Karnataka
oi-Naveen Kumar N

ತಮ್ಮ ಕಠೋರ ಹಿಂದುತ್ವದ ಹೇಳಿಕೆಗಳಿಂದ ಹಲವು ಬಾರಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಮತ್ತೊಮ್ಮೆ ಮಸೀದಿ, ದೇವಸ್ಥಾನ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಎಲ್ಲೆಲ್ಲಿ ಮಂದಿರಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಾಣ ಮಾಡಿದ್ದಾರೋ ಆ ಮಸೀದಿಗಳನ್ನು ಕೆಡವಿ ಮತ್ತೆ ದೇವಸ್ಥಾನಗಳನ್ನು ನಿರ್ಮಾಣ ಮಾಡುವುದಾಗಿ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಮಸೀದಿಗಳನ್ನು ದೇವಸ್ಥಾನಗಳನ್ನಾಗಿ ಬದಲಾಯಿಸಲಾಗುವದು ಎಂದು ಹೇಳಿದ ಅವರು “ಮೊಘಲರು ಎಲ್ಲೆಲ್ಲಿ ದೇವಾಲಯಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಿದ್ದಾರೋ ಅಲ್ಲೆಲ್ಲಾ ನಾವು ಮಸೀದಿಗಳನ್ನು ನಾಶಪಡಿಸಿ ಮತ್ತೆ ದೇವಸ್ಥಾನಗಳನ್ನು ನಿರ್ಮಾಣ ಮಾಡುತ್ತೇವೆ” ಎಂದು ಹೇಳಿದ್ದಾರೆ.

ಮಸೀದಿಗಳನ್ನು ಕೆಡವಿ ದೇವಸ್ಥಾನಗಳನ್ನು ನಿರ್ಮಾಣ ಮಾಡಲು 5 ವರ್ಷ ಅಥವಾ 50 ವರ್ಷ ಬೇಕಾಗಬಹುದು ಆದರೆ ದೇಗುಲಗಳನ್ನು ನಿರ್ಮಾಣ ಮಾಡಿಯೇ ಮಾಡುತ್ತೇವೆ ಎಂದು ಹೇಳಿದ್ದಾರೆ. ಇನ್ನು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೂಡ ಈಶ್ವರಪ್ಪ ಕಿಡಿ ಕಾರಿದ್ದಾರೆ.
ಮುಸ್ಲಿಮರನ್ನು ಖುಷಿಪಡಿಸುವುದೇ ಕೆಲಸವಾಗಿದೆ
ಇದೇ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ಕೂಡ ಮಾಜಿ ಸಚಿವ ಈಶ್ವರಪ್ಪ ಕಿಡಿ ಕಾರಿದ್ದಾರೆ. ಈ ಕಾಂಗ್ರೆಸ್‌ನವರಿಗೆ ಮುಸ್ಲಿಮರನ್ನು ಖುಷಿಪಡಿಸುವುದೇ ಕೆಲಸವಾಗಿದೆ. ಕಾಂಗ್ರೆಸ್ ಹಿಂದೂ ಧರ್ಮವನ್ನು ದ್ವೇಷಿಸುತ್ತದೆ, ಮುಸ್ಲಿಮರು ಅವರಿಗೆ ಅವಿಭಕ್ತ ಕುಟುಂಬವಿದ್ದಂತೆ ಎಂದು ಈಶ್ವರಪ್ಪ ಹೇಳಿದರು.
ಮುಸ್ಲಿಮರು ಇಲ್ಲದೇ ಇದ್ದರೆ ಇಷ್ಟೊತ್ತಿಗೆ ಕಾಂಗ್ರೆಸ್ ಸರ್ವನಾಶವಾಗಿರುತ್ತಿತ್ತು. ಕೇಂದ್ರ ಬಿಜೆಪಿ ಸರ್ಕಾರ ಆರ್ಟಿಕಲ್ 370 ಅನ್ನು ಹಿಂಪಡೆದಿದ್ದು, ಅಯೋಧ್ಯೆ ರಾಮ ಮಂದಿರ ನಿರ್ಮಾಣ ಮಾಡಿರುವುದನ್ನು ಕಾಂಗ್ರೆಸ್‌ಗೆ ಸಹಿಸಲು ಆಗುತ್ತಿಲ್ಲ ಎಂದು ಟೀಕಿಸಿದರು.
ನನ್ನ ಪುತ್ರ ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿ ಎಂದ ಈಶ್ವರಪ್ಪ: ಕ್ಷೇತ್ರದ ಹೆಸರನ್ನೂ ಬಹಿರಂಗಪಡಿಸಿದ ಹಿರಿಯ ನಾಯಕ
ಹಲವು ಬಾರಿ ವಿವಾದ ಸೃಷ್ಟಿಸಿದ್ದ ಈಶ್ವರಪ್ಪ
ಇನ್ನು ಕರ್ನಾಟಕದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೂಡ ಈಶ್ವರಪ್ಪ ಹೇಳಿಕೆ ವಿವಾದವಾಗಿತ್ತು. ಆಜಾನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಮೂಲಕ ವಿವಾದ ಸೃಷ್ಟಿಸಿದ್ದರು. ಮಂಗಳೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಆಜಾನ್ ಶಬ್ದ ಕೇಳಿದ ನಂತರ ಸಿಟ್ಟಾದ ಈಶ್ವರಪ್ಪ, ಇದು ನನಗೆ ತಲೆನೋವು, ನಾನು ಎಲ್ಲಿಗೆ ಹೋದರು ಇದೇ ಸಮಸ್ಯೆಯಾಗುತ್ತಿದೆ. ಮೈಕ್‌ನಲ್ಲಿ ಕೂಗಿದರೆ ಮಾತ್ರ ಅಲ್ಲಾ ಪ್ರಾರ್ಥನೆಯನ್ನು ಕೇಳುವುದಾ? ಅಲ್ಲಾನಿಗೆ ಕಿವಿ ಕೇಳಿಸೋದಿಲ್ಲವಾ ಎಂದು ಎಂದು ಹೇಳಿದ್ದರು. ಈಶ್ವರಪ್ಪ ಅವರ ಈ ಹೇಳಿಕೆ ಬಗ್ಗೆ ಭಾರಿ ಟೀಕೆ ಕೂಡ ವ್ಯಕ್ತವಾಗಿತ್ತು.
ಪಕ್ಷಾಂತರಿಗಳ ವಿರುದ್ಧವೂ ತಿರುಗಿಬಿದ್ದಿರುವ ಈಶ್ವರಪ್ಪ
ಇನ್ನು ಈಶ್ವರಪ್ಪ ಕಾಂಗ್ರೆಸ್ ಬಗ್ಗೆ ಮಾತ್ರವಲ್ಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಪಕ್ಷಾಂತರಿಗಳ ವಿರುದ್ಧವೂ ತಿರುಗಿಬಿದ್ದಿದ್ದಾರೆ. ಬಿಜೆಪಿಯಲ್ಲಿ ಶಿಸ್ತು ಕಡಿಮೆಯಾಗಿದೆ, ಆಪರೇಷನ್ ಕಮಲದಿಂದ ಬಿಜೆಪಿಗೆ ಹಿನ್ನಡೆಯಾಗಿದೆ, ಪಕ್ಷಾಂತರಿಗಳಿಂದ ಬಿಜೆಪಿಯಲ್ಲಿ ಶಿಸ್ತು ಇಲ್ಲದಂತಾಗಿದ್ದು, ಸೋಲಿಗೆ ಕಾರಣವಾಗಿದೆ ಎನ್ನುವ ರೀತಿಯಲ್ಲಿ ಸೋಮವಾರ ಹೇಳಿಕೆ ನೀಡಿದ್ದರು.
English summary
KS Eshwarappa has caused controversy by stating that mosques will be demolished to make way for temples. He emphasized his stance by asserting that wherever temples were destroyed by the Mughals to build mosques, those mosques would be destroyed to make room for new temples.
Story first published: Tuesday, June 27, 2023, 11:14 [IST]