದೇವಿಗೆ ಕೆಂಪು ಹೂವಿನಿಂದ ಪೂಜೆ ಮಾಡಬೇಕು. ಯಾವುದೇ ವಾಗ್ವಾದಕ್ಕೆ ಹೋಗಬೇಡಿ. ನೀವಾಯಿತು ನಿಮ್ಮ ಕೆಲಸವಾಯಿತು ಎಂಬಂತೆ ಇರಿ. ಕೊಂಚ ತಾಳ್ಮೆ ಇರಲಿ.

ಕುಂಭರಾಶಿ:
ಗುರು ಮೂರನೇ ಮನೆಯಲ್ಲಿ ಇದ್ದಾನೆ. ಸಹೋದರರಿಂದ ಲಾಭವಾಗಲಿದೆ. ಮೂರನೇ ಮನೆಯಲ್ಲಿ ಇರುವ ರಾಹು ಕೂಡ ನಿಮಗೆ ಅನುಕೂಲವಂತನೇ ಆಗಿದ್ದಾನೆ. ಧನಲಾಭ ಕೊಡುತ್ತಾನೆ. ಶನಿ ನಿಮ್ಮ ರಾಶಿಯಲ್ಲಿ ಇರುವುದರಿಂದ ಈಗ ನಿಮಗೆ ಕೊಂಚ ಗಂಭೀರ ಸಮಯ. ಒತ್ತಡಗಳು ಹೆಚ್ಚುತ್ತವೆ. ಆರೋಗ್ಯ ಕೈಕೊಡುತ್ತದೆ. ಆರೋಗ್ಯ ನಿರ್ಲಕ್ಷಿಸಬೇಡಿ. ವೃತ್ತಿಯಲ್ಲಿ ವರ್ಗಾವಣೆ ಒತ್ತಡಗಳು ಸಾಮಾನ್ಯವಾಗಿ ಇರುತ್ತದೆ. 17ರ ನಂತರ ಸೂರ್ಯ ಕಟಕರಾಶಿಗೆ ಪ್ರವೇಶವಾದಾಗ ನಿಮಗೆ ಅದರಿಂದ ಕೊಂಚ ಅನುಕೂಲ ಇದೆ. 6ನೇ ಮನೆಯಲ್ಲಿನ ಸೂರ್ಯ ಹೆಚ್ಚಿನ ಆತ್ಮಬಲವನ್ನು ಕೊಡುತ್ತಾನೆ. ತಂದೆಯಿಂದ ಲಾಭ ಇದೆ. ತಂದೆಯ ಕಡೆಯ ಆಸ್ತಿ ಯಾವುದಾದರೂ ಬರುವುದಿದ್ದರೆ ಅದಕ್ಕೆ ದಾರಿ ಸುಲಭ ಆಗುತ್ತದೆ. ಏಳರಲ್ಲಿ ಶುಕ್ರ ಹಾಗೂ ಕುಜ ನಿಮಗೆ ಅಲ್ಪ ಲಾಭ ಮಾಡಿಸುತ್ತಾರೆ. ಯಾವುದೇ ಹೂಡಿಕೆ ಮಾಡಬೇಡಿ. ಸಾಲ ನಿಮಗೆ ಸಿಗುತ್ತದೆ. ಆದರೆ ನೀವು ಯಾರಿಗೂ ಸಾಲ ಕೊಡಬೇಡಿ. ವೃತ್ತಿಯಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡುವವರು ಇರುತ್ತಾರೆ. ಅಂಥವರ ಬಗ್ಗೆ ಜಾಗ್ರತೆ ಇರಲಿ. ಬಂಧುಗಳೊಡನೆ ವೈಮನಸ್ಸು ಆಗುವ ಸಾಧ್ಯತೆ ಇದೆ. ನಿಮಗೆ ಈಗ ಹಾಲು ನೀರಿನ ವ್ಯತ್ಯಾಸ ಗೊತ್ತಾಗುವ ಸಮಯ. ಸಾಡೆ ಸಾತಿ ಶನಿ ನಿಮಗೆ ಕಷ್ಟ ಕೊಟ್ಟರೂ ಒಳ್ಳೆಯದು ಕೆಟ್ಟದ್ದರ ತಾರತಮ್ಯ ತೋರಿಸುತ್ತಾನೆ. ಶನಿಯ ಪ್ರಭಾವ ಕಡಿಮೆಯಾಗಲು ಹನುಮಾನ್ ಚಾಲೀಸ ಪಠಿಸಿ. ಕಪ್ಪು ಹಸುವಿಗೆ ಗೋಗ್ರಾಸ ಕೊಡಿ.

ಮೀನ ರಾಶಿ:
ಶನಿ 12ನೇ ಮನೆಯಲ್ಲಿ ಇರುವುದು ವಿಪರೀತದ ಖರ್ಚಿಗೆ ದಾರಿ ಮಾಡಿಕೊಡುತ್ತದೆ. ಮನೆಯಲ್ಲೂ ಅಂದರೆ ಸಂಸಾರದಲ್ಲೂ ಒತ್ತಡ ಇರುತ್ತದೆ. ಮಕ್ಕಳೊಡನೆ ಸಂಗಾತಿಯೊಡನೆ ಘರ್ಷಣೆ ನಡೆಯುತ್ತಿರುತ್ತದೆ. ಹಾಗಂತ ಯಾರೂ ಕೆಟ್ಟವರಲ್ಲ. ಇದೆಲ್ಲ ಶನಿಯ ಪ್ರಭಾವ. ನೀವೆಷ್ಟು ಗಟ್ಟಿ ಎಂಬುದನ್ನು ಶನಿ ಪರೀಕ್ಷಿಸುತ್ತಾನೆ. ಆದ್ದರಿಂದ ಎದೆಗುಂದಬೇಡಿ. ಈ ವರ್ಷ ಪೂರ್ತಿ ನಿಮಗೆ ಗುರು ಸಹಾಯಕನಾಗಿ ಬೆಂಬಲವಾಗಿ ಇರುತ್ತದೆ. ನಾಲ್ಕರಲ್ಲಿ ಸೂರ್ಯ ಇದ್ದು ವಾಹನದಿಂದ ತೊಂದರೆ ಆಗುತ್ತದೆ. ವಾಹನ ಚಲಾಯಿಸುವಾಗ ಅಥವಾ ದೂರಪ್ರಯಾಣ ಮಾಡುವಾಗ ಕಾಳಜಿ ತೆಗೆದುಕೊಳ್ಳಿ. ಆರನೇ ಮನೆಯಲ್ಲಿ ಶುಕ್ರ ಇರುವುದರಿಂದ ವೃತ್ತಿಯಲ್ಲಿ ಒತ್ತಡ ಇರುತ್ತದೆ. ಎಷ್ಟೇ ಅಡಚಣೆಗಳು ಎದುರಾದರೂ ಈಗ ಗುರುಬಲ ಇರುವುದು ನಿಮ್ಮನ್ನು ಕಾಪಾಡುತ್ತದೆ. ಕಾಲುಗಳಿಗೆ ಏಟು ಮಾಡಿಕೊಳ್ಳಬೇಡಿ. ಸಕ್ಕರೆ ಕಾಯಿಲೆ ಇರುವ ಈ ರಾಶಿಯವರು ಕೊಂಚ ಜಾಗ್ರತೆ ವಹಿಸಬೇಕು. 9ರಂದು ಬುಧನ ಐದನೇ ಮನೆ ಪ್ರವೇಶ ನಿಮಗೆ ಶುಭವನ್ನುಂಟು ಮಾಡುತ್ತದೆ. 6ರಲ್ಲಿ ಕುಜ ಇರುವುದು ನಿಮ್ಮ ಧೈರ್ಯ ಸಾಹಸಗಳನ್ನು ಹೆಚ್ಚಿಸುತ್ತದೆ. ಸಾಡೆಸಾತಿಯ ಪ್ರಭಾವದಲ್ಲೂ ಗುರುಬಲ ನಿಮಗೆ ಸ್ವಲ್ಪ ನಿರಾಳತೆಯನ್ನು ಕೊಡುತ್ತದೆ. ಮನೆಯಲ್ಲಿ ನೆಮ್ಮದಿ ಇರುತ್ತದೆ. ಹಣದ ಹರಿವು ಉತ್ತಮವಾಗಿ ಇದೆ.
English summary
July 2023 Monthly Horoscope In Kannada: July Masika Rashi Bhavishya: Check July Monthly Horoscope for all 12 Zodiac Signs in Kannada.
Story first published: Tuesday, June 27, 2023, 16:19 [IST]