English Tamil Hindi Telugu Kannada Malayalam Android App
Thu. Dec 1st, 2022

Online Desk

– ಹರ್ಷವರ್ಧನ್ ಸುಳ್ಯ


ಜೇಮ್ಸ್ ಬಾಂಡ್ ಪಾತ್ರಕ್ಕೆ ವಿಶಿಷ್ಟ ಖದರ್ ತಂದುಕೊಟ್ಟಿದ್ದು ನಮ್ಮಯ ಕಾಲದ ಡೇನಿಯಲ್ ಕ್ರೇಗ್. ಡೇನಿಯಲ್ ಕ್ರೇಗ್ ಜೇಮ್ಸ್ ಬಾಂಡ್ ಆಗಿ ನಟಿಸಿರುವ ಬಹುನಿರೀಕ್ಷಿತ ‘ನೋ ಟೈಮ್ ಟು ಡೈ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಇದರೊಂದಿಗೆ ಡೇನಿಯಲ್ ಕ್ರೇಗ್ ಅವರ ಜೇಮ್ಸ್ ಬಾಂಡ್ ಕಾಲಘಟ್ಟ ಮುಕ್ತಾಯಗೊಂಡಿದೆ. ಕಳೆದ 15 ವರ್ಷಗಳಲ್ಲಿ 5 ಜೇಮ್ಸ್ ಬಾಂಡ್ ಸಿನಿಮಾಗಳನ್ನು ನೀಡಿರುವ ಕ್ರೇಗ್ ಇನ್ನುಮುಂದೆ 007 ಜೇಮ್ಸ್ ಬಾಂಡ್ ಆಗಿ ಕಾಣಿಸಿಕೊಳ್ಳುವುದಿಲ್ಲ. ಮುಂದಿನ ಜೇಮ್ಸ್ ಬಾಂಡ್ ಸಿನಿಮಾ ಪಾತ್ರಕ್ಕೆ ಹೊಸ ನಟನಿಗಾಗಿ ಅನ್ವೇಷಣೆ ನಡೆದಿದೆ.

ನೋ ಟೈಮ್ ಟು ಡೈ ಸಿನಿಮಾ ಜೇಮ್ಸ್ ಬಾಂಡ್ ಅಭಿಮಾನಿಗಳಿಗೆ ಹಬ್ಬದೂಟವನ್ನೇ ಬಡಿಸಿದೆ. ಸಾಮಾನ್ಯವಾಗಿ ಹಾಲಿವುಡ್/ ಬ್ರಿಟಿಷ್ ಸಿನಿಮಾಗಳು 90 ನಿಮಿಷಗಳನ್ನು ಅವಧಿಯನ್ನು ಹೊಂದಿರುತ್ತವೆ. ಆದರೆ ನೋ ಟೈಮ್ ಟು ಡೈ ಸಿನಿಮಾ 163 ನಿಮಿಷಗಳ ಅವಧಿ ಹೊಂದಿದೆ. ಡೇನಿಯಲ್ ಕ್ರೇಗ್ ಅವರ ಅಂತಿಮ ಬಾಂಡ್ ಸಿನಿಮಾ ಆಗಿದ್ದರಿಂದ ಅವರನ್ನು ಕಣ್ತುಂಬಿಕೊಳ್ಳಲು ಇದೊಂದು ಒಳ್ಳೆ ಅವಕಾಶ.

ಒಂದೇ ಮಾತಿನಲ್ಲಿ ಹೇಳುವುದಾದರೆ ಈ ಸಿನಿಮಾ ಮೂಲಕ ಬಾಂಡ್ ಪಾತ್ರಧಾರಿ ಡೇನಿಯಲ್ ಕ್ರೇಗ್ ಅವರಿಗೆ ಒಂದು ಅತ್ಯುತ್ತಮ ಸೆಂಡಾಫ್ ದೊರೆತಿದೆ ಎನ್ನಬಹುದು. ಈ ಸಿನಿಮಾ ಇಟಲಿಯ ಮಟೆರಾ ನಗರಿಯಲ್ಲಿ ತೆರೆದುಕೊಳ್ಳುತ್ತದೆ. ಪ್ರವಾಸಕ್ಕೆಂದು ಬಾಂಡ್ ತನ್ನ ಪ್ರೇಯಸಿ ಮದೆಲೀನ್ ಜೊತೆ ಬಂದಿದ್ದಾನೆ. ಅತನ ಇರುವಿಕೆ ಬಗ್ಗೆ ಆತನ ಮಾತೃಸಂಸ್ಥೆ ಬ್ರಿಟಿಷ್ ಇಂಟೆಲಿಜೆನ್ಸ್ ಎಂಐ6 ಅವರಿಗೇ ತಿಳಿದಿರುವುದಿಲ್ಲ. ಜಗತ್ತಿನ ಪರಿವೇ ಇಲ್ಲದಂತೆ ಯಾರ ಕೈಗೂ ಸಿಗದ ಪ್ರದೇಶದಲ್ಲಿ ಏಕಾಂತ ಅನುಭವಿಸಬೇಕು ಎನ್ನುವುದು ಅವರಿಬ್ಬರ ಲೆಕ್ಕಾಚಾರ. ಆದರೆ ವಿರೋಧಿ ಗುಂಪು ಬಾಂಡ್ ಪ್ರತಿ ಚಲನವಲನದ ಮೇಲೆ ಕಣ್ಣಿಟ್ಟಿರುತ್ತದೆ. ಅವರಿಬ್ಬರ ಮೇಲೆ ದಾಳಿಯಾಗುತ್ತದೆ.

ಇದುವರೆಗಿನ ಬಾಂಡ್ ಸಿನಿಮಾಗಳಲ್ಲಿ ಆತ ಸ್ತ್ರೀಲೋಲ, ಮೋಜು ಪ್ರಿಯ, ಜೂಜು ಪ್ರಿಯ, ಹೆಣ್ಣುಮಕ್ಕಳ ಹಾಟ್ ಫೇವರಿಟ್ ಎಂಬಂತೆ ತೋರಿಸಲಾಗುತ್ತಿತ್ತು. ಆದರೆ ಈ ಸಿನಿಮಾದಲ್ಲಿ ಬಾಂಡ್ ಫ್ಯಾಮಿಲಿ ಮ್ಯಾನ್ ಆಗಿ ಬದಲಾಗುವುದನ್ನು ಕಾಣಬಹುದಾಗಿದೆ. ಬಾಂಡ್ ಎಂದರೆ ಭಯ, ಅಳುಕು, ಭಾವನೆಗಳು ಇಲ್ಲದ ವ್ಯಕ್ತಿ ಎಂಬಂತೆ ಚಿತ್ರಿಸಲಾಗಿತ್ತು. ಆದರೆ ಇಲ್ಲಿ ಅದಕ್ಕೆ ತದ್ವಿರುದ್ಧವಾದ ಬಾಂಡ್ ಅನ್ನು ನೋಡಬಹುದು. ಜೀವನದಲ್ಲಿ ಸೆಟಲ್ ಆಗುವುದು ಅವನ ಲಿಸ್ಟ್ ಅಲ್ಲೇ ಇರಲಿಲ್ಲ. ಆದರೆ ಈ ಸಿನಿಮಾದಲ್ಲಿ ಮಕ್ಕಳು ಮತ್ತು ಪ್ರೇಯಸಿಯೊಡನೆ ಸೆಟಲ್ ಆಗುವ ಇಚ್ಛೆ ವ್ಯಕ್ತಪಡಿಸುತ್ತಾನೆ. ಅದೇ ಕಾರಣಕ್ಕೆ ಪ್ರೇಯಸಿ ತನ್ನ ಜೊತೆಯಿದ್ದರೆ ಅವಳಿಗೆ ಅಪಾಯ ಎಂದು ಅವಳಿಂದ ದೂರವಾಗುತ್ತಾನೆ. 

ಆದರೆ ಜೀವನದ ಕೆಲ ರಹಸ್ಯಗಳು ಎಷ್ಟೇ ಬಾರಿ ಮುಚ್ಚಿಟ್ಟರೂ ಪೆಡಂಭೂತದಂತೆ ಬೆಂಬೆತ್ತಿ ಬರುತ್ತದೆ ಎಂಬಂತೆ ಜಗತ್ತನ್ನೇ ನಾಶಪಡಿಸಬೇಕು ಎನ್ನುವ ಧ್ಯೇಯದೊಂದಿಗೆ ಖಳನಾಯಕನ ಎಂಟ್ರಿ ಆಗುತ್ತದೆ. ಆತ ಬಾಂಡ್ ಪ್ರೇಯಸಿ ಮದೆಲೀನ್ ಳನ್ನು ಎಳವೆಯಲ್ಲಿ ರಕ್ಷಿಸಿರುತ್ತಾನೆ, ಆ ಲೆಕ್ಕದಲ್ಲಿ ಅವನು ಅವಳಿಗೆ ತಂದೆ, ಬಾಂಡ್ ಗೆ ಮಾವ ಆಗಬೇಕು. ಆದರೆ ಬಾಂಡ್ ಅನ್ನು ಸಾಯಿಸಲು ಅವಳನ್ನೇ ದಾಳವಾಗಿ ಬಳಸಿಕೊಳ್ಳುತ್ತಾನೆ. ಮದೆಲೀನ್ ಗೆ ಒಬ್ಬಳು ಮಗಳಿದ್ದಾಳೆ. ಥೇಟ್ ಜೇಮ್ಸ್ ಬಾಂಡ್ ಕಣ್ಣಿನ ಬಣ್ಣ ಅವಳಿಗೂ ಇದೆ. ಅದನ್ನು ಬಾಂಡ್ ಗಮನಿಸಿದ ಮರುಕ್ಷಣವೇ ಮದೆಲೀನ್ ನಿನ್ನ ಮಗಳಲ್ಲ ಎಂದು ತೇಲಿಸಿಬಿಡುತ್ತಾಳೆ. ಆದರೆ ಅದು ಬಾಂಡ್ ನದೇ ಮಗು ಎಂದು ಕಡೆಗೆ ಮದೆಲೀನ್ ಹೇಳುತ್ತಾಳೆ. 

ಬ್ರಿಟಿಷ್ ಗೂಢಚಾರಿಯಾದರೂ ಜಗತ್ತನ್ನು ಗಂಡಾಂತರದಿಂದ ರಕ್ಷಿಸುವುದು ಬಾಂಡ್ ನ ಆದ್ಯ ಕರ್ತವ್ಯ, ಆ ಮೂಲಕ ಎಲ್ಲರಿಗೂ ಹತ್ತಿರವಾಗುವವನು ಬಾಂಡ್. ಬಾಂಡ್ ಸಿನಿಮಾಗಳ ಖಳ ನಟ ಜಗತ್ತನ್ನೇ ದ್ವೇಷಿಸುವವನು. ಹಾಗಾಗಿ ಜಗತ್ತನ್ನೇ ಅಲ್ಲೋಕಲ್ಲೋಲ ಮಾಡುವಲ್ಲಿ ಆತ ನಿರತ. ಈ ಸಿನಿಮಾದಲ್ಲೂ ಅಂಥದ್ದೊಂದು ಸಂಧಿಗ್ಧತೆಯನ್ನು ಸೃಷ್ಟಿಸಲಾಗಿದೆ. ಇಡೀ ಪ್ರಪಂಚವನ್ನು ರಕ್ಷಿಸುವ ಹೊಣೆಗಾರಿಕೆಯ ಜೊತೆಗೆ ತನ್ನ ಕುಟುಂಬವನ್ನೂ ಅವನು ರಕ್ಷಿಸಬೇಕು. ಬೈಕು ಕಾರುಗಳ ಸ್ಟಂಟ್ ಗಳಿಗೆ ಫೇಮ್ಸ್ ಆಗಿರುವ ಬಾಂಡ್ ಈ ಸಿನಿಮಾದಲ್ಲಿಯೂ ಆಕ್ಷನ್ ಪ್ರಿಯರಿಗೆ ನಿರಾಸೆ ಮೂಡಿಸುವುದಿಲ್ಲ. ಹಲವಾರು ಚೇಸಿಂಗ್ ಸೀಕ್ವೆನ್ಸ್ ಗಳು ಸಿನಿಮಾದಲ್ಲಿದೆ. 

ಬಾಂಡ್ ಪ್ರೇಯಸಿಯಾಗಿ ಫ್ರೆಂಚ್ ನಟಿ ಲೀ ಸೆಡೊಕ್ಸ್ ಮೋಹಕವಾಗಿ ನಟಿಸಿದ್ದಾರೆ. ಬಾಂಡ್ ಸಿನಿಮಾಗಳಲ್ಲಿ ಖಳ ನಾಯಕನಿಗೂ ಪ್ರಾಶಸ್ತ್ಯ ನೀಡಲಾಗುತ್ತದೆ. ಬೊಹೆಮಿಯನ್ ರಾಪ್ಸೊಡಿ ಸಿನಿಮಾ ಅಭಿನಯಕ್ಕೆ ಆಸ್ಕರ್ ಪಡೆದ ಯುವ ನಟ ರಾಮಿ ಮಲಿಕ್ ಈ ಸಿನಿಮಾದ ವಿಲನ್ ಪಾತ್ರಧಾರಿ.  ಇನ್ನುಳಿದಂತೆ ಬಾಂಡ್ ಜೊತೆ ಕಾರ್ಯ ನಿರ್ವಹಿಸುವ ತಂಡದಲ್ಲಿ ರಾಲ್ಫ್ ಫಿಯನಿಸ್, ಮನಿ ಪೆನ್ನಿ ಪಾತ್ರದಲ್ಲಿ ನವೋಮಿ ಹ್ಯಾರಿಸ್, ಬೆನ್ ವಿಶಾ ಲಶಾನಾ ಲಂಚ್ ಅಭಿನಯಿಸಿದ್ದಾರೆ. ಈ ಹಿಂದಿನ ಸ್ಪೆಕ್ಟರ್ ಸಿನಿಮಾದ ಖಳನ ಪಾತ್ರದಲ್ಲಿ ನಟಿಸಿರುವ ಕ್ರಿಸ್ಟೋಫ್ ವಾಲ್ಝ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮೆಟೊಗ್ರಾಫರ್ ಆಗಿ ಹೆಸರು ಮಾಡಿರುವ ನಿರ್ದೇಶಕ ಕ್ಯಾರಿ ಫುಕುನಗ ಈ ಸಿನಿಮಾ ಮೂಲಕ ಬಾಂಡ್ ಸಿನಿಮಾ ಪರಂಪರೆಗೆ ನ್ಯಾಯ ಒದಗಿಸಿದ್ದಾರೆ. 

ನೋ ಟೈಮ್ ಟು ಡೈ ಸಿನಿಮಾ ಆಕ್ಷನ್ ಪ್ರಿಯರಿಗೆ ಮಾತ್ರವೇ ಅಲ್ಲ ಸೆಂಟಿಮೆಂಟ್ ಪ್ರಿಯರಿಗೂ ಆಪ್ತವೆನಿಸುತ್ತದೆ. ಹೀಗಾಗಿ ಡೇನಿಯಲ್ ಕ್ರೇಗ್ ರ ಈ ಸಿನಿಮಾ ಕಂಪ್ಲೀಟ್ ಫ್ಯಾಮಿಲಿ ಪ್ಯಾಕೇಜ್. 

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *