Online Desk
ಕೋಲ್ಕತ್ತಾ: ಕೋಲ್ಕತ್ತಾದ ಜಾದವ್ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರು ಫೇಸ್ಬುಕ್ನಲ್ಲಿ 1.8 ಕೋಟಿ ರೂ. ವಾರ್ಷಿಕ ವೇತನ ಪ್ಯಾಕೇಜ್ನೊಂದಿಗೆ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಇದು ಈ ವರ್ಷ ವಿಶ್ವವಿದ್ಯಾನಿಲಯದ ಯಾವುದೇ ವಿದ್ಯಾರ್ಥಿಗೆ ನೀಡಲಾಗುವ ಅತ್ಯಧಿಕ ವೇತನ ಪ್ಯಾಕೇಜ್ ಆಗಿದೆ.
ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ನ ನಾಲ್ಕನೇ ವರ್ಷದ ವಿದ್ಯಾರ್ಥಿ ಬಿಸಾಖ್ ಮೊಂಡಲ್ ಅವರು ಗೂಗಲ್, ಅಮೆಜಾನ್ ಮತ್ತು ಫೇಸ್ ಬುಕ್ ಮೂರರಿಂದಲೂ ಉದ್ಯೋಗದ ಆಫರ್ ಪಡೆದಿದ್ದರು. ಆದರೆ ಹೆಚ್ಚಿನ ಪ್ಯಾಕೇಜ್ನಿಂದ ಅವರು ಫೇಸ್ಬುಕ್ ಅನ್ನು ಆಯ್ಕೆ ಮಾಡಿದ್ದಾರೆ. “ನಾನು ಸೆಪ್ಟೆಂಬರ್ನಲ್ಲಿ ಫೇಸ್ಬುಕ್ಗೆ ಸೇರುತ್ತೇನೆ. ಈ ಕೆಲಸವನ್ನು ಒಪ್ಪಿಕೊಳ್ಳುವ ಮೊದಲು, ನನಗೆ ಗೂಗಲ್ ಮತ್ತು ಅಮೆಜಾನ್ನಿಂದ ಆಫರ್ಗಳು ಬಂದಿದ್ದವು. ಆದರೆ ವೇತನ ಪ್ಯಾಕೇಜ್ ಹೆಚ್ಚು ಇರುವುದರಿಂದ ಫೇಸ್ಬುಕ್ ಆಯ್ಕೆ ಮಾಡುವುದು ಉತ್ತಮ ಎಂದು ನಾನು ಭಾವಿಸಿದೆ” ಎಂದು ಮೊಂಡಲ್ ತಿಳಿಸಿದ್ದಾರೆ. ಬಿಸಾಖ್ ಮೊಂಡಲ್ ಸೆಪ್ಟೆಂಬರ್ನಲ್ಲಿ ಲಂಡನ್ನಲ್ಲಿರುವ ತಮ್ಮ ಕೆಲಸದ ಸ್ಥಳಕ್ಕೆ ಹಾರಲಿದ್ದಾರೆ.
ಕಳೆದ ಮಂಗಳವಾರ ರಾತ್ರಿ ನನಗೆ ಕೆಲಸದ ಪ್ರಸ್ತಾಪ ಸಿಕ್ಕಿತು. ಕಳೆದ ಎರಡು ವರ್ಷಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಹಲವಾರು ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಮಾಡಲು ಮತ್ತು ನನ್ನ ಪಠ್ಯಕ್ರಮದ ಅಧ್ಯಯನದ ಹೊರಗೆ ಜ್ಞಾನವನ್ನು ಸಂಗ್ರಹಿಸಲು ನನಗೆ ಅವಕಾಶ ಸಿಕ್ಕಿತು. ಇದು ಸಂದರ್ಶನಗಳನ್ನು ಎದುರಿಸಲು ನನಗೆ ಸಹಾಯ ಮಾಡಿದೆ ಎಂದು ಅವರು ಹೇಳಿದ್ದಾರೆ.
ಮೊಂಡಲ್ ಅವರು ಬಂಗಾಳದ ಬಿರ್ಭೂಮ್ ಜಿಲ್ಲೆಯ ಸಾಧಾರಣ ಕುಟುಂಬದಿಂದ ಬಂದವರು. ಅವರ ತಾಯಿ ಅಂಗನವಾಡಿ ಕಾರ್ಯಕರ್ತೆ ಶಿಬಾನಿ ಮಾತನಾಡಿ, ಇದು ನಮಗೆ ಅತ್ಯಂತ ಹೆಮ್ಮೆಯ ವಿಷಯ . ತಮ್ಮ ಮಗ ಯಾವಾಗಲೂ ಪ್ರತಿಭಾನ್ವಿತ ವಿದ್ಯಾರ್ಥಿ ಎಂದು ಹೊಗಳಿದರು.
ವಿಶ್ವವಿದ್ಯಾನಿಲಯದ ಪ್ಲೇಸ್ಮೆಂಟ್ ಅಧಿಕಾರಿ ಸಮಿತಾ ಭಟ್ಟಾಚಾರ್ಯ, ಸಾಂಕ್ರಾಮಿಕ ರೋಗದ ನಂತರ ವಿದ್ಯಾರ್ಥಿಗಳು ಇಷ್ಟು ದೊಡ್ಡ ಮೊತ್ತದ ಅಂತರರಾಷ್ಟ್ರೀಯ ಉದ್ಯೋಗದ ಆಫರ್ ಪಡೆದಿರುವುದು ಇದೇ ಮೊದಲು ಎಂದು ಹೇಳಿದರು.
ಮಾಧ್ಯಮ ವರದಿಗಳ ಪ್ರಕಾರ ವಿಶ್ವವಿದ್ಯಾನಿಲಯದ ಸುಮಾರು ಒಂಬತ್ತು ವಿದ್ಯಾರ್ಥಿಗಳು ಕಳೆದ ವರ್ಷ ಸಾಗರೋತ್ತರ ಕಂಪನಿಗಳಿಂದ 1 ಕೋಟಿ ರೂಪಾಯಿಗೂ ಹೆಚ್ಚು ವಾರ್ಷಿಕ ಪ್ಯಾಕೇಜ್ಗಳನ್ನು ಪಡೆದಿದ್ದಾರೆ ಎಂದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App