India
oi-Naveen Kumar N
ಮಣಿಪುರದಲ್ಲಿ ಹಿಂಸಾಚಾರವನ್ನು ಸರಿಯಾಗಿ ನಿಭಾಯಿಸದ ಕಾರಣ ಸಿಎಂ ಬಿರೇನ್ ಸಿಂಗ್ ಇಂದು ರಾಜೀನಾಮೆ ಸಲ್ಲಿಸುತ್ತಾರೆ ಎಂದು ಹೇಳಲಾಗಿತ್ತು, ಆದರೆ ರಾಜೀನಾಮೆ ಪ್ರಹಸನ ಈಗ ತಿರುವು ಪಡೆದುಕೊಂಡಿದ್ದು, ಜನರ ಒತ್ತಡದ ಕಾರಣ ಬಿರೇನ್ ಸಿಂಗ್ ರಾಜೀನಾಮೆ ನೀಡದೇ ಇರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಬಿರೇನ್ ಸಿಂಗ್ ಇಂದು ರಾಜ್ಯಪಾಲರ ಭವನಕ್ಕೆ ತೆರಳಿದ್ದು ಮಧ್ಯಾಹ್ನ 1 ಗಂಟೆಗೆ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಸಲ್ಲಿಸುವ ತೀರ್ಮಾನ ಮಾಡಿದ್ದರು ಎನ್ನಲಾಗಿದೆ. ಆದರೆ, ಸಿಂಗ್ ಅವರ ಬಳಿ ನೂರಾರು ಮಹಿಳೆಯರು ಜಮಾಯಿಸಿ ಮಾನವ ಸರಪಳಿ ನಿರ್ಮಿಸಿ, ಅವರು ರಾಜೀನಾಮೆ ನೀಡುವುದು ನಮಗೆ ಇಷ್ಟವಿಲ್ಲ ಎಂದು ಹೇಳಿದರು. ಇಬ್ಬರು ಸಚಿವರು ತಮ್ಮ ನಿವಾಸದಿಂದ ಹೊರಬಂದಾಗ ಅವರ ರಾಜೀನಾಮೆ ಪತ್ರದ ಪ್ರತಿಯನ್ನು ಹರಿದು ಹಾಕಲಾಗಿದೆ ಎಂದು ವರದಿಯಾಗಿದೆ.
ಬಿರೇನ್ ಸಿಂಗ್ ಜನರ ಬೆಂಬಲವನ್ನು ನೋಡಿ ರಾಜೀನಾಮೇ ನೀಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ಹಿರಿಯ ಸಚಿವರೊಬ್ಬರು ಹೇಳಿರುವುದಾಗಿ ವರದಿಯಾಗಿದೆ. ದೆಹಲಿಯಿಂದ ಕರೆಗಳನ್ನು ಸ್ವೀಕರಿಸಿದ ನಂತರ ಅವರು ರಾಜೀನಾಮೆ ನೀಡಲು ನಿರ್ಧರಿಸದ್ದರು ಎನ್ನಲಾಗಿತ್ತು, ಆದರೆ ಹೊಸ ನಾಟಕೀಯ ಬೆಳವಣಿಗೆಯಲ್ಲಿ ಅವರು ಆ ನಿರ್ಧಾರವನ್ನು ಬದಲಿಸಿದ್ದಾರೆ.
ಮಣಿಪುರ ಹಿಂಸಾಚಾರ: ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ ಸಿಎಂ ಬಿರೇನ್ ಸಿಂಗ್ ರಾಜೀನಾಮೆ ಸಾಧ್ಯತೆ
ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ
ಮಣಿಪುರದಲ್ಲಿ ಕಳೆದ ಎರಡು ತಿಂಗಳಿನಿಂದ ಕೂಡ ಹಿಂಸಾಚಾರ ನಡೆಯುತ್ತಿದೆ. ಕಳೆದ ಎರಡು ದಿನಗಳಲ್ಲಿ ಹಿಂಸಾಚಾರದಲ್ಲಿ ಪೊಲೀಸ್ ಪೇದೆ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ನಡದಿದೆ.
ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯ ಹರಾಥೆಲ್ ಗ್ರಾಮದಲ್ಲಿ ಶಸ್ತ್ರಸಜ್ಜಿತ ಗಲಭೆಕೋರರು ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿ ಮಾಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಪರಿಸ್ಥಿತಿ ಉಲ್ಬಣಗೊಳ್ಳದಂತೆ ತಡೆಯಲು ಸಮೀಪದಲ್ಲಿ ನೆಲೆಸಿದ್ದ ಸೈನಿಕರನ್ನು ಸಜ್ಜುಗೊಳಿಸಿದೆ ಎಂದು ಸೇನೆ ಹೇಳಿದೆ.
ಮಣಿಪುರ ಪೊಲೀಸರ ಪ್ರಕಾರ, ಕಳೆದ 24 ಗಂಟೆಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ 17 ಶಸ್ತ್ರಾಸ್ತ್ರಗಳು, 12 ಮದ್ದುಗುಂಡುಗಳು ಮತ್ತು 10 ಬಾಂಬ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಕ್ಚಿಂಗ್ ಜಿಲ್ಲೆಯಿಂದ ಎಂಟು ಶಸ್ತ್ರಾಸ್ತ್ರಗಳು, ಎರಡು ಮದ್ದುಗುಂಡುಗಳು ಮತ್ತು ಎರಡು ಬಾಂಬ್ಗಳನ್ನು ಜಂಟಿ ತಂಡ ವಶಪಡಿಸಿಕೊಂಡಿದೆ.
ಮಣಿಪುರಕ್ಕೆ ರಾಹುಲ್ ಗಾಂಧಿ ಭೇಟಿ
ಇನ್ನು ಗಲಭೆ ಪೀಡಿತ ಮಣಿಪುರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಅವರು ಇಂಫಾಲ್ನ ಹೋಟೆಲ್ನಲ್ಲಿ ‘ಸಮಾನ ಮನಸ್ಸಿನ’ ಪಕ್ಷದ ನಾಯಕರು, ಯುನೈಟೆಡ್ ನಾಗಾ ಕೌನ್ಸಿಲ್ (ಯುಎನ್ಸಿ) ನಾಯಕರು ಮತ್ತು ನಾಗರಿಕ ಸಮಾಜ ಸಂಘಟನೆಗಳ ಸದಸ್ಯರನ್ನು ಭೇಟಿ ಮಾಡಿದರು.
ಮಣಿಪುರ ಭೇಟಿ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ನಾನು ಯಾವುದೇ ರಾಜಕೀಯ ಕಾಮೆಂಟ್ ಮಾಡಲು ಇಲ್ಲಿಗೆ ಬಂದಿಲ್ಲ. ಈ ವಿಷಯಗಳ ಬಗ್ಗೆ ನಾನು ಇಲ್ಲಿ ಪ್ರತಿಕ್ರಿಯಿಸುವುದಿಲ್ಲ. ನಾನು ಶಾಂತಿಯುತವಾಗಿ ಇಲ್ಲಿಗೆ ಮರಳಲು ಬಯಸುತ್ತೇನೆ” ಎಂದು ಹೇಳಿದರು.
ಮಣಿಪುರದಲ್ಲಿ ಹಿಂಸಾಚಾರದಿಂದ ಸಂತ್ರಸ್ತರಾದ ಜನರನ್ನು ಭೇಟಿಯಾದಾಗ ನನಗೆ ಆಘಾತ ಉಂಟಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, “ಮಣಿಪುರದಲ್ಲಿ ಹಿಂಸಾಚಾರದಿಂದ ಪ್ರೀತಿಪಾತ್ರರು ಮತ್ತು ಮನೆಗಳನ್ನು ಕಳೆದುಕೊಂಡವರ ದುಃಖವನ್ನು ನೋಡುವುದು ಮತ್ತು ಕೇಳುವುದು ಹೃದಯ ವಿದ್ರಾವಕವಾಗಿದೆ. ನಾನು ಭೇಟಿಯಾಗುವ ಪ್ರತಿಯೊಬ್ಬ ಸಹೋದರಿ ಮತ್ತು ಸಹೋದರನ ಮುಖದಲ್ಲಿ ಸಹಾಯಕ್ಕಾಗಿ ಕೂಗು ಇದೆ.” ಎಂದು ಹೇಳಿದ್ದಾರೆ.
ಸಂಘರ್ಷ ಪೀಡಿತ ರಾಜ್ಯದಲ್ಲಿ ಶಾಂತಿಗಾಗಿ ಮನವಿ ಮಾಡಿದ ರಾಹುಲ್ ಗಾಂಧಿ, “ಮಣಿಪುರಕ್ಕೆ ಈಗ ಅಗತ್ಯವಿರುವ ಪ್ರಮುಖ ವಿಷಯವೆಂದರೆ ಶಾಂತಿ. ನಮ್ಮ ಜನರ ಜೀವನ ಮತ್ತು ಜೀವನೋಪಾಯವನ್ನು ಸುರಕ್ಷಿತಗೊಳಿಸಲು. ನಮ್ಮ ಎಲ್ಲಾ ಪ್ರಯತ್ನಗಳು ಆ ಗುರಿಯತ್ತ ಒಗ್ಗೂಡಬೇಕು.” ಎಂದು ಕರೆ ನೀಡಿದ್ದಾರೆ.
English summary
Amid mounting criticism for his handling of ethnic violence in the state over the past two months, Manipur Chief Minister N Biren Singh was reportedly on the brink of resigning today. However, due to public pressure, he ultimately decided against it.
Story first published: Friday, June 30, 2023, 16:54 [IST]