The New Indian Express
ಬೆಂಗಳೂರು: ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗಳಿಗೆ ವಿಲಕ್ಷಣ ವ್ಯಕ್ತಿತ್ವದವರನ್ನು ನೇಮಿಸಬಾರದು. ಲೆಫ್ಟ್, ರೈಟ್ ಅಲ್ಲದ ನೇರ ಮನಸ್ಥಿತಿ ಇರುವರನ್ನು ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಎಂದು ನಂಜಾವಧೂತ ಸ್ವಾಮೀಜಿ ಆಗ್ರಹಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸೋಮವಾರ ನಡೆದ ಕೆಂಪೇಗೌಡ ಜಯಂತಿ ಸಮಾರಂಭದ ವೇದಿಕೆಯಲ್ಲೇ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸ್ವಾಮೀಜಿ, ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದನ್ನು ವಿರೋಧಿಸಿದರು.
ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಸರ್ಕಾರ ರೂಪಿಸಿದ ಪಠ್ಯವನ್ನು ಓದಿ, ಕಲಿತು, ಪರೀಕ್ಷೆ ಬರೆಯಬೇಕು. ಅಂತಹ ಪಠ್ಯ ರೂಪಿಸುವವರು ಎಡ, ಬಲ ಅಥವಾ ಇನ್ನಿತರ ಸಿದ್ಧಾಂತದ ಹಿಂಬಾಲಕರು ಆಗಿರಬಾರದು. ಸಮಚಿತ್ತದಿಂದ ಎಲ್ಲವನ್ನೂ ನೋಡುವ ಪ್ರಾಜ್ಞರಾಗಿರಬೇಕು. ಆಳವಾದ ಅಧ್ಯಯನಶೀಲತೆ ಹೊಂದಿದ ವ್ಯಕ್ತಿಗಳನ್ನು ಪಠ್ಯಕ್ರಮ ರೂಪಿಸಲು ನೇಮಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ತೆರೆ ಎಳೆಯಲು ಮುಂದಾದ ರಾಜ್ಯ ಸರ್ಕಾರ; ಕೆಲ ಬದಲಾವಣೆಗಳ ಕೈಬಿಡಲು ಒಪ್ಪಿಗೆ!
ಪವಿತ್ರವಾದ ನಾಡ ಬಾವುಟವನ್ನು ಯಾವುದೋ ಒಂದು ವಸ್ತುವಿಗೆ (ಚಡ್ಡಿ) ಹೋಲಿಸಿದ ವ್ಯಕ್ತಿಯನ್ನು ಪಠ್ಯಪುಸ್ತಕ ಪರಿಷ್ಕರಣೆಗೆ ನೇಮಿಸಿದ್ದು ಸರಿಯಲ್ಲ ಎಂದರು. ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್ ಮುಂತಾದ ಮಹನೀಯರಿಗೆ ಅವಮಾನ ಹೊಸದೇನೂ ಅಲ್ಲ. ಈಗ ಶಾಲಾ ಪಠ್ಯಪುಸ್ತಕಗಳಲ್ಲಿ ಅವಮಾನ ಆಗಿರುವುದಕ್ಕೆ ಹೆಚ್ಚು ವಿರೋಧ ವ್ಯಕ್ತವಾಗಿದೆ. ಲೋಪವನ್ನು ಸರಿಪಡಿಸಿ ಮಹನೀಯರನ್ನು ಗೌರವಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.
ಕುವೆಂಪು, ಕೆಂಪೇಗೌಡ, ಬಸವಣ್ಣ ಅಂಬೇಡ್ಕರ್ ಅವರಿಗೆ ಬಹಳಷ್ಟು ದಶಕಗಳಿಂದ ಅವಮಾನ ಆಗುತ್ತಾ ಬಂದಿದೆ. ಆದರೆ ಈ ಬಾರಿ ದೊಡ್ಡ ರೂಪ ಪಡೆಯಿತು. ಈ ನಿಟ್ಟಿನಲ್ಲಿ ಪಠ್ಯ ಪರಿಷ್ಕರಣೆ ಸಮಿತಿಗೆ ನೇಮಿಸಬೇಕಾದರೆ, ವಿಶಾಲ ಮನಸ್ಸಿನ, ಆಳವಾದ ಅಧ್ಯಯನ ಶೀಲರನ್ನು, ಲೆಫ್ಟ್ -ರೈಟ್ ಸಿದ್ದಾಂತ ಇಲ್ಲದ ನೇರ ಮನಸ್ಥಿತಿ ಇರುವರನ್ನು ಪಠ್ಯ ಪುಸ್ತಕ ಸಮಿತಿಗೆ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಚಕ್ರತೀರ್ಥ ನೇಮಕ ಮಾಡಿದ್ದೇ ಸರ್ಕಾರ ಮಾಡಿದ ಮೊದಲ ತಪ್ಪು: ದೇವೇಗೌಡ
ಇದೇ ಸಂದರ್ಭದಲ್ಲಿ ನಮ್ಮ ಮೆಟ್ರೋಗೆ ಕೆಂಪೇಗೌಡ ಹೆಸರಿಡಿ ಎಂದು ಆಗ್ರಹಿಸಿದ ನಂಜಾವಧೂತ ಸ್ವಾಮೀಜಿ, ಇಷ್ಟೇ ಅಲ್ಲ, ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಕೆಂಪೇಗೌಡರ ಕುರಿತಾದ ಒಂದು ಪಠ್ಯವನ್ನು ಸೇರಿಸಬೇಕು. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮ್ಯೂಸಿಯಂ ಅಥವಾ ಲೈಬ್ರರಿ ಮಾಡಿ ಅದರ ಮೇಲೆ ಕೆಂಪೇಗೌಡ ಪುತ್ಥಳಿಯನ್ನು ಸ್ಥಾಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App