English Tamil Hindi Telugu Kannada Malayalam Android App
Thu. Dec 1st, 2022

Online Desk

– ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ರಷ್ಯಾ ಹಾಗೂ ಉಕ್ರೇನ್‌ ಮಧ್ಯೆ ನಡೆಯುತ್ತಿರುವ ಯುದ್ಧ ಭವಿಷ್ಯದಲ್ಲಿ ನಡೆಯಬಹುದಾದ ಸಮರಗಳ ಬಗ್ಗೆ ಈಗಾಗಲೇ ಒಂದು ತಪ್ಪು ಅಭಿಪ್ರಾಯವನ್ನು ಕೊಟ್ಟಿದೆ. ಯುದ್ಧ ಕಾರ್ಯತಂತ್ರದ ಕ್ಷೇತ್ರದಲ್ಲಿ ಹಲವಾರು ತಪ್ಪು ಪಾಠಗಳು ಹರಿದಾಡತೊಡಗಿವೆ. ಈ ಯುದ್ಧದ ಕುರಿತಾಗಿ ವಿಶ್ಲೇಷಣೆ ಮಾಡುತ್ತಿರುವ ಹಲವು ವಿಶ್ಲೇಷಕರು ಒಂದು ಜಿಂಕೆಯನ್ನು ಯಾವತ್ತೂ ಹುಲಿಯೊಡನೆ ಹೋಲಿಸಿ ನೋಡಬಾರದು ಎಂಬ ಸತ್ಯವನ್ನು ಮರೆತಂತೆ ಕಾಣುತ್ತಿದ್ದಾರೆ. ಆದರೆ ದುರದೃಷ್ಟವಶಾತ್‌ ಉಕ್ರೇನ್‌ನಲ್ಲಿ ಈಗ ನಡೆಯುತ್ತಿರುವ ಯುದ್ಧದಿಂದ ತಪ್ಪು ಸಂದೇಶ ರವಾನೆಯಾಗುತ್ತಿರುವ ಸಮಯದಲ್ಲಿ ಇಂತಹ ಕೆಲಸಗಳೇ ನಡೆದು ಹೋಗಿವೆ.

ಸ್ಪಷ್ಟವಾಗಿ ಹೇಳಬೇಕೆಂದರೆ, ಯಾವುದೇ ಯುದ್ಧದಿಂದ ಒಂದು ನಿಜವಾದ ಪಾಠವನ್ನು ಕಲಿಯುವ ಮೊದಲು, ಯುದ್ಧ ಕ್ಷೇತ್ರದಲ್ಲಿ ಸಮದಂಡಿಯಾಗಿರುವವರು ಮತ್ತು ಅಸಮಾನರಾಗಿರುವವರ ನಡುವಣ ವ್ಯತ್ಯಾಸವನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕಿದೆ. ಒಂದು ವೇಳೆ ಉಕ್ರೇನ್‌ ಸಹ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿತ್ತು ಎಂದು ಕಲ್ಪಿಸಿಕೊಳ್ಳಿ. ಅಂತಹ ಸಂದರ್ಭದಲ್ಲಿ ರಷ್ಯಾ ಉಕ್ರೇನನ್ನು ಆಕ್ರಮಿಸಲು ಧೈರ್ಯ ಮಾಡುತ್ತಿತ್ತೇ? ಆದರೆ ಉಕ್ರೇನ್‌ ಬಳಿ ಅಂತಹಾ ಶಸ್ತ್ರಾಸ್ತ್ರಗಳಿಲ್ಲ. ಹಾಗಾಗಿ ಉಕ್ರೇನ್ ಮತ್ತು ರಷ್ಯಾಗಳು ಯುದ್ಧ ಅಸಮಾನ ರಾಷ್ಟ್ರಗಳು. ಅಮೆರಿಕಾ ಮತ್ತು ಪಾಶ್ಚಿಮಾತ್ಯ ಜಗತ್ತು ಉಕ್ರೇನಿಗೆ ತಮ್ಮ ಬೆಂಬಲ ಘೋಷಿಸಿದ್ದರೂ ಅವರು ಈಗ ಯುದ್ಧದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಅವರೆಲ್ಲರಿಗೂ ರಷ್ಯಾದ ಬಳಿ ಇರುವ ಸಮೂಹ ನಾಶಕ ಶಸ್ತ್ರಾಸ್ತ್ರಗಳ (ಡಬ್ಲ್ಯೂಎಂಡಿ) ಕುರಿತಾದ ಭಯ ಇದ್ದೇ ಇದೆ.

ರಷ್ಯಾ ಮತ್ತು ಉಕ್ರೇನನ್ನು ಹೋಲಿಕೆ ಮಾಡಿ ಬರೆಯಲಾಗುತ್ತಿರುವ ಬಹುತೇಕ ಬರಹಗಳಲ್ಲಿ ಕಂಡುಬರುತ್ತಿರುವ ಸಮಸ್ಯೆ ಏನೆಂದರೆ ಅವುಗಳು ಒಂದೊಂದು ಸನ್ನಿವೇಶವನ್ನು ನೋಡಿ ವಿಶ್ಲೇಷಣೆ ಮಾಡುತ್ತಿವೆಯೇ ಹೊರತು, ಸಂಪೂರ್ಣ ಯುದ್ಧ ಚಿತ್ರಣವನ್ನಲ್ಲ. ಅವರಿನ್ನೂ ಯುದ್ಧಗಳ ಮೇಲೆ ತಂತ್ರಜ್ಞಾನ ಹಾಗೂ ಆಯುಧಗಳಲ್ಲಿ ಆಗಿರುವ ಕ್ರಾಂತಿಯ ಪ್ರಭಾವವನ್ನು ಅರ್ಥ ಮಾಡಿಕೊಂಡಿಲ್ಲ. ತಂತ್ರಜ್ಞಾನ ಹಾಗೂ ಮಿಲಿಟರಿ ವ್ಯವಹಾರಗಳಲ್ಲಿನ ಕ್ರಾಂತಿಯ (ಆರ್‌ಎಂಎ) ಪ್ರಮುಖ ಪರಿಣಾಮ ಎಂದರೆ ಅವುಗಳು ಯುದ್ಧದ ಸಿದ್ಧಾಂತವನ್ನೇ ಬದಲಾಯಿಸಿಬಿಟ್ಟಿವೆ. ಯುದ್ಧದಲ್ಲಿ ತಲೆಕೆಳಗಾದ ಸನ್ನಿವೇಶಗಳಿಂದಲೇ ತಪ್ಪಾದ ಸಂದೇಶಗಳನ್ನು ಅರ್ಥ ಮಾಡಿಕೊಳ್ಳಲಾಗಿದೆ. ಟ್ಯಾಂಕ್‌ಗಳು, ಬಂದೂಕುಗಳು ಹಾಗೂ ಯುದ್ಧ ವಿಮಾನಗಳು ಸಂಪೂರ್ಣವಾಗಿ ಅನಗತ್ಯವಲ್ಲದೇ ಹೋದರೂ ಪರಸ್ಪರ ಸಮಾನ ಶತ್ರುಗಳು ಯುದ್ಧ ಮಾಡುವ ಸಂದರ್ಭದಲ್ಲಿ ಪರಿಣಾಮಕಾರಿ ಅಲ್ಲ ಎಂದು ನಿರೂಪಿಸಲ್ಪಟ್ಟಿವೆ.

ಇದನ್ನೂ ಓದಿ: ಯುದ್ಧ ಅಪರಾಧಗಳಿಗಾಗಿ ಪುಟಿನ್‌ರನ್ನು ಶಿಕ್ಷಿಸುವುದು ಸುಲಭವಲ್ಲ!

ಒಂದು ವೇಳೆ ಯುದ್ಧ ಮಾಡುತ್ತಿರುವ ರಾಷ್ಟ್ರಗಳು ಯುದ್ಧಕ್ಷೇತ್ರದಲ್ಲಿ ಅಸಮಾನವಾಗಿದ್ದರೆ, ಟ್ಯಾಂಕ್‌ಗಳು, ಬಂದೂಕುಗಳು ಹಾಗೂ ಯುದ್ಧ ವಿಮಾನಗಳು ಬಹಳ ಪರಿಣಾಮಕಾರಿಯೇ ಆಗಿರುತ್ತವೆ. ತಂತ್ರಜ್ಞಾನದಲ್ಲಿ ಸಾಕಷ್ಟು ಹಿಂದುಳಿದಿರುವ ಆಫ್ರಿಕಾದ ಯುದ್ಧಕೋರ ರಾಷ್ಟ್ರಗಳಲ್ಲಿ, ಏಷ್ಯಾದ ಹಲವು ಭಾಗಗಳಲ್ಲಿನ ರಾಷ್ಟ್ರಗಳಲ್ಲಿ ಯುದ್ಧ ಟ್ಯಾಂಕ್‌ಗಳು ಹಾಗೂ ಬಂದೂಕುಗಳು ಇಂದಿಗೂ ಯುದ್ಧದ ಪ್ರಮುಖ ಆಯುಧಗಳೇ ಆಗಿವೆ. ತಲೆಯ ಮೇಲೆ ಪರಮಾಣು ಆಯುಧಗಳು ತೂಗಾಡುತ್ತಿರುವ ಸಂದರ್ಭದಲ್ಲಿ, ಫ್ರಾನ್ಸ್‌ ಮತ್ತು ಯುಕೆಗಳನ್ನು ಹೊರತುಪಡಿಸಿದರೆ, ರಷ್ಯಾಗೆ ಹೋಲಿಸಿದರೆ ಬಹುತೇಕ ಯುರೋಪಿಯನ್‌ ರಾಷ್ಟ್ರಗಳು ಸಮರ ಕ್ಷೇತ್ರದಲ್ಲಿ ಅಸಮಾನವೇ ಆಗಿವೆ. ಯುರೋಪಿನ ಬಹುತೇಕ ರಾಷ್ಟ್ರಗಳು ರಕ್ಷಣೆಗಾಗಿ ನ್ಯಾಟೋ ಒಕ್ಕೂಟವನ್ನೇ ಅವಲಂಬಿಸಿವೆ. ಪ್ರಸಕ್ತ ಸನ್ನಿವೇಶದಲ್ಲಿ ಫಿನ್‌ಲ್ಯಾಂಡ್‌ ಹಾಗೂ ಸ್ವೀಡನ್‌ಗಳೂ ನ್ಯಾಟೋ ಸದಸ್ಯತ್ವಕ್ಕಾಗಿ ಆಗ್ರಹಿಸುತ್ತಿರುವುದು ಆಶ್ಚರ್ಯವೇನಲ್ಲ. ಉಕ್ರೇನ್‌ ಸಹ ನ್ಯಾಟೋ ಸದಸ್ಯತ್ವಕ್ಕಾಗಿ ಪ್ರಯತ್ನಿಸುತ್ತಿತ್ತಾದರೂ ರಷ್ಯಾ ಅದಕ್ಕೆ ಆಸ್ಪದ ಮಾಡಿ ಕೊಡಲಿಲ್ಲ.

ಇದರೊಂದಿಗೆ, ಯುದ್ಧಸಾಮರ್ಥ್ಯದಲ್ಲಿ ಸರಿಸಮಾನವಾದ ರಾಷ್ಟ್ರಗಳ ಮಧ್ಯೆ ಕೂಡ ಈಗ ಯುದ್ಧ ರಂಗವು ಕೇವಲ ಭೂಮಿಯ ಮೇಲಿಲ್ಲ ಎನ್ನುವುದನ್ನೂ ವಿಶ್ಲೇಷಕರು ಅರ್ಥ ಮಾಡಿಕೊಳ್ಳಬೇಕಿದೆ. ಅವುಗಳ ಮಧ್ಯದ ಯುದ್ಧರಂಗ ಈಗ ನೆಲದಿಂದ ಆಕಾಶ ಹಾಗೂ ಸಮುದ್ರಗಳಿಗೆ ಸ್ಥಳಾಂತರವಾಗಿವೆ. ಈಗ ಯುದ್ಧಗಳ ಉದ್ದೇಶ ಎದುರಾಳಿಯ ಗಡಿಯೊಳಗಿರುವ ಸಂಪತ್ತನ್ನು ಪಡೆಯುವುದರ ಬದಲು ಸಂಪೂರ್ಣವಾಗಿ ಎದುರಾಳಿಯನ್ನು ನಾಶ ಮಾಡುವುದೇ ಆಗಿದೆ. ಯುದ್ಧದಲ್ಲಿ ಈಗ ‘ಫ್ರಂಟ್‌’ ‘ರಿಯರ್‌’ ಅನ್ನುವುದು ಸಂಪೂರ್ಣವಾಗಿ ಇಲ್ಲವಾಗಿದೆ. ಯುದ್ಧ ಎನ್ನುವುದು ಈಗ ಮೆದುಳು ಹಾಗೂ ತಂತ್ರಜ್ಞಾನದ ಒಗ್ಗೂಡುವಿಕೆಯಾಗಿದೆ. ಆರ್‌ಎಂಎ ಹಾಗೂ ತಂತ್ರಜ್ಞಾನಗಳು ಯುದ್ಧದ ಪರಿಕಲ್ಪನೆಯನ್ನೇ ಸಂಪೂರ್ಣವಾಗಿ ಬದಲಾಯಿಸಿವೆ.

ಇದನ್ನೂ ಓದಿ: ಉಕ್ರೇನ್-ರಷ್ಯಾ ಸಂಘರ್ಷ: ನ್ಯಾಟೊ ಮತ್ತು ಅದರ ಪಾತ್ರ

ಈ ಮೇಲಿನ ಮಾತುಗಳಿಗೆ ಪೂರಕವಾಗಿ ಎನ್ನುವಂತೆ ಈಗ ‘ಡಿಸೈನರ್‌ ವಾರ್‌’ ಎಂಬ ಪರಿಕಲ್ಪನೆ ಮೂಡಿ ಬರುತ್ತಿದೆ. ಇದು ಯಾವುದೇ ನಿಯಮಗಳೇ ಇಲ್ಲದಿರುವ ಯುದ್ಧ. ಇದು ಹಳೆ ಕಾಲದ ಮಾತಿನಂತೆ ಒಂದು ಗುಂಡನ್ನೂ ಹಾರಿಸದೆ ಯುದ್ಧ ಗೆಲ್ಲುವ ಯೋಚನೆ. ಸನ್‌ ತ್ಸು ಹೇಳಿದಂತೆ – ನೈಪುಣ್ಯತೆ ಎನ್ನುವುದು ನೂರಾರು ಯುದ್ಧಗಳನ್ನು ಗೆಲ್ಲುವುದಲ್ಲ, ಬದಲಿಗೆ ಒಂದೂ ಗುಂಡು ಹಾರಿಸದೆ ಗೆಲ್ಲುವುದು! ಈ ರೀತಿಯಾಗಿ ಮಾಡುವುದಕ್ಕಾಗಿ ‘ವಾರ್‌ ಬೈ ಅದರ್‌ ಮೀನ್ಸ್‌’ (ಡಬ್ಲ್ಯೂಒಎಂ) ಅನ್ನುವುದು ಇತ್ತೀಚೆಗೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿದೆ.  ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಅಮೆರಿಕಾ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನನ್ನು ಬಳಸಿಕೊಳ್ಳುತ್ತಿರುವುದು. ಇದೇ ರೀತಿ ಅಫ್ಘಾನಿಸ್ತಾನದಲ್ಲಿ ರಷ್ಯಾದ ವಿರುದ್ಧ ಅಮೆರಿಕಾ ಪಾಕಿಸ್ತಾನವನ್ನು ಬಳಸಿಕೊಂಡದ್ದನ್ನೂ ಮರೆಯುವಂತಿಲ್ಲ. ಒಂದು ರೀತಿಯಲ್ಲಿ ಭಾರತದೊಂದಿಗಿನ ಅಮೆರಿಕಾದ ಕಾರ್ಯತಂತ್ರದ ಪಾಲುದಾರಿಕೆಯೂ ಸಹ ಚೀನಾ ವಿರುದ್ಧ ಭಾರತವನ್ನೂ ಅದೇ ರೀತಿ ಬಳಸಿಕೊಳ್ಳುವ ತಂತ್ರ ಅನಿಸುತ್ತದೆ. ಇದು ಡಿಸೈನರ್‌ ವಾರ್‌ ಫ್ರೇಮ್‌ ವಿಧಾನದಲ್ಲಿ ಇನ್ನೊಂದು ಡಬ್ಲ್ಯುಒಎಂ ಆಗಿದೆ.

ಈ ರೀತಿಯಾಗಿ ಮೇಲೆ ಉಲ್ಲೇಖಿಸಲಾದ ಲೇಖನಗಳು ನಿರ್ಣಯಾತ್ಮಕವಾಗಿಲ್ಲ. ಏಕೆಂದರೆ ಅವುಗಳು ಆರ್‌ಎಂಎ ಹಾಗೂ ತಂತ್ರಜ್ಞಾನದ ಬಗೆಗಿನ ಸರಿಯಾದ ತೀರ್ಮಾನಗಳನ್ನು ಸೂಚಿಸಿಲ್ಲ. ಈ ಲೇಖನಗಳನ್ನು ಬರೆದವರು ವಾನ್‌ ಕ್ಲಾಸ್‌ವಿಟ್ಸ್‌ ಹೇಳಿದ – ಪ್ರತಿಯೊಂದು ಸಂದರ್ಭದಲ್ಲೂ ಯುದ್ಧಕ್ಕೆ ಅದರದ್ದೇ ಆದ ಕಾರ್ಯತಂತ್ರ ಹಾಗೂ ಶಸ್ತ್ರಾಸ್ತ್ರಗಳಿರುತ್ತವೆ ಎಂಬ ಮಾತನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದ್ದಾರೆ.

ಇದನ್ನೂ ಓದಿ: ಬಂದೂಕುಗಳಿಂದ ಹೃದಯಗಳನ್ನು ಗೆಲ್ಲಬಹುದೇ?

ನಾವು ಈಗ 21ನೇ ಶತಮಾನದಲ್ಲಿದ್ದೇವೆ. ಗಡಿಗಳಾಚೆಗೆ ಸೈನಿಕರು ಯುದ್ಧ ಮಾಡುವುದಿರಲಿ, ಕೋವಿಡ್‌ ರೀತಿಯ ಆಯುಧವೇ ಶತ್ರು ಸೈನಿಕರನ್ನು ಸತ್ತು ಹೋಗುವಂತೆ ಮಾಡಲು ಸಾಕಷ್ಟಾಗುತ್ತದೆ. ಉಕ್ರೇನಿನ ಮರಿಯಾಪೋಲ್‌ನಲ್ಲಿದ್ದ 24 ಕಿಲೋಮೀಟರ್‌ಗಳ ಭೂಗತ ಟನೆಲ್‌ನಲ್ಲಿ ಇದೇ ರೀತಿಯ ಕಾರ್ಯಾಚರಣೆಯೇ ನಡೆಯುತ್ತಿತ್ತು. ಹೊಸ ಬಯಾನಿಕ್‌ ಸೈನಿಕರು ಮತ್ತು ಜೈವಿಕ ಅಸ್ತ್ರಗಳ ಕುರಿತಾಗಿ ಪ್ರಯೋಗ ಶಾಲೆಗಳಲ್ಲಿ ಸಾಕಷ್ಟು ಪ್ರಯೋಗಗಳೂ ನಡೆಯುತ್ತಿವೆ.

ಯುದ್ಧಗಳು ಇನ್ನು ಮುಂದೆ ಕೇವಲ ಬಲ ಪ್ರಯೋಗಗಳಷ್ಟೇ ಆಗಿ ಉಳಿದಿರುವುದಿಲ್ಲ. ಯುದ್ಧಗಳು ಇನ್ನೂ ಹೆಚ್ಚಿನ ಮೆದುಳಿನ ಬಲ ಪ್ರಯೋಗಗಳಾಗಿರುತ್ತವೆ. ಭಾರತಕ್ಕೆ ತಮ್ಮ ಸಲಹೆಗಳನ್ನು ನೀಡುತ್ತಿರುವ ಸಾಮರಿಕ ಹಾಗೂ ಇತರ ವಿಶ್ಲೇಷಕರು ಈ ವಿಚಾರವನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ.

ಗಿರೀಶ್ ಲಿಂಗಣ್ಣ 

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *