Online Desk
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರಿಗೆ ರಾಜ್ಯ ಸರಕಾರ, ರಾಜ್ಯ ಸಚಿವರ ದರ್ಜೆ ಸಮನಾದ ಸ್ಥಾನಮಾನವನ್ನು ನೀಡಿ ಆದೇಶ ಹೊರಡಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ನೀಡಿದ ಸರ್ಕಾರಕ್ಕೆ ಸಮಗ್ರ ಕನ್ನಡಿಗರ ಪರವಾಗಿ ಪರಿಷತ್ತು ಧನ್ಯವಾದ ಸಲ್ಲಿಸಿದೆ.
ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ದೇಶಗಳೊಂದಿಗೆ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆ ಕಾಪಾಡುವ ಜವಾಬ್ದಾರಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊಂದಿದೆ. ಮೈಸೂರು ಮಹಾರಾಜರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪೋಷಣೆಯೊಂದಿಗೆ ಸ್ಥಾಪಿತವಾದ ಸಮಗ್ರ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು 107 ವರ್ಷಗಳ ಸುರ್ದೀ ಹಾಗೂ ಶ್ರೀಮಂತ ಇತಿಹಾಸ ಹೊಂದಿದೆ.
ಎಲ್ಲ ಕನ್ನಡ ಸಂಘ-ಸಂಸ್ಥೆಗಳ ಮಾತೃ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಅನೇಕ ಪ್ರಾಥಃಸ್ಮರಣೀಯರು ಅಧ್ಯಕ್ಷರಾಗಿ ಕನ್ನಡ ಕಟ್ಟುವಲ್ಲಿ, ಬೆಳೆಸುವಲ್ಲಿ ಅಪಾರ ಶ್ರಮವಹಿಸಿದ್ದಾರೆ. ಕನ್ನಡ ಸಾಂಸ್ಕೃತಿಕ ರಾಯಭಾರಿಗಳಾಗಿ ನಾಡಿನುದ್ದಗಲಕ್ಕೂ ಕನ್ನಡ ಪ್ರೇಮವನ್ನು ಹೆಚ್ಚಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಅತ್ಯಂತ ಕ್ರಿಯಾಶೀಲತೆಯಿಂದ ಕನ್ನಡಪರ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಇಲ್ಲಿಯವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಯಾವುದೇ ಸರ್ಕಾರ ಸಚಿವರ ಸ್ಥಾನಮಾನವನ್ನು ನೀಡಿರಲಿಲ್ಲ. ಇದೇ ಮೊಟ್ಟಮೊದಲ ಬಾರಿಗೆ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಮೆ-ಗರಿಮೆ, ಇತಿಹಾಸವನ್ನು ಮನಗಂಡು, ನಾಡು-ನುಡಿಗೆ ಪರಿಷತ್ತು ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಪರಿಗಣಿಸಿ ಹಾಗೂ ಪರಿಷತ್ತಿನ ಚುನಾವಣೆ ಇತಿಹಾಸದಲ್ಲಿ ದಾಖಲೆಯನ್ನು ಸೃಷ್ಟಿಸಿದ ಮತ್ತು ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಗುರಿಯನ್ನಿಟ್ಟುಕೊಂಡು, ಅನೇಕ ಕ್ರಾಂತಿಕಾರಿ ಬದಲಾವಣೆಯ ಮುಖೇನ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಕಾರ್ಯವೈಖರಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಕ್ಷಣದಿಂದ (03-08-2022) ಜಾರಿಗೆ ಬರುವಂತೆ ರಾಜ್ಯ ಸಚಿವರ ದರ್ಜೆಗೆ ಸಮನಾದ ಸ್ಥಾನಮಾನವನ್ನು ನೀಡಿ ಗೌರವಿಸಿರುವುದು ಅತ್ಯಂತ ಸಂತಸದಾಯಕ ವಿಷಯವಾಗಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App