Online Desk
ವಿಮರ್ಶೆ: ಹರ್ಷವರ್ಧನ್ ಸುಳ್ಯ
ದೇಶದ ಎಲ್ಲಾ ವುಡ್ಡುಗಳೂ ಕನ್ನಡ ಚಿತ್ರರಂಗದತ್ತ ತಿರುಗಿನೋಡುವಂತೆ ಮಾಡಿದ ಸಿನಿಮಾ KGF. ಸಾಮಾನ್ಯವಾಗಿ ಎರಡೆರಡು ಪಾರ್ಟ್ ಗಳಲ್ಲಿ ಮೂಡಿ ಬರುವ ಸಿನಿಮಾಗಳೆಲ್ಲವೂ ನೀಡುವ ವಾಗ್ದಾನ, ಎರಡನೇ ಪಾರ್ಟ್ ಮೊದಲನೆಯದಕ್ಕಿಂತಲೂ intense ಆಗಿರುತ್ತೆ, ಮೊದಲನೆಯದಕ್ಕಿಂತಲೂ ಸೂಪರ್ಬ್ ಆಗಿರುತ್ತೆ ಅಂತ. ಮೊದಲ ಅವತರಣಿಕೆ ನೀಡಿದ್ದ ಪ್ರಾಮಿಸ್ ಅನ್ನು ಸಿನಿಮಾದ ಎರಡನೇ ಅವತರಣಿಕೆ KGF ಚಾಪ್ಟರ್2 ಉಳಿಸಿಕೊಂಡಿದೆಯಾ? ಯೆಸ್! ಇಟ್ಸ್ ಬೆಟರ್.
ರಣವೇಗದ ರಣಕಹಳೆ
ಪ್ರತಿಯೊಂದು ದೃಶ್ಯವೂ ಡೈನಾಮಿಕ್. ಯಾವುದೇ ಒಂದು ಫ್ರೇಮು ತಟಸ್ಥವಾಗಿಲ್ಲ. ಕೆಲ ಸೆಕೆಂಡುಗಳಲ್ಲಿಯೇ ಫ್ರೇಮುಗಳು ಪಟಪಟನೆ ಬದಲಾಗುತ್ತಿರುತ್ತದೆ. ಪ್ರತಿಯೊಂದು ಸೀನು ಕೂಡಾ ರಣವೇಗದಲ್ಲಿ ರಣಕಹಳೆ ಊದಿಕೊಂಡು ಮುಂದಕ್ಕೆ ಓಡುತ್ತದೆ. ಸಿನಿಮಾದ ಓಪನಿಂಗ್ ನಿಂದ ಅಂತ್ಯದ ತನಕವೂ ಇದೇ ಆವೇಗ, ಆವೇಶ ಮುಂದುವರಿದಿದೆ. ಅದರ ಶ್ರೇಯ ಸಲ್ಲಬೇಕಾಗಿರುವುದು ಸಂಕಲನಕಾರ ಉಜ್ವಲ್ ಕುಲಕರ್ಣಿಯವರಿಗೆ.
ರವಿ ಬಸ್ರೂರು ಅವರ ಬ್ಯಾಕ್ ಗ್ರೌಂಡ್ ಸ್ಕೋರ್ ಇನ್ನಷ್ಟು ಮೊನಚನ್ನು ಕಂಡುಕೊಂಡಿದೆ. ಸಲ್ಮಾನ್ ಖಾನ್ ಅವರ ಕುರಿತಾಗಿ ಹೇಳಿದಂತೆ ಚಿತ್ರಮಂದಿರದ ಸೀಟುಗಳು ಅದುರುವಂಥ ಸಂಗೀತವನ್ನು ಅವರಿಲ್ಲಿ ನೀಡಿದ್ದಾರೆ. ಭುವನ್ ಗೌಡ ವಿಶುವಲ್ಸ್ ಮತ್ತು ಕಲರ್ ಗ್ರೇಡಿಂಗ್ ಹಾಲಿವುಡ್ ನ ಪೀರಿಯಡ್ ಎಪಿಕ್ ಸಿನಿಮಾ ನೋಡುತ್ತಿದ್ದೇವೇನೋ ಎನ್ನುವ ಭಾವನೆ ಮೂಡಿಸುತ್ತದೆ.
ಪ್ರಶಾಂತ್ ಸಿನಿಮಾ ಪ್ರಪಂಚ
ಫಾಸ್ಟ್ ಪೇಸ್ಡ್ ದೃಶ್ಯಗಳು ಪ್ರಶಾಂತ್ ನೀಲ್ ಸಿಗ್ನೇಚರ್. ಎರಡು ಪ್ರತ್ಯೇಕ ದೃಶ್ಯಗಳು ಒಂದರ ನಂತರ ಒಂದು ಪ್ಲೇ ಆಗುತ್ತಾ ಏಕಕಾಲಕ್ಕೆ ಹೊಸ ಸಂಗತಿಯನ್ನು ರಿವೀಲ್ ಮಾಡುವ ನಿರೂಪಣಾ ತಂತ್ರ KGF ಮೊದಲ ಭಾಗದಲ್ಲೂ ಕಾಣಬಹುದಿತ್ತು. ಇಲ್ಲೂ ಆ ತಂತ್ರ ವರ್ಕೌಟ್ ಆಗಿದೆ. ಪ್ರಶಾಂತ್ ಸೃಷ್ಟಿಸುವ ಸಿನಿಮಾ ಪ್ರಪಂಚಕ್ಕೂ ನಮ್ಮ ರಾಮಾಯಣ, ಮಹಾಭಾರತ ಕಥೆಗಳಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಅಲ್ಲಿನ ರಾಕ್ಷಸರು, ಕೋಟೆ ಕೊತ್ತಲಗಳು, ರಾಜ ರಾಣಿ, ಪ್ರಜೆಗಳು ಪ್ರಶಾಂತ್ ಸಿನಿಮಾಗಳಲ್ಲಿ ಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸಿನಿಮಾಗೆ ಎಪಿಕ್ ನೆಸ್ ಗುಣ ಪ್ರಾಪ್ತವಾಗೋದೇ ಈ ಕಾರಣಕ್ಕೆ. ಪ್ರಶಾಂತ್ ವಿಶಿಷ್ಟ ನಿರೂಪಣಾ ಶೈಲಿಯೇ ಸಿನಿಮಾದ ಆತ್ಮ.
ಚಾರ್ಮಿಂಗ್ ಯಶ್
ಇಡೀ ಸಿನಿಮಾದುದ್ದಕ್ಕೂ ನಾಯಕ ನಟ ಯಶ್ ತಮ್ಮ ಚಾರ್ಮ್ ನಿಂದ ಪ್ರೇಕ್ಷಕರನ್ನು ಮೋಡಿ ಮಾಡುತ್ತಾರೆ. ವಯಲೆಂಟ್ ದೃಶ್ಯಗಳಲ್ಲೂ ಚಟಾಕಿ ಹಾರಿಸುತ್ತಾ ತಮ್ಮದೇ ಮ್ಯಾನರಿಸಂನಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾರೆ. ಚಾಪ್ಟರ್ 2 ನಲ್ಲಿ ಯಶ್ ಎಂಟ್ರಿ ಕೊಡೋ ದೃಶ್ಯ ಪರೋಕ್ಷವಾಗಿ ಅವರ ಬಾಲಿವುಡ್ ಎಂಟ್ರಿಯ ಸೂಚನೆಯಂತೆ ತೋರುತ್ತದೆ. ಅದೇ ಸಂದರ್ಭದಲ್ಲಿ nepotism(ಕುಟುಂಬ ರಾಜಕಾರಣ) ಕುರಿತೂ ಅವರು ಚಟಾಕಿ ಹಾರಿಸುತ್ತಾರೆ. ಬಾಲಿವುಡ್ ನಲ್ಲಿ nepotism ಆರೋಪವನ್ನು ಹೊತ್ತವರು ನಿರ್ದೇಶಕ- ನಿರ್ಮಾಪಕ ಕರಣ್ ಜೋಹರ್. ಉತ್ತರಭಾರತದಲ್ಲಿ KGF ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿರುವ ನಿರ್ಮಾಪಕರಲ್ಲಿ ಅವರೂ ಇದ್ದಾರೆ ಎನ್ನುವುದು ಅಚ್ಚರಿಯ ಸಂಗತಿ.
ನಾಯಕಿ ಶ್ರೀನಿಧಿ ಶೆಟ್ಟಿ ಈ ನಾಯಕ ಪ್ರಧಾನ ಸಿನಿಮಾಗೆ ಪೂರಕವಾಗಿ ನಟಿಸಿದ್ದಾರೆ. ಅಧೀರನ ಪಾತ್ರಧಾರಿ ಸಂಜಯ್ ದತ್, ಮುಖ್ಯಮಂತ್ರಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್ ಸಿನಿಮಾದ ಪ್ಯಾನ್ ಇಂಡಿಯಾ ಲೇಬಲ್ಲಿಗೆ ಖದರ್ ತಂದುಕೊಟ್ಟಿದ್ದಾರೆ.
ಆಕ್ಷನ್ ದೃಶ್ಯಗಳಲ್ಲಿಯೂ ಸೂಟು ಧರಿಸಿ ತಮ್ಮದೇ ಆದ ವಿಶಿಷ್ಟ ಸ್ಟೈಲನ್ನು ಯಶ್ ಈ ಸಿನಿಮಾ ಮೂಲಕ ಹುಟ್ಟುಹಾಕಿದ್ದಾರೆ. ಪ್ರತಿಯೊಬ್ಬ ನಾಯಕ ನಟನೂ ಕನಸು ಕಾಣೋ ಬ್ರೇಕ್ ಈ ಸಿನಿಮಾದಲ್ಲಿ ಅವರಿಗೆ ದಕ್ಕಿದೆ. ಸಿನಿಮಾದ ಅಂತ್ಯದಲ್ಲಿ ಬರುವ ಟ್ವಿಸ್ಟ್ ಪ್ರೇಕ್ಷಕರನ್ನು ಬಹುಕಾಲ KGF ಗುಂಗಿನಲ್ಲಿ ಇರಿಸಲಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App