English Tamil Hindi Telugu Kannada Malayalam Google news Android App
Tue. Mar 28th, 2023

Online Desk

– ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಹಳೆಯದಾಗುತ್ತಿದ್ದರಿಂದ, ಅದರ ಬದಲಿಗೆ ದೇಶೀಯವಾದ ಹೊಸ ವಿಮಾನವಾಹಕ ನೌಕೆಯನ್ನು ನಿರ್ಮಾಣಗೊಳಿಸಬೇಕು ಎಂಬ ಯೋಚನೆ 1980ರ ದಶಕದಲ್ಲಿಯೇ ಆರಂಭವಾಯಿತು. ಮಧ್ಯಂತರ ಪರಿಹಾರ ಎಂಬಂತೆ ಅದರ ಬದಲಿಗೆ ಐಎನ್ಎಸ್ ವಿರಾಟ್ ನೌಕೆಯನ್ನು ಬಳಸಿಕೊಳ್ಳಲಾಯಿತು. ಆದರೆ ನೂತನ ದೇಶೀಯ ವಿಮಾನವಾಹಕ ನೌಕೆಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಅನುಮತಿ 1999 ರಲ್ಲಷ್ಟೇ ಲಭಿಸಿತು. ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್‌ನಲ್ಲಿ ನೂತನ ನೌಕೆಯ ನಿರ್ಮಾಣಕ್ಕೆ ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿಯ (ಸಿಸಿಎಸ್) 2002ರಲ್ಲಿ ಅನುಮೋದನೆ ನೀಡಿತು.

ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ 2005ರಲ್ಲಿ ಆರಂಭಗೊಂಡ, ನೌಕೆಗಾಗಿ ಲೋಹ ಕತ್ತರಿಸುವ ಕಾರ್ಯ ಒಂದು ಐತಿಹಾಸಿಕ ಮಹತ್ವದ್ದಾಗಿತ್ತು. ಯಾಕೆಂದರೆ ರಕ್ಷಣಾ ತಂತ್ರಜ್ಞಾನ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ದೇಶೀಯವಾಗಿ ವಿನ್ಯಾಸಗೊಳಿಸಿದ ಈ ನೌಕೆಯ ನಿರ್ಮಾಣಕ್ಕೆ ಭಾರತದ್ದೇ ಸ್ಟೀಲ್ ಬಳಕೆಯಾಗಿತ್ತು. ನೌಕೆಗೆ ಬೇಕಾದ ಸ್ಟೀಲನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಎಸ್ಎಐಎಲ್) ತನ್ನ ರೂರ್ಕೆಲಾ, ಭಿಲಾಯಿ ಮತ್ತು ದುರ್ಗಾಪುರದ ಕಾರ್ಖಾನೆಗಳಿಂದ ಪೂರೈಸಿತ್ತು. ಎಚ್ಎಎಲ್, ಬಿಇಎಲ್, ಬಿಎಚ್ಇಎಲ್, ಕೆಲ್ಟ್ರೋನ್, ಲಾರ್ಸನ್ ಆ್ಯಂಡ್ ಟರ್ಬೋ ಹಾಗೂ ಟಾಟಾ ಪವರ್ ಸೇರಿದಂತೆ ಭಾರತದ ಹಲವು ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಸಂಸ್ಥೆಗಳು ಈ ನೂತನ ವಿಕ್ರಾಂತ್ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದವು. ಹಡಗಿನ ತಳವನ್ನು ಆಗಸ್ಟ್ 12, 2013ರಲ್ಲಿ ಪೂರ್ಣಗೊಳಿಸಲಾಯಿತು. ಈ ನೌಕೆಗೂ ಅದರ ಪೂರ್ವಜ ವಿಮಾನವಾಹಕ ನೌಕೆಯಾದ ವಿಕ್ರಾಂತ್ ಹೆಸರನ್ನೇ ಇಡಲಾಯಿತು.

ಹಲವು ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ, ವಿಕ್ರಾಂತ್ ಆಗಸ್ಟ್ 4, 2021ರಂದು ಕೊಚ್ಚಿ ಬಂದರಿನಿಂದ ಸಮುದ್ರದಲ್ಲಿ ತನ್ನ ಪರೀಕ್ಷಾ ಓಡಾಟಕ್ಕೆಂದು ನೀರಿಗಿಳಿಯಿತು. ವಿಕ್ರಾಂತ್ ಭಾರತೀಯವಾಗಿ ನಿರ್ಮಿತವಾದ ಅತಿದೊಡ್ಡ ಯುದ್ಧನೌಕೆಯಾಗಿದ್ದರಿಂದ ಅದೊಂದು ಸ್ಮರಣೀಯ ಕ್ಷಣವಾಗಿತ್ತು. ಈ ಪರೀಕ್ಷೆಯನ್ನು ಕೋಟ್ಯಂತರ ಭಾರತೀಯರು ಮತ್ತು ವಿದೇಶೀಯರೂ ಕುತೂಹಲದ ಕಂಗಳಿಂದ ನೋಡಿದ್ದರು.

ಹೊಸ ಯುದ್ಧನೌಕೆ ಸಮುದ್ರದಲ್ಲಿ ಸುಲಲಿತವಾಗಿ ಸಾಗಿತ್ತು. ತನ್ನ ಮೊದಲ ಸಮುದ್ರ ಸಾರ್ಟಿಯಲ್ಲೇ ಅದು ಪೂರ್ಣ ಸಾಮರ್ಥ್ಯವನ್ನು ತೋರಿಸಿದ್ದು, ಅದನ್ನು ವಿನ್ಯಾಸ ಮತ್ತು ನಿರ್ಮಾಣದ ಪ್ರತಿಯೊಂದು ಹಂತದಲ್ಲೂ ಎಷ್ಟು ಕೂಲಂಕಷವಾಗಿ ಪರಿಶೀಲಿಸಲಾಗಿತ್ತು ಎಂದು ಸಾಬೀತುಪಡಿಸಿತ್ತು. ಅದರ ಯಶಸ್ವಿ ನಿರ್ಮಾಣದ ಪರಿಣಾಮವಾಗಿ ವಿಕ್ರಾಂತ್ನ ಪ್ರಥಮ ಸಾರ್ಟಿಯಲ್ಲೇ ಭಾರತೀಯ ನೌಕಾಪಡೆಯ ಬತ್ತಳಿಕೆಯಲ್ಲಿದ್ದ ಎಲ್ಲ ಬಗೆಯ ಹೆಲಿಕಾಪ್ಟರ್ಗಳೂ ಯಶಸ್ವಿಯಾಗಿ ನೌಕೆಯ ಮೇಲಿಳಿದು, ಅಲ್ಲಿಂದ ಹಾರಾಟ ನಡೆಸಿದ್ದವು. ಇದರ ಬಳಿಕ ವಿಕ್ರಾಂತ್ ಹಲವು ಪರೀಕ್ಷಾ ಸಂಚಾರ ನಡೆಸಿದ್ದು, ಪ್ರಸ್ತುತ ಸೇನಾ ಸೇರ್ಪಡೆಯ ಮೊದಲಿನ ತಯಾರಿಯ ಹಂತಗಳಲ್ಲಿದೆ. ವಿಕ್ರಾಂತ್ ಸೇನಾ ಸೇರ್ಪಡೆಗೊಂಡ ಬಳಿಕ ಅದರ ಫಿಕ್ಸ್ಡ್ – ವಿಂಗ್ ವಿಮಾನಗಳ ಪರೀಕ್ಷಾ ಹಾರಾಟವೂ ನಡೆಯಲಿದ್ದು, ಅದಾದ ಬಳಿಕ ನೌಕೆಯನ್ನು ಸಂಪೂರ್ಣವಾಗಿ ಕಾರ್ಯಾಚರಿಸುವ ವಿಮಾನವಾಹಕ ನೌಕೆಯಾಗಿಸಲಾಗುತ್ತದೆ.

ಸಂಪೂರ್ಣವಾಗಿ ದೇಶೀಯ ನಿರ್ಮಾಣದ ಅಡಿಪಾಯ:

ಹೆಲಿಕಾಪ್ಟರ್‌ಗಳು, ನೌಕೆಗಳು, ಕ್ಷಿಪಣಿಗಳು ಸೇರಿದಂತೆ ಬೃಹತ್ ಪ್ರಮಾಣದ ಉಪಕರಣಗಳನ್ನು ದೇಶೀಯವಾಗಿ ನಿರ್ಮಿಸಲು ಅದರ ಕಚ್ಚಾವಸ್ತುಗಳ ಪೂರೈಕೆಗೆ ದೇಶೀಯ ಉದ್ಯಮಗಳೂ ಸಮರ್ಪಕವಾಗಿರಬೇಕು. ಈ ವ್ಯವಸ್ಥೆಗಳಿಲ್ಲದೆ ದೇಶೀಯವಾಗಿ ಅವುಗಳ ನಿರ್ಮಾಣ ಅತ್ಯಂತ ಕಷ್ಟಸಾಧ್ಯ. ಭಾರತ ತನ್ನ ಪ್ರಥಮ ದೇಶೀಯ ನಿರ್ಮಿತ ವಿಮಾನವಾಹಕ ನೌಕೆಯ ಕನಸನ್ನು ನನಸಾಗಿಸಿರುವುದು ಆತ್ಮನಿರ್ಭರ ಭಾರತ ಎಂಬ ಪರಿಕಲ್ಪನೆಗೆ ಮತ್ತು ಅದರ ಯಶಸ್ಸಿಗೆ ಸಂದ ಪ್ರಶಂಸಾಪತ್ರವೇ ಆಗಿದೆ. ಈ ನಿರ್ಮಾಣ ಭಾರತೀಯ ನೌಕಾಪಡೆ ವಿಮಾನವಾಹಕ ನೌಕೆಯನ್ನು ವಿನ್ಯಾಸಗೊಳಿಸಲು ಮಾತ್ರವಲ್ಲದೆ, ಈ ಸಂಕೀರ್ಣ ನೌಕೆಯ ನಿರ್ಮಾಣದಲ್ಲೂ ಸಮರ್ಥವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಅದರೊಡನೆ ಭಾರತೀಯ ಹಡಗು ನಿರ್ಮಾಣಗಾರರ ಕೌಶಲ್ಯವನ್ನು ಮತ್ತು ಇಂತಹ ಬೃಹತ್ ಹಡಗಿನ ನಿರ್ಮಾಣ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಭಾರತೀಯ ಕೈಗಾರಿಕೆಗಳ ಸಾಮರ್ಥ್ಯವನ್ನೂ ತೋರುತ್ತದೆ. ವಿಕ್ರಾಂತ್ ನೌಕೆಯ ನಿರ್ಮಾಣದಲ್ಲಿ ಹಲವು ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಸಂಸ್ಥೆಗಳ ಯಶಸ್ವಿ ಪಾಲ್ಗೊಳ್ಳುವಿಕೆಯ ಪರಿಣಾಮವಾಗಿ ನೌಕೆ 76% ದೇಶೀಯ ನಿರ್ಮಾಣದ ಗುರಿಯನ್ನು ಸಾಧಿಸಿದೆ. ಇದರ ಯಶಸ್ಸಿನಿಂದಾಗಿ ಮುಂದಿನ ಯೋಜನೆಗಳಲ್ಲಿ ಇನ್ನೂ ಹೆಚ್ಚಿನ ದೇಶೀಯ ನಿರ್ಮಾಣದ ಗುರಿ ಸಾಧಿಸಲು ಸಾಧ್ಯವಾಗಲಿದೆ. ವಿಕ್ರಾಂತ್ ನಿರ್ಮಾಣದ ಮೂಲಕ ದೇಶೀಯವಾಗಿ ವಿಮಾನವಾಹಕ ನೌಕೆಗಳನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಾಣಗೊಳಿಸುವ ಸಾಮರ್ಥ್ಯ ಹೊಂದಿರುವ ಕೆಲವೇ ರಾಷ್ಟ್ರಗಳ ಗುಂಪಿಗೆ ಈಗ ಭಾರತವೂ ಸೇರ್ಪಡೆಯಾಗಿರುವುದು ಹೆಮ್ಮೆ ಪಡುವ ವಿಚಾರವಾಗಿದೆ. ಈ ವಿಮಾನವಾಹಕ ನೌಕೆ ‘ನವಭಾರತದ’ ಹುಮ್ಮಸ್ಸನ್ನು ಪ್ರತಿನಿಧಿಸುತ್ತದೆ. ಕಾರ್ಯತಂತ್ರದ ವಿಚಾರದಲ್ಲಿ ಭಾರತ ಜಾಗತಿಕ ನೌಕಾಪಡೆಗಳ ಮುಂದೆ ಆತ್ಮನಿರ್ಭರವಾಗಿ ನಿಲ್ಲಲು ಇದು ಸಹಕಾರಿ. 21ನೇ ಶತಮಾನದಲ್ಲಿ ವಿಕ್ರಾಂತ್ ಭಾರತೀಯ ನೌಕಾಪಡೆಗೆ ಅತ್ಯಂತ ಉಪಯುಕ್ತ ಹಾಗೂ ಪ್ರಬಲ ಸಾಗರ ಉಪಕರಣವಾಗಿದ್ದು, ನಮ್ಮ ನೌಕಾಪಡೆಯ ಇತಿಹಾಸದಲ್ಲಿ ವೈಭವದ ಪುಟವನ್ನು ಬರೆದಿದೆ.

ಐಎನ್ಎಸ್ ವಿಕ್ರಾಂತ್ ನಿರ್ಮಾಣದ ಪ್ರಯೋಜನಗಳು:

ವಿಕ್ರಾಂತ್ ನಿರ್ಮಾಣದ ಸಂದರ್ಭದಲ್ಲಿ ಲಭಿಸಿದ ಉಪ ಉತ್ಪನ್ನಗಳನ್ನು ಗಮನಿಸಿದಾಗ ಅದರ ಪ್ರಯೋಜನಗಳು ಅಪರಿಮಿತ ಎನ್ನಬಹುದು. ವಿಕ್ರಾಂತ್ ನಿರ್ಮಾಣದಲ್ಲಿ ನೂರಕ್ಕೂ ಹೆಚ್ಚು ಎಂಎಸ್ಎಂಇ ಗಳು, ಅದರಲ್ಲೂ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯ ಭಾಗವಾದ ಸಂಸ್ಥೆಗಳು ಪಾಲ್ಗೊಂಡು, ಭಾರತದ ತಂತ್ರಜ್ಞಾನ ಮತ್ತು ಉದ್ಯಮದ ಬಲವರ್ಧನೆಗೆ ಕಾರಣವಾದವು. ಅದರೊಡನೆ, ಈ ಯೋಜನೆ ಬಹುತೇಕ 550 ದೇಶೀಯ ಮಾರಾಟಗಾರರನ್ನು ಒಳಗೊಂಡು, ಅವರಿಂದ ವಿವಿಧ ವಸ್ತುಗಳು ಹಾಗೂ ಉಪಕರಣಗಳನ್ನು ಪಡೆದುಕೊಂಡಿತು. ವಿಕ್ರಾಂತ್ ನಿರ್ಮಾಣದ ಅವಧಿಯಲ್ಲಿ 40,000ಕ್ಕೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿದ್ದು, 2,000ಕ್ಕೂ ಹೆಚ್ಚು ಕಾರ್ಮಿಕರು ಶಿಪ್ ಯಾರ್ಡ್‌ನಲ್ಲಿ ಪ್ರತಿದಿನವೂ ಕೆಲಸ ನಿರ್ವಹಿಸಿದ್ದರು. ಅವರೊಡನೆ, 12,000ಕ್ಕೂ ಹೆಚ್ಚಿನ ಪೂರಕ ಕಾರ್ಮಿಕ ವರ್ಗ ದೇಶದ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸಿದರು. ಪ್ರತಿಯೊಬ್ಬ ಕಾರ್ಮಿಕನೂ ತನ್ನ ಕುಟುಂಬದ ಕನಿಷ್ಠ ಮೂರರಿಂದ ಐದು ಜನರ ಜವಾಬ್ದಾರಿ ಹೊಂದಿರುವುದರಿಂದ ಇಂತಹ ಉದ್ಯೋಗ ಸೃಷ್ಟಿಯ ಪ್ರಯೋಜನ ಅಪಾರವಾದದ್ದು. ಇದರೊಡನೆ ಮೇಲ್ನೋಟಕ್ಕೆ ಕಾಣಿಸದ ಹಲವು ಪ್ರಯೋಜನಗಳೂ ಇದ್ದು, ಮನೆಯಿಂದ ದೂರ ಬಂದು ಕಾರ್ಯ ನಿರ್ವಹಿಸುವ ಉದ್ಯೋಗಿಗಳಿಗೆ ಚಹಾ, ತಿಂಡಿ ಒದಗಿಸುವವರಿಗೆ ಮತ್ತು ಉಳಿದುಕೊಳ್ಳಲು ಹೊಟೆಲ್, ಲಾಡ್ಜ್ ಇತ್ಯಾದಿ ಉದ್ಯಮಗಳನ್ನು ನಡೆಸುವವರಿಗೂ ಈ ಯೋಜನೆಯಿಂದ ಪ್ರಯೋಜನವಾಗಿದೆ. ಈ ನೌಕೆಯ ನಿರ್ಮಾಣದಲ್ಲಿ ನೇರವಾಗಿ ಉದ್ಯೋಗ ಪಡೆದ ಪ್ರತಿ ಕಾರ್ಮಿಕನಿಂದ ವಿವಿಧ ರೀತಿಯ 36 ರಿಂದ 50 ಉದ್ಯೋಗಗಳು ಸೃಷ್ಟಿಯಾಗಿವೆ ಎನ್ನುತ್ತವೆ ವರದಿಗಳು. ವಿಕ್ರಾಂತ್ 76% ದೇಶೀಯ ನಿರ್ಮಾಣದ ಉತ್ಪನ್ನವಾಗಿರುವುದರಿಂದ, ಇದರ ನಿರ್ಮಾಣಕ್ಕೆ ವೆಚ್ಚವಾದ ಮೂರನೇ ಎರಡರಷ್ಟು ಮೊತ್ತ ಭಾರತೀಯ ಆರ್ಥಿಕತೆ ಮತ್ತು ಭಾರತೀಯರ ಮೇಲೇ ಹೂಡಿಕೆಯಾಗಿದೆ.

ಇದನ್ನೂ ಓದಿ: ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ ಅವಘಡ; ಹೆಚ್ಚಾಗಿದೆ ಮೂರನೇ ವಿಮಾನ ವಾಹಕದ ಅಗತ್ಯ

ಇಂತಹ ಬೃಹತ್ ಯೋಜನೆಗಳ ಸಂದರ್ಭದಲ್ಲಿ ಅದರಿಂದಾಗುವ ಇತರ ಪ್ರಯೋಜನಗಳನ್ನು ಸಾಮಾನ್ಯವಾಗಿ ಪರಿಗಣಿಸುವುದಿಲ್ಲವಾದರೂ, ಅವುಗಳನ್ನು ನೆನಪಿಟ್ಟುಕೊಳ್ಳುವುದು ಅತ್ಯವಶ್ಯಕ. ಈ ಯೋಜನೆಯ ಪರಿಣಾಮವಾಗಿ ಎಸ್ಎಂಇ ಹಾಗೂ ಎಂಎಸ್ಎಂಇ ಗಳಿಗೆ ಬೆಂಬಲ ದೊರೆತಿದ್ದು, ಸಂಶೋಧನೆ ಮತ್ತು ಅಭಿವೃದ್ಧಿ ವಿಚಾರಗಳಲ್ಲಿ ಹಣದ ಹೂಡಿಕೆ ಮಾಡಲಾಗಿದೆ. ಅದರೊಂದಿಗೆ, ವಿಮಾನವಾಹಕ ನೌಕೆಯ ನಿರ್ಮಾಣಕ್ಕಾಗಿ ಅಭಿವೃದ್ಧಿಗೊಳಿಸಿದ ತಂತ್ರಜ್ಞಾನ ಬೇರೆ ಯೋಜನೆಗಳಿಗೆ ಬಳಕೆಯಾಗುತ್ತದೆ. ಇದಕ್ಕೆ ಉದಾಹರಣೆಯಾಗಿ, ನೌಕೆ ನಿರ್ಮಾಣದಲ್ಲಿ ಬಳಸಲ್ಪಡುವ ಎಕ್ಸ್ಟ್ರಾ ಹೈ ಟೆನ್ಸೈಲ್ ಹಡಗು ನಿರ್ಮಾಣ ಸ್ಟೀಲ್‌ಗಾಗಿ (ಡಿಎಂಆರ್249ಎ ಹಾಗೂ ಡಿಎಂಆರ್249ಬಿ) ಡಿಆರ್‌ಡಿಓ ಹಾಗೂ ಸಿಎಸ್ಎಲ್ ನೂತನ ವೆಲ್ಡಿಂಗ್ ಕಾರ್ಯತಂತ್ರ ಮತ್ತು ವೆಲ್ಡಿಂಗ್ ಇಲೆಕ್ಟ್ರೋಡ್ಗಳನ್ನು ಅಭಿವೃದ್ಧಿ ಪಡಿಸಿದ್ದು, ಇವುಗಳು ನೌಕಾಪಡೆಯ ಉಪಯೋಗಕ್ಕೆ ಮಾತ್ರವಲ್ಲದೆ, ನಾಗರಿಕ ಸಮುದ್ರಯಾನದ ಹಡಗುಗಳಿಗೂ ಬಳಸಿಕೊಳ್ಳಬಹುದು. ಅದರೊಡನೆ, ಈ ಉಪಕರಣಗಳನ್ನು ವಿದೇಶಗಳಿಗೆ ರಫ್ತು ಮಾಡಲೂಬಹುದು. ಇಂತಹ ಯೋಜನೆಗಳಿಗೆ ಮಾಡುವ ಹೂಡಿಕೆ ದೇಶೀಯ ನಿರ್ಮಾಣಕ್ಕೆ ಅಗತ್ಯವಿರುವ ವಿವಿಧ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಅದರೊಡನೆ, ಇಂತಹ ಉದ್ದಿಮೆಗಳಲ್ಲಿ ಕಾರ್ಯ ನಿರ್ವಹಿಸಬೇಕಾದ ಯುವಜನತೆಗೆ ತರಬೇತಿ ನೀಡುವ ಮೂಲಕ ಮಹತ್ವಾಕಾಂಕ್ಷೆಯ ಸ್ಕಿಲ್ ಇಂಡಿಯಾ ಯೋಜನೆಗೂ ಕೊಡುಗೆ ನೀಡುತ್ತದೆ.

ಆದರೆ ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೇನೆಂದರೆ ರಕ್ಷಣಾ ಉಪಕರಣಗಳಿಗೆ ನಿರಂತರವಾಗಿ ಬೇಡಿಕೆ ಇದ್ದಾಗ ಮಾತ್ರ ಅವುಗಳನ್ನು ದೇಶೀಯವಾಗಿ ತಯಾರಿಸುವುದು ಲಾಭದಾಯಕ. ಹಾಗೆ ಬೇಡಿಕೆ ಇದ್ದಾಗ ಮಾತ್ರ ದೇಶೀಯವಾಗಿ ತಯಾರಿಕೆಗೆ ಅಗತ್ಯವುಳ್ಳ ವಿನ್ಯಾಸ, ವಸ್ತುಗಳು ಹಾಗೂ ತಂತ್ರಜ್ಞಾನದ ನಿರ್ಮಾಣದಲ್ಲಿ ಅರ್ಹ ಹಾಗೂ ಅನುಭವ ಹೊಂದಿರುವ ಮಾನವ ಸಂಪನ್ಮೂಲದ ಸದ್ಬಳಕೆಯಾಗುತ್ತದೆ. ಸತತವಾಗಿ ದೇಶೀಯ ರಕ್ಷಣಾ ಉಪಕರಣಗಳಿಗೆ ಬೇಡಿಕೆ ಇದ್ದರೆ ಅವುಗಳ ನಿರ್ಮಾಣಕ್ಕಾಗಿ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಸಂಸ್ಥೆಗಳು ಕೌಶಲ್ಯ ಹೊಂದಿರುವ ಉದ್ಯೋಗಿಗಳನ್ನು ಹೊಂದಲು ಮತ್ತು ಆ ಕುರಿತು ಸಂಶೋಧನೆ ಹಾಗೂ ಅಭಿವೃದ್ಧಿಗೆ ಹಣ ಖರ್ಚು ಮಾಡಲು ಸಾಧ್ಯವಾಗುತ್ತದೆ.

ಭಾರತದ ಮೂರನೇ ವಿಮಾನವಾಹಕ ನೌಕೆಯ ಕುರಿತ ಚರ್ಚೆಗಳು:

ಭಾರತೀಯ ನೌಕಾಪಡೆಗೆ ಮೂರನೆಯ ವಿಮಾನವಾಹಕ ನೌಕೆಯನ್ನು ಹೊಂದುವ ಅಗತ್ಯ ಇದೆಯೇ ಇಲ್ಲವೇ ಎಂಬ ಕುರಿತು ಹಲವು ಚರ್ಚೆಗಳು ನಡೆದಿವೆ. ಒಂದು ವೇಳೆ ಭಾರತ ಇನ್ನೊಂದು ವಿಮಾನವಾಹಕ ನೌಕೆಯ ನಿರ್ಮಾಣ ನಡೆಸದೆ ಸುಮ್ಮನಾದರೆ, ಅದು ರಾಷ್ಟ್ರೀಯ ಸಂಪನ್ಮೂಲಗಳು, ಮಾನವ ಸಂಪನ್ಮೂಲ ಮತ್ತು ಕೌಶಲ್ಯ, ಬೆಲೆಬಾಳುವ ಮೂಲಸೌಕರ್ಯಗಳು, ಹಾಗೂ ವರ್ಷಗಳ ಕಾಲ ದೇಶೀಯವಾಗಿ ನಿರ್ಮಾಣಗೊಳಿಸಲು ಆರಂಭಿಸಿದ ವ್ಯವಸ್ಥೆಗಳು ಮತ್ತು ಅದಕ್ಕಾಗಿ ಮಾಡಿದ ಅಪಾರ ವೆಚ್ಚ ವ್ಯರ್ಥವಾಗಿ ಹೋಗುತ್ತವೆ. ಪ್ರಸ್ತುತ ಹಾಕಲಾದ ಅಡಿಪಾಯದ ಮೇಲೆ ಮುಂದಿನ ದಿನಗಳಲ್ಲಿ ಭಾರತ ಮೂರೋ ನಾಲ್ಕೋ ವಿಮಾನವಾಹಕ ನೌಕೆಗಳನ್ನು ಹೊಂದುವ ಕನಸನ್ನು ನನಸಾಗಿಸಲು ಸಾಧ್ಯ. ಒಂದು ವೇಳೆ ಅದಕ್ಕೆ ಹಣಕಾಸಿನ ಕೊರತೆ ಏನಾದರೂ ಎದುರಾದರೆ ಅದಕ್ಕೆ ಸುಲಭ ಪರಿಹಾರ ಎಂದರೆ ಇನ್ನೊಂದು ವಿಕ್ರಾಂತ್ ಮಾದರಿ ನೌಕೆಯ ನಿರ್ಮಾಣಕ್ಕೆ ಆದೇಶ ನೀಡುವುದು. ಮೊದಲ ಅನುಭವದ ಆಧಾರದ ಮೇಲೆ ನೂತನ ನೌಕೆಗೆ ಅಗತ್ಯವಿರುವ ಬದಲಾವಣೆಗಳನ್ನು ಮಾಡಿಕೊಳ್ಳುವುದು. ಇದು ಮಾನವ ಕೌಶಲ್ಯಗಳ ಬಳಕೆ ಮಾಡುವ ಮೂಲಕ ಇನ್ನೂ ಹೆಚ್ಚಿನ ಉದ್ಯೋಗ ಸೃಷ್ಟಿಸಲು, ನಿರ್ಮಾಣ ವೆಚ್ಚ ಕಡಿಮೆ ಮಾಡಲು, ದೇಶೀಯ ಉದ್ಯಮಗಳನ್ನು ಅಭಿವೃದ್ಧಿ ಪಡಿಸಲು ಸಹಾಯಕವಾಗುತ್ತದೆ. ಆ ಮೂಲಕ ಇಂತಹ ದೇಶೀಯ ನಿರ್ಮಾಣಕ್ಕೆ ಅಗತ್ಯವಿರುವ ಸೌಲಭ್ಯಗಳು ಭಾರತದಲ್ಲಿ ಹೆಚ್ಚಾಗುತ್ತದೆ. ಒಂದು ವೇಳೆ ಭಾರತ ಐಎನ್ಎಸ್ ವಿಕ್ರಾಂತ್ ನೌಕೆಯನ್ನು ಸೇವೆಗೆ ಅಧಿಕೃತಗೊಳಿಸುವುದರ ಜೊತೆಗೆ ಮೂರನೇ ವಿಮಾನವಾಹಕ ನೌಕೆಯ ನಿರ್ಮಾಣಕ್ಕೆ ನಿರ್ಧರಿಸಿದರೆ, ಅದು ಜಾಗತಿಕ ಶಕ್ತಿ ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಭಾರತಕ್ಕೆ ಇನ್ನಷ್ಟು ಬಲ ನೀಡಲಿದೆ.

ಗಿರೀಶ್ ಲಿಂಗಣ್ಣ 

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *