English Tamil Hindi Telugu Kannada Malayalam Google news Android App
Sat. Jan 28th, 2023

Online Desk

ವಿಮರ್ಶೆ: ಹರ್ಷವರ್ಧನ್ ಸುಳ್ಯ


ಬೆಂಗಳೂರು: ಕಮ್ ಬ್ಯಾಕ್ ಅನ್ನೋ ಎರಡು ಪದಗಳು ಬಹಳ ದುಬಾರಿಯಾದುದು. ಎಲ್ಲರಿಗೂ ಒಲಿಯುವಂಥದ್ದಲ್ಲ. ಮುಖ್ಯವಾಗಿ ಅಷ್ಟು ಸುಲಭವಾಗಿಯೂ ದಕ್ಕದ್ದು. ಮುಗಿಲ್ ಪೇಟೆ ನೋಡಿದ ಮೇಲೆ ಇವೆರಡು ಪದಗಳನ್ನು ರಪ್ಪೆಂದು ಬಳಸಿಬಿಡಬಹುದು. ಬಿಕಾಸ್ ಮನುರಂಜನ್ ಈಸ್ ಬ್ಯಾಕ್, ಈ ಸಲ ವಿತ್ ಬ್ಯಾಂಗ್! ಇನ್ನೂ ಚೆನ್ನಾಗಿ ವಿವರಿಸಬೇಕೆಂದರೆ ಮುಗಿಲ್ ಪೇಟೆ ಮನುರಂಜನ್ ಮೂಲಕ ಕನ್ನಡ ಚಿತ್ರರಂಗಕ್ಕೆ ರವಿಚಂದ್ರನ್ ಮತ್ತೆ ಸಿಕ್ಕಿದ್ದಾರೆ ಎನ್ನಬಹುದು.

ರೆಫರೆನ್ಸ್ ಗಳ ಸಮರ್ಥ ಬಳಕೆ

ಡಯಲಾಗ್ ಡೆಲಿವರಿ ಸ್ಟೈಲೇ ಇರಲಿ, ಮಾತಿನ ನಡುವಿನ pause ಇರಲಿ, ಕಪಾಳಕ್ಕೆ ಹೊಡೆಯುವಾಗಲೇ ಆಗಲಿ, ಪ್ರತಿ ಮ್ಯಾನರಿಸಂನಲ್ಲಿ ರವಿಚಂದ್ರನ್ ನೆನಪಾಗುತ್ತಾರೆ. ಈ ಮುಂಚಿನ ಚಿತ್ರಗಳಿಗೆ ಹೋಲಿಸಿದರೆ ಕೊಂಚ ಬಾಡಿ ವೇಯ್ಟ್ ದಕ್ಕಿಸಿಕೊಂಡು ಹಲವು  ಫ್ರೇಮ್ ಗಳಲ್ಲಿ ರವಿಚಂದ್ರನ್ ರಂತೆಯೂ ತೋರುತ್ತಾರೆ. Conscious ಆಗಿ ನೋಡುವುದರಿಂದ ಯಾರಿಗೇ ಆದರೂ ಹಾಗೆ ತೋರಬಹುದು ಎನ್ನುವುದೂ ನಿಜವೇ. ಆದರೆ ಮನುರಂಜನ್ ಅವರಲ್ಲಿ ರವಿಚಂದ್ರನ್ ರನ್ನು ತೋರಿಸಲು ನಿರ್ದೇಶಕರು ಪ್ರಯತ್ನಿಸಿರುವುದು ಸಿನಿಮಾದಲ್ಲಿ ಕಾಣುತ್ತದೆ. ಈ ಪ್ರಯತ್ನ ರವಷ್ಟೂ ಚ್ಯುತಿ ಬಾರದಂತೆ ಯಶಸ್ವಿಯಾಗಿದೆ ಕೂಡಾ. ಮಿಗಿಲಾಗಿ ರವಿಚಂದ್ರನ್ ಸಿನಿಮಾಗಳ ಹಾಡುಗಳನ್ನು ಹಿನ್ನೆಲೆ ಸಂಗೀತದಲ್ಲಿ ಬಳಸಿಕೊಂಡಿರುವುದು ಕೂಡಾ ನಿರ್ದೇಶಕರ ಆಶಯಕ್ಕೆ ಪೂರಕವಾಗಿದೆ. 

ಮುಗಿಲ್ ಪೇಟೆ ಹೆಸರು ಕೇಳಿದಾಗ ಮೊದಲು ನೆನಪಾಗೋದು ಗಾಳಿಪಟ. ಮುಗಿಲ್ ಪೇಟೆ ಸಿನಿಮಾದ ಪೋಸ್ಟರ್ ನೋಡಿದಾಗ ನೆನಪಾಗೋದು ಮುಂಗಾರುಮಳೆ. ಕನ್ನಡ ಚಿತ್ರರಂಗದಲ್ಲಿ ಬದಲಾವಣೆಗೆ ಕಾರಣವಾದ ಸಿನಿಮಾಗಳ ಪೈಕಿ ಇವೂ ಸೇರುತ್ತವೆ. ರವಿಚಂದ್ರನ್ ಸಿನಿಮಾಗಳ ರೆಫರೆನ್ಸ್ ಜೊತೆಗೆ ಇವೆರಡೂ ಸಿನಿಮಾಗಳ ರೆಫರೆನ್ಸ್ ಗಳನ್ನು ಮುಗಿಲ್ ಪೇಟೆ ಸಮರ್ಥವಾಗಿ ಬಳಸಿಕೊಂಡಿದೆ. ಬೈಕಿನಿಂದ ನಾಯಕಿ ಇಳಿಯುವಾಗ ಆಕೆಯ ಜುಮುಕಿ ನಾಯಕನ ಶರ್ಟಿಗೆ ಸಿಕ್ಕಿಹಾಕಿಕೊಳ್ಳುವ ದೃಶ್ಯ ನೋಡಿದಾಗ ಮನದ ಮುಗಿಲಲ್ಲಿ ಗಾಳಿಪಟ ರಪ್ಪೆಂದು ಪಾಸಾಗುತ್ತದೆ.

ಪಾಸ್ಟ್ ಪ್ರೆಸೆಂಟ್ ನಿರೂಪಣಾ ಶೈಲಿ

ನಾಯಕ ರಾಜ ಯಾರಲ್ಲಿಯೂ ಹಂಚಿಕೊಳ್ಳಲಾಗದ ಕೆಂಡವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾನೆ. ಸ್ವಂತ ಅಪ್ಪ ಅಮ್ಮನಿಗೆ ಅವನ ನೆರಳು ಕಂಡರೂ ದೂರ ಹೋಗುವ ಪರಿಸ್ಥಿತಿಯನ್ನು ರಾಜಾ ತಂದುಕೊಂಡಿದ್ದಾನೆ. ತಂದೆ ಪಾತ್ರದಲ್ಲಿ ಅವಿನಾಶ್, ಅಮ್ಮನಾಗಿ ತಾರಾ ಅವರು ಅಭಿನಯಿಸಿದ್ದಾರೆ. ತನ್ನ ಊರಾದ ಸಕಲೇಶಪುರ ಬಿಟ್ಟು ಕುಂದಾಪುರದ ನೂಜಾಡಿ ಎಂಬಲ್ಲಿಗೆ ಯಾರನ್ನೋ ಅರಸಿ ಬಂದಿದ್ದಾನೆ. ಈ ಪಯಣದಲ್ಲಿ ಕುಂದಾಪುರದಲ್ಲಿ ರಂಗಾಯಣ ರಘು ಸಿಗುತ್ತಾರೆ. ಇದಿಷ್ಟು ಪ್ರೆಸೆಂಟ್ ಕಥೆ. ರಾಜಾ ಬದುಕಿನಲ್ಲಿ ಅಂಥದ್ದೇನಾಗಿದೆ. ಅಪ್ಪ ಅಮ್ಮ ಸ್ವಂತ ಮಗನನ್ನು ದ್ವೇಷಿಸಲು ಕಾರಣವೇನು? ಅವನು ಯಾರನ್ನು ಹುಡುಕಿಕೊಂಡು ಬಂದಿದ್ದಾನೆ ಎಂಬಿತ್ಯಾದಿ ಪ್ರಶ್ನೆಗಳು ಪ್ರೇಕ್ಷಕರ ಮನದಲ್ಲಿ ಮೂಡುತ್ತದೆ. ಆ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನವನ್ನು ಫ್ಲ್ಯಾಷ್ ಬ್ಯಾಕ್ ಮಾಡುತ್ತದೆ. ಪ್ರೆಸೆಂಟ್ ಮತ್ತು ಫ್ಲ್ಯಾಷ್ ಬ್ಯಾಕ್ ಎರಡನ್ನೂ ಜೊತೆಯಾಗಿ ತೋರಿಸುವ ಮೂಲಕ ಕಥೆಯನ್ನು ನಿರ್ದೇಶಕರು ನಿರೂಪಿಸಿದ್ದಾರೆ. 

ರಾಜಾ ಖಾಸಗಿ ಫೈನಾನ್ಸ್ ಸಂಸ್ಥೆಯೊಂಡರಲ್ಲಿ ರಿಕವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಈ ವೇಳೆ ಆತನ ಸ್ಕೂಟರ್ ಗೆ ನಾಯಕಿ ಅಕಸ್ಮಾತ್ತಾಗಿ ಡಿಕ್ಕಿ ಹೊಡೆಯುತ್ತಾಳೆ. ಅವಳನ್ನು ನೋಡಿಯೇ ಫಿದಾ ಆಗಿದ್ದ ರಾಜಾ ಗಾಡಿ ನಷ್ಟ ಭರಿಸುವ ನೆಪದಲ್ಲಿ ಅವಳ ಹಿಂದೆ ಬೀಳುತ್ತಾನೆ. ಈ ಗ್ಯಾಪಿನಲ್ಲಿ ನಾಯಕ ನಾಯಕಿ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಶುರುವಿನಲ್ಲಿ ನಾಯಕ ಕುಂದಾಪುರಕ್ಕೆ ಯಾವುದೋ ಉದ್ದೇಶ ಇಟ್ಟುಕೊಂಡು ಬರುತ್ತಾನೆ ಎಂದಿದ್ದೆವಲ್ಲ. ಆಗ ರಂಗಾಯಣ ರಘು ಜೊತೆಯಾಗುತ್ತಾರೆ. ದೋಣಿಯಲ್ಲಿ ರಾಜನ ಮೊಬೈಲು ಕೈಜಾರಿ ನದಿಗೆ ಬೀಳುತ್ತದೆ. ಮೊಬೈಲು ನದಿಯ ತಳಕ್ಕೆ ಬಂದು ಬೀಳುತ್ತದೆ. ಅದು ಬಿದ್ದೊಡನೆ ಒಂದು ಕ್ಷಣ ಸ್ಕ್ರೀನ್ ಆನ್ ಆಗುತ್ತದೆ. ಅದರಲ್ಲಿ ನಾಯಕಿ ಫೋಟೊ ಕಾಣುತ್ತದೆ. 2 ಸೆಕೆಂಡುಗಳ ನಂತರ ಮೊಬೈಲು ನಿಷ್ಕ್ರಿಯಗೊಳ್ಳುತ್ತದೆ. ಇದೊಂದು ಶಾಟ್ ನಿಂದ ಪ್ರೇಕ್ಷಕರಿಗೆ ನಾಯಕ ಯಾರನ್ನು ಹುಡುಕಿಕೊಂಡು ಕುಂದಾಪುರಕ್ಕೆ ಬಂದಿದ್ದಾನೆ ಎನ್ನುವುದು ತಿಳಿದುಹೋಗುತ್ತದೆ. ಇದು ಇಂಟೆಲಿಜೆಂಟ್ ನಿರ್ದೇಶನದ ಕುರುಹು. 

ಚಿಟಿಕೆ ಫೈಟ್ ಸೀಕ್ವೆನ್ಸ್

ಈ ಸಿನಿಮಾದಲ್ಲಿ one of the best ಚಿಟಿಕೆ ಫೈಟ್ ಸೀಕ್ವೆನ್ಸ್ ಇದೆ. ತಂದೆ ಅವಿನಾಶ್ ಮದುವೆ ರಿಜಿಸ್ಟರ್ ಆಫೀಸಿನಲ್ಲಿ ಸರ್ಕಾರಿ ಉದ್ಯೋಗಿ. ಒಂದು ದಿನ ಹುಡುಗ ಹುಡುಗಿ ಇಬ್ಬರೂ ಮದುವೆಯಾಗಲೆಂದು ಅಲ್ಲಿಗೆ ಬಂದಿರುತ್ತಾರೆ. ಹುಡುಗಿಯ ತಂದೆ ಅವಿನಾಶ್ ಗೆ ಕರೆ ಮಾಡಿ ೫ ನಿಮಿಷ ಕಾಯುವಂತೆ ಮನವಿ ಮಾಡುತ್ತಾರೆ. ಆದರೆ ಅದುವರೆಗೂ ಸಭ್ಯನಂತಿದ್ದ ಹುಡುಗ 5 ನಿಮಿಷ ಕಾಯೋಕೆ ಆಗೋದಿಲ್ಲ ಎಂದು ಹೇಳಿ ತನ್ನ ರೌಡಿ ರೂಪ ತೋರಿಸುತ್ತಾನೆ. ಅವನ ಅಸಲಿ ಬಣ್ಣ ಕಂಡು ಹುಡುಗಿ ಮಂಕಾಗುತ್ತಾಳೆ. ಅಪ್ಪ ಅವಿನಾಶ್ ಮೇಲೆಯೇ ರೌಡಿಗಳು ಮುನ್ನುಗ್ಗಿ ಬಂದಾಗ ರಾಜಾ ಅಲ್ಲಿಗೆ ಬರುತ್ತಾನೆ. ಚಿಟಿಕೆ ಹೊಡೆದಷ್ಟೇ ಸುಲಭವಾಗಿ ಅಲ್ಲಿದ್ದವರನ್ನು ಧೂಳಿಪಟ ಮಾಡುತ್ತಾನೆ. ನಿಜಕ್ಕೂ ಚಿಟಿಕೆ ಹೊಡೆಯುತ್ತಲೇ ಮನುರಂಜನ್ ಫೈಟ್ ಮಾಡುವ ಶಾಟ್ ಗಳು ತುಂಬಾ ಸ್ಟೈಲಿಶ್ ಆಗಿ ಮೂಡಿಬಂದಿವೆ.

ಮುಗಿಲ್ ಪೇಟೆಯಲ್ಲಿ ಸಾಧು ಕೋಕಿಲ ಪ್ರೇಕ್ಷಕರಿಗೆ ಔಷಧ ಹಂಚುವ ಧರ್ಮ ಕಾರ್ಯ ಮಾಡಿದ್ದಾರೆ. ಎಲ್ಲಿಯ ಸಾಧು ಕೋಕಿಲ ಎಲ್ಲಿಯ ಔಷಧ! laughter is best medicine ಎನ್ನುವ ಮಾತೇ ಇಲ್ಲವೆ. ಉದರ ನಿಮಿತ್ತಂ ಬಹುಕೃತ ವೇಷಂ ಎನ್ನುವಂತೆ ಹೊಟ್ಟೆಪಾಡಿಗೆ ನಾನಾ ವೇಷಗಳನ್ನು ಹಾಕಿ ಕಳ್ಳತನ ಮಾಡುವವನ ಪಾತ್ರದಲ್ಲಿ ಸಾಧು ಹೊಟ್ಟೆ ತುಂಬಾ ನಗಿಸುತ್ತಾರೆ. ಕೆಜಿಎಫ್, ಆಮೀರ್ ಖಾನ್ ಪಿಕು, ಗಜಿನಿ, ನಿತ್ಯಾನಂದ ಹೀಗೆ ನಾನಾ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳುವ ಸಾಧು ಭರಪೂರ ಮನರಂಜನೆ ಒದಗಿಸುತ್ತಾರೆ.

ಪಡ್ಡೆ ಹುಡುಗರ anthem

ಶ್ರೀಧರ್ ಸಂಭ್ರಮ್ ಅವರ ಸಂಗೀತ ಮುಗಿಲ್ ಪೇಟೆಗೆ ಪ್ಲಸ್ ಪಾಯಿಂಟ್. ‘ಜೀನ್ಸ್ ಅಲ್ಲಿ ಮಾಸ್ ಆಗವ್ಳೇ ಚೂಡೀಲಿ ಕ್ಲಾಸ್ ಆಗವ್ಳೇ’ ಕನ್ನಡ ನಾಡಿನ ಪಡ್ಡೆ ಹುಡುಗರ, ಅಷ್ಟೇ ಯಾಕೆ ಪಡ್ಡೆ ಹುಡುಗಿಯರ anthem ಆಗುವುದರಲ್ಲಿ ಸಂಶಯವಿಲ್ಲ. ನಾಯಕ ತನ್ನ ಮನದನ್ನೆಯನ್ನು ಹೊಗಳುವ ಈ ಹಾಡನ್ನು ‘ಶ್ಯಾನೆ ಟಾಪ್ ಆಗವ್ಳೇ’ ಎನ್ನುವ ಹಿಟ್ ಹಾಡು ರಚಿಸಿದ್ದ ಭರ್ಜರಿ ಚೇತನ್ ಅವರೇ ಪದ ಪೋಣಿಸಿದ್ದಾರೆ. ಟಿಪ್ಪು ಈ ಹಾಡನ್ನು ಹಾಡಿದ್ದಾರೆ.

ಮನುರಂಜನ್ ಅವರು ಪ್ರೇಕ್ಷಕರಿಗೆ ಇಷ್ಟವಾಗುವಂತೆ ಪ್ರಸ್ತುತ ಪಡಿಸುವಲ್ಲಿ ನಿರ್ದೇಶಕ ಭರತ್ ನಾವುಂದ ಪಟ್ಟಿರುವ ಶ್ರಮ ಫಲ ನೀಡಿರುವುದು ತೆರೆ ಮೇಲೆ ಗೋಚರಿಸುತ್ತದೆ. ಅವರು ಈ ಹಿಂದೆ ಅಡಚಣೆಗಾಗಿ ಕ್ಷಮಿಸಿ ಎನ್ನುವ ಥ್ರಿಲ್ಲರ್ ಸಿನಿಮಾ ನಿರ್ದೇಶಿಸಿದ್ದರು. ನಿರ್ಮಾಪಕಿ ರಕ್ಷಾ ವಿಜಯ್ ಕುಮಾರ್ ಅವರ ಕಾಣಿಕೆ, ರಿಚ್ ಆಗಿ ಮೂಡಿಬಂದಿರುವ ಸಿನಿಮಾದ ಪ್ರೊಡಕ್ಷನ್ ವ್ಯಾಲ್ಯೂನಲ್ಲಿ ಗೊತ್ತಾಗುತ್ತದೆ. ಸಿನಿಮಾ ರಿಚ್ ಆಗಿ ಮೂಡಿ ಬಂದಿರುವಲ್ಲಿ ಸಿನಿಮೆಟೊಗ್ರಾಫರ್ ರವಿ ವರ್ಮಾ ಅವರ ಹೋಮ್ ವರ್ಕ್ ಕೂಡ ಕೆಲಸ ಮಾಡಿದೆ. ನಾಯಕಿ ಕಯಾದು ಲೋಹರ್ ಆಕರ್ಷಕವಾಗಿ ನಟಿಸಿದ್ದಾರೆ. ನಟ ರಿಷಿ ನಟನೆ ಅಭಿನಯ ಇಷ್ಟವಾಗುತ್ತದೆ. ಒಟ್ಟಿನಲ್ಲಿ ರವಿಚಂದ್ರನ್ ಪುತ್ರ ಮನುರಂಜನ್ ಕನ್ನಡ ಚಿತ್ರರಂಗಕ್ಕೆ ಭರವಸೆಯ ಸಿನಿಮಾಗಳನ್ನು ನೀಡುವ ಸೂಚನೆ ಈ ಸಿನಿಮಾದಿಂದ ಪ್ರೇಕ್ಷಕರಿಗೆ ಸಿಕ್ಕಿದೆ. ಮನುರಂಜನ್ ರ ಮುಗಿಲ್ ಪೇಟೆ ಸಿನಿಮಾದಲ್ಲಿ ಮನರಂಜನೆಗೇನೂ ಕೊರತೆಯಿಲ್ಲ.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *