English Tamil Hindi Telugu Kannada Malayalam Google news Android App
Tue. Mar 28th, 2023

Online Desk

– ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಜುಲೈ 31, 2022ರ ಬೆಳಗಿನ ಜಾವದಲ್ಲಿ, ಅಫ್ಘಾನಿಸ್ತಾನದ ಕಾಬೂಲ್ ಜನತೆಗೆ ಒಂದು ದೊಡ್ಡದಾದ ಸ್ಫೋಟದ ಸದ್ದಿನೊಂದಿಗೆ ಎಚ್ಚರವಾಗಿತ್ತು. ಆ ಸ್ಫೋಟ ನಡೆದ ಸ್ಥಳವನ್ನು ಆಡುಭಾಷೆಯಲ್ಲಿ ಚೋರ್‌ಪುರ್, ಅಂದರೆ ಕಳ್ಳರ ಪಟ್ಟಣ ಎಂಬುದಾಗಿ ಕರೆಯುತ್ತಿದ್ದರು. ಮಂಗಳವಾರ ಬೆಳಗಿನ ತನಕವೂ ಆ ಸ್ಫೋಟದ ಸ್ಥಳದಲ್ಲಿ ಏನು ನಡೆದಿರಬಹುದೆಂದು ಊಹಾಪೋಹಗಳು ಹರಿದಾಡುತ್ತಿದ್ದವು. ಮಂಗಳವಾರ ಅಮೆರಿಕಾ ಸೇನೆ ಅಧಿಕೃತವಾಗಿ ಆ ಸ್ಫೋಟ ನಡೆದ ಸ್ಥಳ ನಿಜಕ್ಕೂ ಭಾರತ ವಿರೋಧಿ ಉಗ್ರಗಾಮಿ ಸಂಸ್ಥೆಯಾದ ಅಲ್ ಖೈದಾ ಸಂಘಟನೆಯ ಮುಖ್ಯಸ್ಥ, ಐಮನ್ ಅಲ್ ಜವಾಹಿರಿಯ ಅಡಗುತಾಣವಾಗಿತ್ತು ಎಂದು ಸ್ಪಷ್ಟಪಡಿಸಿತು.

ಯಾರು ಈ ಅಲ್ ಜವಾಹಿರಿ?

ಜವಾಹಿರಿ ಮೂಲತಃ ಓರ್ವ ನೇತ್ರ ಶಸ್ತ್ರಚಿಕಿತ್ಸಾ ತಜ್ಞನಾಗಿದ್ದ. ಆದರೆ ಅವನು ಈಜಿಪ್ಟಿನ ಇಸ್ಲಾಮಿಕ್ ಜಿಹಾದ್ ಉಗ್ರವಾದಿ ತಂಡದ ಸ್ಥಾಪನೆಗೆ ಸಹಾಯ ಮಾಡಿದ್ದ. ಅಮೆರಿಕಾ ಸೇನೆ ಒಸಾಮಾ ಬಿನ್ ಲಾಡೆನ್ ಅನ್ನು ಕೊಂದ ಬಳಿಕ ಅಲ್ ಜವಾಹಿರಿ ಅಲ್ ಖೈದಾ ಮುಖ್ಯಸ್ಥನಾಗಿ ಮೇ 2011ರಲ್ಲಿ ಅಧಿಕಾರ ವಹಿಸಿಕೊಂಡ.

ಜವಾಹಿರಿ ಈ ಮೊದಲು ಬಿನ್ ಲಾಡೆನ್ ಬಲಗೈ ಬಂಟನಾಗಿದ್ದ. ಅಮೆರಿಕಾದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ನಡೆದ ಸೆಪ್ಟೆಂಬರ್ 11ರ ದಾಳಿಯ ಹಿಂದಿನ ಮೆದುಳು ಜವಾಹಿರಿಯೇ ಎಂದು ಹೇಳಲಾಗುತ್ತದೆ. 2001ರಲ್ಲಿ ಅಮೆರಿಕಾ ಸರ್ಕಾರ ಬಿಡುಗಡೆಗೊಳಿಸಿದ್ದ ಜಗತ್ತಿನ ಮೋಸ್ಟ್ ವಾಂಟೆಡ್‌ ಉಗ್ರರ ಪಟ್ಟಿಯಲ್ಲಿ ಅಲ್ ಜವಾಹಿರಿ ಎರಡನೇ ಸ್ಥಾನದಲ್ಲಿದ್ದ. ಅವನ ತಲೆಯ ಮೇಲೆ ಅಮೆರಿಕಾ ಸರ್ಕಾರ 25 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು.

ಈ ದಾಳಿಯ ನಂತರ ಜವಾಹಿರಿ ಅಲ್ ಖೈದಾ ಸಂಘಟನೆಯ ಪ್ರಮುಖ ವಕ್ತಾರನಾಗಿ ರೂಪುಗೊಂಡು, ಬಿನ್ ಲಾಡೆನ್‌ಗಿಂತಲೂ ನಾಲಕ್ಕು ಪಟ್ಟು ಹೆಚ್ಚಾಗಿ ಕಾಣಿಸಿಕೊಂಡಿದ್ದ. ಅಲ್ ಖೈದಾ ಜಗತ್ತಿನಾದ್ಯಂತ ಬಲಗೊಳ್ಳಲು ಮತ್ತು ಜಗತ್ತಿನಾದ್ಯಂತ ಮುಸ್ಲಿಮರನ್ನು ಸಂಘಟನೆಗೆ ಸೇರಿಸಿಕೊಳ್ಳಲು ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದ.

ಇತ್ತೀಚೆಗೆ ಪ್ರಕಟಗೊಂಡ ತನ್ನ ವೀಡಿಯೋ ಒಂದರಲ್ಲಿ ಅಲ್ ಜವಾಹಿರಿ ಭಾರತದಲ್ಲಿನ ಹಿಜಾಬ್ ವಿವಾದದ ಕುರಿತು ಮಾತನಾಡಿ, ಭಾರತೀಯ ಮುಸಲ್ಮಾನರನ್ನು ಬೌದ್ಧಿಕವಾಗಿ, ಮಾಧ್ಯಮಗಳನ್ನು ಉಪಯೋಗಿಸಿ ಹೋರಾಡಬೇಕೆಂದು ಕರೆ ನೀಡಿದ್ದ. ಇತ್ತೀಚಿನ ದಿನಗಳಲ್ಲಿ ಅತ್ಯಂತ ವಿವಾದಾಸ್ಪದವಾಗಿದ್ದ ವಿಚಾರದ ಕುರಿತು ಜವಾಹಿರಿ ಮಾತನಾಡಿದ್ದು ಅವನಿನ್ನೂ ಜೀವಂತವಾಗಿದ್ದಾನೆ ಹಾಗೂ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾನೆ ಎಂದು ಜಗತ್ತಿಗೆ ಸಾಬೀತುಪಡಿಸಿತ್ತು. ಅವನು ತನ್ನ ವೀಡಿಯೋದಲ್ಲಿ ಓರ್ವ ಯುವ ಭಾರತೀಯ ವಿದ್ಯಾರ್ಥಿನಿಯನ್ನು ಹೊಗಳುತ್ತಾ, ಅವಳು ಜಿಹಾದ್‌ಗೆ ಸ್ಫೂರ್ತಿ ತುಂಬಿದ್ದಾಳೆ ಎಂದಿದ್ದ.

ಇದನ್ನೂ ಓದಿ: ಅಮೆರಿಕಾ: ರೇಥಿಯಾನ್ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷಾ ಪ್ರಯೋಗ ಯಶಸ್ವಿ!

ಅಲ್ ಜವಾಹಿರಿ ತನ್ನ ಮೊದಲಿನ ವೀಡಿಯೋಗಳಲ್ಲಿ ಹೆಚ್ಚಾಗಿ ಪಶ್ಚಿಮ ರಾಷ್ಟ್ರಗಳ ಮೇಲೆ ಇಸ್ಲಾಮಿನ ಯುದ್ಧದ ಕುರಿತಾಗಿ ಮಾತನಾಡುತ್ತಿದ್ದ. ಅವನ ಮಾತುಗಳಲ್ಲಿ ಆಗೊಮ್ಮೆ ಈಗೊಮ್ಮೆ ಮಾತ್ರ ಭಾರತದ ಬಗ್ಗೆ ಮಾತು ಬರುತ್ತಿತ್ತು.

ಬೇಟೆಯ ಸಮಯ: ಭಯೋತ್ಪಾದಕನನ್ನು ಸಂಹರಿಸಿದ್ದು ಹೇಗೆ?

ಅಮೆರಿಕಾ ಅಫ್ಘಾನಿಸ್ತಾನದಲ್ಲಿ ಸೇನೆ ನೇಮಿಸಿದ್ದ ಅವಧಿಯಲ್ಲಿ ಸಾಕಷ್ಟು ಗಲಭೆಗಳಾಗಿದ್ದವು. ಅಮೆರಿಕಾದಲ್ಲಿ ಸೆಪ್ಟೆಂಬರ್ 11ರ ದಾಳಿಯ ಬಳಿಕ ಎರಡು ದಶಕಗಳ ಕಾಲ ಅಮೆರಿಕಾ ಅಫ್ಘಾನಿಸ್ತಾನದಲ್ಲಿ ಸೇನೆ ನೇಮಿಸಿತ್ತು. ಅಮೆರಿಕಾ ಸೇನೆ ಅಲ್ಲಿಂದ ತೆರಳಿದ ನಂತರ ಆ ದ್ವಂಸಗೊಂಡ ದೇಶದಲ್ಲಿ ತಾಲಿಬಾನ್ ಆಡಳಿತ ಆರಂಭಗೊಂಡು, ಉಗ್ರಗಾಮಿ ನಾಯಕ ಅಲ್ ಜವಾಹಿರಿ ಸುರಕ್ಷಿತವಾಗಿ ನೆಲೆಯೂರಿದ್ದ. ಇದು ಅಫ್ಘಾನಿಸ್ತಾನದಲ್ಲಿ ಅಮೆರಿಕಾದ ಪ್ರಯೋಗಗಳು ಹೇಗೆ ವಿಫಲವಾದವು ಎಂಬುದನ್ನು ಸೂಚಿಸುತ್ತದೆ.

ಈ ಘಟನೆಗಳು ಕೆಲವರಿಗೆ ತಾಲಿಬಾನ್ ಆಡಳಿತದ ಎರಡು ಅವಧಿಗಳ ಮಧ್ಯ ಎಷ್ಟು ಕನಿಷ್ಠ ಬದಲಾವಣೆಗಳಾಗಿವೆ ಎಂಬುದರ ಚಿತ್ರಣವಾಗಿದೆ. ತಾಲಿಬಾನಿಗಳು ಅಲ್ ಖೈದಾ ನಾಯಕನನ್ನು ಸುರಕ್ಷಿತ ತಾಣವೊಂದರಲ್ಲಿ ಇರಿಸಿದ್ದರು. ಅಲ್ಲಿ ಅವನೊಡನೆ ಅವನ‌ ಕುಟುಂಬಸ್ತರೂ ಸುಖವಾಗಿ ಜೀವನ ನಡೆಸುತ್ತಿದ್ದರು.

ಇನ್ನುಳಿದವರಿಗೆ ಈ ಘಟನೆ ಅದು ಹೇಗೆ ವಿಚಕ್ಷಣೆ, ಡ್ರೋನ್‌ಗಳು ಹಾಗೂ ದೂರದಿಂದಲೇ ಕೊಲ್ಲುವ ತಂತ್ರಜ್ಞಾನಗಳು ಎಷ್ಟು ಅಭಿವೃದ್ಧಿ ಹೊಂದಿವೆ ಹಾಗೂ ಭಯೋತ್ಪಾದಕ ನಾಯಕನನ್ನು ಹೇಗೆ ಸಂಹರಿಸಬಹುದು ಎಂದು ಸಾಬೀತುಪಡಿಸಿದೆ‌. 2001ರ ಬಳಿಕದ 21 ವರ್ಷಗಳಲ್ಲಿ ಅಮೆರಿಕಾದ ಡ್ರೋನ್‌ಗಳು ಅತ್ಯಂತ ಬಲಶಾಲಿಯಾಗಿದ್ದವು ಮತ್ತು ಗುರಿಗಳ ಮೇಲೆ ನಿಖರವಾಗಿ ದಾಳಿ ಮಾಡುತ್ತಿದ್ದವು. ಅಮೆರಿಕಾ ಸೇನೆಗೆ ಅಲ್ ಜವಾಹಿರಿಯ ಹತ್ಯೆ ಮಾಡಲು ಎರಡು ದಶಕಗಳ ಕಾಲ ತಾಳ್ಮೆಯಿಂದ ಕಾಯಬೇಕಾಯಿತು. ಈ ಹತ್ಯೆ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಅಫ್ಘಾನಿಸ್ತಾನದಿಂದ ವರ್ಷದ ಹಿಂದೆ ಸೇನೆ ಹಿಂಪಡೆದರೂ, ಭಯೋತ್ಪಾದನೆಯ ವಿರುದ್ಧದ ಸಮರದಲ್ಲಿ ಇನ್ನೂ ಬದ್ಧವಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ‌.

ಆದರೆ, ಒಂದು ವೇಳೆ ಅಮೆರಿಕಾ ಅಫ್ಘಾನಿಸ್ತಾನಕ್ಕೆ ಹೋಗುವ ಉದ್ದೇಶ ಇಂತಹ ಕಾರ್ಯಾಚರಣೆಗಳನ್ನು ನಡೆಸುವುದಾದರೆ, ಸೆಪ್ಟೆಂಬರ್ 11ರ ದಾಳಿಯ ಮಾಸ್ಟರ್ ಮೈಂಡ್‌ಗಳನ್ನು ಶಿಕ್ಷಿಸುವುದೇ ಆಗಿದ್ದರೆ, ಇದನ್ನು ಅಫ್ಘಾನಿಸ್ತಾನದ ಮರು ನಿರ್ಮಾಣಕ್ಕೆ ಪ್ರಯತ್ನ ನಡೆಸದೆ ಕೈಗೊಳ್ಳಬಹುದಾಗಿತ್ತು.

ಆದರೆ ಈ ಉದ್ದೇಶಗಳು ಬದಲಾಗಿ, ಅಮೆರಿಕಾದ ಆಗಿನ ಅಧ್ಯಕ್ಷ ಜಾರ್ಜ್ ಬುಷ್ ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವದ ಆರಂಭ ಮತ್ತು ವಿದ್ಯಾರ್ಥಿನಿಯರು ಶಾಲೆಗೆ ಹೋಗುವುದನ್ನು ಸಂಭ್ರಮಿಸಿದ್ದರು. ಆ ಬಳಿಕ ಅಮೆರಿಕಾದ ಸೇನೆ ಅಫ್ಘಾನಿಸ್ತಾನದಲ್ಲಿ ಕೃಷಿ ಚಟುವಟಿಕೆ ಮತ್ತು ನ್ಯಾಯಾಲಯ ವ್ಯವಸ್ಥೆಗಳನ್ನು ಆರಂಭಿಸಲು ಸಹಕರಿಸಿತು. ಕೆಲವು ಕಾಲ ಅಮೆರಿಕಾ ತಾನ ಅಫ್ಘಾನಿಸ್ತಾನಕ್ಕೆ ಮರುಹುಟ್ಟು ನೀಡುತ್ತಿದ್ದೇನೆ, ಪ್ರಜಾಪ್ರಭುತ್ವಕ್ಕೆ ದಾರಿ ಮಾಡುತ್ತಿದ್ದೇನೆ ಎಂದುಕೊಂಡಿತ್ತು. ಆದರೆ ಡ್ರೋನ್‌ಗಳು ಅಫ್ಘಾನಿಸ್ತಾನದಲ್ಲಿ ಅಂತರ್ಗತವಾಗಿದ್ದ‌ ಸಮಾಜ ವ್ಯವಸ್ಥೆ ಮತ್ತು ತಾಲಿಬಾನನ್ನು ನಾಶಗೊಳಿಸಲು ಸಾಧ್ಯವಾಗಿರಲಿಲ್ಲ. ಯುದ್ಧತಂತ್ರದಲ್ಲಿ ಅಮೆರಿಕಾ ಯಶಸ್ವಿಯಾಗಿದ್ದರೂ, ಕಾರ್ಯಾಚರಣೆಗಳಲ್ಲಿ ಯಶಸ್ವಿಯಾಗಲಿಲ್ಲ. ಬಿನ್ ಲಾಡೆನ್ ಮತ್ತು ಅಲ್ ಜವಾಹಿರಿಯ ಹತ್ಯೆ ಆಗಿದ್ದರೂ, ಸಾಮಾನ್ಯ ಜನರಿಗೆ ಸಮಾಜ ಇನ್ನೂ ಕ್ರೂರವಾಗಿತ್ತು. ಅಲ್ ಜವಾಹಿರಿ ಸತ್ತಿದ್ದರೂ, ತಾಲಿಬಾನ್ ಇನ್ನೂ ಅಧಿಕಾರ ನಡೆಸುತ್ತಿದೆ.

ಇದನ್ನೂ ಓದಿ: ಉಕ್ರೇನ್‌ ಯುದ್ಧ ಹುಟ್ಟುಹಾಕಿದೆಯೇ ‘ಡಿಸೈನರ್‌ ವಾರ್‌’ ಎಂಬ ಪರಿಕಲ್ಪನೆ?

ಅಮೆರಿಕಾದ ಮಾಜಿ ತಾಲಿಬಾನ್ ಸಂಪರ್ಕಾಧಿಕಾರಿ ಈ ದಾಳಿಯನ್ನು ಅಮೆರಿಕಾ ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದುದಕ್ಕೆ ಸರಿಹೋಯಿತು ಎಂದು ಹೇಳಿದ್ದರು. ಅಫ್ಘಾನಿಸ್ತಾನದ ಶಾಂತಿ ಮಾತುಕತೆಗೆ ಟ್ರಂಪ್ ಮತ್ತು ಬಿಡನ್ ಸರ್ಕಾರದ ವಿಶೇಷ ದೂತನಾಗಿ ಕಾರ್ಯ ನಿರ್ವಹಿಸಿದ್ದ ಜ಼ಲಾಮಿ ಖಲಿಜ಼ಾದ್ ಪ್ರಕಾರ, ಈ ದಾಳಿ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆಯ ವಿರುದ್ಧ ಬೃಹತ್ ಹಾಗೂ ವೆಚ್ಚದಾಯಕ ಸೇನೆಯನ್ನು ಉಪಯೋಗಿಸದೆಯೂ ಸೆಣಸಬಹುದು ಎನ್ನುವುದಕ್ಕೆ ಉದಾಹರಣೆಯಾಗಿದೆ.

ಹೆಲ್‌ಫೈರ್ ಆರ್9ಎಕ್ಸ್: ದಾಳಿಯ ಹಿಂದಿನ ಕ್ಷಿಪಣಿ

ಹೆಲ್ ಫೈರ್ ಆರ್9ಎಕ್ಸ್, ಅಥವಾ ಮಿಲಿಟರಿ ಪರಿಭಾಷೆಯಲ್ಲಿ ಎಜಿಎಂ-114 ಆರ್9ಎಕ್ಸ್ ಎಂದು ಪರಿಚಿತವಾಗಿರುವ ಆಯುಧ ಅಮೆರಿಕಾ ನಿರ್ಮಿತ ಕ್ಷಿಪಣಿಯಾಗಿದ್ದು, ವ್ಯಕ್ತಿಯ ಮೇಲೆ ನಿಖರ ದಾಳಿ ನಡೆಸುವ ಸಂದರ್ಭದಲ್ಲಿ ಸುತ್ತಮುತ್ತ ಯಾರಿಗೂ ಹಾನಿಯಾಗದಂತೆ ದಾಳಿ ನಡೆಸಬಲ್ಲದು.

ಈ ಆಯುಧವನ್ನು ‘ನಿಂಜಾ ಮಿಸೈಲ್’ ಎಂದೂ ಕರೆಯಲಾಗುತ್ತಿದ್ದು, ಇದು ಸಿಡಿತಲೆಯನ್ನು ಕೊಂಡೊಯ್ಯುವ ಬದಲು ರೇಜ಼ರ್-ಶಾರ್ಪ್ ಬ್ಲೇಡ್‌ಗಳನ್ನು ಹೊಂದಿದೆ. ಇದು ತನ್ನ ಪ್ರೊಪಲ್ಷನ್ ವೇಳೆ ಚಲನ ಶಕ್ತಿಯನ್ನು ಬಳಸಿ, ದಪ್ಪ ಸ್ಟೀಲ್ ಶೀಟ್‌ಗಳನ್ನೂ ಕತ್ತರಿಸಿ, ಕಟ್ಟಡ ಮತ್ತು ಅಲ್ಲಿರುವ ಜನರಿಗೆ ಹಾನಿಯಾಗದಂತೆ ದಾಳಿ ನಡೆಸುತ್ತದೆ. ಆ ಅಲಗುಗಳು ಹೊರಬಂದು, ನಿಖರ ಗುರಿಯಾದ ವ್ಯಕ್ತಿಯನ್ನು ಕತ್ತರಿಸಿ, ಸುತ್ತಮುತ್ತ ಯಾವ ಹಾನಿಯೂ ಆಗದಂತೆ ಕಾರ್ಯ ನಿರ್ವಹಿಸುತ್ತವೆ. ಸಿಡಿತಲೆಯನ್ನು ಒಯ್ಯುವ ಕ್ಷಿಪಣಿ ಈ ರೀತಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ.

ಲಾಕ್‌ಹೀಡ್‌ ಮಾರ್ಟಿನ್ ಮತ್ತು ನಾರ್ತ್‌ರಾಪ್ ಗ್ರುಮ್ಮನ್ ಸಂಸ್ಥೆಗಳು ನಿರ್ಮಿಸಿರುವ ಹೆಲ್‌ಫೈರ್ ಕ್ಷಿಪಣಿಯಲ್ಲಿ ನಿಂಜಾ ಮಾತ್ರವಲ್ಲದೆ ಇನ್ನಿತರ ಅವತರಣಿಕೆಗಳಾದ, ‘ಲಾಂಗ್‌ಬೋ’ ಹಾಗೂ ‘ರೋಮಿಯೋ’ಗಳೂ ಕಾರ್ಯ ನಿರ್ವಹಿಸುತ್ತವೆ.

ಭಾರತ ಈಗ ಹಾದಿ ತಪ್ಪಿರುವ ಪ್ರಜೆಗಳ ಕಾರಣದಿಂದ ಮೂಲಭೂತವಾದವನ್ನೂ‌ ಎದುರಿಸುತ್ತಿದೆ. ಅದರೊಡನೆ ಭಾರತಕ್ಕೆ ತನ್ನ ಗಡಿಯ ಹೊರಭಾಗದಿಂದ ಕಾರ್ಯಾಚರಿಸುವ ಶತ್ರುಗಳನ್ನು ಎದುರಿಸಲು ಇಂತಹ ಸಾಮರ್ಥ್ಯವನ್ನು ಗಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಗಿರೀಶ್ ಲಿಂಗಣ್ಣ 

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *