ಮಳೆಗಾಗಿ ಪ್ರಾರ್ಥನೆ, ಕಾವೇರಿ ಉಗಮ ಸ್ಥಾನದಲ್ಲಿ ವಿಶೇಷ ಪೂಜೆ | Special Pooja In For Rain At Talakaveri Temple Kodagu

Madikeri

oi-Gururaj S

|

Google Oneindia Kannada News

ಮಡಿಕೇರಿ, ಜೂನ್ 28; ಜೂನ್ ತಿಂಗಳು ಕಳೆಯುತ್ತಾ ಬಂದರು ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭವಾಗಿಲ್ಲ. ಒಂದು ಕಡೆ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ, ಮತ್ತೊಂದು ಕಡೆ ಕುಡಿಯುವ ನೀರಿನ ಅಭಾವ ಉಂಟಾಗುವ ಆತಂಕ ಎದುರಾಗಿದೆ. ಮಳೆಗಾಗಿ ರಾಜ್ಯದ ವಿವಿಧ ಕಡೆ ವಿಶೇಷ ಪೂಜೆಗಳನ್ನು ಮಾಡಲಾಗುತ್ತಿದೆ.

ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್. ಬೋಸರಾಜು ಮಂಗಳವಾರ ಕರ್ನಾಟಕದ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಗೆ ನೀಡಿ ಮಳೆಗಾಗಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಮುಂತಾದವರು ಇದ್ದರು.

Special Pooja In For Rain At Talakaveri Temple Kodagu

ಕಾವೇರಿಗೆ ಸಂಕಲ್ಪ ಕುಂಕುಮಾರ್ಚನೆ ಮೂಲಕ ವಿಶೇಷ ಪೂಜೆಯನ್ನು ಸಚಿವರಾದ ಬೋಸರಾಜು ನೆರವೇರಿಸಿದರು.ನಾಡಿನಲ್ಲಿ ಉತ್ತಮ ಮಳೆಯಾಗಿ ಸುಭೀಕ್ಷೆ ತರುವಂತಾಗಬೇಕು. ಹೆಚ್ಚಿನ ಮಳೆಯಿಂದ ಕೃಷಿ ಚಟುವಟಿಕೆ ಗರಿಗೆದರಬೇಕು. ಉತ್ತಮ ಮಳೆಯಾಗಿ ಆಹಾರದ ಉತ್ಪನ್ನಗಳ ಬೆಲೆಗಳು ಇಳಿಕೆ ಆಗಬೇಕು ಎಂದು ಸಚಿವರು ಪ್ರಾರ್ಥಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, “ಇದೇ ಮೊದಲ ಬಾರಿಗೆ ತಲಕಾವೇರಿಗೆ ಭೇಟಿ ನೀಡಿದ್ದು, ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಿ ರಾಜ್ಯ ಸಮೃದ್ಧವಾಗಲಿ ಎಂದು ತಾಯಿ ಕಾವೇರಿ ಮಾತೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ” ಎಂದರು.

ಸಚಿವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ; ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್. ಬೋಸರಾಜು ಅಧ್ಯಕ್ಷತೆಯಲ್ಲಿ ಮಡಿಕೇರಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆ ನಡೆಯಿತು.

ಸಭೆಯಲ್ಲಿ ಸಚಿವರು, “ಮುಂದಿನ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು. ಗುಣಮಟ್ಟದ ಬಿತ್ತನೆ ಬೀಜ ಪೂರೈಸಬೇಕು. ದೂರು ಬರದಂತೆ ಎಚ್ಚರ ವಹಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಭಾಗಮಂಡಲ ಮೇಲುಸೇತುವೆ ಬಗ್ಗೆ ಮಾಹಿತಿ ಪಡೆದ ಸಚಿವರು, “ಭಾಗಮಂಡಲ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಸೇತುವೆ ಸಾರ್ವಜನಿಕರ ಉಪಯೋಗಕ್ಕೆ ಬರಬೇಕು. ಮೀನ ಮೇಷ ಎಣಿಸಬಾರದು” ಎಂದು ಎಂಜಿನಿಯರ್‌ಗೆ ನಿರ್ದೇಶನ ನೀಡಿದರು.

ಕೆಡಿಪಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಕಾಡಾನೆ ಹಾವಳಿ ಹಾಗೂ ಹುಲಿ ದಾಳಿ ನಿಯಂತ್ರಣದ ಸಂಬಂಧ ವಿಷಯ ಪ್ರಸ್ತಾಪಿಸಿದರು. “ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅಗತ್ಯ ಇರುವ ಕಡೆಗಳಲ್ಲಿ ಬ್ಯಾರಿಕೇಡ್, ತಂತಿಬೇಲಿ, ಟ್ರಂಚ್ ನಿರ್ಮಾಣ ಮಾಡಬೇಕು. ದಕ್ಷಿಣ ಕೊಡಗಿನ ಭಾಗದಲ್ಲಿ ಆಗಾಗ ಹುಲಿ ದಾಳಿ ನಡೆಯುತ್ತಿದ್ದು, ಇದರಿಂದ ಜನ, ಜಾನುವಾರುಗಳಿಗೆ ತೊಂದರೆಯಾಗಿದೆ” ಎಂದು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಮಾತನಾಡಿ, “ಕೊಡಗು ಜಿಲ್ಲೆಯ ತೋಟಗಳಲ್ಲಿ 200 ರಿಂದ 250 ಕಾಡಾನೆಗಳು ವಾಸಿಸುತ್ತಿದ್ದು, ಕಾಡಾನೆ ಹಾವಳಿ ಹಾಗೂ ಹುಲಿ ದಾಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಕಾಡಾನೆ ಹಾವಳಿಯಿಂದ ಬೆಳೆ ಹಾನಿಯಾದಲ್ಲಿ ಬೆಳೆ ಹಾನಿ ಪರಿಹಾರ ವಿತರಿಸಲಾಗುತ್ತದೆ” ಎಂದು ಸಭೆಗೆ ಮಾಹಿತಿ ನೀಡಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಮಾತನಾಡಿ, “ಶೇ.80ರಷ್ಟು ಕಾಡಾನೆಗಳು ಕಾಫಿ ತೋಟಗಳಲ್ಲಿ ಸುತ್ತಾಡಿಕೊಂಡಿವೆ. ಕಳೆದ 15 ವರ್ಷಗಳಿಂದ ಕಾಡಾನೆಗಳು ಸಹ ಹೆಚ್ಚಾಗಿದ್ದು, ಇದನ್ನು ನಿಯಂತ್ರಣ ಮಾಡಬೇಕು. ಜೊತೆಗೆ ಕಾಡಾನೆಗಳಿಗೆ ಆಹಾರ, ನೀರು ಸಿಗುತ್ತಿಲ್ಲ. ಆದ್ದರಿಂದ ಬಿದಿರು ಗಿಡವನ್ನು ಹೆಚ್ಚು ನೆಡಬೇಕು” ಎಂದು ಸಲಹೆ ನೀಡಿದರು.

English summary

Congress leader and Kodagu district in-charge minister N. S. Boseraju special pooja in Talacauvery the origin of the Cauvery river.

Story first published: Wednesday, June 28, 2023, 7:03 [IST]

Source link