Features
oi-Sunitha B

ಜುಲೈ 4 ರಿಂದ ಶಿವ ಭಕ್ತರ ಪವಿತ್ರ ಮಾಸ ಪ್ರಾರಂಭವಾಗಲಿದೆ. ಅದಕ್ಕಿಂತ ಮೂರು ದಿನಗಳ ಮೊದಲು ಅಂದರೆ ಜುಲೈ 1 ರಿಂದ ಅಮರನಾಥ ಯಾತ್ರೆ ಆರಂಭವಾಗಲಿದೆ. ಅಮರನಾಥ ದೇಗುಲ ಮಂಡಳಿ ಯಾತ್ರೆಗೆ ಸಂಬಂಧಿಸಿದ ಎಲ್ಲ ಸಿದ್ಧತೆಗಳನ್ನು ಬಹುತೇಕ ಪೂರ್ಣಗೊಳಿಸಿದೆ. ಅಮರನಾಥದ ಪವಿತ್ರ ಗುಹೆಯಲ್ಲಿ ಶಿವನ ಬಾಬಾ ಬರ್ಫಾನಿಯ ಪೂರ್ಣ ರೂಪ ಗೋಚರಿಸುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಅಮರನಾಥ್‌ಗೆ ಹರಿದು ಬರಲಿದೆ.
ಮತ್ತೊಂದೆಡೆ ಅಮರನಾಥ ದೇಗುಲ ಮಂಡಳಿ ಯಾತ್ರೆಗೆ ಹೆಲಿಕಾಪ್ಟರ್ ಬುಕ್ಕಿಂಗ್ ಆರಂಭಿಸಿದೆ. ಈ ಪ್ರಯಾಣ ಆಗಸ್ಟ್ 31 ರವರೆಗೆ ಮುಂದುವರಿಯುತ್ತದೆ. ದೇಶದ ಸುಪ್ರಸಿದ್ಧ ತೀರ್ಥಯಾತ್ರೆಗಳಲ್ಲಿ ಅಮರನಾಥರ ತೀರ್ಥಯಾತ್ರೆಯೂ ಕೂಡ ಒಂದು. ಗುಹೆಯಲ್ಲಿ ನಿರ್ಮಿಸಲಾದ ಶಿವಲಿಂಗವನ್ನು ನೋಡುವ ಭಕ್ತನು ಹುಟ್ಟು ಮತ್ತು ಮರಣದ ಬಂಧನದಿಂದ ಮುಕ್ತನಾಗುತ್ತಾನೆ ಎಂದು ನಂಬಲಾಗಿದೆ. ಶಿವನು ಈ ಗುಹೆಯಲ್ಲಿ ತಾಯಿ ಪಾರ್ವತಿಗೆ ಅಮರತ್ವದ ರಹಸ್ಯವನ್ನು ತಿಳಿಸಿದ್ದನು. ಆದ್ದರಿಂದ ಈ ಗುಹೆಯನ್ನು ಅಮರನಾಥ ಗುಹೆ ಎಂದು ಕರೆಯಲಾಗುತ್ತದೆ.

ಹೆಲಿಕಾಪ್ಟರ್ ಬುಕ್ಕಿಂಗ್ ಆರಂಭ
ಅಮರನಾಥ್ ಯಾತ್ರೆಗೆ ಹೆಲಿಕಾಪ್ಟರ್ ಬುಕ್ಕಿಂಗ್ ಪೋರ್ಟಲ್ ತೆರೆಯಲಾಗಿದೆ. ಅಮರನಾಥ ದೇಗುಲ ಮಂಡಳಿಯ ಅಧಿಕೃತ ವೆಬ್‌ಸೈಟ್ https://jksasb.nic.in/ ಗೆ ಭೇಟಿ ನೀಡುವ ಮೂಲಕ ನೀವು ಬುಕ್ ಮಾಡಬಹುದು. ಈ ಹೆಲಿಕಾಪ್ಟರ್ ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಮಾಡದಿರುವುದು ಸಮಾಧಾನದ ಸಂಗತಿ. ಶಿವ ಭಕ್ತರಿಗೆ, ಶ್ರೀನಗರದ ಬಾಲ್ಟಾಲ್ ಮತ್ತು ಪಹಲ್ಗಾಮ್ ಸ್ಥಳಗಳಿಂದ ಅಮರನಾಥದ ಪವಿತ್ರ ಗುಹೆಯವರೆಗೆ ಹೆಲಿಕಾಪ್ಟರ್ ಸೇವೆ ಲಭ್ಯವಿರುತ್ತದೆ. ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿ ಪ್ರಕಾರ, ಭಕ್ತರು ಒಂದು ಕಡೆ 2800 ರೂ. ಹಾಗೂ ಎರಡೂ ಹೆಲಿಕಾಪ್ಟರ್ ಸೇವೆಗೆ 5600 ರೂ. ಪಾವತಿಸಬೇಕು.
ಸುಮಾರು 5 ಲಕ್ಷ ಭಕ್ತರು ಪವಿತ್ರ ಗುಹೆಗೆ ಭೇಟಿ
ಅಮರನಾಥ ಯಾತ್ರೆಗೆ ಈಗಾಗಲೇ ನೋಂದಣಿ ಆರಂಭವಾಗಿದೆ. 62 ದಿನಗಳ ಕಾಲ ನಡೆಯಲಿರುವ ಈ ಪವಿತ್ರ ಯಾತ್ರೆಗೆ ಇದುವರೆಗೆ ಸುಮಾರು 3 ಲಕ್ಷ ಯಾತ್ರಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜುಲೈ 1 ರಿಂದ ಪ್ರಾರಂಭವಾಗುವ ಈ ಪವಿತ್ರ ಯಾತ್ರೆಗಾಗಿ ಯಾತ್ರಿಕರು ಈಗಾಗಲೇ ಜಮ್ಮುವಿನ ಮೂಲ ಶಿಬಿರಕ್ಕೆ ಆಗಮಿಸಲು ಪ್ರಾರಂಭಿಸಿದ್ದಾರೆ.
ಜಮ್ಮುವಿನ ಖಾಸಗಿ ಕ್ಯಾಬ್ ನಿರ್ವಾಹಕರು ರೈಲ್ವೆ ನಿಲ್ದಾಣ ಮತ್ತು ಅಮರನಾಥಜಿ ಬೇಸ್ ಕ್ಯಾಂಪ್ ನಡುವೆ ಉಚಿತ ಪಿಕ್ ಮತ್ತು ಡ್ರಾಪ್ ಸೇವೆಯನ್ನು ಒದಗಿಸಲು ನಿರ್ಧರಿಸಿದ್ದಾರೆ. ಈ ವರ್ಷ ಸುಮಾರು 5 ಲಕ್ಷ ಭಕ್ತರು ಬಾಬಾ ಬರ್ಫಾನಿಯ ದರ್ಶನ ಪಡೆಯಲು ಅಮರನಾಥದ ಪವಿತ್ರ ಗುಹೆಗೆ ಭೇಟಿ ನೀಡುವ ನಿರೀಕ್ಷೆಯಿದೆ.

ಪ್ರಯಾಣ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
RFID ಕಾರ್ಡ್ ಹೊಂದಿರದ ಪ್ರಯಾಣಿಕರಿಗೆ ಅಮರನಾಥ ಯಾತ್ರೆಗೆ ತೆರಳಲು ಅವಕಾಶವಿರುವುದಿಲ್ಲ. ಅಂದರೆ, ಪ್ರತಿಯೊಬ್ಬ ಪ್ರಯಾಣಿಕರು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಪ್ರಯಾಣದ ಸಮಯದಲ್ಲಿ ಆಲ್ಕೋಹಾಲ್ (ಮದ್ಯ) ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಮರನಾಥ ಗುಹೆಗೆ ಪ್ರಯಾಣಿಸುವಾಗ ಟ್ರೆಕ್ಕಿಂಗ್ ಶೂ ಧರಿಸಿ ಮುಂದುವರಿಯುವಂತೆ ಅಮರನಾಥ ದೇಗುಲ ಮಂಡಳಿ ಸಲಹೆ ನೀಡಿದೆ.
ಅಮರನಾಥ ಗುಹೆಯಲ್ಲಿ ಬೆಳಿಗ್ಗೆ 6 ರಿಂದ ಸಂಜೆ 4 ರವರೆಗೆ ಬಾಬಾ ಬರ್ಫಾನಿಯ ದರ್ಶನವಿರುತ್ತದೆ. ಆದರೆ ಮಧ್ಯಾಹ್ನ 3 ರ ನಂತರ ಯಾರಿಗೂ ಪಂಜತರ್ಣಿಯಿಂದ ಆಚೆಗೆ ಹೋಗಲು ಅನುಮತಿಸಲಾಗುವುದಿಲ್ಲ. ಅಮರನಾಥ ದೇಗುಲ ಮಂಡಳಿಯು ಯಾತ್ರಾರ್ಥಿಗಳು ಪರಿಸರಕ್ಕೆ ಹಾನಿ ಮಾಡುವ ಅಥವಾ ಮಾಲಿನ್ಯಗೊಳಿಸುವ ಯಾವುದೇ ಚಟುವಟಿಕೆಯಿಂದ ದೂರವಿರಲು ನಿರ್ದಿಷ್ಟವಾಗಿ ಸಲಹೆ ನೀಡಿದೆ.
English summary
Baba Barfani will get darshan in few days. Helicopter booking for Amarnath Yatra will start.
Story first published: Monday, June 26, 2023, 23:12 [IST]