Express News Service
ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಬೀಜಮಕ್ಕಿ ಗ್ರಾಮದಲ್ಲಿ ಎಂಟು ತಿಂಗಳ ಹಿಂದೆ ಕಾಲುಸಂಕಕ್ಕೆ ಸರ್ಕಾರ ಹಣ ಮಂಜೂರು ಮಾಡಿದಾಗ ಜನರ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ, ಇದುವರೆಗೂ ಸೇತುವೆ ಕಾಮಗಾರಿ ಆರಂಭವಾಗಿಲ್ಲ. ಈ ಮೂಲಕ ಸರ್ಕಾರಿ ಅಧಿಕಾರಿಗಳ ನಿರಾಸಕ್ತಿ ಬಯಲಾಗಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಸೋಮವಾರ, ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಪ್ರದೀಪ್ ಮತ್ತು ಸುಮಿತ್ರಾ ಪೂಜಾರಿ ದಂಪತಿಯ ಪುತ್ರಿ, 2ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ, ಹೊಳೆಗೆ ಅಡ್ಡಲಾಗಿ ಹಾಕಿರುವ ಕಾಲುಸಂಕವನ್ನು ದಾಟುವಾಗ ಜಾರಿ ಬಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ. ಬೀಜಮಕ್ಕಿಯಿಂದ ಶಾಲೆಗೆ ಹೋಗಲು ಸುಮಾರು 10 ಮಕ್ಕಳು ಪ್ರತಿದಿನ ಕಾಲುಸಂಕವನ್ನು ಬಳಸುತ್ತಾರೆ. ಎಂಟು ತಿಂಗಳ ಹಿಂದೆಯೇ 11 ಲಕ್ಷ ರೂ. ಮಂಜೂರಾಗಿದ್ದರೂ, ಇಲ್ಲಿ ಪೂರ್ಣ ಪ್ರಮಾಣದ ಕಿರು ಸೇತುವೆ ನಿರ್ಮಾಣಕ್ಕೆ ಪಿಡಬ್ಲ್ಯುಡಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ.
ಇದೇ ಮರದ ಕಾಲುಸಂಕವನ್ನು ಸುಮಾರು 40 ಕುಟುಂಬಗಳು ಅವಲಂಬಿಸಿವೆ. ಈ ವರ್ಷ ಅತಿವೃಷ್ಟಿಯಿಂದ ಹೊಳೆ ತುಂಬಿ ಹರಿಯುತ್ತಿದ್ದು, ಸೇತುವೆಯ ಅಗತ್ಯವನ್ನು ಕಾಲ್ತೋಡು ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳಿಗೆ ಮತ್ತೊಮ್ಮೆ ನೆನಪಿಸಿದ್ದಾರೆ. ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ಮಂಗಳವಾರ ಸನ್ನಿಧಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಇದನ್ನೂ ಓದಿ: ಉಡುಪಿ: ಬೈಂದೂರಿನಲ್ಲಿ ಕಾಲುಸಂಕ ದಾಟುವಾಗ ಜಾರಿಬಿದ್ದು ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ, ಇನ್ನೂ ಪತ್ತೆಯಾಗದ ಸನ್ನಿಧಿ
ಶೋಧ ಕಾರ್ಯಾಚರಣೆ ತೀವ್ರಗೊಂಡಿದ್ದರೂ, ಇನ್ನೂ ಸನ್ನಿಧಿ ಪತ್ತೆಯಾಗಿಲ್ಲ. ಮಂಗಳವಾರ ಸ್ಥಳ ಪರಿಶೀಲನೆ ನಡೆಸಿ ಸೇತುವೆ ನಿರ್ಮಿಸುವಂತೆ ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ಟಿಎನ್‌ಐಇಗೆ ತಿಳಿಸಿದ್ದಾರೆ. ಜಿಲ್ಲೆಯ ಅನೇಕ ಭಾಗಗಳಲ್ಲಿ, ಸಣ್ಣ ಸೇತುವೆಗಳು ಮತ್ತು ಕ್ರೀಕಿಂಗ್ ಹಲಗೆಗಳನ್ನು ಶಾಲಾ ಮಕ್ಕಳು ಬಳಸುತ್ತಿದ್ದಾರೆ.
‘ಅತ್ತಿಕೊಡ್ಲು-ದೊಡ್ಡಬೇರುನಲ್ಲಿರುವ ಒಂದು ಸಣ್ಣ ಸೇತುವೆಯು ನಮ್ಮ ಹಳ್ಳಿಯ ಅನೇಕ ಮಕ್ಕಳಿಗೆ ಸಹಾಯ ಮಾಡುತ್ತದೆ. ಸೇತುವೆ ನಿರ್ಮಾಣಕ್ಕೆ ಸುಮಾರು 7 ಲಕ್ಷ ರೂಪಾಯಿ ಹಣ ಬೇಕಾಗುತ್ತದೆ. ಈ ಬಗ್ಗೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಹಾಗೂ ಉಡುಪಿ ಜಿಲ್ಲಾ ಪಂಚಾಯತ್‌ಗೆ ಮನವಿ ಪತ್ರ ಸಲ್ಲಿಸಲಾಗಿದೆ’ ಎಂದು ಪಕ್ಕದ ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೇಖರ್ ಕುಲಾಲ್ ಟಿಎನ್ಐಇಗೆ ತಿಳಿಸಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App