ರಾಮನಗರ: ಕಚ್ಚಿದ ಸೇಬನ್ನು ಜನರತ್ತ ಎಸೆದ ಡಿಸಿಎಂ ಡಿ.ಕೆ.ಶಿವಕುಮಾರ್ | DK Shivakumar arrived to Ramanagara for the first time after becoming DCM

Ramanagara

lekhaka-Ramesh Ramakirshna

By ರಾಮನಗರ ಪ್ರತಿನಿಧಿ

|

Google Oneindia Kannada News

ರಾಮನಗರ, ಜೂನ್‌, 26: ಡಿಸಿಎಂ ಆದ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆ ರಾಮನಗರಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್‌ ಅವರಿಗೆ ಅಭಿಮಾನಿಗಳೆಲ್ಲ ಸೇರಿ ಬೃಹತ್‌ ಗಾತ್ರದ ಸೇಬು ಹಣ್ಣಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು. ಇದೇ ವೇಳೆ ಡಿ.ಕೆ.ಶಿವಕುಮಾರ್‌ ಬಾಯಲ್ಲಿ ಕಚ್ಚಿದ ಸೇಬನ್ನು ಜನರತ್ತ ಎಸೆದು ಗಮನ ಸೆಳೆದರು.

ಪಕ್ಷದ ಮುಖಂಡರೆಲ್ಲ ಸೇರಿ ಡೊಳ್ಳು, ವಾದ್ಯ ಮೇಳದೊಂದಿಗೆ ಮೆರವಣಿಗೆಯಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಕರೆತಂದರು. ನಂತರ ಅವರಿಗೆ ಕ್ರೇನ್‌ ಮೂಲಕ ರೇಷ್ಮೆ ಗೂಡು, ಬೃಹತ್‌ ಸೇಬಿನ ಹಾರ ಹಾಕಿ ಸ್ವಾಗತಿಸಿದರು. ಅಲ್ಲದೆ ಇದೇ ವೇಳೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೂವಿನ ಹಾರ ಹಾಕಿ ಅವರಿಗೆ ಶುಭ ಕೋರಿದರು.

DK Shivakumar arrived to Ramanagara

ಇಂದು ರಾಮನಗರದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ಇದ್ದ ಹಿನ್ನೆಲೆ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ ಕೂಡ ಡಿಸಿಎಂ ಕೂಡ ಜೊತೆ ಆಗಮಿಸಿದ್ದರು. ನಂತರ ನಗರದ ಪಿಡಬ್ಲ್ಯೂಡಿ ಸರ್ಕಲ್‌ನಿಂದ ಜಿಲ್ಲಾ ಪಂಚಾಯತ್‌ ಕಚೇರಿಯವರೆಗೆ ಮೆರವಣಿಗೆಯಲ್ಲಿ ಬಂದ ಡಿಸಿಎಂಗೆ ರಾಮನಗರ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್, ಎಸ್‌ಪಿ ಕಾರ್ತಿಕ್ ರೆಡ್ಡಿ ಹೂಗುಚ್ಚ ನೀಡಿ ಸ್ವಾಗತಿಸಿದರು.

ನಮ್ಮನ್ನು ಜನ ಆಯ್ಕೆ ಮಾಡಿದ್ದಾರೆ. ಜನರ ಸೇವೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಸರ್ಕಾರದ ಸೇವೆ ಮಾಡಲು ನೀವಿದ್ದಿರಿ. ರಾಜಕಾರಣಿಗಳು, ಅಧಿಕಾರಿಗಳ ಬಳಿ ಜನ ಬರೋದು ಸಮಸ್ಯೆ ಬಗೆಹರಿಯದೇ ಇದ್ದಾಗ. ಆ ಸಮಸ್ಯೆ ಬಗೆಹರಿಸಬೇಕಾದ್ದು ನಮ್ಮ ಕರ್ತವ್ಯ ಎಂದು ಡಿ.ಕೆ.ಶಿವಕುಮಾರ್‌ ರಾಮನಗರದಲ್ಲಿ ಹೇಳಿದರು.

ನಮ್ಮ ಸರ್ಕಾರವನ್ನು ಜನತೆ ಸುಮ್ಮನೆ ಆಯ್ಕೆ ಮಾಡಿಲ್ಲ. ಉತ್ತಮ ಆಡಳಿತ ಕೊಡುತ್ತೇವೆ ಅಂತಾ ಆಯ್ಕೆ ಮಾಡಿದ್ದಾರೆ. ಈಗಾಗಲೇ ಬಿಜೆಪಿ ಆಡಳಿತ ವೈಖರಿಯನ್ನು ಜನರು ನೋಡಿದ್ದಾರೆ. ಅದು ಜನರಿಗೆ ಹತ್ತಿರವಾಗುವ ಆಡಳಿತವಲ್ಲ, ಭ್ರಷ್ಟಚಾರ ಕ್ಯಾಪಿಟಲ್ ಎಂಬ ಕಾರಣಕ್ಕೆ ಬಿಜೆಪಿ ಬದಲಾಯಿಸಿ ನಮ್ಮನ್ನು ಅಧಿಕಾರದಲ್ಲಿ ಕೂರಿಸಿದ್ದಾರೆ.

ಎಷ್ಟು ಮಂದಿ ಹೆಡ್ ಕ್ವಾರ್ಟರ್ಸ್‌ನಲ್ಲಿ ಮನೆ ಮಾಡಿದ್ದೀರಿ ಕೈ ಎತ್ತಿ. ನಿಮಗೆ ಒಂದು ತಿಂಗಳು ಅವಕಾಶ ಕೊಡುತ್ತೇನೆ. ಹೆಡ್ ಕ್ವಾರ್ಟರ್ಸ್‌ನಲ್ಲೇ ಇದ್ದು ಕೆಲಸ ಮಾಡಬೇಕು. ಹೆಡ್ ಕ್ವಾರ್ಟರ್ಸ್ ಬಿಟ್ಟು ಹೋದರೆ ಡಿಸಿ ಅವರು ನಮಗೆ ಮಾಹಿತಿ ಕೊಡಬೇಕು. ಗ್ರಾಮ ಪಂಚಾಯತ್‌ನಿಂದ ಜಿಲ್ಲಾಮಟ್ಟದ ಅಧಿಕಾರಿಗಳವರೆಗೆ ಎಲ್ಲರೂ ಕೇಂದ್ರಸ್ಥಾನದಲ್ಲೇ ಉಳಿದುಕೊಂಡು ಕೆಲಸ ಮಾಡಬೇಕು ಎಂದರು.

ನೀವು ಯಾರಿಗೂ ಲಂಚ ಕೊಡಬೇಡಿ, ಲಂಚ ತೆಗೆದುಕೊಳ್ಳಬೇಡಿ. ನಾನು ಯಾರನ್ನು ವರ್ಗಾವಣೆ ಮಾಡಿಸುವುದಿಲ್ಲ. ನಿಮ್ಮ ಹತ್ತಿರ ಯಾವ ರೀತಿ ಕೆಲಸ ಮಾಡಿಸಬೇಕು ಎಂದು ನನಗೆ ಗೊತ್ತಿದೆ. ಔಟ್ ಆಫ್ ದಿ ವೇ ಹೋಗಬೇಡಿ ಎಂದರು

ಎಲ್ಲಾ ಅಧಿಕಾರಿಗಳ ಫೋನ್ ನಂಬರ್, ವಿಳಾಸದ ಡೈರಿ ಮಾಡಿ, ಅವರ ಫೋಟೋ ಸಮೇತ ಪುಸ್ತಕ ಮಾಡಿ. ಒಂದು ಡಿಸ್ಟ್ರಿಕ್ಟ್ ಗ್ರೂಪ್ ಮಾಡಿ. ಕಚೇರಿಗೆ ಬಂದು ಹೋಗುವವರ ಬಗ್ಗೆ ಹಾಜರಾತಿಯಲ್ಲಿ ದಾಖಲಾಗಲಿ. ನಾನೇ ಬಯೋಮೆಟ್ರಿಕ್ ಮಷಿನ್ ಕೊಡಿಸುತ್ತೇನೆ ಎಂದರು. ಸರ್ಕಾರಿ ಯೋಜನೆಗಳನ್ನು ಸರಿಯಾಗಿ ಜನರಿಗೆ ತಲುಪಿಸಿ. ಭ್ರಷ್ಟಾಚಾರದ ವಿರುದ್ಧ ಮಾಹಿತಿ ನೀಡಲು ಬೋರ್ಡ್ ಹಾಕಿಸಿ. ಕೆಲವರು ಆರ್ಟಿಇ ಕಾರ್ಯಕರ್ತರ ಹೆಸರಲ್ಲಿ ವಂಚಕರು ಸೇರಿದ್ದಾರೆ. ಅವರಿಗೆ ಹೆದರುವ ಅವಶ್ಯಕತೆ ಇಲ್ಲ.

ಯಾವುದೇ ಪ್ರೈವೇಟ್ ಕ್ಲಬ್ ಇರಬಾರದು. ಗಾಂಜಾ, ರೇವಾ ಪಾರ್ಟಿ ಯಾವುದಕ್ಕೂ ಜಿಲ್ಲೆಯಲ್ಲಿ ಅವಕಾಶವಿಲ್ಲ. ಕಾನೂನು ಸುವ್ಯವಸ್ಥೆ ಕಡೆ ಪೊಲೀಸರು ಗಮನಹರಿಸಬೇಕು ಎಂದರು.

ಬೆಂಗಳೂರಿನಿಂದ ತ್ಯಾಜ್ಯ ತಂದು ರಸ್ತೆಗಳ ಪಕ್ಕ ಸುರಿಯುತ್ತಿದ್ದಾರೆ. ಅಲ್ಲಿಗೆ ಕ್ಯಾಮರಾ ಹಾಕಿ. ಬೇಕಾಬಿಟ್ಟಿ ತ್ಯಾಜ್ಯ ನಿರ್ವಹಣೆಗೆ ಕಡಿವಾಣ ಹಾಕಿ. ಮುಖ್ಯವಾಗಿ ಬೆಂಗಳೂರಿನಿಂದ ಪ್ರವೆಶ ಪಡೆಯುವ ರಾಮನಗರ, ಕನಕಪುರ, ಮಾಗಡಿ ರಸ್ತೆಗಳಿಗೆ ಕ್ಯಾಮರಾ ಹಾಕಿ. ಇದರಿಂದ ಅಪರಾಧ ಚಟುವಟಿಕೆಗಳ ತಡೆಗೂ ಸಹಕಾರಿ ಆಗುತ್ತದೆ ಎಂದರು.

ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಭ್ರಷ್ಟಾಚಾರ ರಹಿತ ಅನುಷ್ಠಾನಕ್ಕೆ ಆದ್ಯತೆ ಕೊಡಬೇಕು. ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಜಿರೋ ಟಿಕೆಟ್ ಲೆಕ್ಕ ಇಡಿ. ಗೃಹ ಜ್ಯೋತಿ ರಿಜಿಸ್ಟ್ರೇಷನ್‌ಗೆ ಭ್ರಷ್ಟಚಾರ ಆಗದಂತೆ ನೋಡಿಕೊಳ್ಳಿ. ಹಾಗೆಯೆ ಗೃಹಲಕ್ಷ್ಮಿ ಆಪ್ ಸಿದ್ಧ ಮಾಡಿದ್ದೇವೆ. ಯೋಜನೆ ಜಾರಿ ದಿನಾಂಕ ನಾಳೆ ನಿರ್ಧಾರ ಆಗಲಿ ಎಂದರು.

ಪ್ರಜಾಪ್ರತಿನಿಧಿ ಜನರಿಗೆ ಸಹಾಯ ಮಾಡಬೇಕು. ಎಲ್ಲವೂ ಉಚಿತ, ಗ್ರಾಮ ಒನ್‌ನಲ್ಲಿ ಯಾರಾದರೂ ಲಂಚ ಕೇಳಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದರು.

English summary

DK Shivakumar arrived to Ramanagara for the first time after becoming DCM, huge welcome to DK Shivakumar from fans

Source link