Online Desk
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಆಯೋಜಕರು ಮತ್ತು ಅಂಪೈರ್ ಗಳು ಮಾಡಿದ ಮಹಾ ಎಡವಟ್ಟಿನ ಕಾರಣದಿಂದ ಭಾರತ ಮಹಿಳಾ ಹಾಕಿ ತಂಡ ಸೆಮಿಫೈನಲ್ ನಲ್ಲಿ ಆಸ್ಚ್ರೇಲಿಯಾ ವಿರುದ್ಧ ಸೋಲು ಕಂಡಿದ್ದು, ಈ ಪ್ರಮಾದದ ಕುರಿತು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಕ್ಷಮೆ ಯಾಚಿಸಿದೆ.
ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ ಹಾಕಿ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದರ ಹೊರತಾಗಿಯೂ ಭಾರತ ತಂಡ, ಫೈನಲ್ ತಲುಪಲು ವಿಫಲವಾಗಿದೆ. ಪೆನಾಲ್ಟಿ ಶೂಟೌಟ್ ವೇಳೆ ಆದ ‘ಟೈಮರ್’ ಪ್ರಮಾದ ಕೂಡ ಭಾರತದ ಸೋಲಿಗೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.
ಬರ್ಮಿಂಗ್‌ಹ್ಯಾಂನಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತದ ವನಿತೆಯರು ದಿಟ್ಟ ಆಟವಾಡಿದ್ದರು. ಪಂದ್ಯದ ಅವಧಿ ಮುಕ್ತಾಯದ ವೇಳೆಗೆ, ನಾಲ್ಕು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಎದುರು 1–1 ಅಂತರದಿಂದ ಡ್ರಾ ಸಾಧಿಸಿದ್ದರು. ಹೀಗಾಗಿ ಫಲಿತಾಂಶ ನಿರ್ಣಯಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆಹೋಗಲಾಗಿತ್ತು. ಈ ಹೋರಾಟದಲ್ಲಿ 0–3 ಅಂತರದಿಂದ ಸೋಲೊಪ್ಪಿಕೊಂಡ ಸುನಿತಾ ಪೂನಿಯಾ ಪಡೆ, ಫೈನಲ್ ಹಣಾಹಣಿಯಿಂದ ಹೊರಬಿದ್ದಿದೆ. ಹಾಗಿದ್ದರೂ, ಕಂಚಿನ ಪದಕ ಗೆಲ್ಲುವ ಅವಕಾಶವಿದ್ದು, ಭಾನುವಾರ ನಡೆಯಲಿರುವ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ.
ಟೈಮರ್ ವಿವಾದ
ಪೆನಾಲ್ಟಿ ಶೂಟೌಟ್ ವೇಳೆ ಆಸ್ಟ್ರೇಲಿಯಾದ ಅಂಬ್ರೋಸಿಯಾ ಮಲೋನ್ ಅವರು ಮೊದಲ ಹೊಡೆತದಲ್ಲಿ ಗೋಲು ಬಾರಿಸಲು ವಿಫಲರಾದರು. ನಂತರದ ಭಾರತದ ಸ್ಟ್ರೈಕರ್ ಲಲ್ರೆಮ್ಸಿಯಾನಿ ಭಾರತ ಪರ ಪೆನಾಲ್ಟಿ ಶೂಟೌಟ್‌ಗೆ ಬಂದರು. ಆದರೆ, ಈ ವೇಳೆ ಮಧ್ಯಪ್ರವೇಶಿಸಿದ ರೆಫ್ರಿ, ಮಲೋನ್ ಶೂಟೌಟ್ ವೇಳೆ ಟೈಮರ್ ಆರಂಭವಾಗಿರಲಿಲ್ಲ ಎಂದು ಮತ್ತೊಂದು ಅವಕಾಶ ನೀಡಿದರು. ಇದರ ಲಾಭ ಪಡೆದ ಮಲೋನ್, ಗೋಲು ಬಾರಿಸುವಲ್ಲಿ ಸಫಲರಾದರು.
ಇದನ್ನೂ ಓದಿ: ಕಾಮನ್ ವೆಲ್ತ್ ಗೇಮ್ಸ್: ಸಮೀಸ್ ನಲ್ಲಿ ಸೋಲು, ಭಾರತ ಮಹಿಳಾ ಹಾಕಿ ತಂಡದ ಚಿನ್ನದ ಪದಕ ಕನಸು ನುಚ್ಚು ನೂರು ಮಾಡಿದ ಅಂಪೈರಿಂಗ್ ಎಡವಟ್ಟು?
ನಂತರದ ಎರಡು ಅವಕಾಶಗಳಲ್ಲಿಯೂ ಗೋಲು ಬಾರಿಸಿದ ಆಸ್ಟ್ರೇಲಿಯನ್ನರು 3–0 ಅಂತರದ ಮುನ್ನಡೆ ಸಾಧಿಸಿದರು. ಟೈಮರ್ ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿವೆ. ಭಾರತದ ಆಟಗಾರ್ತಿಯರ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ನೆಟ್ಟಿಗರು, ಪಂದ್ಯದ ರೆಫ್ರಿ, ಆಯೋಜಕರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಕ್ಷಮೆ ಕೇಳಿದ FIH
ಟೈಮರ್ ವಿವಾದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಎಚ್) ಶನಿವಾರ ಕ್ಷಮೆಯಾಚಿಸಿದ್ದು, ಘಟನೆಯನ್ನು ಸಂಪೂರ್ಣವಾಗಿ ಪರಿಶೀಲಿಸುವುದಾಗಿ ಹೇಳಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ‘ಬರ್ಮಿಂಗ್ಹ್ಯಾಮ್ 2022 ರ ಕಾಮನ್ವೆಲ್ತ್ ಕ್ರೀಡಾಕೂಟದ ಆಸ್ಟ್ರೇಲಿಯಾ ಮತ್ತು ಭಾರತ (ಮಹಿಳೆಯರು) ನಡುವಿನ ಸೆಮಿ-ಫೈನಲ್ ಪಂದ್ಯದಲ್ಲಿ, ಪೆನಾಲ್ಟಿ ಶೂಟೌಟ್ ತುಂಬಾ ಮುಂಚೆಯೇ ಅಂದರೆ ಟೈಮರ್ ಚಾಲನೆಯಾಗುವ ಮುನ್ನವೇ ತಪ್ಪಾಗಿ ಪ್ರಾರಂಭವಾಯಿತು. ಇದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ‘ಇಂತಹ ಸನ್ನಿವೇಶಗಳಲ್ಲಿ ಪ್ರಕ್ರಿಯೆಯು ಪೆನಾಲ್ಟಿ ಶೂಟೌಟ್ ಅನ್ನು ಮರುಪಡೆಯಬೇಕಾಗಿರುತ್ತದೆ, ಅದನ್ನೇ ರೆಫರಿಗಳು ಮಾಡಿದ್ದಾರೆ. ಭವಿಷ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಗಳನ್ನು ತಪ್ಪಿಸಲು ಈ ಘಟನೆಯನ್ನು ಎಫ್‌ಐಎಚ್ ಸಂಪೂರ್ಣವಾಗಿ ಪರಿಶೀಲಿಸುತ್ತದೆ ಎಂದು ಸ್ಪಷ್ಟಪಡಿಸಿದೆ.
ಏನಿದು ಪೆನಾಲ್ಟಿ ಶೂಟೌಟ್ ಟೈಮರ್ ನಿಯಮ
ನಿಯಮಗಳ ಪ್ರಕಾರ, ಹಾಕಿ ಪಂದ್ಯದಲ್ಲಿ ಉಭಯ ತಂಡಗಳು ನಿಗಧಿತ ಸಮಯದಲ್ಲಿ ಗೋಲು ಗಳಿಸುವಲ್ಲಿ ವಿಫಲವಾದರೆ ಪಂದ್ಯದ ಫಲಿತಾಂಶ ನಿರ್ಣಯಕ್ಕೆ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಗುತ್ತದೆ. ಇಲ್ಲಿ ಉಭಯ ತಂಡಗಳಿಗೆ ತಲಾ 5 ಅವಕಾಶ ನೀಡಿ ಶೂಟೌಟ್ ಗೆ ಅವಕಾಶ ನೀಡಲಾಗುತ್ತದೆ. ಪ್ರತೀ ಶೂಟೌಟ್ ಗೆ 8 ಸೆಕೆಂಡ್ ಗಳ ಸಮಯವಿರಲಿದ್ದು, ಈ ಸಮಯದೊಳಗೆ ಗೋಲ್ ಕೀಪರ್ ರನ್ನು ವಂಚಿಸಿ ಗೋಲು ಗಳಿಸಬೇಕು. ಹೆಚ್ಚು ಗೋಲು ಗಳಿಸುವ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ.
ಇದನ್ನೂ ಓದಿ: ಕಾಮನ್ ವೆಲ್ತ್ ಗೇಮ್ಸ್ 2022: ನಡಿಗೆಯಲ್ಲಿ ಪ್ರಿಯಾಂಕಾ, ಸ್ಟೀಪಲ್ ಚೇಸ್ ನಲ್ಲಿ ಅವಿನಾಶ್ ಗೆ ಬೆಳ್ಳಿ
ಇನ್ನು ಶೂಟೌಟ್ ಪ್ರಕ್ರಿಯೆಗೆ ತಾಂತ್ರಿಕ ಪ್ರತಿನಿಧಿಯು ಟೈಮರ್ ಪ್ರಾರಂಭಿಸಲು ಸಂಕೇತವನ್ನು ನೀಡಬೇಕು. ಈ ಸಂಕೇತದ ಬಳಿಕವಷ್ಚೇ ಆನ್ ಫೀಲ್ಡ್ ರೆಫರಿ ಶೂಟೌಟ್ ಗೆ ವಿಜಿಲ್ ಊದುವ ಮೂಲಕ ಚಾಲನೆ ನೀಡಬೇಕು. ಆದರೆ ಇಂದಿನ ಪಂದ್ಯದಲ್ಲಿ ಆನ್ ಫೀಲ್ಡ್ ಅಂಪೈರ್ ತಾಂತ್ರಿಕ ಸಿಬ್ಬಂದಿಯ ಸಂಕೇತ ನೀಡುವ ಮುನ್ನವೇ ಪ್ರಕ್ರಿಯೆ ಶೂಟೌಟ್ ಪ್ರಕ್ರಿಯೆ ಆರಂಭಿಸಿದ್ದು, ಬಳಿಕ ಎಚ್ಚೆತ್ತ ಸಿಬ್ಬಂದಿ ಅದನ್ನು ರದ್ದುಗೊಳಿಸಿ ಪುನಃ ಶೂಟೌಟ್ ಪ್ರಕ್ರಿಯೆ ಆರಂಭಿಸಿದರು. ಈ ವೇಳೆ ಆಸ್ಚ್ರೇಲಿಯಾ ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. ಇದು ಇದೀಗ ವಿವಾದಕ್ಕೆ ಕಾರಣವಾಗಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App