English Tamil Hindi Telugu Kannada Malayalam Android App
Thu. Dec 1st, 2022

Online Desk

ವಿಮರ್ಶೆ: ಹರ್ಷವರ್ಧನ್ ಸುಳ್ಯ


ಸ್ಯಾಂಡಲ್ ವುಡ್ ನಲ್ಲಿ ಉಗ್ರಂ, ಕೆ.ಜಿ.ಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ಹುಟ್ಟು ಹಾಕಿರುವ ಮಾಸ್ ಸಿನಿಮಾ ಮೇಕಿಂಗ್ ಶೈಲಿಯನ್ನು ನಿರ್ದೇಶಕ ಎಸ್. ಮಹೇಶ್ ಕುಮಾರ್ ‘ಮದಗಜ’ ಸಿನಿಮಾ ಮೂಲಕ ಮುಂದುವರಿಸಿದ್ದಾರೆ. ಕಲರ್ ಗ್ರೇಡಿಂಗ್, ಎಡಿಟಿಂಗ್ ತಂತ್ರಗಳ ಬಳಕೆ, ಸಂಗೀತ ಮತ್ತಿತರ ಅಂಶಗಳಿಂದ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ಉಗ್ರಂ, ಮಫ್ತಿ ಕೆ.ಜಿ.ಎಫ್ ಚಿತ್ರಗಳಿಂದ ಪ್ರೇರಣೆ ಪಡೆದಿರುವುದು ನೇರನೋಟಕ್ಕೆ ಅರಿವಾಗುತ್ತದೆ. ಆದರೆ ಅವೆಲ್ಲಾ ಚಿತ್ರಗಳಿಗೆ ಹೋಲಿಸಿದರೆ ಮದಗಜ ಚಿತ್ರಕಥೆಯಲ್ಲಿ ಕಂಡು ಬರುವ ಸೂಕ್ಷ್ಮ, ಫೈನ್ ಡೀಟೇಲ್ಸ್ ಗಳು ಸಿನಿಮಾವನ್ನು ಹ್ಯೂಮನೈಜ್ ಅಗಿಸಿದೆ. ಆ ವಿಷಯದಲ್ಲಿ ಮದಗಜ ಕೊಂಚ ವಿಭಿನ್ನ ಹಾದಿ ಹಿಡಿದಿದೆ.  

ಮುರಳಿ ಗೂಡಿಗೆ

ಅಪ್ಪಟ ಮಾಸ್ ಸಿನಿಮಾದಲ್ಲೂ ಯಾವ ಬಗೆಯಲ್ಲಿ ಮಾನವೀಯ ಎಳೆಯನ್ನು ತಂದು ಸಿನಿಮಾ ಹಿಟ್ ಆಗಿಸಬಹುದು ಎನ್ನುವುದಕ್ಕೆ ಓಂ, ಜೋಗಿ, ಕೆ.ಜಿ.ಎಫ್ ಸಿನಿಮಾಗಳಿಗಿಂತ ಉತ್ತಮ ಉದಾಹರಣೆ ಬೇಕಿಲ್ಲ. ಮದಗಜ ಸಿನಿಮಾದಲ್ಲಿ ಮಾಸ್ ದೃಶ್ಯ ವೈಭವದ ಜೊತೆಗೆ ಮಾನವೀಯ ಅಂಶಗಳೂ ಎಡತಾಕಿ ಪ್ರೇಕ್ಷಕನಲ್ಲಿ ವಿಶಿಷ್ಟ ಅನುಭವವನ್ನು ದಯಪಾಲಿಸುತ್ತದೆ. ಕಾಫಿ ಲೋಟದೊಳಕ್ಕೆ ಮಂಡಕ್ಕಿ ತುಂಬಿಕೊಂಡು ಸವಿಯುವುದು, ಹಳ್ಳಿಗೆ ಐಸ್ ಮಾರಿಕೊಂಡು ಬರುವ ಚಾಚಾ, ಎದುರಾಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಾಗ ಜೇನುಗೂಡಿಗೆ ಕಲ್ಲು ಹೊಡೆಯುವ ದೃಶ್ಯಗಳು ಮತ್ತು ಇದೇ ಥರದ ಡೀಟೇಲ್ಸ್ ಗಳು ಕಚಗುಳಿ ಇಡುತ್ತವೆ. ಸಿನಿಮಾದ ಒಟ್ಟಂದವನ್ನು ಹೆಚ್ಚಿಸುವುದರಲ್ಲಿ ಕಾಣಿಕೆ ಸಲ್ಲಿಸುತ್ತದೆ. ಬ್ಯಾಟ್ಸ್ ಮ್ಯಾನ್ ತನ್ನ ಇಷ್ಟದ ಪಿಚ್ಚಿನಲ್ಲಿ ಸಿಕ್ಸರ್ ಬಾರಿಸುವಂತೆ, ನಾಯಕ ಮುರಳಿ ತಮ್ಮ ಯಶಸ್ವಿ ಮಾಸ್ ಫಾರ್ಮಿಗೆ ಮರಳಿದ್ದಾರೆ. ಅದನ್ನು ಮುರಳಿ ಗೂಡಿಗೆ ಎನ್ನಬಹುದೇನೋ.

ಕ್ಲಾಸಿಕ್ ಶಾಟ್

ಬಾಲ್ಯದಲ್ಲಿ ತಾಯಿಂದ ಬೇರ್ಪಟ್ಟ ನಾಯಕ ಮುರಳಿ ದೊಡ್ಡವನಾದ ಮೇಲೆ ಹೆತ್ತವರನ್ನು ಸೇರಿರುತ್ತಾನೆ. ಒಂದು ಅನಿವಾರ್ಯ ಸನ್ನಿವೇಶದಲ್ಲಿ ನಾಯಕ ಮುರಳಿ ಅವರು ಹೆಚ್ಚಾಗಿ ಪ್ರೀತಿಸುವ ಅಮ್ಮನೇ ಅವನನ್ನು ಊರು ಬಿಟ್ಟು ಹೋಗುವಂತೆ ಹೇಳುತ್ತಾರೆ. ಹಾಗೆ ಹೇಳಿ ತಂದೆ ತಾಯಿ ಮುರಳಿಯವರನ್ನು ನಡುರಸ್ತೆಯಲ್ಲೇ ಬಿಟ್ಟು ಕಾರಿನಲ್ಲಿ ಮರಳುತ್ತಾರೆ. ಮುರಳಿ ಒಬ್ಬರೇ ದುಃಖತಪ್ತರಾಗಿ ನಿಂತು ಕಾರನ್ನು ನೋಡುತ್ತಾರೆ. ಅದರ ನೆಕ್ಸ್ಟ್ ಶಾಟ್ ನಲ್ಲಿ ಕಾರಿನ ಹಿಂದೆ ಓಡಿಕೊಂಡು ಬರುವ ಪುಟ್ಟ ಬಾಲಕನನ್ನು ತೋರಿಸುತ್ತಾರೆ. ಅದು ನಾಯಕನ ಆ ಕ್ಷಣದ ಮನಸ್ಸಿನ ಸ್ಥಿತಿಯನ್ನು ಕಟ್ಟಿಕೊಡುತ್ತದೆ. ಅ ಮೂಲಕ ನಿರ್ದೇಶಕ ಮಹೇಶ್ ಕುಮಾರ್ ಸೂಕ್ಷ್ಮತೆ ಮೆರೆಯುತ್ತಾರೆ.

ಸಕ್ಸಸ್ ಫಾರ್ಮುಲಾವನ್ನು ಯಶಸ್ವಿ

ಮಾಸ್ ಸಿನಿಮಾಗಳಲ್ಲಿ ಖೂಳ ಮನುಷ್ಯರು ತರಗಲೆಗಳಂತೆ ಹಾರುತ್ತಾರೆ, ರಕ್ತ ಕಾರುತ್ತಾರೆ. ಮೇಜು ಪೀಠೋಪಕರಣಗಳು ಬಲಾಢ್ಯ ನಾಯಕನ ಶಕ್ತಿಗೆ ತುತ್ತಾಗಿ ಪುಡಿಯಾಗುತ್ತವೆ. ಕ್ಷಣ ಮಾತ್ರದಲ್ಲಿ ನಾಯಕಿಗೆ ನಾಯಕನ ಮೇಲೆ ಪ್ರೀತಿ ಹುಟ್ಟುತ್ತದೆ. ನೀರಿನಂತೆ ನೆತ್ತರು ಚಿಮ್ಮುತ್ತದೆ. ಸಿಂಪಲ್ಲಾಗಿ ಹೇಳಬೇಕೆಂದರೆ exaggerationನ ಪರಮಾವಧಿ ಈ ಮಾಸ್ ಸಿನಿಮಾಗಳಲ್ಲಿ ಕಾಣುವ ಸಾಮಾನ್ಯ ಅಂಶ. ಅದರ ಜೊತೆಯಲ್ಲೇ ಭಾವನಾತ್ಮಕ ಎಳೆಯನ್ನು ತಂದರೆ ಸಿನಿಮಾ ಹೆಚ್ಚು ಪರಿಣಾಮಕಾರಿ ಎನಿಸಿಕೊಳ್ಳುತ್ತದೆ ಎನ್ನುವುದು ಈ ಹಿಂದಿನ ಎಲ್ಲಾ ಮಾಸ್ ಸಿನಿಮಾಗಳಿಂದ ತಿಳಿದುಬಂದಿರುವ ಸಕ್ಸಸ್ ಫಾರ್ಮುಲಾ. ನಿರ್ದೇಶಕ ಮಹೇಶ್ ಕುಮಾರ್ ತಮ್ಮ ಸಿನಿಮಾದಲ್ಲಿ ಈ ಸಕ್ಸಸ್ ಫಾರ್ಮುಲಾವನ್ನು ಯಶಸ್ವಿಯಾಗಿ ಅಳವಡಿಸಿದ್ದಾರೆ. 

ವಾರಣಾಸಿ ಟು ವೀರಗಲ್ಲು: ಕಥೆಯ ಎಳೆ

ಮದಗಜ ಸಿನಿಮಾದ ಓಪನಿಂಗ್ ಅಣ್ಣಾವ್ರ ಮಯೂರ ಸಿನಿಮಾವನ್ನೂ, ಬಾಹುಬಲಿ ಓಪನಿಂಗ್ ಅನ್ನೂ ನೆನಪಿಸಿದರೆ ಅದರಲ್ಲಿ ಅತಿಶಯೋಕ್ತಿ ಇಲ್ಲ. ವೀರಗಲ್ಲು ಎಂಬುದೊಂದು ಊರು. ಅಲ್ಲಿ ವೀರಭದ್ರ, ಜನರ ನಾಯಕ. ಲ್ಯಾಂಡ್ ಮಾಫಿಯಾಗೆ ಬಲಿಯಾಗಿ ಜಮೀನು ಕಳಕೊಂಡವರ ಆಶಾಕಿರಣ ಆತ. ಆತನ ಪತ್ನಿ ರತ್ನಮ್ಮ. ರತ್ನಮ್ಮ ಹೆರಿಗೆ ಸಮಯದಲ್ಲಿ ವೈರಿಗಳು ದಾಳಿ ನಡೆಸುತ್ತಾರೆ. ರತ್ನಮ್ಮ ತನ್ನ ಮಗುವನ್ನು ಎತ್ತಿಕೊಂಡು ಓಡುತ್ತಾಳೆ. ಮಗುವಿನ ಜೀವ ಉಳಿಸಲು ದಾರಿಯಲ್ಲಿ ಸಿಗುವ ಕೋಲೇ ಬಸವ ದಾಸಯ್ಯನಿಗೆ ನೀಡುತ್ತಾಳೆ. ಆ ಮಗುವನ್ನು ದೂರ ಬೆಳೆಸುವಂತೆ ಗೋಗರೆಯುತ್ತಾಳೆ. ವೈರಿಗಳು ಬಂದಾಗ ಮಗು ನದಿ ನೀರಲ್ಲಿ ಕೊಚ್ಚಿಕೊಂಡು ಹೋದಂತೆ ನಾಟಕವಾಡುತ್ತಾಳೆ. ಮನೆಯವರಿಗೂ ಅದನ್ನೇ ಹೇಳುತ್ತಾಳೆ. ಅಸಲಿಗೆ ಆ ಮಗು ಕಾಶಿ ಸೇರಿ ನಾಯಕನಾಗಿ ಬೆಳೆಯುತ್ತಾನೆ. ಅಲ್ಲಿಂದ ಮತ್ತೆ ಹುಟ್ಟೂರಿಗೆ ಬರುವುದು, ಇಡೀ ಊರಿಗೆ ಹೆಗಲಾಗುವುದು, ಅಪ್ಪನ ಸ್ಥಾನ ತುಂಬುವುದು, ವೈರಿ ಎಂಟ್ರಿ, ನಡುವಲ್ಲಿ ಪ್ರೀತಿ ಪ್ರೇಮ ಪ್ರಣಯ ಮತ್ತು ವಿರಹ. 

ಸಿನಿಮಾದಲ್ಲಿ ಏನೂ ಪ್ರಾಬ್ಲಮ್ಮುಗಳೇ ಇಲ್ಲ ಎನ್ನುವಂತಿಲ್ಲ. ಮಾಸ್ ಸಿನಿಮಾಗಳಲ್ಲಿ masculinityಯದೇ ತಲೆನೋವು. ಅದು ಈ ಸಿನಿಮಾದಲ್ಲೂ ಇದೆ. ನಾಯಕನೇ ದೇವರು, ಊರು ಕಾಪಾಡಲು, ಕುಟುಂಬಕ್ಕೆ ಹೆಗಲಾಗಲು ಗಂಡು ಮಗುವೇ ಬೇಕು. ಅವನಿಂದಲೇ ಕುಟುಂಬವೂ, ಊರೂ ಉದ್ಧಾರವಾಗೋದು. ಮಕ್ಕಳನ್ನು ಹೆರಲು, ಮನೆ ನಡೆಸಲು ಹೆಣ್ಣುಮಕ್ಕಳು ಎನ್ನುವ ಅರ್ಥದ ಹಲವು ಸ್ಟೀರಿಯೊಟೈಪಿಕ್ ಅಭಿಪ್ರಾಯಗಳು ಸಿನಿಮಾದಲ್ಲಿ ರಾಚುತ್ತವೆ. 

ಕೆಜಿಎಫ್ ವಿಲನ್ ಸ್ಕ್ರೀನ್ ಪ್ರೆಸೆನ್ಸ್

ಪಾತ್ರ ಪೋಷಣೆ ವಿಚಾರದಲ್ಲಿ ಮದಗಜ ಉತ್ತಮ ಕೆಲಸ ನಿರ್ವಹಿಸಿದೆ. ಮುರಳಿ ತಾಯಿ ಪಾತ್ರದಲ್ಲಿ ತಮಿಳು ನಟಿ ದೇವಯಾನಿ, ತಂದೆ ಪಾತ್ರದಲ್ಲಿ ಜಗಪತಿ ಬಾಬು ಇಷ್ಟವಾಗುತ್ತಾರೆ. ಪ್ರಮುಖ ಪಾತ್ರ ಕೋಲೇ ಬಸವ ದಾಸಯ್ಯನಾಗಿ ರಂಗಾಯಣ ರಘು ಅವರು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಕೆಜಿಎಫ್ ವಿಲನ್ ರಾಮಚಂದ್ರ ರಾಜು ಅವರ ಡಯಲಾಗ್ ಓಘ ಮತ್ತು ಖದರ್ ಈ ಸಿನಿಮಾದಲ್ಲೂ ಮುಂದುವರಿದಿದೆ. ಜಗಪತಿ ಬಾಬು ಮತ್ತು ರಾಮಚಂದ್ರ ರಾಜು ಅವರ ಸ್ಕ್ರೀನ್ ಪ್ರೆಸೆನ್ಸ್ ಸಿನಿಮಾದ ಕಳೆ ಹೆಚ್ಚಿಸಿದೆ. ನಾಯಕಿ ಆಶಿಕಾ ರಂಗನಾಥ್ ಅಭಿನಯ ಮತ್ತು ಡಯಲಾಗುಗಳಿಂದ ಗಮನ ಸೆಳೆಯುತ್ತಾರೆ. ಪಡ್ಡೆ ಹುಡುಗರಿಗೆ ಇಷ್ಟವಾಗುವ ಆಣಿಮುತ್ತುಗಳು ಅವರ ಬಾಯಿಂದ ಈ ಸಿನಿಮಾದಲ್ಲಿ ಉದುರಿವೆ. ಅವರು ಸಿನಿಮಾದಲ್ಲಿ ಹೇಳುವ ‘ಹುಡುಗ್ರು ಸ್ಮೋಕ್ ಮಾಡಿದ್ರೆ ಹುಡ್ಗೀರಿಗೆ ಪ್ರಾಬ್ಲಂ. ಕಿಸ್ ಕೊಡೋಕೇ ಕಷ್ಟ ಆಗುತ್ತೆ’ ಡಯಲಾಗಿಗೆ ಚಿತ್ರಮಂದಿರದಲ್ಲಿ ವಿಷಲ್ಲು ಗ್ಯಾರಂಟಿ. ಸಿನಿಮಾದ ಕ್ಲೈಮ್ಯಾಕ್ಸ್ ಅವಸರದಲ್ಲಿ ಮುಗಿಸಿದಂತಿದೆ. ಕೊಂಚ ತಾಳ್ಮೆ ತೋರಿದ್ದರೆ ಕ್ಲೈಮ್ಯಾಕ್ಸ್ ಕೂಡಾ ಪ್ರಾರಂಭದಷ್ಟೇ ಪರಿಣಾಮಕಾರಿಯಾಗಿರುತ್ತಿತ್ತು.

ಸಿನಿಮಾದ ತಾರಾಗಣದಲ್ಲಿ ರವಿ ಬಸ್ರೂರು ಅವರೂ ಸ್ಥಾನ ಪಡೆಯುತ್ತಾರೆ. ಅವರು ಸಿನಿಮಾದಲ್ಲಿ ನಟಿಸಿಲ್ಲ. ಆದರೆ ಅವರು ನೀಡಿರುವ ಸಂಗೀತ, ಬ್ಯಾಕ್ ಗ್ರೌಂಡ್ ಸ್ಕೋರ್ ಕೂಡಾ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಫೈಟಿಂಗ್ ದೃಶ್ಯಗಳಲ್ಲಿ ಗರ್ಜಿಸುವುದಕ್ಕೂ ಸೈ, ತನ್ನ ನಲ್ಲೆಯ ಜೊತೆ ಡುಯೆಟ್ ಹಾಡುವುದಕ್ಕೂ ಜೈ. ಎರಡೂ ವೈರುಧ್ಯಗಳನ್ನು ಅಚ್ಚುಕಟ್ಟಾಗಿ ಸಂಭಾಳಿಸುವಲ್ಲಿ ರವಿ ಬಸ್ರೂರು ಸಂಗೀತ ಯಶಸ್ವಿ. ನವೀನ್ ಕುಮಾರ್ ಸಿನಿಮೆಟೊಗ್ರಫಿ, ಹರೀಶ್ ಕೊಮ್ಮೆ ಸಂಕಲನ ಅಭಿನಂದನಾರ್ಹ. ಒಟ್ಟಿನಲ್ಲಿ ಉಮಾಪತಿ ಫಿಲಂಸ್ ನಿರ್ಮಾಣದ ಮದಗಜ ಸಿನಿಮಾ ಮುರಳಿ ಅಭಿಮಾನಿಗಳು ಮಾತ್ರವಲ್ಲದೆ ಕುಟುಂಬ ಸಮೇತ ನೋಡಬಹುದಾದ ಪ್ಯಾಕೇಜ್ ಒಳಗೊಂಡ ಸಿನಿಮಾ ಎನ್ನಲಡ್ಡಿಯಿಲ್ಲ.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *