The New Indian Express
ವಿಜಯಪುರ: ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಉಕ್ಕಿ ಹರಿಯುತ್ತಿರುವ ಡೋಣಿ ನದಿಯಿಂದ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ನಾಲ್ಕು ಗ್ರಾಮಗಳು ತೀವ್ರ ರೀತಿಯಲ್ಲಿ ಹಾನಿಗೊಳಗಾಗಿವೆ. ಕೋಟ್ಯಾಲ್, ಧನ್ಯಾಲ್, ದಶ್ಯಾಲ್ ಮತ್ತು ಸರ್ವಾಡ್ ಗ್ರಾಮಗಳು ಮುಳುಗಡೆಯ ಭೀತಿಯಲ್ಲಿವೆ. ಕಳೆದ 72 ಗಂಟೆಗಳಿಂದ ಈ ಗ್ರಾಮಗಳಲ್ಲಿನ ಕೃಷಿ ಜಮೀನುಗಳು ಸಂಪೂರ್ಣ ಜಲಾವೃತವಾಗಿದ್ದು, ಬೆಳೆ ನಾಶವಾಗಿದೆ.
ಗ್ರಾಮಸ್ಥರು ನದಿ ಹಾಗೂ ಹೊಲಗಳ ಬಳಿ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಜಿಲ್ಲೆಯ ಬಬಲೇಶ್ವರ, ತಿಕೋಟ, ಬಸವನ ಬಾಗೇವಾಡಿ, ನಿಡಗುಂದಿ, ತಾಳಿಕೋಟಿ ಮತ್ತು ಮುದ್ದೇಬಿಹಾಳ ತಾಲೂಕುಗಳಲ್ಲಿ ಹೆಚ್ಚು ಹಾನಿಯಾಗಿದೆ. ಜಿಲ್ಲಾಡಳಿತದ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 21.125 ಮಿ.ಮೀ ಮಳೆ ದಾಖಲಾಗಿದೆ. ಬಬಲೇಶ್ವರ ತಾಲೂಕಿನಲ್ಲಿ ಅತಿ ಹೆಚ್ಚು 66.2 ಮಿ.ಮೀ ಮಳೆಯಾಗಿದ್ದು, ತಿಕೋಟ 42.55 ಮಿ.ಮೀ, ವಿಜಯಪುರ 41.44 ಮತ್ತು ದೇವರ ಹಿಪ್ಪರಗಿ 41.3 ಮಿ.ಮೀ ಮಳೆಯಾಗಿದೆ. ನಿಡಗುಂದಿಯಲ್ಲಿ 3.1 ಮಿ.ಮೀ ಮಳೆಯೊಂದಿಗೆ ಕಡಿಮೆ ಮಳೆ ದಾಖಲಾಗಿದೆ.
ಜಿಲ್ಲಾಧಿಕಾರಿ ವಿಜಯಮಹಾಂತೇಶ ಬಿ ಡಿ ಪ್ರವಾಹ ಬಾಧಿತ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಈ ಪ್ರದೇಶದಲ್ಲಿ ಉಂಟಾಗಬಹುದಾದ ಪ್ರವಾಹ ಪರಿಸ್ಥಿತಿಯ ಕುರಿತು ರೈತರು ಮತ್ತು ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು. ಸಮೀಕ್ಷೆ ನಡೆಸಿ ನಷ್ಟ ಪರಿಹಾರ ನೀಡುವುದಾಗಿ ಜನರಿಗೆ ಭರವಸೆ ನೀಡಿದರು. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ತುಂತುರು ಮಳೆಯಾಗುತ್ತಿದ್ದು, ಬಹುತೇಕ ಕೃಷಿ ಜಮೀನುಗಳು ಜಲಾವೃತಗೊಂಡಿದ್ದು ರೈತರು ಕಂಗಾಲಾಗಿದ್ದಾರೆ. ರೈತರು ತೊಗರಿಬೇಳೆ, ಸೂರ್ಯಕಾಂತಿ, ಹತ್ತಿ ಸೇರಿದಂತೆ ಪ್ರಮುಖ ಖಾರಿಫ್ ಬೆಳೆಗಳನ್ನು ಬಿತ್ತನೆ ಮಾಡಿದ್ದು, ಈ ಹಂಗಾಮಿನಲ್ಲಿ ಅತಿವೃಷ್ಟಿಯಿಂದ ನಷ್ಟದ ಭೀತಿ ಎದುರಿಸುತ್ತಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಚೌಹಾಣ್, ಪ್ರಾಥಮಿಕ ಸಮೀಕ್ಷೆಯ ಪ್ರಕಾರ, ಈ ಪ್ರದೇಶದಲ್ಲಿ ಸುಮಾರು 2,000 ಹೆಕ್ಟೇರ್ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನೂ ಎರಡ್ಮೂರು ದಿನ ಮಳೆ ಮುಂದುವರಿದರೆ, ಈ ಭಾಗದ ಪ್ರಮುಖ ಖಾರಿಫ್ ಬೆಳೆಯಾದ ತೊಗರಿ ಬೆಳೆಗಾರರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸೂರ್ಯಕಾಂತಿ ಮತ್ತು ಹತ್ತಿ ಬೆಳೆಗೂ ಕೆಟ್ಟ ಪರಿಣಾಮ ಬೀರಿದೆ ಎಂದರು.
ಡೋಣಿ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ತಾಳಿಕೋಟಿ-ವಿಜಯಪುರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಸೇತುವೆ ಮುಳುಗಡೆಯಾದ ಕಾರಣ ಮುದ್ದೇಬಿಹಾಳ ಪಟ್ಟಣ ಮಾರ್ಗದಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಇದು ತೆಲಂಗಾಣ ಮತ್ತು ರಾಜ್ಯದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿಗಳಲ್ಲಿ ಒಂದಾಗಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App