Online Desk
ಬೆಂಗಳೂರು: ಮಂಕಿಪಾಕ್ಸ್ ಬಗ್ಗೆ ರಾಜ್ಯದ ಜನರು ಆತಂಕ ಪಡಬೇಕಿಲ್ಲ. ಕೇರಳ-ಕರ್ನಾಟಕ ಗಡಿ ಭಾಗದ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿಗಾ ಇಡಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಮಂಗಳವಾರ ತಿಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ತಾಂತ್ರಿಕ ಸಲಹಾ ಸಮಿತಿ ಜೊತೆ ವಿಶೇಷ ಸಭೆ ನಡೆಸಿದ ಬಳಿಕ ಮಾತನಾಡಿದ ಆರೋಗ್ಯ ಸಚಿವರು, ವಿಶ್ವ ಆರೋಗ್ಯ ಸಂಸ್ಥೆ ಜುಲೈ 22 ರಂದು ಮಂಕಿಪಾಕ್ಸ್ ಅನ್ನು ʼತುರ್ತು ಆರೋಗ್ಯ ಪರಿಸ್ಥಿತಿʼ ಎಂದು ಘೋಷಿಸಿದೆ. ಸುಮಾರು 80 ದೇಶಗಳ 20,000 ಜನರಿಗೆ ಈ ಸೋಂಕು ಹರಡಿದೆ. ಭಾರತದಲ್ಲಿ 6 ಪ್ರಕರಣಗಳು ಕಂಡುಬಂದಿವೆ. ಕೇರಳದಲ್ಲಿ 4 ಮತ್ತು ದೆಹಲಿಯಲ್ಲಿ ಇಬ್ಬರು ಸೋಂಕಿತರಿದ್ದಾರೆ. ಕರ್ನಾಟಕದಲ್ಲಿ 3 ವ್ಯಕ್ತಿಗಳ ಮೇಲೆ ಸಂಶಯದ ಆಧಾರದಲ್ಲಿ ಪರೀಕ್ಷೆ ನಡೆಸಿದ್ದೇವೆ. ಈ ಪೈಕಿ ಬೆಂಗಳೂರಿನ ಇಬ್ಬರ ವರದಿ ನೆಗಟಿವ್ ಬಂದಿದೆ. ಬೆಲ್ಜಿಯಂನಿಂದ ಬಂದಿರುವ ಉತ್ತರ ಕನ್ನಡದ ವ್ಯಕ್ತಿಯ ಪರೀಕ್ಷೆ ಫಲಿತಾಂಶ ಇನ್ನಷ್ಟೇ ಬರಬೇಕಿದೆ ಎಂದು ಹೇಳಿದರು.
ಇದನ್ನು ಓದಿ: ಕೇರಳ ಹಾಗೂ ದೆಹಲಿಯಲ್ಲಿ ಮತ್ತೊಂದು ಮಂಕಿಪಾಕ್ಸ್ ಪಾಸಿಟಿವ್ ಕೇಸ್ ಪತ್ತೆ: ದೇಶದಲ್ಲಿ ಪ್ರಕರಣಗಳ ಸಂಖ್ಯೆ 8ಕ್ಕೆ ಏರಿಕೆ!
ಮಂಕಿಪಾಕ್ಸ್ ಬಗ್ಗೆ ರಾಜ್ಯದ ಜನರು ಆತಂಕ ಪಡಬೇಕಾದ ಅಗತ್ಯವಿಲ್ಲ. ಸೋಂಕಿತರಿಗಾಗಿ ಬೆಂಗಳೂರಿನ ಸಾಂಕ್ರಾಮಿಕ ರೋಗಗಳ(ಇ.ಡಿ) ಆಸ್ಪತ್ರೆ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಯಾವುದೇ ವ್ಯಕ್ತಿಗೆ ಸೋಂಕು ದೃಢಪಟ್ಟರೆ ಅವರನ್ನು 21 ದಿನಗಳ ಕಾಲ ಐಸೋಲೇಟ್ ಮಾಡಬೇಕು. 21 ದಿನ ಆಸ್ಪತ್ರೆಯಲ್ಲೇ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ. ಚರ್ಮದ ಮೇಲೆ ಆಗಿರುವ ಗಾಯ ಗುಣಮುಖ ಆಗುವವರೆಗೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದಿಲ್ಲ ಎಂದು ತಿಳಿಸಿದರು.
ಮಂಕಿಪಾಕ್ಸ್ ಆರಂಭದಲ್ಲಿ ಜ್ವರ, ಹಾಗೂ ಚರ್ಮದ ಮೇಲೆ ತುರಿಕೆಗಳು ಕಂಡು ದೊಡ್ಡ ಗುಳ್ಳೆಗಳಾಗುತ್ತವೆ. ಈ ಲಕ್ಷಣ ಇದ್ದವರನ್ನು ತಪಾಸಣೆ ಮಾಡಲಾಗುವುದು. ಮುಖ್ಯಮಂತ್ರಿಗಳ ಸೂಚನೆಯಂತೆ, ಏರ್ಪೋರ್ಟ್ ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಅನುಮಾನ ಬಂದರೆ ತಪಾಸಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ವರದಿಗಳು ಹೇಳುವ ಪ್ರಕಾರ ಸೋಂಕಿತರ ಜೊತೆ ದೀರ್ಘ ಕಾಲದ ಸಂಪರ್ಕ ಹೊಂದಿರುವವರಿಗೆ ಮಾತ್ರ ಇದು ಹರಡಲು ಸಾಧ್ಯವಿದೆ. ಕೋವಿಡ್ ರೀತಿ ಹರಡುವ ಸಾಂಕ್ರಾಮಿಕ ರೋಗ ಇದಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ವಿಶೇಷವಾಗಿ ಕೇರಳ ಗಡಿ ಭಾಗದ ಜಿಲ್ಲಾಧಿಕಾರಿಗಳಿಗೆ ವಿಶೇಷ ಸೂಚನೆ ನೀಡಲಾಗಿದೆ. ಎಲ್ಲಾ ಭಾಗಗಳಲ್ಲೂ ಕಟ್ಟೆಚ್ಚರದಿಂದ ಇರಲು ಸೂಚಿಸಲಾಗಿದೆ. ಸದ್ಯ ರಾಜ್ಯದ ಜನರು ಆತಂಕ ಪಡುವ ಆಗತ್ಯವಿಲ್ಲ. ಮುನ್ನಚ್ಚೆರಿಕೆ ಮತ್ತು ಶುಚಿತ್ವ ಕಾಪಾಡಿಕೊಂಡರೆ ಸಾಕು ಎಂದು ಸಚಿವರು ತಿಳಿಸಿದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App