Karnataka
oi-Malathesha M

ಬೆಂಗಳೂರು: ರಾಜ್ಯದಲ್ಲಿ ಬರದ ಭಯ ಕಾಡ್ತಿದೆ, ಇಷ್ಟೊತ್ತಿಗೆ ಮುಂಗಾರು ಮಳೆ ಆರ್ಭಟ ಆರಂಭವಾಗಿ ರಾಜ್ಯದ ನದಿಗಳು ಭೋರ್ಗರೆಯಬೇಕಿತ್ತು. ಕೆರೆ, ಕಟ್ಟೆಗಳು ತುಂಬಿ ಕೃಷಿಕರ ಜಮೀನುಗಳು ಹಸಿರಿನಿಂದ ನಳನಳಿಸಬೇಕಿತ್ತು. ಆದ್ರೆ ಮುಂಗಾರು ಮಳೆಯ ಕೊರತೆಯಿಂದ ಕರುನಾಡು ನಲುಗಿ ಹೋಗಿದೆ. ಈ ಸಂದರ್ಭದಲ್ಲಿ ಕೆಆರ್‌ಎಸ್, ಆಲಮಟ್ಟಿ ಸೇರಿ ರಾಜ್ಯದ ಪ್ರಮುಖ ಡ್ಯಾಂಗಳು ಬಹುತೇಕ ಡೆಡ್ ಸ್ಟೋರೇಜ್ ತಲುಪಿವೆ.
ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಜನರಿಗೆ ಜೀವ ನೀಡುವುದೇ KRS ಜಲಾಶಯ. ಆದರೆ ಈ ಬಾರಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಕಾವೇರಿ ಜಲಾನಯನ ಪ್ರದೇಶಕ್ಕೆ ಮಳೆರಾಯ ಕೃಪೆ ತೋರದ ಕಾರಣ, ಕೆಆರ್‌ಎಸ್ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ನಾಲೆಗಳಿಗೆ ನೀರು ಬಿಡುಗಡೆ ಮಾಡಿದ 5 ದಿನಕ್ಕೆ 1 ಟಿಎಂಸಿ ನೀರು ಖಾಲಿಯಾಗಿದೆ. ಡ್ಯಾಂನಲ್ಲಿ ಸುಮಾರು 10 ಟಿಎಂಸಿ ನೀರು ಮಾತ್ರ ಲಭ್ಯವಿದ್ದು, ಕಾವೇರಿ ಒಡಲು ಬರಿದಾಗುವ ಆತಂಕ ಶುರುವಾಗಿದೆ. ಹಾಗಾದ್ರೆ ಡೆಡ್ ಸ್ಟೋರೇಜ್ ಬಳಸಿದ್ರೆ ಅಪಾಯ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ (Karnataka Rain).

77 ಅಡಿಗೆ ಕುಸಿದ ಕೆಆರ್‌ಎಸ್ ಡ್ಯಾಂ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆ.ಆರ್.ಎಸ್ ಡ್ಯಾಂನಲ್ಲಿ ಈಗ 77 ಅಡಿ ಮಾತ್ರ ನೀರು ಉಳಿದಿದೆ. KRS ಜಲಾಶಯದ ಗರಿಷ್ಠ ಮಟ್ಟ 124.80 ಅಡಿ, ಆದರೆ ಇದೀಗ ಉಳಿದಿರುವ ನೀರು ಕೇವಲ 77 ಅಡಿ. ಇನ್ನೇನು 10 ಅಡಿ ಕಡಿಮೆ ಆದ್ರೆ ಡೆಡ್ ಸ್ಟೋರೇಜ್ ಅಂದ್ರೆ 66 ಅಡಿಗೆ ತಲುಪುತ್ತದೆ. ಆಗ ನೀರು ಪಡೆಯಲು ಪರದಾಡಬೇಕಿದೆ. ಜಲಾಶಯದ ಅಂತ್ಯದಲ್ಲಿ ಅಂದ್ರೆ ತಳಭಾಗದಲ್ಲಿ ಉಳಿಯುವ ನೀರನ್ನೇ ಡೆಡ್ ಸ್ಟೋರೇಜ್ ಎನ್ನುತ್ತಾರೆ. ಅತ್ಯಂತ ಕಷ್ಟದ ಸ್ಥಿತಿಯಲ್ಲಿ ಡ್ಯಾಂನ ಡೆಡ್ ಸ್ಟೋರೇಜ್ ನೀರು ಬಳಕೆ ಮಾಡಲಾಗುತ್ತದೆ. ಆದರೆ ಡೆಡ್ ಸ್ಟೋರೇಜ್ ನೀರು ಬಳಸುವುದು ಅಷ್ಟು ಸುಲಭವಲ್ಲ, ಇದರಿಂದ ಅಪಾಯ ತುಂಬಾ ಹೆಚ್ಚು. ಯಾಕೆ ಎಂಬುದರ ಮಾಹಿತಿ ಇಲ್ಲಿ ತಿಳಿಯೋಣ.
ಹೂಳು ತುಂಬಿದ ನೀರು ‘ಡೆಡ್ ಸ್ಟೋರೇಜ್’
ಅಂದಹಾಗೆ ಯಾವುದೇ ಜಲಾಶಯಕ್ಕೆ ಮಳೆ ಕೊರತೆ ಉಂಟಾಗಿ, ಸಂಪೂರ್ಣ ಒಣಗಿದಾಗ ಎದುರಾಗುವ ಪರಿಸ್ಥಿತಿಯೇ ‘ಡೆಡ್ ಸ್ಟೋರೇಜ್’ ಬಳಕೆ. ಸುಲಭವಾಗಿ ‘ಡೆಡ್ ಸ್ಟೋರೇಜ್’ ನೀರನ್ನ ಬಳಸಲು ಆಗದು. ಏಕೆಂದರೆ ಡ್ಯಾಂನ ತಳದಲ್ಲಿ ಉಳಿದಿರುವ ನೀರನ್ನು ಗೇಟ್‌ಗಳ ಮುಖಾಂತರ ಜಲಾಶಯದಿಂದ ಹೊರ ಬಿಡಲು ಸಾಧ್ಯವಿಲ್ಲ. ಹೀಗಾಗಿ ಅದನ್ನ ಮೋಟರ್ ಮೂಲಕ ಪಂಪ್ ಮಾಡಬೇಕಾಗುತ್ತದೆ. ಹಾಗೆ ನೀರನ್ನ ಪಂಪ್ ಮಾಡಿದರೂ ಬರೀ ಕೆಸರು ಬರುತ್ತದೆ, ಜಲಾಶಯದಲ್ಲಿ ಉಳಿದಿರುವ ಜಲಚರಗಳು ಹಾಗೂ ಜೀವ ಸಂಕುಲಕ್ಕೂ ಇದು ಭಾರಿ ಹಾನಿ ಮಾಡುತ್ತದೆ. ಹೀಗಾಗಿಯೇ ಡೆಡ್ ಸ್ಟೋರೇಜ್ ನೀರನ್ನ ಬಳಕೆ ಮಾಡೋದಕ್ಕೆ ಹಿಂದೆ ಮುಂದೆ ನೋಡಲಾಗುತ್ತೆ.
ಬೆಂಗಳೂರಿಗೆ ಕುಡಿಯುವ ನೀರು ಸಿಗಲ್ವಾ?
ಈಗಿನ ಪರಿಸ್ಥಿತಿ ನೋಡಿದರೆ, ಇನ್ನೂ ಕೆಲವು ದಿನದಲ್ಲಿ ಉತ್ತಮವಾಗಿ ಮಳೆ ಆಗದೇ ಇದ್ರೆ ರಾಜ್ಯದಲ್ಲಿ ಕುಡಿಯುವ ನೀರಿಗೂ ಜನ ಪರದಾಡಬೇಕು ಅಂತಹ ಸ್ಥಿತಿ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ಕುಡಿಯುವ ನೀರಿಗೆ ಭಾರಿ ಪರದಾಟ ಎದುರಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಮಂಡ್ಯ, ಮೈಸೂರು ಭಾಗದ ರೈತರು ಚಿಂತೆ ಮಾಡುವಂತಾಗಿದೆ. ಹಾಗೇ ಈ ಪರಿಸ್ಥಿತಿಯ ಪರಿಣಾಮ ಮತ್ತೊಮ್ಮೆ ಕಾವೇರಿ ನೀರಿಗೆ ಕಿತ್ತಾಟ ಶುರುವಾಗುವ ಆತಂಕ ಹೆಚ್ಚಾಗಿದೆ. ಇದು ಕೆಆರ್‌ಎಸ್ ಪರಿಸ್ಥಿತಿ ಮಾತ್ರವಲ್ಲ, ರಾಜ್ಯದ ಬಹುತೇಕ ಡ್ಯಾಂಗಳಲ್ಲಿ ಇದೇ ಸ್ಥಿತಿ ಇದೆ.

ಆಲಮಟ್ಟಿ ಜಲಾಶಯಕ್ಕೂ ಎದುರಾದ ಆಪತ್ತು!
ಹೌದು, ದಕ್ಷಿಣ ಕರ್ನಾಟಕದ ಸ್ಥಿತಿಯೇ ಉತ್ತರ ಕರ್ನಾಟಕಕ್ಕೂ ಎದುರಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಜನರ ಜೀವನಾಡಿ ಆಲಮಟ್ಟಿ ಜಲಾಶಯದಲ್ಲಿ ನಿರು ನೆಲ ಮುಟ್ಟಿದೆ. ಈಗಾಗಲೇ ಲಕ್ಷಾಂತರ ಮೀನುಗಳು ನೀರಿಲ್ಲದೆ ಸತ್ತು ಬಿದ್ದಿವೆ. ಆಲಮಟ್ಟಿ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಭರ್ತಿ ಆರಂಭಗೊಂಡಿದ್ದು 2002ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ 8 ಬಾರಿ ಡೆಡ್ ಸ್ಟೋರೇಜ್‌ಗಿಂತ ಕಡಿಮೆ ಮಟ್ಟಕ್ಕೆ ಜಲಾಶಯದ ನೀರು ಕುಸಿತ ಕಂಡಿದೆ. ಕಳೆದ ಕೆಲವು ವರ್ಷಗಳಿಂದ ಉತ್ತಮವಾಗಿ ಮಳೆಯಾಗಿ, ಪರಿಸ್ಥಿತಿ ಕೂಡ ಚೆನ್ನಾಗಿತ್ತು. ಆದ್ರೆ ಈಗ ಮತ್ತೆ ಅಂತಹದ್ದೇ ಪರಿಸ್ಥಿತಿ ಎದುರಾಗಿದೆ.
ಮಳೆ ಇಲ್ಲದೆ ಎಲ್ಲವೂ ಸರ್ವನಾಶ
ಈ ವರ್ಷ ಆಲಮಟ್ಟಿ ಜಲಾಶಯ ಡೆಡ್ ಸ್ಟೋರೇಜ್ ಮಟ್ಟವನ್ನ ಅಂದರೆ 506.87 ಮೀಟರ್‌ಗೆ ತಲುಪಲು ಇನ್ನೂ ಕೇವಲ 1 ಮೀಟರ್ ಬಾಕಿ ಇದೆ. ಅಂದರೆ ಸುಮಾರು 3.1 ಅಡಿಯಷ್ಟು ಎನ್ನಬಹುದು. ಹೀಗಾಗಿ ಆಲಮಟ್ಟಿ ಜಲಾಶಯವನ್ನ ನಂಬಿ ಬದುಕುತ್ತಿದ್ದ ಜನ ಕಣ್ಣೀರು ಹಾಕುವಂತಾಗಿದೆ. ಪರಿಸ್ಥಿತಿ ಮುಂದೆ ಹೇಗಪ್ಪಾ ಅನ್ನುತ್ತಿದ್ದಾರೆ. 2003, 2004, 2005 & 2009, 2012, 2013, 2016, 2017 ಸೇರಿದಂತೆ ಒಟ್ಟು 8 ಬಾರಿ ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಡೆಡ್ ಸ್ಟೋರೇಜ್ ಮಟ್ಟಕ್ಕಿಂತ ಕೆಳಗೆ ಇಳಿದಿತ್ತು. ಈಗಲೂ ಅದೇ ಪರಿಸ್ಥಿತಿ ಬಂದಿದ್ದು, ಇನ್ನು ಕೆಲವು ದಿನದಲ್ಲಿ ಭಾರಿ ಮಳೆ ಬೀಳದಿದ್ದರೆ ಅಪಾಯ ಪಕ್ಕಾ.
ಆಲಮಟ್ಟಿ ಪರಿಸ್ಥಿತಿ ಭೀಕರವಾಗಿದ್ದು ಯಾವಾಗ?
ಸುಮಾರು 20 ವರ್ಷದಿಂದ ಆಲಮಟ್ಟಿ ಜಲಾಶಯ ಉತ್ತರ ಕರ್ನಾಟಕ ಜನರ ಜೀವನಾಡಿ ಆಗಿದೆ. ಏಕೆಂದರೆ ಆಲಮಟ್ಟಿ ಡ್ಯಾಂಗೆ ಪೂರ್ಣ ಪ್ರಮಾಣದಲ್ಲಿ ನೀರು ಭರ್ತಿ ಆರಂಭವಾಗಿದ್ದು 2002ರಲ್ಲಿ. ಇದಾದ ಬಳಿಕ ಅಂದರೆ ಒಂದೇ ವರ್ಷದಲ್ಲಿ 2003ರಲ್ಲಿ ಜಲಾಶಯದ ಮಟ್ಟ 502 ಮೀಟರ್‌ಗೆ ಕುಸಿತ ಕಂಡಿತ್ತು. ಆಗ ಜಲಾಶಯದಲ್ಲಿ 8 ಟಿಎಂಸಿ ಅಡಿ ನೀರು ಉಳಿದಿತ್ತು. ಇತ್ತೀಚೆಗೆ 2017 ರಲ್ಲಿ ಜೂನ್ 7ರಂದು ಜಲಾಶಯದ ಮಟ್ಟ 503.47 ಮೀ ಗೆ ತಲುಪಿತ್ತು. ಆಗ ಜಲಾಶಯದಲ್ಲಿ ಕೇವಲ 10 ಟಿಎಂಸಿ ಅಡಿ ನೀರಿತ್ತು. ಇದಕ್ಕೆಲ್ಲಾ ಹೋಲಿಕೆ ಮಾಡಿದರೆ ಈಗ ಪರಿಸ್ಥಿತಿ ಒಂದಷ್ಟು ಪರವಾಗಿಲ್ಲ, ಆದರೂ ಭಯ ಆವರಿಸಿದೆ.

ಒಟ್ನಲ್ಲಿ ರಾಜ್ಯದ ಬಹುತೇಕ ಜಲಾಶಯಗಳ ಪರಿಸ್ಥಿತಿ ಭೀಕರವಾಗಿದೆ. ಮಳೆಯೇ ಇಲ್ಲದೆ ರಾಜ್ಯದ ರೈತರು ಪರದಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡ ಪರಿಸ್ಥಿತಿ ಬಗ್ಗೆ ಅವಲೋಕನ ನಡೆಸುತ್ತಿದೆ. ಅಕಸ್ಮಾತ್ ಇನ್ನೂ ಕೆಲವು ವಾರಗಳ ಕಾಲ ಇದೇ ರೀತಿ ಮಳೆ ಬಾರದೆ ಇದ್ದು ಬರ ಎದುರಾದರೆ, ಅದನ್ನ ಎದುರಿಸಲು ಕೂಡ ಸಜ್ಜಾಗಬೇಕಿದೆ. ಕಳೆದ 4-5 ವರ್ಷದಿಂದ ಉತ್ತಮ ಮಳೆ ಕಂಡಿದ್ದ ಕರ್ನಾಟಕಕ್ಕೆ ಈಗ ಮತ್ತೆ ಮಳೆಯ ಕೊರತೆ ಕಾಡಲಾರಂಭಿಸಿದೆ. ರಾಜ್ಯದ ರೈತರಿಗೆ ಕೃಷಿ ಚಟುವಟಿಕೆಗೆ ಭಾರಿ ಅಡ್ಡಿ ಎದುರಾಗಿದೆ.
English summary
Karnataka Rain shortage and Drought situation analysis.
Story first published: Sunday, June 25, 2023, 15:12 [IST]