Online Desk
ಪುಣೆ: ಭಾರತೀಯ ಜನತಾ ಪಕ್ಷವು (ಬಿಜೆಪಿ) ತನ್ನ ಪ್ರಾದೇಶಿಕ ಮಿತ್ರ ಪಕ್ಷಗಳನ್ನು ಕ್ರಮೇಣ ಮುಗಿಸುತ್ತಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಬುಧವಾರ ಆರೋಪಿಸಿದ್ದಾರೆ ಮತ್ತು ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಳ್ಳುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೈಗೊಂಡ ನಿರ್ಧಾರವನ್ನು ಬೆಂಬಲಿಸಿದ್ದಾರೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಸೇನೆಯನ್ನು ದುರ್ಬಲಗೊಳಿಸಲು ಮತ್ತು ಪಕ್ಷವನ್ನು ವಿಭಜಿಸಲು ಬಿಜೆಪಿ ಯೋಜನೆ ರೂಪಿಸುತ್ತಿದೆ ಎಂದು ದೂರಿದ್ದಾರೆ.
ಪವಾರ್ ಅವರ ಪಕ್ಷವು ಹಿಂದಿನ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ಭಾಗವಾಗಿತ್ತು. ಆದರೆ, ಶಿವಸೇನಾ ಶಾಸಕ ಏಕನಾಥ್ ಶಿಂಧೆ ಮತ್ತು ಇತರ 39 ಶಾಸಕರ ಬಂಡಾಯದ ನಂತರ ಸರ್ಕಾರ ಪತನಗೊಂಡಿತು. ಬಳಿಕ ಬಂಡಾಯ ಶಾಸಕರು ಬಿಜೆಪಿಯೊಂದಿಗೆ ಸೇರಿ ಹೊಸ ಸರ್ಕಾರ ರಚಿಸಿದರು.
ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದಿದ್ದ ಜೆಡಿಯು ಪಕ್ಷದ ನಾಯಕ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ವಿಪಕ್ಷಗಳ ಮಹಾಮೈತ್ರಿಕೂಟದ ಬೆಂಬಲದೊಂದಿಗೆ ಬಿಹಾರದಲ್ಲಿ ಹೊಸ ಸರ್ಕಾರವನ್ನು ರಚಿಸಿದ್ದಾರೆ.
ಇದನ್ನೂ ಓದಿ: ಬಿಹಾರ: ದಾಖಲೆಯ 8ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್, ಡಿಸಿಎಂ ಆಗಿ ತೇಜಸ್ವಿ ಪ್ರಮಾಣ!
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇತ್ತೀಚೆಗೆ ಮಾತನಾಡಿ, ಮುಂಬರುವ ದಿನಗಳಲ್ಲಿ ಬಿಜೆಪಿಯಂತಹ ಸಿದ್ಧಾಂತವನ್ನು ಒಳಗೊಂಡ ಪಕ್ಷ ಮಾತ್ರ ಉಳಿಯುತ್ತದೆ ಮತ್ತು ಕುಟುಂಬಗಳು ಆಳುವ ಇತರ ಪಕ್ಷಗಳು ನಾಶವಾಗುತ್ತವೆ. ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ ಮತ್ತು ಅವು ಅಸ್ತಿತ್ವದಲ್ಲಿರುವುದಿಲ್ಲ. ದೇಶದಲ್ಲಿ ತಮ್ಮ ಪಕ್ಷ ಮಾತ್ರ ಅಸ್ತಿತ್ವದಲ್ಲಿರುತ್ತದೆ’ ಎಂದು ಹೇಳಿದ್ದನ್ನು ಪವಾರ್ ನೆನಪಿಸಿದರು.
‘ಈ ಹೇಳಿಕೆಯಿಂದ, ಒಂದು ವಿಷಯ ಸ್ಪಷ್ಟವಾಗಿದೆ. ಇದು ನಿತೀಶ್ ಕುಮಾರ್ ಅವರ ದೂರು ಕೂಡ. ಏನಂದೆರೆ, ಬಿಜೆಪಿ ತನ್ನ ಮಿತ್ರಪಕ್ಷಗಳನ್ನು ಕ್ರಮೇಣ ಮುಗಿಸುತ್ತದೆ. ಉದಾಹರಣೆಗೆ, ಅಕಾಲಿದಳದಂತಹ ಪಕ್ಷವು ಅವರ (ಬಿಜೆಪಿ) ಜೊತೆಯಲ್ಲಿತ್ತು. ಅದರ ನಾಯಕ ಪ್ರಕಾಶ್ ಸಿಂಗ್ ಬಾದಲ್ ಅವರೊಂದಿಗೆ ಇದ್ದರು. ಆದರೆ, ಇಂದು ಪಂಜಾಬ್‌ನಲ್ಲಿ ಆ ಪಕ್ಷವು ಬಹುತೇಕ ಮುಗಿದಿದೆ’ ಎಂದು ಅವರು ಹೇಳಿದರು.
‘ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ಕೂಡ ಬಿಜೆಪಿ ಮತ್ತು ಶಿವಸೇನೆ ಹಲವಾರು ವರ್ಷಗಳ ಕಾಲ ಜೊತೆಯಾಗಿದ್ದವು. ಆದರೆ, ಇಂದು ಪಕ್ಷದೊಳಗೆ ವಿಭಜನೆಯನ್ನು ಮಾಡಿ ಶಿವಸೇನೆಯನ್ನು ಹೇಗೆ ದುರ್ಬಲಗೊಳಿಸಬೇಕೆಂದು ಬಿಜೆಪಿ ಯೋಜನೆ ರೂಪಿಸುತ್ತಿದೆ. ಇದಕ್ಕೆ ಮಹಾರಾಷ್ಟ್ರದ ಸದ್ಯದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಇತರರು ಸಹಾಯ ಮಾಡುತ್ತಿದ್ದಾರೆ. ಇದೇ ರೀತಿಯಾಗಿ ಶಿವಸೇನೆಯ ಮೇಲೆ ಬಿಜೆಪಿ ದಾಳಿ ನಡೆಸಿತು’ ಎಂದು ಪವಾರ್ ದೂರಿದ್ದಾರೆ.
ಇದನ್ನೂ ಓದಿ: 2014ರಲ್ಲಿ ಗೆದ್ದವರು 2024ರಲ್ಲಿ ಗೆಲ್ಲುತ್ತಾರೆಯೇ?: ಪ್ರಧಾನಿ ಮೋದಿಗೆ ನಿತೀಶ್ ಕುಮಾರ್ ಸವಾಲು!
ಇದೇ ರೀತಿಯ ಚಿತ್ರಣ ಕೂಡ ಬಿಹಾರದಲ್ಲಿ ಕಂಡುಬಂದಿತು. ಬಿಜೆಪಿ ಮತ್ತು ಜೆಡಿಯು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದವು. ‘ಬಿಜೆಪಿಯ ಮತ್ತೊಂದು ವಿಶೇಷ ಏನೆಂದರೆ, ಅದು ಚುನಾವಣೆ ಸಮಯದಲ್ಲಿ ಯಾವುದಾದರೊಂದು ಪ್ರಾದೇಶಿಕ ಪಕ್ಷದೊಂದಿಗೆ ಕೈಜೋಡಿಸುತ್ತದೆ. ಆದರೆ, ಮಿತ್ರಪಕ್ಷವು ಕಡಿಮೆ ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸುವಂತೆ ನೋಡಿಕೊಳ್ಳುತ್ತದೆ. ಮಹಾರಾಷ್ಟ್ರದಲ್ಲಿಯೂ ಇದೇ ಸಂಭವಿಸಿತು’ ಎಂದು ಹೇಳಿದರು.
ಬಿಹಾರದಲ್ಲಿ ಇದೇ ರೀತಿಯ ಚಿತ್ರಣ ಕಂಡುಬಂದಾಗ, ರಾಜ್ಯದ ಸಿಎಂ ಸಾಕಷ್ಟು ಮುಂಚಿತವಾಗಿಯೇ ಜಾಗರೂಕರಾಗಿ ಬಿಜೆಪಿಯೊಂದಿಗೆ ಸಂಬಂಧವನ್ನು ಕಡಿದುಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡರು ಎಂದು ಅವರು ಹೇಳಿದರು.
‘ಬಿಜೆಪಿ ನಾಯಕರು ನಿತೀಶ್ ಕುಮಾರ್ ಅವರನ್ನು ಎಷ್ಟೇ ಟೀಕಿಸಿದರೂ ಕೂಡ ಅವರು ಬುದ್ಧಿವಂತ ಹೆಜ್ಜೆ ಇಟ್ಟಿದ್ದಾರೆ. ಬಿಜೆಪಿ ಮುಂದೆ ತರಲು ಯೋಜಿಸುತ್ತಿರುವ ಬಿಕ್ಕಟ್ಟನ್ನು ಮೊದಲೇ ಊಹಿಸಿ ಅವರು ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ತಮ್ಮ ರಾಜ್ಯ ಮತ್ತು ಪಕ್ಷಕ್ಕಾಗಿ ಬುದ್ಧಿವಂತಿಕೆಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ’ ಎಂದು ಪವಾರ್ ಹೇಳಿದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App