English Tamil Hindi Telugu Kannada Malayalam Google news Android App
Tue. Jan 31st, 2023

Online Desk

ಚಿತ್ರವಿಮರ್ಶೆ: ಹರ್ಷವರ್ಧನ್ ಸುಳ್ಯ


ಕನ್ನಡ ಚಿತ್ರರಂಗದಲ್ಲಿ ಕೋಟಿ ನಿರ್ಮಾಪಕ ಎಂದೇ ಹೆಸರಾದವರು ರಾಮು. ಆ ಕಾಲದಲ್ಲಿಯೇ ಅದ್ಧೂರಿತನ, ವೈಭವೋಪೇತ ಆಕ್ಷನ್ ದೃಶ್ಯಗಳು, ರಾಕ್ಷಸ ಕುಲದ ಖಳನಟರು, ಆಪತ್ಬಾಂಧವ ನಾಯಕರು ಅವರ ಸಿನಿಮಾಗಳ ವೈಶಿಷ್ಟ್ಯ. ತಮ್ಮದೇ ಆದ ಸಿನಿಮಾ ಪರಂಪರೆಯನ್ನು ಹುಟ್ಟುಹಾಕಿದ ಕೋಟಿ ರಾಮು ಅವರು ಕಂಡ ಕಡೆಯ ಕನಸು ಅರ್ಜುನ್ ಗೌಡ. ಪ್ರೇಕ್ಷಕರೆದುರು ಅವರ ಕನಸನ್ನು ಪ್ರಸ್ತುತ ಪಡಿಸುವ ಕೆಲಸವನ್ನು ಪತ್ನಿ ಮಾಲಾಶ್ರೀ ಯಶಸ್ವಿಯಾಗಿ ನೆರವೇರಿಸಿದ್ದಾರೆ.

ಕನ್ನಡ ಸಿನಿಪ್ರೇಕ್ಷಕರು ಅರ್ಜುನ್ ಗೌಡ ಸಿನಿಮಾ ಹೆಸರು ಕೇಳಿದ ಕೂಡಲೆ ಮೊದಲು ಇದು ತೆಲುಗಿನ ಬ್ಲಾಕ್ ಬಸ್ಟರ್ ಸಿನಿಮಾ ಅರ್ಜುನ್ ರೆಡ್ಡಿ ರೀಮೇಕ್ ಎಂದುಕೊಂಡವರೇ ಹೆಚ್ಚು. ಆದರೆ, ಪ್ರಜ್ವಲ್ ದೇವರಾಜ್ ನಾಯಕ ನಟನಾಗಿ ಅಭಿನಯಿಸಿರುವ ‘ಅರ್ಜುನ್ ಗೌಡ’ ಸಿನಿಮಾಗೂ ‘ಅರ್ಜುನ್ ರೆಡ್ಡಿ’ಗೂ ನೇರ ಸಂಬಂಧವಿಲ್ಲ. ‘ನೇರ ಸಂಬಂಧವಿಲ್ಲ’ ಎನ್ನುವ ಮಾತು ಏಕೆ ಬಂತು ಎನ್ನುವುದಕ್ಕೆ ಕಾರಣಗಳಿವೆ. 

ಸಿನಿಮಾ ಬಿಡುಗಡೆಗೂ ಮುನ್ನ ಕೆಲ ಪೋಸ್ಟರ್ ಗಳು ಹಾಗೂ ಫೋಟೋ ಶೂಟ್ ‘ಅರ್ಜುನ್ ರೆಡ್ಡಿ’ ಯನ್ನು ನೆನಪಿಸಿದ್ದವು. ಅಲ್ಲದೆ ಸಿನಿಮಾದ ಕಥೆಯೊಳಗೂ ಅರ್ಜುನ್ ರೆಡ್ಡಿ ಪ್ರಭಾವಳಿ ಹೊಕ್ಕಿದೆ. ಆದರೆ ಸೂಕ್ಶ್ಮವಾಗಿ ಗಮನಿಸಿದವರಿಗೆ ಮಾತ್ರ ಅದು ತಿಳಿಯುವಂಥದ್ದು. ಆದರೆ ಸಿನಿಮಾದ ಕಥೆ ಬೇರೆಯೇ ಇದೆ. ರಾಮು ಸಿನಿಮಾಗಳಲ್ಲಿ ನಿರುದ್ಯೋಗ, ಪೊಲೀಸ್ ವ್ಯವಸ್ಥೆಯ ಲೋಪ, ರಾಜಕಾರಣಿಗಳ ಆಷಾಢಭೂತಿತನ ಮುಂತಾದ ಸಾಮಾಜಿಕ ಸಮಸ್ಯೆಗಳ ಹೂರಣವನ್ನು ಕಾಣಬಹುದು. ಈ ಸಿನಿಮಾದಲ್ಲೂ ಅದು ಹಾಸುಹೊಕ್ಕಾಗಿದೆ.

ಸಿನಿಮಾದ ಮೊದಲ ದೃಶ್ಯದಲ್ಲಿ ನಿರೂಪಕ ಗಾಂಧಿ ಹತ್ಯೆ, ಗೌರಿ ಲಂಕೇಶ್ ಸೇರಿದಂತೆ ವಿಚಾರವಾದಿಗಳ ಹತ್ಯೆ ಕುರಿತು ಪ್ರಸ್ತಾಪಿಸುತ್ತಾರೆ. ನಂತರದ ದೃಶ್ಯ ಕೂಡಾ ಅದಕ್ಕೆ ಪೂರಕವಾಗಿಯೇ ಬರುತ್ತದೆ. ಭೂಗತ ಲೋಕದ ಬಲಾಢ್ಯ ವ್ಯಕ್ತಿಯನ್ನು ಎದುರುಹಾಕಿಕೊಳ್ಳುವ ರಾಜ್ಯದ ಖ್ಯಾತ ಸುದ್ದಿವಾಹಿನಿಯ ಮುಖ್ಯಸ್ತೆಯನ್ನು ಮುಸುಕುಧಾರಿ ಅರ್ಜುನ್ ಗೌಡ ಪಾತ್ರದಲ್ಲಿ ನಟಿಸಿರುವ ಪ್ರಜ್ವಲ್ ದೇವರಾಜ್ ಹಾಡಹಗಲೇ ಗುಂಡಿಕ್ಕುತ್ತಾನೆ. ನಂತರ ಪಶ್ಚಾತ್ತಾಪ ಪಡುತ್ತಾನೆ. 

ಆಕೆಯನ್ನು ಕಾಣಲು ಅರ್ಜುನ್ ಗೌಡ ಆಸ್ಪತ್ರೆಗೆ ಭೇಟಿ ನೀಡುತ್ತಾನೆ. ಅಲ್ಲಿಂದ ಫ್ಲ್ಯಾಷ್ ಬ್ಯಾಕಿನಲ್ಲಿ ಚಿತ್ರದ ಕತೆ ಮುಂದುವರಿಯುತ್ತದೆ. ಪ್ರಜ್ವಲ್ ದೇವರಾಜ್ ಶೂಟ್ ಮಾಡಿದ್ದು ಆತನ ಸ್ವಂತ ತಾಯಿಯನ್ನು. ತಾನು ಪ್ರೀತಿಸಿದ ಹುಡುಗಿ ಬೇರೊಬ್ಬನನ್ನು ಮದುವೆಯಾಗಲು ಅಮ್ಮ ಕಾರಣ ಎಂದು ತಪ್ಪಾಗಿ ತಿಳಿದು ಅವನು ತಾಯಿಯಿಂದ ದೂರಾಗಿರುತ್ತಾನೆ. ಹಾಗಿದ್ದವನಿಗೆ ತಾಯಿಯನ್ನೇ ಕೊಲ್ಲಲು ಸುಪಾರಿ ನೀಡಿದವರು ಯಾರು? ಅವನ ಹುಡುಗಿಗೆ ಬೇರೊಬ್ಬನೊಂದಿಗೆ ಮದುವೆಯಾಗಿದ್ದು ನಿಜವೇ? ಇವೇ ಇತ್ಯಾದಿ ಕುತೂಹಲ ಅಂಶಗಳನ್ನು ಸಿನಿಮಾದ ಚಿತ್ರಕಥೆ ಹೊಂದಿದೆ.

ಸಿನಿಮಾದಲ್ಲಿ ಪ್ರೀತಿಯ ಎಳೆಯೂ ಇದೆ. ಅರ್ಜುನ್ ಗೌಡ ಶ್ರೀಮಂತ ಉದ್ಯಮಿಯ ಮಗಳನ್ನು ಪ್ರೀತಿಸುತ್ತಾನೆ. ಸಮಾಜದ ಆಧಾರಸ್ಥಂಭಗಳಲ್ಲೊಂದಾದ ಮಾಧ್ಯಮದ ಪ್ರಭಾವಿ ಮಹಿಳೆಯ ಪುತ್ರ ಮತ್ತು ಶ್ರೀಮಂತ ಉದ್ಯಮಿ ಪುತ್ರಿಯ ಪ್ರೇಮ್ ಕಹಾನಿ ಸಿಂಬಾಲಿಕ್ ಎಂದೆನಿಸುವುದು ಕಾಕತಾಳೀಯವಲ್ಲ. 

country ನಾಯಕರನ್ನು, country ಪಿಸ್ತೂಲಿನಲ್ಲಿಯೇ ಹತ್ಯೆ ಮಾಡ್ತೀರಿ ಎನ್ನುವ ಮಾತು ಸಿನಿಮಾ ಸಂಭಾಷಣೆಯ ಮೊನಚಿಗೆ ಕೈಗನ್ನಡಿ ಹಿಡಿಯುತ್ತದೆ. ಅಂಥದ್ದೇ ಹರಿತ ಸಂಭಾಷಣೆಯ ಓಘವನ್ನು ಸಿನಿಮಾ ಪೂರ್ತಿ ಕಾಪಾಡಿಕೊಳ್ಳಬಹುದಿತ್ತು. 

ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ‘ಮಧುರಮೆ ಈ ಕ್ಷಣಮೆ’ ಎನ್ನುವ ಹಾಡು ಬರುತ್ತದೆ. ಅಂಥದ್ದೇ ಸನ್ನಿವೇಶವನ್ನು ನೆನಪಿಸುವ ದೃಶ್ಯ ಮತ್ತು ಹಾಡು ಅರ್ಜುನ್ ಗೌಡ ಸಿನಿಮಾದಲ್ಲೂ ಇದೆ. ಇಬ್ಬರು ಪ್ರೇಮಿಗಳ ನಡುವಿನ ಮಧುರ ಮೈಥುನದ ಸಂದರ್ಭ ಎಲ್ಲೆಮೀರದಂತೆ ಈ ಹಾಡಿನಲ್ಲಿ ಕಂಡುಬರುತ್ತದೆ. 

ಇದನ್ನೂ ಓದಿ: ‘ಅರ್ಜುನ್ ಗೌಡ’ ಸಿನಿಮಾವನ್ನು ಪ್ರತಿಯೊಬ್ಬ ಕನ್ನಡ ಪ್ರೇಕ್ಷಕರೆದುರು ತರುವ ರಾಮು ಆಸೆಯನ್ನು ನಾನು ಪೂರೈಸುವೆ: ಮಾಲಾಶ್ರೀ

ನಾಯಕ ಪ್ರಜ್ವಲ್ ದೇವರಾಜ್ ಅಭಿನಯ ಸ್ಫುಟವಾಗಿದೆ. ಪಾತ್ರದ ಓಘಕ್ಕೆ ತಕ್ಕ ಅಭಿನಯವನ್ನು ಅವರು ನೀಡಿದ್ದಾರೆ. ನಾಯಕಿ ಪ್ರಿಯಾಂಕಾ ತಿಮ್ಮೇಶ್, ಸುದ್ದಿವಾಹಿನಿ ಮುಖ್ಯಸ್ಥೆಯಾಗಿ ಸ್ಪರ್ಶ ರೇಖಾ, ಸಾಧು ಕೋಕಿಲ, ನಾಯಕಿ ತಂದೆ ದೀಪಕ್ ಶೆಟ್ಟಿ, ಪೊಲೀಸ್ ಅಧಿಕಾರಿಯಾಗಿ ಅರವಿಂದ್ ರಾವ್ ಗಮನ ಸೆಳೆಯುತ್ತಾರೆ. ಧರ್ಮ ವಿಶ್ ಸಂಗೀತ ಆಕ್ಷನ್ ಸಿನಿಮಾ ಪ್ರಕಾರಕ್ಕೆ ಪೂರಕವಾಗಿದೆ.

ಕನ್ನಡ ಚಿತ್ರರಂಗದಲ್ಲಿ ಕೋಟಿ ನಿರ್ಮಾಪಕ ಎಂದೇ ಹೆಸರಾದ ರಾಮು ಅವರ ಕೊನೆಯ ಚಿತ್ರ ‘ಅರ್ಜುನ್ ಗೌಡ’ ಎನ್ನುವುದು ಬೇಸರದ ಸಂಗತಿ. ಅವರು ಈ ಸಿನಿಮಾವನ್ನು ಲಾಕಪ್ ಡೆತ್ ಮಾದರಿಯಲ್ಲಿ ನಿರ್ಮಿಸಬೇಕು ಎಂದುಕೊಂಡಿದ್ದರು ಎಂದು ಪ್ರಜ್ವಲ್ ದೇವರಾಜ್ ಅವರೇ ಹೇಳಿಕೊಂಡಿದ್ದರು. ಅದು ಸಿನಿಮಾದ ಮೇಕಿಂಗ್, ಆಕ್ಷನ್ ದೃಶ್ಯಗಳಲ್ಲಿ ಗೋಚರಿಸುತ್ತದೆ. ತನ್ನದೇ ಆದ ಸಿನಿಮಾ ಪರಂಪರೆಯನ್ನು ಹೊಂದಿರುವ ರಾಮು ಅವರ ಚಿತ್ರ ನಿರ್ಮಾಣ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಚಿತ್ರರಂಗ ಹೆಮ್ಮೆ ಪಡುವ ಸಿನಿಮಾಗಳು ಮೂಡಿ ಬರಲಿದೆ ಎನ್ನುವ ಆಶಯ ಪ್ರತಿಯೊಬ್ಬ ಸಿನಿಮಾ ಪ್ರೇಕ್ಷಕನದ್ದು. 

ಇದನ್ನೂ ಓದಿ:​ ‘ಅರ್ಜುನ್ ಗೌಡ’ ಸಿನಿಮಾವನ್ನು ‘ಲಾಕಪ್ ಡೆತ್’ ಥರ ಮಾಡಬೇಕೆಂದು ನಿರ್ಮಾಪಕ ರಾಮು ಆಶಿಸಿದ್ದರು: ಪ್ರಜ್ವಲ್ ದೇವರಾಜ್

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *