Karnataka
oi-Naveen Kumar N

200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುವ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜೂನ್ 18ರಂದು ಆರಂಭವಾಗಿದ್ದು, ಮೊದಲ ದಿನವೇ 55,000 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ ದಿನವೇ ಸರ್ವರ್ ಸಮಸ್ಯೆಯಾಗಿದ್ದು, ಗ್ರಾಹಕರ ನೋಂದಣಿ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ. ಇಲ್ಲವಾದರೆ ಈ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇತ್ತು.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಈ ಮಾಹಿತಿ ನೀಡಿದ್ದು, ಭಾನುವಾರ ಸಂಜೆ 6 ಗಂಟೆಯ ವೇಳೆಗೆ ರಾಜ್ಯದಲ್ಲಿ ಒಟ್ಟು 55000 ಗ್ರಾಹಕರು ಗೃಹಜ್ಯೋತಿ ಯೋಜನೆಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ. ಸೋಮವಾರ ಗ್ರಾಹಕರ ನೋಂದಣಿಯಲ್ಲಿ ಭಾರಿ ಏರಿಕೆಯಾಗುತ ಸಾಧ್ಯತೆ ಇದೆ.

ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳಲ್ಲಿಉಚಿತ ವಿದ್ಯುತ್ ಕೂಡ ಒಂದಾಗಿದೆ. ಈಗಾಗಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜಾರಿಯಾಗಿದ್ದು, ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜುಲೈ 1ರಂದು 10 ಕೆಜಿ ಅಕ್ಕಿ ವಿತರಣೆ ಕೂಡ ಆರಂಭವಾಗಲಿದೆ. ಗೃಹಲಕ್ಷ್ಮಿ ಯೋಜನೆ ಕೂಡ ಆಗಸ್ಟ್ 15ರಂದು ಜಾರಿಯಾಗಲಿದ್ದು, ಅತಿ ಶೀಘ್ರದಲ್ಲೇ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಶುರುವಾಗಲಿದೆ.
ಮೊದಲ ದಿನವೇ ಸರ್ವರ್ ಡೌನ್
ಭಾನುವಾರ ಬೆಳಿಗ್ಗೆ 11 ಗಂಟೆಯಿಂದ ಅರ್ಜಿ ಸ್ವೀಕರಿಸಲಾಗುತ್ತದೆ ಎಂದು ಮಾಹಿತಿ ನೀಡಲಾಗಿತ್ತು. ಆದರೆ ಸರ್ವರ್ ಸಮಸ್ಯೆಯಿಂದಾಗಿ ಮಧ್ಯಾಹ್ನವಾದರೂ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗಲಿಲ್ಲ. ಸೇವಾಸಿಂಧು ಸರ್ವರ್ ಕ್ಲೋಸ್ ಆಗಿದ್ದ ಕಾರಣ ಗ್ರಾಹಕರು, ಅಧಿಕಾರಿಗಳು ಸಮಸ್ಯೆ ಅನುಭವಿಸಿದರು. ಎಸ್ಕಾಂ, ಬೆಂಗಳೂರು ಒನ್ ಕಚೇರಿಗಳಲ್ಲಿ ಕೂಡ ಅರ್ಜಿಗಳನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ಒಂದು ವೇಳೆ ಸರ್ವರ್ ಸಮಸ್ಯೆಯಾಗದಿದ್ದರೆ, ಮೊದಲ ದಿನವೇ ನೋಂದಣಿ ಮಾಡಿಕೊಂಡವರ ಸಂಖ್ಯೆ 1 ಲಕ್ಷ ದಾಟುವ ಸಾಧ್ಯತೆ ಇತ್ತು.
ಅರ್ಜಿ ಸಲ್ಲಿಸುವುದು ಹೇಗೆ?
www.sevasindhugs.karnataka.gov.in ವೆಬ್‌ಸೈಟ್‌ಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ. ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್ ಮೂಲಕವೂ ಅರ್ಜಿ ಸಲ್ಲಿಸಬಹುದು. , ಎಸ್ಕಾಂ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್, ನಾಡಕಚೇರಿಗಳಲ್ಲಿ ಕೂಡ ಅರ್ಜಿ ಸ್ವೀಕರಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಆರ್ ಆರ್ ನಂಬರ್, ಮೊಬೈಲ್ ನಂಬರ್ ನೀಡಬೇಕಾಗುತ್ತದೆ, ಬಾಡಿಗೆ ಮನೆಯಲ್ಲಿ ವಾಸಿಸುವರು, ಮನೆ ಅಗ್ರಿಮೆಂಟ್ ನೀಡಬೇಕಾಗುತ್ತದೆ. ಇನ್ನು ಯಾವುದೇ ಸಮಸ್ಯೆಗಳು, ದೂರುಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗಾಗಿ 1912 ಗ್ರಾಹಕರ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಅರ್ಜಿಯನ್ನು ಸ್ವೀಕರಿಸಲು ಆರಂಭಿಸಿದ್ದು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ನಿಗದಿ ಮಾಡಿಲ್ಲ.
English summary
On the first day of the Gruha Jyothi scheme in Karnataka, 55000 Customers Registered. applicants faced problems as the server was down, leaving people unhappy with the service.