India
oi-Malathesha M

ನವದೆಹಲಿ: ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅಶಿಸ್ತು ಹೆಚ್ಚಾಗಿದೆ. ಒಂದು ಕಾಲದಲ್ಲಿ ವಿಮಾನ ಪ್ರಯಾಣಿಕರು ಶಿಸ್ತಿಗೆ ಹೆಸರಾಗಿದ್ದರು, ಆದರೆ ಈಗೆಲ್ಲಾ ಅಲ್ಲಿ ಹುಡುಗಾಟಿಕೆ ಹೆಚ್ಚಾಗಿದೆ. ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯೋದು, ಸಹ ಪ್ರಯಾಣಿಕರ ಜೊತೆ ಕಿರಿಕ್ ಮಾಡೋದು. ಇದೆಲ್ಲಾ ಬಿಡಿ ಇಲ್ಲೊಬ್ಬ ಭೂಪ ವಿಮಾನದ ಸೀಟ್ ಪಕ್ಕದಲ್ಲೇ ಮಲ, ಮೂತ್ರ ವಿಸರ್ಜಿಸಿದ್ದಾನೆ!
ಹೌದು, ಇಂತಹ ವಿಚಿತ್ರ ಘಟನೆ ನಡೆದಿದ್ದು ಮುಂಬೈ ಹಾಗೂ ದೆಹಲಿ ನಡುವೆ ಸಂಚಾರ ನಡೆಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ. ಮುಂಬೈ & ದೆಹಲಿ ಏರ್ ಇಂಡಿಯಾ ವಿಮಾನ ಹಾರಾಟದಲ್ಲಿ ಇರುವಾಗಲೇ ನೆಲಹಾಸಿನ ಮೇಲೆ ಮಲ, ಮೂತ್ರ ವಿಸರ್ಜಿಸಿದ ಆರೋಪದಡಿ ಪ್ರಯಾಣಿಕನನ್ನ ಈಗ ಪೊಲೀಸರು ಬಂಧಿಸಿದ್ದಾರೆ. ಹಾಗಾದ್ರೆ ಈ ಘಟನೆ ನಡೆದಿದ್ದು ಹೇಗೆ? ಹೀಗೆಲ್ಲಾ ಮಾಡಿದ ವ್ಯಕ್ತಿ ಮಾನಸಿಕ ಅಸ್ವಸ್ತನಾಗಿದ್ನಾ? ಆತ ಹೀಗೆ ಮಾಡಿದ್ದಾದರೂ ಏಕೆ? ಅದರ ಸಂಪೂರ್ಣ ಮಾಹಿತಿ ಮುಂದೆ ಇದೆ ಓದಿ.

ಏನಿದು ವಿಮಾನದಲ್ಲಿ ಕಿರಿಕ್?
ಅಂದಹಾಗೆ ಈ ಘಟನೆ ನಡೆದಿದ್ದು ಜೂನ್ 24ರಂದು ಎಐಸಿ-866 ವಿಮಾನದಲ್ಲಿ. ಬಂಧಿತ ಆರೋಪಿಯ ಹೆಸರನ್ನು ರಾಮ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ನೆಲದ ಮೇಲೆಯೇ ಮಲ, ಮೂತ್ರ ವಿಸರ್ಜನೆ ಮಾಡಿದ್ದೂ ಅಲ್ಲದೆ, ಜೊತೆಗೆ ಅದೇ ವಿಮಾನದ 9ನೇ ಸಂಖ್ಯೆಯ ಸಾಲಿನ ಸೀಟಿನ ಮೇಲೆ ಗಲೀಜು ಹಾಕಿದ್ದ. ವಿಮಾನದಲ್ಲಿ ಇದ್ದ ಸಿಬ್ಬಂದಿ ಈತನ ಹುಚ್ಚಾಟ ನೋಡಿ ಮೊದಲಿಗೆ ಎಚ್ಚರಿಕೆ ನೀಡಿದ್ದರು. ಆದರೂ ಆತ ಅವರ ಮಾತನ್ನು ಕೇಳದೆ ತನ್ನ ಹುಚ್ಚಾಟ ಮುಂದುವರಿಸಿದ್ದ ಎನ್ನಲಾಗಿದೆ. ಹೀಗಾಗಿ ಮೂತ್ರ, ಮಲ ವಿಸರ್ಜನೆ ಮಾಡಿದ ಆರೋಪಿ ಪ್ರಯಾಣಿಕನನ್ನು ಸೂಕ್ತ ಸ್ಥಳಕ್ಕೆ ಕಳುಹಿಸಲಾಗಿದೆ.
ಇನ್ನು ವಿಮಾನದಲ್ಲಿ ನಡೆದ ಘಟನೆ ಬಗ್ಗೆ ಕಂಪನಿಗೆ ಪೈಲಟ್ ಮಾಹಿತಿ ನೀಡಿದ್ರು. ವಿಮಾನ ಬರುತ್ತಿದ್ದಂತೆ ಭದ್ರತಾ ಸಿಬ್ಬಂದಿ ಆತನನ್ನ ಸ್ಥಳೀಯ ಠಾಣೆಗೆ ಕರೆದೊಯ್ದಿದ್ದು, ಅಲ್ಲದೆ ಆತನ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ. ಈಗ ಬಂಧಿತ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಅಂದರೆ ಐಪಿಸಿ ಸೆಕ್ಷನ್ 294ರ ಪ್ರಕಾರ ಅಸಭ್ಯ ವರ್ತನೆ ಹಾಗೂ ಸೆಕ್ಷನ್ 510ರ ಪ್ರಕಾರ ಸಾರ್ವಜನಿಕವಾಗಿ ದುರ್ನಡತೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸ್ ಪಡೆ ಈಗ ತಮ್ಮ ಭಾಷೆಯಲ್ಲಿ ಆತನ ಬಾಯಿ ಬಿಡಿಸುತ್ತಿದೆ. ಹಾಗಾದರೆ ಈ ರೀತಿ ಘಟನೆ ನಡೆದಿದ್ದು ಇದೇ ಮೊದಲಿಗಾ? ಇಲ್ಲ ಇಲ್ಲ ಇಂತಹ ಹಲವು ಘಟನೆಗಳು ನಡೆದಿವೆ, ಅದರ ಮಾಹಿತಿ ಮುಂದೆ ಇದೆ.
ಕಳೆದ ವರ್ಷವೂ ಹೀಗೆ ಆಗಿತ್ತು
ಇನ್ನು ಈ ಹಿಂದೆ 2022ರ ನವೆಂಬರ್ 26ರಂದು ನ್ಯೂಯಾರ್ಕ್ ಮೂಲಕ ದೆಹಲಿಗೆ ಆಗಮಿಸಿದ್ದ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆ ನಡೆದಿತ್ತು. ಈ ಘಟನೆ ಕೂಡ ದೊಡ್ಡ ಸದ್ದು ಮಾಡಿತ್ತು. ಇನ್ನು ಇದು ಮಾಸುವ ಮೊದಲೇ, ಅಂದರೆ ಅದೇ ವರ್ಷದ ಡಿಸೆಂಬರ್ 6ರಂದು ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಪ್ಯಾರಿಸ್ ಮೂಲಕ ದೆಹಲಿ ಕಡೆಗೆ ಬರುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿತ್ತು.
ಇದೀಗ ಅದಕ್ಕಿಂತಲೂ ಘೋರವಾದ ಮತ್ತು ಸಹಿಸಲು ಸಾಧ್ಯವಾಗದ ಘಟನೆ ವಿಮಾನದಲ್ಲಿ ನಡೆದಿದೆ. ಹಾಗೇ ವಿಮಾನ ಪ್ರಯಾಣಿಕರ ಶಿಸ್ತಿನ ಬಗ್ಗೆ ಚರ್ಚೆಗಳು ಕೂಡ ಶುರುವಾಗಿವೆ. ಕೆಲವು ವರ್ಷಗಳಿಂದ ಇಂತಹ ಅಶಿಸ್ತಿನ ಪ್ರಕರಣಗಳ ಜೊತೆಗೆ ವಿಮಾನದಲ್ಲಿ ಧೂಮಪಾನ ಮಾಡುವುದು, ಸಿಬ್ಬಂದಿ ಜೊತೆ ಜಗಳ ಮಾಡುವುದು ಸೇರಿದಂತೆ ಎಷ್ಟೋ ಕಡೆ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯುವ ಪ್ರಯತ್ನಗಳೂ ನಡೆದಿವೆ. ಈ ಮೂಲಕ ಕೆಲವು ಪ್ರಯಾಣಿಕರ ಹುಚ್ಚಾಟ ನೂರಾರು ಜನರ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.
English summary
Air India passenger Defecates Mid-Air On Mumbai-Delhi Flight and he Arrested.
Story first published: Tuesday, June 27, 2023, 16:48 [IST]